Karada Vishwa

Article · May 26, 2026

ನಮ್ಮ ಜೊತೆ ಜೊತೆಗೇ.....

- ಜಯಶ್ರೀ ಕೆ. ಆರ್. ಭಟ್ ಪಳ್ಳತಡ್ಕ

ಅಲ್ಲಿಹುದು  ಸುರಲೋಕ, ಇಲ್ಲಿಹುದು ಭೂಲೋಕ 
ಇನ್ನೆಲ್ಲಿಯೋ ಇಹುದು ಅಸುರಲೋಕ /
ಸಜ್ಜನರು ಸುರರಿಹರು, ಅಸುರರೋ ದುರ್ಜನರು,
ನಮ್ಮ ಜೊತೆಗೇ ಇಹರು ಸಾಕ್ಷಿ ಯಾಕ?

ಮನದ ನೆಮ್ಮದಿ ಕಸಿದು ನೋವ ನೀಡುವರಿವರು 
ನೀನು ನೊಂದಾಗೊಮ್ಮೆ ಖುಷಿ ಪಡುವರು /
ನಾನು ನನ್ನದು ಎನುತ ಪರರನ್ನು ತುಳಿವವರು,   
ಅಸುರರಲ್ಲದೆ ಅವರು ಬೇರೆಯಾರು? /

ನನ್ನ ಮುಷ್ಟಿಯ ಒಳಗೆ ಎಲ್ಲರೂ ಇರಬೇಕು,
ನಾ ಹೇಳಿದಂತವರು ಕೇಳಬೇಕು /
ನಾ ಮೆರೆಯುತಿರಬೇಕು, ನೀ ದಾಸನಿರಬೇಕು,
ಹೀಗೆಂದು ಬಯಸುವರು ಸಾಕ್ಷಿ ಸಾಕು /

ಹೆಸರು ಇವರಿಗೆ ಬೇಕು, ಅಧಿಕಾರ ಇರಬೇಕು,
ಮನಸು ಬಂದಂತೆಲ್ಲ ಮೆರೆಯಬೇಕು /
ಉಳಿದವರು ಹೇಗಿರಲಿ ಆಳಾಗಿಯೇ ಇರಲಿ,
ನನ್ನ ಕೈಕೆಳಗವರು ಇರಲಿ, ಸಾಕು /

ಬಯಕೆ ಇವರದು ಹೀಗೆ, ಮನದಲ್ಲಿ ಮಂಡಿಗೆ 
ಸವಿಯುವರು ವಿಧವಿಧದ ಶೈಲಿಯಲ್ಲಿ
ನಂಬಿಕೆಗೆ ಮುಗ್ಧರಿಹ ಜನರು ನಂಬುವರಿವರ,
ಅಷ್ಟು ಸಾಕೂ ತುಳಿದು ನಿಲ್ಲುವವರು!

ನಿನ್ನ ಒಳಿತನೆ ನಾನು ಬಯಸುವುದು ಎನ್ನುವರು,
ತೋರಿಕೆಯ ಒಲವನ್ನು  ತೋರುವವರು /
ಸಮಯ ಸಂದರ್ಭಗಳು ಸರಿಯಾಗಿ ದೊರೆತಾಗ,
ಮುಗ್ಧತೆಗೆ ದ್ರೋಹವನು ಬಗೆಯುವವರು /

ನೀನತ್ತು ನರಳಿರಲು, ಮಣ್ಣ ಪಾಲಾಗಿರಲು,
ಸಂಭ್ರಮವನಾಚರಿಸಿ ಕುಣಿಯುವವರು/
ನಿನ್ನ ನಂಬಿಕೆಯು, ಮುಗ್ಧತೆ, ಇವರ ವರದಾನ
ಬೆನ್ನ ಹಿಂದೆಯೆ ಚೂರಿ ಚುಚ್ಚುವವರು /

ಒಡಹುಟ್ಟಿದವರು, ಬಂಧುಗಳು ಬಾಂಧವರೆನುತ 
ನಾಮಕಾವಸ್ಥೆಯಲಿ ಬಂಧಿಸುವರು /
ನೀನಂಬಿ ಬಂದಾಗ ನಿಜರೂಪ ತೋರುವರು
ನಂಬಿಸಿ ಕತ್ತನ್ನೆ ಕೊಯ್ಯುವವರು /

☘️☘️☘️☘️
Creative Writings