Karada Vishwa

Article · September 14, 2026

ಗೌರಿ

ವೀಣಾ ಎಂ ಭಟ್

ಮೂರುತಿಯನು ನಿಲ್ಲಿಸೋ ಮಾಧವಾ ನಿನ್ನ - ರಾಗದಲ್ಲಿ

ಬಂದಳು ಮಂಗಳ ಗೌರಿ ಭಕ್ತರ ಮನೆಗೆ

ಮಂದಹಾಸವ ಬೀರಿ

ಭಾದ್ರಪದ ಶುಕ್ಲದ ತದಿಗೆಯ ದಿನದಂದು

ಸೌಭಾಗ್ಯವ ನೀಡಿ ಹರಸಲು ಮುದದಿಂದ

ಬಂದಳು ಮಂಗಳ ಗೌರಿ ಭಕ್ತರ ಮನೆಗೆ

ತಂದಳು ಹರುಷವನು

ಬಿಲ್ವಪತ್ರೆ ತುಳಸೀದಳ ಬೃಂದಾವನದಿಂದ

ನೀಲಕಂಠನ ಲಲನೆ ಚೆಲುವೆ ಶಿವೆಗಾಗಿ

ತಂದೆವು ಪತ್ರೆಗಳನು ಸ್ವರ್ಣ ಗೌರಿ

ಬಂದೆವು ಪೂಜೆಗಾಗಿ

ಪಂಚಕಜ್ಜಾಯವ ಅಚ್ಚು ಬೆಲ್ಲವ ಹಾಕಿ

ಪಂಚಾಮೃತವ ಪರಮೇಶ್ವರಿಗೆ

ಪಾಹಿಮಾಂ ಶ್ರೀ ಗೌರಿ ಜಗದಂಬಿಕೆ

ಪಾಲಿಸು ನಾರಾಯಣೀ

ರಂಗುರಂಗಿನ ಹೂವ ಚೆಂಗುಲಾಬಿಯ ತಂದು

ಮಂಗಳಾಂಗಿಗೆ ಮಲ್ಲಿ ಜಾಜಿ ಸೇವಂತಿಗೆ

ಸೌರಭ ತುಂಬಿದೆ ನೋಡಮ್ಮ

ಶರಣ್ಯೇ ನಿನಗಾಗಿ ಎಲ್ಲ ಕಣಮ್ಮ

ಜರತಾರಿ ಸೀರೆ ಉಟ್ಟು ಚಿನ್ನಾಭರಣವಿಟ್ಟು

ಕಲಶ ಕನ್ನಡಿಯಲ್ಲಿ ಕರಿಯ ಬಳೆಯನಿಟ್ಟು

ಕರುಣೆದೋರು ತಾಯೆ ಜಗದಂಬಿಕೆ

ಸಕಲ ಜನರ ಕಾಯೆ

ಆರಾಧನೆಯು ಅರುಣ ಕಾಲದಿ ಸೇರಿ

ಅಂಗನೆಯರು ಎಲ್ಲ ಬಂದು ಸುತ್ತಲೂ ಸೇರಿ

ಶರಣು ಶರಣು ಗೌರಿ ಮಹಾ ಮಾತೆ

ಪಾಲಿಸು ಪಾರ್ವತಿಯೆ

Creative Writings