
Article · March 30, 2026
ತೈಲ ಬೆಲೆ ಏರಿಕೆಯ ಮಧ್ಯೆ ಕೇಂದ್ರದ ರಕ್ಷಣಾತ್ಮಕ ನಡೆ!?
ಇಂದಿನ ವಿಶ್ವವಾಣಿಯಲ್ಲಿ ರವೀ ಸಜಂಗದ್ದೆ ಅವರ ಅಂಕಣ ಬರಹ
ಅಂತಾರಾಷ್ಟ್ರೀಯ ರಾಜಕಾರಣ ಮತ್ತು ವ್ಯವಹಾರಗಳ ಚದುರಂಗದಾಟದಲ್ಲಿ ತೈಲ ಕೇವಲ ಒಂದು ಇಂಧನವಲ್ಲ, ಅದು ಪ್ರತಿಯೊಂದು ರಾಷ್ಟ್ರದ ಆರ್ಥಿಕತೆಯ ನಾಡಿಮಿಡಿತ! ಮಧ್ಯಪ್ರಾಚ್ಯದಲ್ಲಿ ಎದ್ದಿರುವ ಯುದ್ಧದ ಕಿಡಿ ಭೌಗೋಳಿಕ ಗಡಿಗಳನ್ನು ದಾಟಿ ಜಾಗತಿಕ ಇಂಧನ ಮಾರುಕಟ್ಟೆಯ ಸ್ಥಿರತೆಯನ್ನೂ ದಹಿಸುತ್ತಿದೆ. ಈ ಯುದ್ಧದ ವ್ಯತಿರಿಕ್ತ ಪರಿಣಾಮಗಳು ಕಚ್ಚಾತೈಲದ ಬೆಲೆಯನ್ನು ಗಗನಕ್ಕೇರಿಸಿವೆ. ಇಂತಹ ಸಂಕಷ್ಟದ ಸಮಯದಲ್ಲಿ, ಸಾಮಾನ್ಯ ಜನರನ್ನು ಬೆಲೆ ಏರಿಕೆಯ ಬಿಸಿಯಿಂದ ರಕ್ಷಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರವು ಕೈಗೊಂಡಿರುವ 'ಸ್ಪೆಷಲ್ ಎಡಿಷನಲ್ ಎಕ್ಸೈಸ್ ಡ್ಯೂಟಿ' ಕಡಿತದ ನಿರ್ಧಾರ ಮತ್ತು ಸಂದರ್ಭ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ಪ್ರೇರಿತ ಹೇಳಿಕೆಗಳು ಅತ್ತಿಂದಿತ್ತ ಹರಿದಾಡುತ್ತಿವೆ.
ಮಧ್ಯಪ್ರಾಚ್ಯ ಪ್ರದೇಶವು ವಿಶ್ವದ ಅತಿದೊಡ್ಡ ತೈಲ ಉತ್ಪಾದನಾ ಕೇಂದ್ರ. ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕಾ ಸಾರಿರುವ ಯುದ್ಧದಿಂದ ಉಂಟಾದ ಇಲ್ಲಿನ ಅಸ್ಥಿರತೆಯು ಜಗತ್ತಿನ ಇತರೆಡೆಗೆ ತೈಲ ಮತ್ತು ಗ್ಯಾಸ್ ಪೂರೈಸುವ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹೋರ್ಮುಜ್ ಜಲಸಂಧಿಯಂತಹ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ಉಂಟಾಗುವ ಅಡೆತಡೆಗಳು ಇಂಧನ ಸಾಗಾಟ ಮತ್ತು ವಿತರಣಾ ವೆಚ್ಚವನ್ನು ಹೆಚ್ಚಿಸಿವೆ. ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಹೀಗೆ ಅನಿರೀಕ್ಷಿತವಾಗಿ ಏರಿಕೆಯಾದುದರಿಂದ 85%ರಷ್ಟು ತೈಲವನ್ನು ಆಮದು ಮಾಡಿಕೊಳ್ಳುವ ಭಾರತದಂತಹ ದೇಶಕ್ಕೆ ಇದು ಸತ್ವ ಪರೀಕ್ಷೆಯ ಕಾಲ. ಇದು ಕೇವಲ ಪೆಟ್ರೋಲ್-ಡೀಸೆಲ್ ಬೆಲೆಗಳ ವಿಚಾರ ಮಾತ್ರ ಆಗಿರದೆ ಇದು ಸಾರಿಗೆ-ಸಾಗಣೆ ವೆಚ್ಚ, ಆ ಮೂಲಕ ಆಹಾರ ಪದಾರ್ಥಗಳ ಬೆಲೆ ಮತ್ತು ಒಟ್ಟಾರೆ ಹಣದುಬ್ಬರದ ಮೇಲೆ ವ್ಯತಿರಿಕ್ತ ಪ್ರಭಾವ-ಪರಿಣಾಮ ಬೀರುವುದು ನಮಗೆಲ್ಲ ತಿಳಿದಿರುವ ಸರಳ ಅರ್ಥಶಾಸ್ತ್ರ.
ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದಾಗ, ಅದರ ಹೊರೆಯನ್ನು ಆಯಾ ದೇಶದ ಸರ್ಕಾರಗಳು ಗ್ರಾಹಕರಿಗೆ ನೇರವಾಗಿ ವರ್ಗಾಯಿಸುವುದು ಸಾಮಾನ್ಯ ಪದ್ಧತಿ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು 'ಸ್ಪೆಷಲ್ ಎಡಿಷನಲ್ ಎಕ್ಸೈಸ್ ಡ್ಯೂಟಿ'ಯನ್ನು ಕಡಿತಗೊಳಿಸುವ ಮೂಲಕ ಒಂದು ವಿಭಿನ್ನ ಆರ್ಥಿಕ ತಂತ್ರವನ್ನು ಅನುಸರಿಸಿದಂತೆ ಕಾಣುತ್ತದೆ. ಈ ಹಿಂದೆ ಪೆಟ್ರೋಲ್‌ಗೆ 13 ರೂಪಾಯಿ ಮತ್ತು ಡೀಸೆಲ್‌ಗೆ 10 ರೂಪಾಯಿ ಇದ್ದ ಈ ವಿಶೇಷ ತೆರಿಗೆಯು ತಕ್ಷಣಕ್ಕೆ ಜಾರಿಗೆ ಬರುವಂತೆ ಪೆಟ್ರೋಲ್‌ಗೆ 3 ರೂಪಾಯಿ ಮತ್ತು ಡೀಸೆಲ್ ಮೇಲಿನ ಈ ತೆರಿಗೆಯನ್ನು ಶೂನ್ಯಕ್ಕೆ ತರಲಾಗಿದೆ. ಇದರಿಂದ ನಷ್ಟದ ಭೀತಿ ಎದುರಿಸುತ್ತಿರುವ ದೇಶದ ತೈಲ ಕಂಪೆನಿಗಳೂ ನಿರಾಳ, ಗ್ರಾಹಕರೂ ಸಂತುಷ್ಟ - 'ಹಾವೂ ಸಾಯಬಾರದು ಕೋಲೂ ಮುರಿಯಬಾರದು' ರೀತಿಯ ನಿರ್ಧಾರವಿದು! ಬಹುಷಃ ಈಗಾಗಲೇ ನಿಗದಿಯಾಗಿರುವ ಪಂಚ ರಾಜ್ಯಗಳ ಚುನಾವಣೆಯ ಮತದಾನ ಮತ್ತು ಫಲಿತಾಂಶದ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರುವುದನ್ನು ತಡೆಯುವ ಸಲುವಾಗಿ ಒಂದಷ್ಟು ರಾಜಕೀಯ ಲೆಕ್ಕಾಚಾರಗಳು ಈ ನಿರ್ಧಾರದ ಹಿಂದೆ ಅಡಗಿರುವಂತೆ ಕಾಣುತ್ತಿದೆ! ಅದೇನೇ ಇರಲಿ, ಸದ್ಯಕ್ಕೆ ಅಂದರೆ ಈ ಚುನಾವಣೆಯ ಕೊನೆಯ ಹಂತದ ಮತದಾನದ ದಿನದವರೆಗೆ (ಎಪ್ರಿಲ್ 29) ನಾವು ಗ್ರಾಹಕರು ಸಂಭಾವ್ಯ ಬೆಲೆ ಏರಿಕೆಯಿಂದ ಬಚಾವ್!
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಅದು ಸರಕುಗಳ ಸಾಗಾಣಿಕೆ ವೆಚ್ಚವನ್ನು ಹೆಚ್ಚಿಸುತ್ತದೆ. ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದು ದಿಟ. ಇದನ್ನು ತಡೆಯಲು ಈಗ ಅನುಸರಿಸಿದ ತೆರಿಗೆ ಕಡಿತವು ಸುಲಭ ಮತ್ತು ಸುರಕ್ಷಿತ ವಿಧಾನ. ಕೋವಿಡ್ ಕಾಲಾನಂತರದಲ್ಲಿ ನಿಧಾನವಾಗಿ ಚೇತರಿಸಿಕೊಂಡು-ಸಾವರಿಸಿಕೊಂಡು ಹೋಗುತ್ತಿರುವ ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆಯ ಬರೆ ಎಳೆಯುವುದನ್ನು ತಪ್ಪಿಸುವುದೂ ಸರ್ಕಾರದ ಉದ್ದೇಶ ಆಗಿರಲೂಬಹುದು.
ಸರ್ಕಾರವು ತನ್ನ ಈ 'ಜನಸ್ನೇಹಿ' ನಿರ್ಧಾರಕ್ಕೆ ಭಾರೀ ಬೆಲೆ ತೆರಬೇಕಾದೀತೇನೋ!? ಯಾಕೆಂದರೆ ತೈಲದ ಮೇಲೆ ವಿಧಿಸುವ ಅಬಕಾರಿ ಸುಂಕವು ಕೇಂದ್ರ ಸರ್ಕಾರದ ಪ್ರಮುಖ ಮತ್ತು ದೊಡ್ಡ ಆದಾಯದ ಮೂಲಗಳಲ್ಲಿ ಒಂದು. ತಜ್ಞರ ಅಂದಾಜಿನಂತೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕದಲ್ಲಿ ಪ್ರತಿ ಒಂದು ರೂಪಾಯಿ ಕಡಿತವಾದರೂ, ವಾರ್ಷಿಕವಾಗಿ ಕೇಂದ್ರದ ಬೊಕ್ಕಸಕ್ಕೆ ಸುಮಾರು 3,000 ರಿಂದ 15,000 ಕೋಟಿ ರೂಪಾಯಿಗಳಷ್ಟು ಆದಾಯ ನಷ್ಟವಾಗುತ್ತದೆ. ಪ್ರಸ್ತುತ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾಡಲಾದ ಪೆಟ್ರೋಲ್ ಡೀಸೆಲ್ ಮೇಲಿನ 10 ರೂಪಾಯಿಗಳ ಗಣನೀಯ ಕಡಿತದಿಂದಾಗಿ, ಒಟ್ಟಾರೆ ರಾಜಸ್ವ ನಷ್ಟವು 30,000 ಕೋಟಿಯಿಂದ 50,000 ಕೋಟಿ ರೂಪಾಯಿಗಳವರೆಗೆ ತಲುಪುವ ಸಾಧ್ಯತೆಯಿದೆ. ಈ ನಷ್ಟವು ಸರ್ಕಾರದ ವಿತ್ತೀಯ ಕೊರತೆಯ ಮೇಲೆ ಒತ್ತಡ ಹೇರಲಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ಮೀಸಲಿಟ್ಟ ಹಣದಲ್ಲಿ ಕಡಿತ ಮಾಡುವ ಅಥವಾ ಮಾರುಕಟ್ಟೆಯಿಂದ ಸಾಲ ಪಡೆಯುವ ಅನಿವಾರ್ಯತೆ ಎದುರಾಗಬಹುದು. ಈ ತೆರಿಗೆ ಕಡಿತದಿಂದ ಉಂಟಾಗುವ ನಷ್ಟದ ಕೊರತೆಯನ್ನು ಕೇಂದ್ರ ಸರ್ಕಾರ ಹೇಗೆ ತುಂಬಲಿದೆ ಎನ್ನುವುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.
ಜಾಗತಿಕವಾಗಿ ಅಭಿವೃದ್ಧಿ ಹೊಂದಿದ ಅನೇಕ ದೇಶಗಳು ತೈಲ ಬೆಲೆ ಏರಿಕೆಯನ್ನು ಮಾರುಕಟ್ಟೆಯ ನೇರ ಏರಿಳಿತಕ್ಕೆ ಜೋಡಿಸಿಕೊಂಡು ಕೈ ತೊಳೆದುಕೊಂಡಿವೆ. ಉದಾಹರಣೆಗೆ, ಯುರೋಪಿನ ಹಲವು ದೇಶಗಳಲ್ಲಿ ತೈಲ ಬೆಲೆಯು ಆಕಾಶಕ್ಕೆ ಏರಿದ್ದರೂ ಅಲ್ಲಿನ ಸರ್ಕಾರಗಳು ತೆರಿಗೆ ಕಡಿತಕ್ಕೆ ಮುಂದಾಗಿಲ್ಲ. ಆದರೆ ಭಾರತದಲ್ಲಿ ತೈಲ ಬೆಲೆಯು ಕೇವಲ ಆರ್ಥಿಕತೆಯಲ್ಲ, ಅದೊಂದು ಭಾವನಾತ್ಮಕ ಮತ್ತು ರಾಜಕೀಯ ಕೆಸರೆರಚಾಟದ ವಿಚಾರವೂ ಹೌದು! ಭಾರತದಲ್ಲಿ ತೈಲ ಬೆಲೆಗಳ ಏರಿಳಿತ ಮಾಡುವ ನಿರ್ಧಾರವು ಇನ್ನೂ ಕೇಂದ್ರ ಸರ್ಕಾರದ ನಿಯಂತ್ರಣದಲ್ಲೇ ಇವೆ.
2008ರ ಜಾಗತಿಕ ಆರ್ಥಿಕ ಕುಸಿತದ ಸಮಯದಲ್ಲಿ ಮತ್ತು 2022ರ ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿಯೂ ಭಾರತ ಬಹುತೇಕ ಇಂತಹುದೇ ಸವಾಲನ್ನು ಎದುರಿಸಿತ್ತು. ಅಂದು 'ತೈಲ ಬಾಂಡ್'ಗಳ ಮೂಲಕ ಹೊರೆ ನಿರ್ವಹಿಸಲಾಗಿದ್ದರೆ, ಇಂದು 'ನೇರ ತೆರಿಗೆ ಕಡಿತ'ದ ಮೂಲಕ ಸರ್ಕಾರವು ತಾನೇ ಈ ಹೊರೆಯನ್ನು ಹೊರುತ್ತಿದೆ. ಇದು ದೀರ್ಘಾವಧಿಯಲ್ಲಿ ದೇಶದ ಆರ್ಥಿಕ ಶಿಸ್ತಿಗೆ ಸವಾಲಾಗಿದ್ದರೂ, ಅಲ್ಪಾವಧಿಯಲ್ಲಿ ಜನರ ಕೊಳ್ಳುವ ಸಾಮರ್ಥ್ಯವನ್ನು ಕಾಪಾಡುತ್ತದೆ. ಹಾಗೆಂದು ಈ ತೆರಿಗೆ ಕಡಿತವು ಕೇವಲ 'ತಾತ್ಕಾಲಿಕ ಮದ್ದು' ಅಷ್ಟೇ. ಈಗಿನ ಯುದ್ಧವು ದೀರ್ಘಕಾಲ ಮುಂದುವರಿದರೆ ಎಷ್ಟು ದಿನಗಳ ಕಾಲ ಸರ್ಕಾರವು ಈ ಹೊರೆಯನ್ನು ಹೊರಲು ಸಾಧ್ಯ? ಎಂಬುದು ಸದ್ಯದ ಪ್ರಶ್ನೆ.
ಇಂತಹ ಬಿಕ್ಕಟ್ಟುಗಳು ನಮಗೆ ಪರ್ಯಾಯ ವ್ಯವಸ್ಥೆಗಳಾದ ಇಲೆಕ್ಟ್ರಿಕ್ ವಾಹನಗಳು ಮತ್ತು ಹಸಿರು ಹೈಡ್ರೋಜನ್‌ನತ್ತ ವಾಲಬೇಕಾದ ಅನಿವಾರ್ಯತೆ ತಿಳಿಸುತ್ತವೆ. ಇದರ ಜೊತೆಗೆ ಭಾರತವು ತನ್ನ ಆಯಕಟ್ಟಿನ ತೈಲ ಸಂಗ್ರಹಾಗಾರಗಳನ್ನು ಬಲಪಡಿಸುವುದು ಮತ್ತು ತೈಲ ಸಂಗ್ರಹ ಸಾಮರ್ಥ್ಯ ವೃದ್ಧಿಸುವತ್ತ ನಿಖರ ಯೋಜನೆ ಹಾಕಿಕೊಂಡು ಜಾರಿಗೊಳಿಸುವುದು ಅತ್ಯಗತ್ಯ.
ಮಧ್ಯಪ್ರಾಚ್ಯದ ರಣಹೂಂಕಾರದ ನಡುವೆ, ತನ್ನ ಆರ್ಥಿಕ ನೌಕೆಯನ್ನು ಮುಳುಗದಂತೆ ಕಾಪಾಡಿಕೊಳ್ಳುವುದು ಭಾರತದ ಮುಂದಿರುವ ಅತಿದೊಡ್ಡ ಸವಾಲು. ಕೇಂದ್ರ ಸರ್ಕಾರವು ರಾಜಸ್ವ ನಷ್ಟವನ್ನು ಲೆಕ್ಕಿಸದೆ ಸುಂಕ ಕಡಿತಗೊಳಿಸಿರುವುದು ಒಂದು 'ಸಂವೇದನಾಶೀಲ ನಡೆ'ಯಾದರೂ, ಇದು ಆರ್ಥಿಕತೆಯ ಮೇಲೆ ನಿರಂತರ ಹಾಕಲಿರುವ ಒತ್ತಡವನ್ನು ನಿರ್ಲಕ್ಷಿಸುವಂತಿಲ್ಲ. ಸರ್ಕಾರದ ಬೊಕ್ಕಸ ಖಾಲಿಯಾಗುವ ಅಪಾಯ ಒಂದೆಡೆಯಾದರೆ, ಜನರು ವಿನಿಯೋಗಿಸುವ ಹಣದ ಪ್ರಮಾಣ-ಹರಿವು ಕಡಿಮೆಯಾಗಿ ಮಾರುಕಟ್ಟೆ ಮಂದವಾಗುವುದು-ಸ್ಥಗಿತಗೊಳ್ಳುವುದು ಮತ್ತೊಂದು ದೊಡ್ಡ ಅಪಾಯದ ಮಟ್ಟ. ಈ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವ ಕೇಂದ್ರ ಸರ್ಕಾರದ ಈ ಕಸರತ್ತು ಯಶಸ್ವಿಯಾಗಲಿ ಎಂಬುದಷ್ಟೇ ಆಶಯ.
ಶಕ್ತಿಯುತ ಆರ್ಥಿಕತೆಯು ಕೇವಲ ಅಂಕಿ-ಅಂಶಗಳಲ್ಲಿಲ್ಲ, ಬದಲಾಗಿ ಅದು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೇಂದ್ರ ಸರ್ಕಾರದ ನೀತಿ ಮತ್ತು ನಿರ್ಧಾರಗಳಲ್ಲಿದೆ. ಈ ಯುದ್ಧವು ಶೀಘ್ರದಲ್ಲೇ ಶಮನವಾಗಿ, ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಮರಳುವವರೆಗೆ ಭಾರತದ ಈ 'ರಕ್ಷಣಾತ್ಮಕ ಆರ್ಥಿಕ ನೀತಿ' ಅನಿವಾರ್ಯವೂ ಹೌದು, ಅವಶ್ಯಕವೂ ಹೌದು. ನಮ್ಮ ಖರ್ಚು ವೆಚ್ಚಗಳನ್ನು ಸಾಧ್ಯವಾದಷ್ಟು ನಿಯಂತ್ರಿಸಿ, ಆ ಮೂಲಕ ದೇಶದ ಸ್ಥಿರತೆಗೆ ಬಲ, ಬೆಲೆ ಮತ್ತು ಬೆಂಬಲ ನೀಡುವ ಕನಿಷ್ಠ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನದ್ದು ಎನ್ನುವ ನೆನಪು ಇರಲಿ. ಸರ್ವೇ ಸಂತು ನಿರಾಮಯಾಃ.
✒️ *ರವೀ ಸಜಂಗದ್ದೆ*
_(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)_
Published
