Karada Vishwa

Article · June 9, 2026

ಮಳೆಗಾಲದ ಮೆಲುಕು...

- ಪದ್ಮಶ್ರೀ ಮಾದೇರಿ , ಬೆಂಗಳೂರು


ಹಗಲಿಡೀ ಸಿಕ್ಕಾಪಟ್ಟೆ ಬಿಸಿಲಿದ್ದರೂ ಸಂಜೆ 6:30 ಆಗುತ್ತಿದ್ದಂತೆ ದಟ್ಟ ಮೋಡ ಕವಿದು ಗುಡುಗು, ಮಿಂಚು, ಗಾಳಿ ಸಹಿತ ಭಾರೀ ಮಳೆ ಬರಲಾರಂಭಿಸಿತು ನಮ್ಮ ಕಾಂಕ್ರೀಟ್ ಕಾಡು ಬೆಂಗಳೂರಿನಲ್ಲಿ. ನಾನೂ, ನನ್ನ ಯಜಮಾನರೂ ನಮ್ಮ ಮನೆಯ ಬಾಲ್ಕನಿಯಲ್ಲಿ ಕುರ್ಚಿ ಹಾಕಿ ಮಳೆಯನ್ನು ಆಸ್ವಾದಿಸುತ್ತಾ ಕುಳಿತೆವು. ಯಾವಾಗಲಾದರೆ ವಾಹನಗಳ ಹಾರ್ನ್ ಗಳ ಸದ್ದೇ ಕೇಳಿಸುವುದು ಜಾಸ್ತಿ. ಭಾರಿ ಮಳೆಗೋ ಏನೋ, ವಾಹನಗಳ ಓಡಾಟ ಇರಲಿಲ್ಲ. ಗುಡುಗು, ಮಳೆಯ ಶಬ್ದ ಬಿಟ್ಟರೆ ಬೇರೇನೂ ಶಬ್ದವಿರಲಿಲ್ಲ. ಹಾಗೇ ನನ್ನ ಮನಸ್ಸು ನನ್ನ ಬಾಲ್ಯದ ದಿನಗಳತ್ತ ಸರಿಯಿತು.

ನಾನು ಸಣ್ಣವಳಿರುವಾಗ ಬೇಸಿಗೆಯಲ್ಲಿ ಹಲಸಿನ ಹಪ್ಪಳ, ಚಿಪ್ಸ್ ,ಸಾಬಕ್ಕಿ ಸಂಡಿಗೆ, ಉಂಡಳಿಕ ಇತ್ಯಾದಿ ತಿಂಡಿ ತಿನಿಸುಗಳನ್ನು ಮಳೆಗಾಲಕ್ಕೆಂದೇ ಮಾಡಿ ಟ್ಟಿರುತ್ತಿದ್ದರು. ಶಾಲೆಯಿಂದ ಮನೆಗೆ ಬಂದ ಕೂಡಲೇ, ನಾನು ಹಾಗೂ ನನ್ನ ತಂಗಿ ಬಚ್ಚಲು ಮನೆಯ ಹಂಡೆಯಿಂದ ಬಿಸಿ ನೀರು ಸ್ನಾನ ಮಾಡಿ ತಿಂಡಿ ತಿನ್ನಲು ಪ್ರಾರಂಭಿಸುತ್ತಿದ್ದೆವು. ತಿಂಡಿಯ ಜೊತೆಗೆ ಕುಡಿಯಲು ಜೀರಿಗೆ ಕೊತ್ತಂಬರಿ ಕಷಾಯ. ಮಳೆಯನ್ನು ನೋಡುತ್ತಾ ತಿಂಡಿಯನ್ನು ಸವಿಯುತ್ತಿದ್ದೆವು. 

ಊರಿನಲ್ಲಿ ಬೆಂಗಳೂರಿನ ಹಾಗೆ ಮಳೆ ಸ್ವಲ್ಪ ಹೊತ್ತು ಬಂದು ನಿಲ್ಲುವುದಿಲ್ಲ. ದಿನಗಟ್ಟಲೆ ಬರುತ್ತಾ ಇರುತ್ತದೆ. ಕರೆಂಟ್ ಅಂತೂ  ಇರುವುದೇ ಇಲ್ಲ .  ಈ ಮಳೆಯಲ್ಲಿ ಭಾರವಾದ ಬ್ಯಾಗ್ ಹೊತ್ತು ಬಸ್ಸಿನಲ್ಲಿ ಶಾಲೆಗೆ ಹೋಗುವುದೇ ಒಂದು ಸಾಹಸ. ಶಾಲೆ ತಲುಪುವಷ್ಟರಲ್ಲಿ  ಯೂನಿಫಾರ್ಮ್ ಎಲ್ಲಾ  ಒದ್ದೆ. ಚಳಿಗೆ ಗಡಗಡ ನಡುಗಿಕೊಂಡೇ ಪಾಠ ಕೇಳುವುದು. ಶಾಲೆ ಮುಗಿಸಿ ಮನೆಗೆ ಬರುವಾಗಲೂ ಇದೇ ಕಥೆ. ನಮ್ಮ ಶಾಲೆ ನೇತ್ರಾವತಿ ನದಿಯ ಹತ್ತಿರ ಇದ್ದ ಕಾರಣ, ನದಿಯಲ್ಲಿ  ಬೊಳ್ಳ ಬಂದರೆ ಶಾಲೆಗೆ ರಜೆ ಸಿಗುತ್ತಿತ್ತು. ಎಷ್ಟೋ ಸಲ ಶಾಲೆಗೆ ಹೋದ ನಂತರ ರಜೆ ಎಂದು ತಿಳಿದು ವಾಪಸ್ ಬಂದದ್ದುಂಟು. 

ಇನ್ನು ಮಳೆಗಾಲದಲ್ಲಿ,ಅದೂ ಊರಲ್ಲಿ, ಬಟ್ಟೆ ಒಣಗುವುದೇ ಇಲ್ಲ. ಬಚ್ಚಲು  ಒಲೆಯ ಮುಂದೆ ಎರಡು- ಮೂರು ಕೋಲುಗಳನ್ನು ಸಿಕ್ಕಿಸಿ, ಅದರಲ್ಲಿ ಯೂನಿಫಾರ್ಮ್ ಗಳನ್ನು ಅಮ್ಮ ಒಣಗಿಸುತ್ತಿದ್ದರು. ಆದ್ದರಿಂದ ಬಟ್ಟೆಗಳಿಗೆ ಹೊಗೆಯ ವಾಸನೆ. ಬಿಸಿಲಿದ್ದರೆ ತಾನೇ ಬಿಸಿಲಿನಲ್ಲಿ ಒಣಗಿಸುವುದು. "ಅಮ್ಮ ತುಂಬಾ ವಾಸನೆ" ಅಂತ ಹೇಳುತ್ತಾ ಅದೇ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದೆವು.

ಮಳೆಗಾಲದಲ್ಲಿ ಅಂಗಳದಲ್ಲಿ ಓಡಾಡಿ ಬಿದ್ದದ್ದಕ್ಕೆ ಲೆಕ್ಕ ಇಲ್ಲ. ಓಡಾಡುವ ಜಾಗದಲ್ಲಿ ಜಾರದ ಹಾಗೆ ಅಡಿಕೆ ಮರದ ಸಲಕ್ಕೆಗಳನ್ನು ಹಾಕುತ್ತಿದ್ದರೂ, ಅದರ ಮೇಲೆ ನಡೆಯದೆ,ನೀರಲ್ಲಿ ನಡೆಯುತ್ತಿದ್ದದ್ದೇ  ಜಾಸ್ತಿ. ಇದರಿಂದ ಕಾಲಿನ ಬೆರಳುಗಳ ಎಡೆಯಲ್ಲಿ ಕಜ್ಜಿಯಾಗಿ ತುರಿಸುತ್ತಿತ್ತು . ಅಜ್ಜಿ ಹಚ್ಚಲು ಒಂದು ಮುಲಾಮು ಕೊಡುತ್ತಿದ್ದರು.

ಮನೆಯಲ್ಲಿದ್ದ ಎರಡು, ಮೂರು ಬೆಕ್ಕುಗಳು ಅಡುಗೆ ಓಲೆಯ ಸುತ್ತಮುತ್ತಲೇ ಮಲಗುತ್ತಿದ್ದವು. ಒಂದು ದಿನ ಕಪ್ಪು ಬೆಕ್ಕೊಂದು ಒಲೆಯ  ಒಳಗೆ ಮಲಗಿದ್ದು ಗೊತ್ತಿಲ್ಲದ  ನನ್ನ ಅಮ್ಮ ಕಟ್ಟಿಗೆ ಇಟ್ಟು ಬೆಂಕಿ ಮಾಡಿದ್ದರು. ಸ್ವಲ್ಪ ಹೊತ್ತಲ್ಲೇ ಆ ಬೆಕ್ಕು ಮಿಯಾವ್ ಎಂದು ಕೂಗುತ್ತಾ ಒಳಗೋಡಿತ್ತು. ಅದೃಷ್ಟವಶಾತ್ ಅದಕ್ಕೆ ಏನೂ ಗಾಯ ಆಗಿರಲಿಲ್ಲ. ಇದನ್ನೆಲ್ಲ ಎಣಿಸಿ ನನ್ನ ಮುಖದಲ್ಲಿ ಒಂದು ಮಂದಹಾಸ ಬಂದಾಗ ನನ್ನವರ "ಊಟ ಮಾಡುವನಾ" ಎಂಬ ಧ್ವನಿ ನನ್ನನ್ನು ಎಚ್ಚರಿಸಿತು. ಮಳೆ ಕಡಿಮೆಯಾಗಿ ವಾಹನಗಳ ಓಡಾಟ ಶುರುವಾಗಿತ್ತು. ಈ ಸಲ ಮಳೆಗಾಲದಲ್ಲಿ 10 ದಿನ ಊರಿಗೆ ಹೋಗುವ ಎಂದು ನನ್ನವರಲ್ಲಿ ಪೀಠಿಕೆ ಹಾಕುತ್ತಾ ಅಡುಗೆ ಕೋಣೆಯತ್ತ ನಡೆದೆ.
Creative Writings