
Article · July 4, 2026
ಮುರಳೀಧರ
---ವೀಣಾ ಎಂ ಭಟ್
ಕದ್ದು ನೋಡುವೆ ಏಕೊ ಎಲೋ ಮಾಧವ
ಮುದ್ದು ಮಾಡಲು ಮೆಲ್ಲ ಹಿಂದಿನಿಂ ಬರುವ//ಕದ್ದು//
ತಿಂಗಳಾ ಬೆಳಕಿನಲಿ ನೀ ಮುರಳಿಯ ಊದಲು
ಅಂಗನೆಯರೆಲ್ಲ ಛಂಗನೆ ಅಂಗಳಕ್ಕೆ
ಮಂಗಳಾಂಗನ ಮುರಳಿ ಮೋಹನ ರಾಗ ಹಾಡಲು
ಸಿಂಗಾರಿಯರು ಶೃಂಗಾರ ಗಾನದಿ ತೇಲಿ//ಕದ್ದು//
ಕೊಳಲಗಾನವು ಚಂದ ನಳಿನನಾಭನೆ ದೇವಾ
ನಳಿನಾಕ್ಷಿಯರ ಕೂಡೆ ರಾಸಲೀಲೆಯಲಿ
ಕಾಳಿಂದಿ ತೀರದಲಿ ವಿಷ ಸರ್ಪವನು ಎತ್ತಿ
ಕಾಳಿಂಗ ಮರ್ದಿಸಿದೆ ನರ್ತನವ ಮಾಡಿ//ಕದ್ದು//
ಗೋಪಿಯರ ಮನೆಯಿಂದ ಬೆಣ್ಣೆ ಮೊಸರನು ಕದ್ದೆ
ಗೋಪಿಯರ ಹೃದಯವನು ಗೆದ್ದ ಚೋರನು ಆದೆ
ಗೋಕುಲದಿ ಕಿರು ಬೆರಳಲ್ಲಿ ಗಿರಿಯನು ಎತ್ತಿ
ಗೋವರ್ಧನ ಗಿರಿಧರನು ನೀನಾದೆ//ಕದ್ದು//
ಆದಿಶೇಷನ ಮೇಲೆ ಪವಡಿಸಿದ ಮಹಾವಿಷ್ಣು
ಆದಿ ಅಂತ್ಯಗಳೆರಡು ನಿನ್ನ ಕರದಲ್ಲಿ
ಅವತಾರವೆತ್ತಿ ನೀ ಗೀತೆಯನು ಬೋಧಿಸಿದೆ
ಅವತರಿಸಿ ಮಗದೊಮ್ಮೆ ಬಂದು ಬಿಡು ದೇವಾ//ಕದ್ದು//
Creative Writings
