Article · May 30, 2026
ರಾಜೀನಾಮೆ...
- ಜಯಶ್ರೀ ಕೆ ಆರ್ ಭಟ್, ಪಳ್ಳತಡ್ಕ
☘️☘️☘️☘️
ಹೆಬ್ಬೆರಳ ಅಚ್ಚೊತ್ತಿ,
ಸಹಿಯ ಗೀಚಿದನವನು,
ನಿಬ್ಬೆರಗು ಪಡುವಂತೆ ಜನತೆ /
ಕೊಬ್ಬು ಅಧಿಕಾರದ್ದು
ಕಳೆದು ಹೋಯಿತು ಇಂದು ',
ಗೆದ್ದು ಪಡೆದದ್ದಂದು ಘನತೆ/
ಕೊಂದು ಪ್ರಾಣಿಯ ಮಾಂಸ
ತಿಂದು ತೇಗಿದ್ದವನು,
ದೇಗುಲದ ಎದುರಲ್ಲಿ ನಿಂದು/
ಕಲ್ಲು ಮೂರ್ತಿಯ ಒಳಗೆ
ದೇವರಹರೇ? ಏನು?
ತಿಳುವಳಿಕೆ, ಭ್ರಮೆ ನಿಮ್ಮದೆಂದು /
ಮನಸು ಬಂದಂತೆಲ್ಲ
ಅಧಿಕಾರ ನಡೆಸಿರಲು
ಶಪಿಸಿದರು ಜನ ಮನಸು ತುಂಬಿ/
ಸಜ್ಜನರು ಎಂದಿಗೂ
ಮೂರ್ಖರಾಗಿರಲಿಲ್ಲ,
ಇಹರವರು ದೇವರನು ನಂಬೀ /
ಅಧಿಕಾರ, ಹಣದಮಲು,
ಕೈಯೊಳಗೆ ಇರುವಾಗ
ಯಾವುದರು ಮಿತಿಯೆ ಇರಲಿಲ್ಲ /
ಪ್ರಾರಬ್ಧ ಕರ್ಮವದು
ಬಂದು ಕಾಡಿತು ಇಂದು
ಇಂದೀಗ ಅಧಿಕಾರವಿಲ್ಲ /
ನೊಂದು ನೋಯಿಸಿ
ಜನರ ಕಿತ್ತು ತಿಂದನು ಎಲ್ಲ,
ತನ್ನ ಹೊಟ್ಟೆಯ ತುಂಬಿಕೊಂಡ/
"ಶಿವ ಶಿವಾ" ಏನೆಂದು
ಹೇಳಲಿ ಹಣೆ ಬರಹ ?
ಎಲ್ಲವನು ಕಳಕೊಂಡನಲ್ಲ !/
ಒತ್ತಡವು ಏನಿತ್ತೊ,
ಗ್ರಹಚಾರ ಕೆಟ್ಟಿತ್ತೋ,
ವಿಧಿಲಿಖಿತ ಹೀಗಿತ್ತೊ ಕಾಣೇ /
ಪತ್ರದಲಿ ಸಹಿ ಮಾಡಿ
ಕುರ್ಚಿಯಿಂದಿಳಿದಿಹನು
ನೀಡಿ ಹುದ್ದೆಗೆ ರಾಜೀನಾಮೆ! /
Creative Writings
