Karada Vishwa

News · June 2, 2026

ಕರಾಡ "ಸುವರ್ಣ ಸಂಭ್ರಮ" 2026 - ಹಿರಿಯರ ದಿನ ಆಚರಣೆ

ವರದಿ : ದಿವ್ಯಾ ಶಿರಂತಡ್ಕ

      ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ) ಅಗಲ್ಪಾಡಿ ಇದರ 50 ನೇ ವರ್ಷದ ಸುವರ್ಣ ಸಂಭ್ರಮದ ಮೊದಲ ಕಾರ್ಯಕ್ರಮವಾಗಿ "ಹಿರಿಯರ ದಿನಾಚರಣೆ" ತಾರೀಕು 31.05.2026 ರಂದು ಭಾರತಿ ಸದನದಲ್ಲಿ ನಡೆಯಿತು. ಹಿರಿಯರ ಅಪಾರ ಅನುಭವ, ಜ್ಞಾನ ಕಿರಿಯರಿಗೆ ತಿಳಿದುಕೊಳ್ಳುವ ಉದ್ದೇಶದೊಂದಿಗೆ, ಹಿರಿಯರಿಗಾಗಿ ಮಾಹಿತಿ,  ಮನೋರಂಜನೆ ಹಾಗೂ ದೈನಂದಿನ ಏಕತಾನತೆಯನ್ನು ಹೋಗಲಾಡಿಸಲು ಇದು ವೇದಿಕೆಯಾಯಿತು. ಬೆಳಗ್ಗೆ 9.30 ಕ್ಕೆ  ಪ್ರಾರಂಭವಾದ ಕಾರ್ಯಕ್ರಮವನ್ನು  ಹಿರಿಯರಾದ ಶ್ರೀ ಮಾಧವ ಭಟ್ ಕೊಟ್ಟಂಗುಳಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಧವ ಭಟ್ ಸ್ವರ್ಗ ಪ್ರಾರ್ಥನೆ ಹಾಡಿದರು. ನೆರೆದ ಎಲ್ಲಾ ಹಿರಿಯರು ದೀಪಕ್ಕೆ ತೈಲ ಪೂರಣ ಮಾಡುವ ಮೂಲಕ ತಮ್ಮ ಅಮೂಲ್ಯ ಭಾಗವಹಿಸುವಿಕೆ ಹಾಗೂ ಏಕತೆಯನ್ನು ಸಾರಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕರಾಡ ಸುವರ್ಣ ಸಂಭ್ರಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಶಿವಕುಮಾರ ಶಾಂತಿಯಡಿ ಆಗಮಿಸಿದ ಎಲ್ಲಾ ಹಿರಿಯ ಕಿರಿಯರನ್ನು ಸ್ವಾಗತಿಸಿದರು. ಉದ್ಘಾಟಕರಾದ ಶ್ರೀ ಮಾಧವ ಭಟ್ ಕೊಟ್ಟಂಗುಳಿ ಶುಭನುಡಿಗಳನ್ನಾಡಿದರು. ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ( ರಿ )ಅಗಲ್ಪಾಡಿ ಇದರ ಅಧ್ಯಕ್ಷರಾದ ಶ್ರೀ ರಮಾನಂದ ಎಡಮಲೆ, ಕರಾಡ ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಎಡೆಪ್ಪಾಡಿ ಶುಭಾಶಂಸನೆಗೈದರು. ವೇದಿಕೆಯಲ್ಲಿ ಹಿರಿಯರಾದ ಶ್ರೀಮತಿ ಉತ್ತರೆ ಶಿರಂತಡ್ಕ ಹಾಗೂ ಸಂಘದ ಕಾರ್ಯದರ್ಶಿ ಶ್ರೀ ಗಣೇಶ್ ಚೇರ್ಕೂಡ್ಲು ಉಪಸ್ಥಿತರಿದ್ದರು. ಶ್ರೀಮತಿ ದಿವ್ಯಾ  ಶಿರಂತಡ್ಕ ನಿರೂಪಿಸಿದರು.

       ಸುಮಾರು ಒಂದುವರೆ ಗಂಟೆಗಳ ಕಾಲ  ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಂಪನ್ಮೂಲ ವ್ಯಕ್ತಿ ಶ್ರೀ ಸೂರ್ಯನಾರಾಯಣ ಭಟ್ ಸೈಪಂಗಲ್ಲು ಅವರ ನೇತೃತ್ವದಲ್ಲಿ ಹಿರಿಯರ ಜೊತೆ ಸಂವಾದ ಕಾರ್ಯಕ್ರಮ ನಡೆಯಿತು. ಎಲ್ಲ ಹಿರಿಯರು ಅತ್ಯಂತ ಉತ್ಸಾಹದಿಂದ  ಭಾಗವಹಿಸಿದರು. ಅನಂತರ ಹಿರಿಯರಿಗಾಗಿ ಹೆಕ್ಕಿ ಅಭಿನಯ, ಪೇಪರ್ ಗ್ಲಾಸ್ ಟವರ್ ನಿರ್ಮಾಣದಂತಹ ಉತ್ಸಾಹ ಹೆಚ್ಚಿಸುವ ಆಟೋಟ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಭೋಜನ ವಿರಾಮದ ನಂತರ ಕರಾಡ ಯುವ ಕಲಾವಿದರು, ಹಾಗೂ ನೆರೆದ ಹಿರಿಯರಿಂದ  ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಹಳೆಯ ಕಾಲದ ವಸ್ತು ಪ್ರದರ್ಶನ ಹಾಗೂ ಯುವ ಕಲಾವಿದರ ಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು.

       ಆ ಬಳಿಕ ಹಿರಿಯ ನಾಗರಿಕರಿಗೆ ಇರುವ ಸರಕಾರಿ ಸೌಲಭ್ಯಗಳ ಕುರಿತು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೂಪವಾಣಿ‌ ಆರ್ ಭಟ್  ಅಗತ್ಯ ಮಾಹಿತಿಗಳನ್ನು ನೀಡಿದರು. ಅನಂತರ ಡಿಜಿಟಲ್ ಸುರಕ್ಷತೆ ಎನ್ನುವ ವಿಷಯದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ಪೂರ್ಣಿಮಾ  ಅತ್ಯಂತ ಔಚಿತ್ಯಪೂರ್ಣ ಮಾಹಿತಿ ನೀಡಿದರು. ನಂತರ ಡಾ. ಗೋವಿಂದ ಕೃಷ್ಣ ಪಳ್ಳ ಹಿರಿಯರ ಆರೋಗ್ಯ ರಕ್ಷಣೆಯ ಕುರಿತು ಸೂಕ್ತ ಸಲಹೆಗಳನ್ನು ನೀಡಿದರು. 
       ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ) ಅಗಲ್ಪಾಡಿ ಇದರ ಕಾರ್ಯದರ್ಶಿ ಶ್ರೀ ಗಣೇಶ್ ಚೇರ್ಕೂಡ್ಲು ಸ್ವಾಗತಿಸಿದರು . ಕರಾಡ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಶ್ರೀ ಕೃಷ್ಣಮೂರ್ತಿ ಎಡೆಪ್ಪಾಡಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಸಂಘದ ಕಾರ್ಯ ಚಟುವಟಿಕೆಗಳು, ಉದ್ದೇಶಗಳ ಬಗ್ಗೆ ವಿವರಿಸಿದರು. ಸುವರ್ಣ ಸಂಭ್ರಮ ಸಮಿತಿಯ ಕಾರ್ಯದರ್ಶಿ ಶ್ರೀ ಶಿವಕುಮಾರ ಶಾಂತಿಯಡಿ ಸಮಿತಿಯ  ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ಶ್ರೀ ರಮಾನಂದ ಎಡಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷೆ‌ ಶ್ರೀಮತಿ ಶ್ಯಾಮಲಾ ಮರಿಕ್ಕಾನ ಧನ್ಯವಾದ ಸಮರ್ಪಿಸಿದರು.  ಶ್ರೀ ಸೂರ್ಯನಾರಾಯಣ ಭಟ್ ಸೈಪಂಗಲ್ಲು ನಿರೂಪಿಸಿದರು.


Community