Karada Vishwa

Article · September 16, 2026

ಒಂದು ವೃಥಾ ಆಮಂತ್ರಣ...?

ರಾಮಣ್ಣ ಚೆನ್ನಾಂಗೋಡು

ಅವರಿಬ್ಬರೂ ಒಂದೇ ಕಂಪನಿಯಲ್ಲಿ ಉದ್ಯೋಗಸ್ತರು. ಹತ್ತಿರ ಹತ್ತಿರದ ಕೋಣೆಗಳಲ್ಲಿ ವಾಸ. ನಾಲ್ಕೈದು ವರ್ಷಗಳಿಂದ ಅವಳಿಗೋ ಯಾವಾಗಲೂ ಮನೆಯಿಂದ ಮದುವೆಗಾಗಿ ಒತ್ತಡ. ಇವ ಒಂದು ಬಗೆಯ ಆಸಾಮಿ. ಒಪ್ಪಿದರೆ... ಹೀಗೆ ಇವಳ ಆಸೆ. ಎದುರೇ "ಐ ಲವ್ಯು " ಎನ್ನುವಷ್ಟು ಧೈರ್ಯ ಇಲ್ಲ. ಇವ ಯಾವುದಕ್ಕೂ ಚುಟುಕಾಗಿ ಉತ್ತರಿಸುವವ. ಸಾಧಾರಣ ಯಾವತ್ತೂ ಸಂಜೆ ಹೊತ್ತು ಮಾತು-ಕತೆ. ಇವಳು ಮನೆಯಿಂದ ಬರುವ ಮದುವೆಯ ಒತ್ತಡವನ್ನು ಹೇಳಿದ್ದೂ ಇದೆ. ಒಂದು ಸಲ ಇವಳೇ, ಗಂಡಸರಿಗೂ "ಡ್ರೀಮ್ ಗರ್ಲ್ " ಅಂತ ಇರುತ್ತದಲ್ಲ, ನಿಮಗೇನಾದರೂ.... ಅಸಾಮಿ ಅಂದಿದ್ದ ಡ್ರೀಮೇ ಇಲ್ಲ ಮತ್ತೆ ಎಂತ. ಇವಳಿಗೆ ಅವನಲ್ಲಿ ಮಾತೆಂದರೆ ಇಷ್ಟ. ಅವನಿಗೂ ಎಲ್ಲಾ ತೂಕದ್ದು. ಹಾಗೆ, ಒಂದು ಸಲ ಇವಳು ಊರಿಗೆಂದು ಹೋದವಳು ವಾರವಾದರೂ ಬರಲೇ ಇಲ್ಲ. ಇವನಿಗೂ ಕರೆ ಮಾಡಲೇ ಇಲ್ಲ. ನಾಲ್ಕನೇ ದಿನ ಅವನ ಕರೆ ಬಂತು. ನೀನಿಲ್ಲದೆ ಮಾತಿಲ್ಲದೆ ತುಂಬಾ ಬೋರು. ಇಷ್ಟೇ. ಈ ಅಸಾಮಿಯಲ್ಲಿ ಏನೋ ಚಡಪಡಿಕೆ ಇದೆ ಎಂಬುವುದು ಇವಳಿಗೆ ಅರ್ಥವಾಗಿತ್ತು. ಮತ್ತೆ ನಾಲ್ಕು ದಿನ ಕಳೆದು ಇವಳು ಹೋದಾಗ..... ಇವಳೇ ಹೇಳಿದಳು ನಿಮಗೊಂದು ಸರ್ಪ್ರೈಸಿದೆ. ಹಾಗೆ ಹೇಳಿದವಳೇ ನೋಡಿ ಇದು ನನ್ನ ಮದುವೆಯ ಆಮಂತ್ರಣ, ಮೊದಲಿಗೆ ನಿಮಗೇ ಕೊಡೋಣ ಎಂದು ನಿಶ್ಚೈಸಿದೆ. ಎಂದವಳೇ ಅವನಿಗೆ ಕೊಟ್ಟು, ನೋಡೋಣ ಟೆಸ್ಟ್ ಡೋಸ್ ಅಂದುಕೊಂಡಳು. ಅಸಾಮಿ ಸ್ವಲ್ಪ ಗಾಬರಿಗೊಂಡಂತೆ ತೋರಿತು ಅವಳಿಗೆ. ಸಂಜೆಗೆ ಆ ದಿನ ಇವನ ಪತ್ತೆಯೇ ಇಲ್ಲ...!

ಮರುದಿನ ಕಂಡರೆ ಮಾತಿಲ್ಲ... ಮುಖದಲ್ಲಿ ಮಂದಹಾಸವೇ ಇಲ್ಲ. ಹಾಗೆಂದು ಇವಳು ಕೇಳಿಯೇ ಬಿಟ್ಟಳು "ಯಾಕೆ? ಏನಾಯ್ತು? "ಅಸಾಮಿ ದುಃಖದ ಕಟ್ಟೆಯೊಡೆದು ಅತ್ತೇ ಬಿಟ್ಟ. "ನೀವು... ನೀವು... ಏನಂತೆ..? ಈ ರೀತಿ... ನನಗೆ ತಿಳಿಸದೆ..." ಇವಳಿಗೆ ಅವನ ಚಡಪಡಿಕೆ ಅರ್ಥವಾಗಿತ್ತು. ಅವಳಿಗೆ ಈಗ ಧೈರ್ಯ ಬಂದಿತ್ತು.

"ಏನು ? ನಿಮಗೆ ನನ್ನ ಮೇಲೆ ಪ್ರೀತಿ ಇತ್ತಾ...?"

ಇವ ಆಕಾಶ ನೋಡುತ್ತಾ ಹೇಳಿದ "ಹೂಂ...."

"ಖಂಡಿತಾ?"

"ಹೂಂ..."

"ಗ್ಯಾರಂಟಿಯಲ್ಲಾ?"

"ಹೂಂ..."

ಹಾಗಾದರೆ, ಹಾಗಾದರೆ ಎಂದವಳೇ ಇವಳು ಆ ಆಮಂತ್ರಣಗಳನ್ನೆಲ್ಲ ಹರಿದೇ ಬಿಟ್ಟಳು. ಯಾಕೆ ಗಾಬರಿಯಾಗ್ತಿ? ನೋಡು ನಿನ್ನನ್ನು ಗಾಬರಿಗೊಳಿಸಲೇ ಇಷ್ಟೆಲ್ಲ ನಾಟಕ ಮಾಡಿದೆ. ಇನ್ನು ಗಾಬರಿ ಇಲ್ಲ ತಾನೇ? ಇಂದೇ ನನ್ನ ಅಪ್ಪ ಅಮ್ಮನಲ್ಲಿ ತಿಳಿಸ್ತೇನೆ. ರೈಟ್ ಎಂದವನೇ ಆತ ಅವಳ ಕೈ ಹಿಡಿಯ ಹೊರಟ ಅದೆಲ್ಲಾ ಮತ್ತೆ ಮತ್ತೆ ಎಂದವಳೇ ಅವಳು ಕೊಸರಿಕೊಂಡಳು..!

Creative Writings