
Article · October 19, 2026
ಕೊಲೊರಾಡೋದ ಮೂರು ತಾಣಗಳು - ಮರೆಯಲಾಗದ ಅನುಭವಗಳು
- ಪದ್ಮಶ್ರೀ ಮಾದೇರಿ
ಅಮೆರಿಕ ಪ್ರವಾಸ ಭಾಗ 5
ನಾವು ನಮ್ಮ ರೋಡ್ ಟ್ರಿಪ್ ನ ಕೊನೆಯ ಹಂತವನ್ನು ತಲುಪಿದ್ದೆವು. ಇನ್ನು ಕೇವಲ ನಾಲ್ಕು ದಿನಗಳ ಪ್ರವಾಸ ಬಾಕಿ ಉಳಿದಿತ್ತು. ಅದರಲ್ಲಿ ಕೊನೆಯ ದಿನ ವಾಪಾಸು ತಂಗಿಯ ಮನೆಗೆ ಹೋಗಲು ಮೀಸಲಿಟ್ಟಿದ್ದೆವು. ಇನ್ನುಳಿದ ಮೂರು ದಿನಗಳಲ್ಲಿ ಕೋಲೊರಾಡೋ ರಾಜ್ಯದ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದೆಂದು ತೀರ್ಮಾನವಾಗಿತ್ತು. ಆದರೆ, ಅದೇ ಸಮಯದಲ್ಲಿ ನಾವು ಹೋಗಬೇಕಿದ್ದ ಎರಡು - ಮೂರು ಸ್ಥಳಗಳಲ್ಲಿ ಕಾಡ್ಗಿಚ್ಚು ಆರಂಭವಾದ ಕಾರಣ, ನಮ್ಮ ಯೋಜನೆಯನ್ನು ಬದಲಾಯಿಸಬೇಕಾಯಿತು. ಅಂತೂ ಬಹಳಷ್ಟು ಚರ್ಚೆ ಮಾಡಿ, ಮೂರು ದಿನಗಳಲ್ಲಿ ದಿನಕ್ಕೊಂದರಂತೆ ಮರೂನ್ ಬೆಲ್ಸ್, ಸೆವೆನ್ ಫಾಲ್ಸ್ ಮತ್ತು ಪೈಕ್ಸ್ ಪೀಕ್ - ಈ ಮೂರು ಸ್ಥಳಗಳಿಗೆ ಹೋಗುವುದೆಂದು ನಿರ್ಧರಿಸಿದೆವು. ಈ ಸ್ಥಳಗಳ ಸಮೀಪ ಕಾಡ್ಗಿಚ್ಚು ಇನ್ನೂ ಹಬ್ಬಿರಲಿಲ್ಲ. ಕೊಲೊರಾಡೋದ ವಾತಾವರಣ ನಮ್ಮ ಊರಿನ ಬಿರು ಬೇಸಿಗೆಯಂತಿತ್ತು. ವಿಪರೀತ ಬಿಸಿಲು, ತಡೆಯಲಾಗದ ಸೆಕೆ. ಇನ್ನು ಮೂರು ದಿನಗಳ ಕಾಲ ಈ ಬಿಸಿಲಿನಲ್ಲಿ ತಿರುಗಾಡಬೇಕಲ್ಲಪ್ಪಾ ಎಂದು ಎಲ್ಲರಿಗೂ ಅನಿಸಿದರೂ, ಹೊಸ ಜಾಗಗಳನ್ನು ನೋಡಲು ಎಲ್ಲರೂ ಉತ್ಸುಕರಾಗಿದ್ದೆವು.
ಮರೂನ್ ಬೆಲ್ಸ್
ಆಸ್ಪೆನ್ ಪಟ್ಟಣದ ಸಮೀಪದಲ್ಲಿರುವ ಮರೂನ್ ಬೆಲ್ಸ್, ಕೋಲೊರಾಡೋದ ಅತ್ಯಂತ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ಇಲ್ಲಿ ಎರಡು ಮರೂನ್ ಬಣ್ಣದ ಪರ್ವತಗಳು ದೊಡ್ಡ ಘಂಟೆಗಳಂತೆ ಕಾಣುವ ಕಾರಣ ಈ ಹೆಸರು ಬಂದಿದೆ. 14 ಸಾವಿರ ಅಡಿ ಎತ್ತರವಿರುವ ಎರಡು ಅವಳಿ ಶಿಖರಗಳ ಪ್ರತಿಬಿಂಬ ಕೆಳಗಿರುವ ಮರೂನ್ ಸರೋವರದಲ್ಲಿ ಭವ್ಯವಾಗಿ ಕಾಣುತ್ತದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿ ವರ್ಷ ಸುಮಾರು 3 ಲಕ್ಷಕ್ಕೂ ಅಧಿಕ ಪ್ರವಾಸಿಗರು ಬರುವ ಕಾರಣ, ಇಲ್ಲಿನ ಸೂಕ್ಷ್ಮ ಪರಿಸರವನ್ನು ಸಂರಕ್ಷಿಸಲು ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅದರ ಬದಲಿಗೆ ಶಟಲ್ ಬಸ್ಸಿನ ಸೇವೆ ಲಭ್ಯವಿತ್ತು. ಇದಕ್ಕೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವುದು ಕಡ್ಡಾಯವಾಗಿತ್ತು. ಬೆಳಗ್ಗೆ ಒಂಬತ್ತು ಗಂಟೆಯ ಬಸ್ಸಿಗೆ ನಮ್ಮ ಟಿಕೆಟ್ ಕಾಯ್ದಿರಿಸಲಾಗಿತ್ತು. ಬೇಗನೆ ಎದ್ದು, ತಿಂಡಿ ಮುಗಿಸಿ, ಎಂಟೂವರೆಗೆಲ್ಲಾ ಕಾರ್ ಪಾರ್ಕ್ ಮಾಡಿ, ಬಸ್ ಹತ್ತಬೇಕಿದ್ದ ಸ್ಥಳ ತಲುಪಿದೆವು.ನೂಕು ನುಗ್ಗಲೇನೂ ಇರಲಿಲ್ಲ.10 ನಿಮಿಷದಲ್ಲಿ ಬಸ್ ಬಂತು. ಎಲ್ಲರೂ ಹತ್ತಿ ಕುಳಿತ ನಂತರ ಬಸ್ ಹೊರಟಿತು. ರಸ್ತೆಯ ಎರಡೂ ಬದಿಗಳಲ್ಲಿ ಎತ್ತರವಾಗಿ ಬೆಳೆದಿರುವ ಪೈನ್ ಮತ್ತು ಆಸ್ಪೆನ್ ಮರಗಳು, ಅವುಗಳ ನಡುವೆ ಅಲ್ಲಲ್ಲಿ ಕಾಣಿಸುವ ಮರೂನ್ ಬಣ್ಣದ ಪರ್ವತಗಳು ನಮ್ಮ ಗಮನ ಸೆಳೆದವು. ರಸ್ತೆ ನೇರವಾಗಿರದೆ, ಚಾರ್ಮಾಡಿ ಅಥವಾ ಆಗುಂಬೆ ಘಾಟಿಯಂತೆ ತುಂಬಾ ತಿರುವುಗಳಿಂದ ಕೂಡಿತ್ತು. ಸುಮಾರು ಅರ್ಧ ಗಂಟೆಯ ಪ್ರಯಾಣದ ಬಳಿಕ ಮರೂನ್ ಬೆಲ್ಸ್ ತಲುಪಿದೆವು. ಬಸ್ಸಿನಿಂದ ಇಳಿದು, ಸುಡು ಬಿಸಿಲಿನಲ್ಲಿ ಐದು ನಿಮಿಷ ನಡೆದ ಬಳಿಕ ಮರೂನ್ ಬೆಲ್ಸ್ ಸರೋವರ ಹಾಗೂ ಹಿಂಭಾಗದಲ್ಲಿ ಎರಡು ಅವಳಿ ಪರ್ವತಗಳನ್ನು ನೋಡಿ ನಮ್ಮೆಲ್ಲರ ಮುಖದಲ್ಲಿ ಮಂದಹಾಸ ಮೂಡಿತು.

ಸರೋವರದ ಸುತ್ತಲೂ ನಡೆಯಲು ಸುಂದರವಾದ ದಾರಿಗಳಿದ್ದರೂ, ಸೆಕೆಗೆ ಯಾರಿಗೂ ನಡೆಯಲು ಮನಸ್ಸಿರಲಿಲ್ಲ. ಅಷ್ಟು ದೂರ ಪಯಣಿಸಿ ಏನನ್ನೂ ನೋಡದೆ ವಾಪಸು ಹೋಗುವುದು ಬೇಡವೆಂದು ಸ್ವಲ್ಪ ದೂರದವರೆಗೆ ನಡೆಯಲು ನಿರ್ಧರಿಸಿದೆವು. ನೆರಳಲ್ಲಿ ವಿಶ್ರಮಿಸುತ್ತಿದ್ದ ಜಿಂಕೆಯೊಂದು ಬಿಟ್ಟರೆ ಬೇರೆ ಯಾವ ಕಾಡು ಪ್ರಾಣಿಗಳೂ ಕಾಣಿಸಲಿಲ್ಲ. ಬಣ್ಣ ಬಣ್ಣದ ಕಾಡು ಹೂವುಗಳು ಅರಳಿದ್ದವು. ಬಿಸಿಲಿನ ಬೇಗೆ ಹೆಚ್ಚಾಗಿದ್ದುದಕ್ಕೋ ಅಥವಾ ಯೆಲ್ಲೋಸ್ಟೋನ್ ಹಾಗೂ ಗ್ರಾಂಡ್ ಟೆಟಾನ್ ನಲ್ಲಿ ಅದ್ಭುತವಾದ ಪ್ರಾಕೃತಿಕ ಸೌಂದರ್ಯವನ್ನು ಈ ಮೊದಲೇ ನೋಡಿದ ಕಾರಣಕ್ಕೋ, ಯಾರಿಗೂ ಈ ಸ್ಥಳವನ್ನು ನೋಡಿ "ವಾವ್" ಎಂದು ಅನಿಸಲಿಲ್ಲ. ಒಂದು ಗಂಟೆಯ ಕಾಲ ಅಲ್ಲೆಲ್ಲಾ ಸುತ್ತಾಡಿ, ಅನೇಕ ಫೋಟೋಗಳನ್ನು ತೆಗೆದು ಅಲ್ಲಿಂದ ವಾಪಸು ಹೊರಟೆವು.


ಸೆವೆನ್ ಫಾಲ್ಸ್
ಕೋಲೊರಾಡೋ ಸ್ಟ್ರಿಂಗ್ಸ್ ನಗರದ ಸಮೀಪವಿರುವ ಸೌತ್ ಶೆಯನ್ನೇ ಕಾನ್ಯನ್ ಎಂಬ ಸುಂದರ ಕಣಿವೆಯೊಳಗೆ ಈ ಜಲಪಾತವಿದೆ. ಸುಮಾರು 1,250 ಅಡಿ ಎತ್ತರದ ಕಲ್ಲಿನ ಗೋಡೆಗಳಿಂದ ಸುತ್ತುವರಿದಿರುವ ಈ ಕಣಿವೆಯೊಳಗೆ ಏಳು ಹಂತಗಳಲ್ಲಿ ಸುಮಾರು 180 ಅಡಿ ಕೆಳಕ್ಕೆ ಧುಮುಕುವ ಜಲಧಾರೆಯೇ ಸವೆನ್ ಫಾಲ್ಸ್. ಇಲ್ಲಿ ಸ್ವಂತ ವಾಹನಗಳಿಗೆ ಪ್ರವೇಶವಿಲ್ಲ. ಕಾರನ್ನು ನಿಗದಿತ ಸ್ಥಳದಲ್ಲಿ ಪಾರ್ಕ್ ಮಾಡಿ, ಶಟಲ್ ಬಸ್ಸಿನಲ್ಲಿ ಹೋಗಬೇಕು.

ನಾವು ಬೆಳಗ್ಗೆ ಸುಮಾರು 9 ಗಂಟೆಗೆ ಅಲ್ಲಿಗೆ ತಲುಪುವ ಪ್ಲಾನ್ ಮಾಡಿದ್ದೆವು. ನನ್ನ ತಂಗಿ ತಾನು ಬರುವುದಿಲ್ಲವೆಂದೂ, ಮಕ್ಕಳ ಜೊತೆ ರೂಮ್ ನಲ್ಲಿ ವಿರಮಿಸುವುದಾಗಿಯೂ ತಿಳಿಸಿದಳು. ಎಷ್ಟು ಹೇಳಿದರೂ ಅವಳು ಬರಲೊಪಲಿಲ್ಲ. ಕೊನೆಗೆ ನಾನು, ಮನೆಯವರು ಮತ್ತು ಬಾವ ಮಾತ್ರ ಹೊರಟೆವು. ಕಾರ್ ಪಾರ್ಕ್ ಮಾಡಿ ಶಟಲ್ ಬಸ್ ಹತ್ತಿದೆವು. ನಗರ ಪ್ರದೇಶದಿಂದ ಕಣಿವೆ ಪ್ರವೇಶಿಸುತ್ತಿದ್ದಂತೆ ಸುತ್ತಲಿನ ದೃಶ್ಯ ಬದಲಾಗ ತೊಡಗಿತು. ರಸ್ತೆಯ ಅಗಲ ಕಡಿಮೆಯಾಗುತ್ತಾ, ಎರಡು ಬದಿಗಳಲ್ಲಿ ಎತ್ತರದ ಬಂಡೆಗಳು ಮತ್ತು ಮರಗಳು ಕಾಣಿಸತೊಡಗಿದವು. ನಗರದ ಗದ್ದಲದಿಂದ ಹೊರ ಬಂದು ಪ್ರಕೃತಿಯ ಮಡಿಲನ್ನು ಪ್ರವೇಶಿಸಿದ ಅನುಭವವಾಯಿತು.

ಸೆವೆನ್ ಫಾಲ್ಸ್ ನ ಪ್ರವೇಶ ದ್ವಾರದಲ್ಲಿ ಬಸ್ಸಿನಿಂದ ಇಳಿದು ಜಲಪಾತದ ಕಡೆಗೆ ನಡೆಯಲಾರಂಭಿಸಿದೆವು ಜಲಪಾತ ತಲುಪಲು ಸುಮಾರು 0.8 ಮೈಲಿ ದೂರ ನಡೆಯಬೇಕಿತ್ತು. ಈ ನಡಿಗೆಯಲ್ಲೇ ಕಣಿವೆಯ ನಿಜವಾದ ಸೌಂದರ್ಯ ತೆರೆದುಕೊಳ್ಳುತ್ತದೆ. ಬಲು ಎತ್ತರದ ಬಂಡೆಗಳ ನಡುವೆ ಸಾಗುವ ಕಿರಿದಾದ ರಸ್ತೆಯ ಎರಡು ಬದಿಗಳಲ್ಲಿ ವಿವಿಧ ಮರಗಳು ಹಾಗೂ ಬಣ್ಣ ಬಣ್ಣದ ಹೂವಿನ ಗಿಡಗಳು ಕಾಣಿಸುತ್ತವೆ. ದಾರಿಯುದ್ದಕ್ಕೂ ಪಕ್ಕದಲ್ಲೇ ಸಣ್ಣ ತೊರೆಯೊಂದು ಹರಿಯುತ್ತಿತ್ತು. ಸುಮಾರು ಒಂದು ಕಿಲೋಮೀಟರ್ ದೂರ ನಡೆದ ನಂತರ, ಜಲಪಾತದ ಸದ್ದು ಸ್ಪಷ್ಟವಾಗಿ ನಮಗೆ ಕೇಳಲಾರಂಭಿಸಿತು. ಇನ್ನೂ ಸ್ವಲ್ಪ ಮುಂದೆ ಹೋದ ನಂತರ ಏಳು ಹಂತಗಳಲ್ಲಿ ಕೆಳಗೆ ಧುಮುಕುವ ಜಲಪಾತ ಕಂಡು ನಮ್ಮ ಮನಸ್ಸು ಮುದಗೊಂಡಿತು.

ಜಲಪಾತದ ಪಕ್ಕದಲ್ಲಿ ಮೇಲಕ್ಕೆ ಹೋಗಲು 224 ಕಡಿದಾದ ಕಬ್ಬಿಣದ ಏಣಿಯಂತಿರುವ ಮೆಟ್ಟಿಲುಗಳಿದ್ದವು. ಈ ಮೆಟ್ಟಿಲುಗಳನ್ನೇರುತ್ತಾ ಹೋದಂತೆ, ಜಲಪಾತದ ಹಂತಗಳು ಒಂದೊಂದಾಗಿ ಕಾಣಿಸುತ್ತದೆ. ನಾನು ಮೇಲಕ್ಕೆ ಹತ್ತುವುದೋ, ಬೇಡವೋ ಎಂದು ಯೋಚಿಸುತ್ತಿದ್ದಂತೆ, ನನ್ನ ಬಾವ ಹತ್ತಲಾರಂಭಿಸಿದ. ನಾನು ಬಹಳ ಧೈರ್ಯದಿಂದ, ನಮ್ಮ ಮನೆಯ ಅಟ್ಟಹತ್ತುವವಳಿಗೆ ಇದೆಂಥಹ ಕಷ್ಟ ಎಂದುಕೊಂಡು ಹತ್ತಲಾರಂಭಿಸಿದೆ. ನನ್ನ ಹಿಂದೆ ಮನೆಯವರು ಅಲ್ಲಲ್ಲಿ ನಿಂತು ಫೋಟೋ ತೆಗೆಯುತ್ತಾ, ನಿಧಾನವಾಗಿ ಹತ್ತುತ್ತಿದ್ದರು. ಒಂದು 30 ಮೆಟ್ಟಿಲುಗಳನ್ನು ನಾನು ಹತ್ತಿರಬಹುದು. ಹಿಂದಿರುಗಿ ಕೆಳಗೆ ನೋಡಿದೆ ಅಷ್ಟೇ, ತಲೆ ಸುತ್ತುವಂತೆ ಭಾಸವಾಯಿತು. ಕಾಲುಗಳು ಗಡಗಡ ನಡುಗಲಾರಂಭಿಸಿದವು. ಮುಂದೆ ಹತ್ತಲೂ ಧೈರ್ಯವಿಲ್ಲ, ಕೆಳಗಿಳಿಯಲೂ ಧೈರ್ಯವಿಲ್ಲ ಎಂಬ ಪರಿಸ್ಥಿತಿ ನನ್ನದಾಗಿತ್ತು. ಬಾವನ ಹತ್ತಿರ ನಾನು ಬರುವುದಿಲ್ಲವೆಂದೆ. ಪಾಪ, ಅವನೂ ಕೂಡ ನನ್ನದೇ ಪರಿಸ್ಥಿತಿಯಲ್ಲಿದ್ದ. ಅಷ್ಟರಲ್ಲಿ ಹಿಂದಿನಿಂದ ಬಂದ ನನ್ನ ಮನೆಯವರು, ನನ್ನ ಕೈಯನ್ನು ಹಿಡಿದು, ಆಚೆ ಈಚೆ ನೋಡದೆ ಕೇವಲ ಮುಂದೆ ನೋಡುತ್ತಾ ಹತ್ತಲು ಹೇಳಿದರು.ಅಂತೂ ಇಂತೂ ಕಷ್ಟಪಟ್ಟು 224 ಮೆಟ್ಟಿಲುಗಳನ್ನು ಏರಿ ಸುತ್ತಲೂ ನೋಡಿದಾಗ ಜಲಪಾತ ಹಾಗೂ ವಿಶಾಲವಾದ ಕಣಿವೆಯ ಅದ್ಭುತ ದೃಶ್ಯ ಕಂಡಾಗ ನಮ್ಮ ಭಯವೆಲ್ಲಾ ಮಾಯವಾಯಿತು. ಅನೇಕ ಚಿತ್ರಗಳನ್ನು ಸೆರೆ ಹಿಡಿದು, ಸ್ವಲ್ಪ ಹೊತ್ತು ಅಲ್ಲೇ ವಿರಮಿಸಿ, ನಿಧಾನವಾಗಿ ಕೆಳಗಿಳಿಯಲು ಆರಂಭಿಸಿದೆವು. ನಾನು ಮನೆಯವರ ಹೆಗಲನ್ನು ಒಂದು ಕೈಯಿಂದ ಹಿಡಿದುಕೊಂಡು, ಕಣಿವೆಗೆ ಬೆನ್ನು ಮಾಡಿ ಇಳಿಯಲಾರಂಭಿಸಿದೆ. ಬಾವನೂ ಕಷ್ಟಪಟ್ಟು ಕೆಳಗಿಳಿದ. ಅನಂತರ, ಜಲಪಾತ ಹಾಗೂ ಕಣಿವೆಯನ್ನು ಬೇರೆ ದಿಕ್ಕಿನಿಂದ ನೋಡಲು ಇರುವ ವೀಕ್ಷಣಾ ಸ್ಥಳಕ್ಕೆ ಹೋದೆವು. ಅಲ್ಲಿ ಪುನಹ ಈಗಷ್ಟೇ ಹತ್ತಿ ಇಳಿದ ಮೆಟ್ಟಿಲುಗಳಂತೆ ಸುಮಾರು 200 ಮೆಟ್ಟಿಲುಗಳನ್ನು ಏರಬೇಕಿತ್ತು . ನಾನೂ, ಬಾವನೂ ಖಡಾಖಂಡಿತವಾಗಿ ಬರುವುದಿಲ್ಲವೆಂದೆವು. ನಮ್ಮಂಥವರು ಆ ವೀಕ್ಷಣಾ ಸ್ಥಳಕ್ಕೆ ಹೋಗಲು, ಕಲ್ಲನ್ನು ಕೊರೆದು ಮಾಡಿದ ಸುರಂಗದೊಳಗೆ, ಲಿಫ್ಟ್ ವ್ಯವಸ್ಥೆಯನ್ನು ಅಳವಡಿಸಿದ್ದರು. ಅದನ್ನು ಕಂಡು ನಾವು ದಂಗಾದೆವು. ಕೊನೆಗೆ ಲಿಫ್ಟ್ ನಲ್ಲಿಯೇ ಹೋಗಿ, ವೀಕ್ಷಣಾ ಸ್ಥಳದಿಂದ ಸೆವೆನ್ ಫಾಲ್ಸ್ ನ ಎಲ್ಲಾ ಹಂತಗಳನ್ನು ಒಟ್ಟಿಗೆ ನೋಡಿ, ಖುಷಿಪಟ್ಟು, ಅಲ್ಲಿಂದ ಹೊರಬಂದು,ಬೆಂಚಿನಲ್ಲಿ ಸುಮಾರು ಸಮಯ ಕುಳಿತು, ವಿರಮಿಸಿ, ಶಟಲ್ ಬಸ್ ನಿಲ್ದಾಣದತ್ತ ನಡೆಯಲಾರಂಭಿಸಿದೆವು. ಜಲಪಾತದ ಸದ್ದು, ಪರ್ವತಗಳ ಭವ್ಯತೆ, ಕಣಿವೆಯ ಹಸಿರು, ಕಡಿದಾದ ಮೆಟ್ಟಲುಗಳ ಸವಾಲು, ಹತ್ತುವಾಗ ಆದ ಭಯ ಮತ್ತು ಮೇಲಿಂದ ಕಂಡ ಮನಮೋಹಕ ದೃಶ್ಯ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವುದರಲ್ಲಿ ಸಂಶಯವಿಲ್ಲ.

ಸುರಂಗ

ಪೈಕ್ಸ್ ಪೀಕ್
ಕೊಲೊರಾಡೋ ಸ್ಪ್ರಿಂಗ್ಸ್ ಸಮೀಪವಿರುವ ಪೈಕ್ಸ್ ಪೀಕ್ ಸಮುದ್ರ ಮಟ್ಟದಿಂದ ಸುಮಾರು 14,೦೦೦ ಅಡಿ ಎತ್ತರದಲ್ಲಿದೆ. ಇಷ್ಟು ಎತ್ತರದ ಪರ್ವತದ ತುದಿಗೆ ಪ್ರವಾಸಿಗರು ಕಾರಿನಲ್ಲಿ ಹೋಗಬಹುದು ಅಥವಾ ಕಾರನ್ನು ಪರ್ವತದ ಕೆಳಭಾಗದಲ್ಲಿ ಪಾರ್ಕ್ ಮಾಡಿ "ಪೈಕ್ಸ್ ಪೀಕ್ ಕಾಗ್ ರೈಲಿ"ನಲ್ಲಿ ಹೋಗಬಹುದು. ರೈಲಿನಲ್ಲಿ ಹೋಗುವುದಾದರೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬೇಕು.ನಾವು ರೈಲಿನಲ್ಲಿ ಹೋಗುವುದೆಂದು ಮೊದಲೇ ನಿರ್ಧರಿಸಿದ್ದವು. ಬೆಳಗ್ಗೆ ರೈಲು ನಿಲ್ದಾಣ ತಲುಪಿದಾಗಲೇ, ಮುಂದೆ ಎದುರಾಗಲಿರುವ ಪರ್ವತ ಯಾನದ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ರೈಲಿನಲ್ಲಿ ಕುಳಿತುಕೊಂಡ ನಂತರ ನಿಧಾನವಾಗಿ ನಮ್ಮ ಪ್ರಯಾಣ ಆರಂಭವಾಯಿತು. ರೈಲಿನಲ್ಲಿದ್ದ ಗೈಡ್ ಒಬ್ಬರು ನಮಗೆ ದಾರಿಯುದ್ದಕ್ಕೂ ಕಾಣಿಸುತ್ತಿದ್ದ ವಿವಿಧ ದೃಶ್ಯಗಳ ಬಗ್ಗೆ ವಿವರಿಸುತ್ತಿದ್ದರು.

ರೈಲು ಮೇಲಕ್ಕೆ ಹೋದಂತೆ, ಕಿಟಕಿಯಿಂದಾಚೆ ಕಾಣುವ ದೃಶ್ಯ ಬದಲಾಗುವುದು ನಮ್ಮ ಗಮನಕ್ಕೆ ಬಂತು. ಕೆಳಭಾಗದಲ್ಲಿ ದಟ್ಟವಾಗಿದ್ದ ಕಾಡು, ಮೇಲೇರುತ್ತಿದ್ದಂತೆ ಕಡಿಮೆಯಾಗಿ, ಬಂಡೆಗಳು ಮತ್ತು ತೆರೆದ ಪರ್ವತ ಪ್ರದೇಶಗಳು ಹೆಚ್ಚಾಗಿತ್ತು. ಅಷ್ಟಲ್ಲದೆ ಮೇಲಕ್ಕೆ ಹೋದಂತೆ ಚಳಿಯಾಗಲು ಪ್ರಾರಂಭವಾಗಿ, ಎಲ್ಲರೂ ಸ್ವೆಟರ್ ಹಾಕಬೇಕಾಯಿತು. ಬಂಡೆಗಳ ನಡುವೆ ಕಂದು ಬಣ್ಣದ ದೊಡ್ಡ ಮೊಲದ ಹಾಗಿರುವ ಪ್ರಾಣಿಗಳು ಕಾಣಿಸಿದವು. ನೋಡಲು ಬಹಳ ಮುದ್ದಾಗಿದ್ದವು. ಅವುಗಳ ಹೆಸರು "ಮಾರ್ ಮೊಟ್" ಎಂದು ಗೈಡ್ ಹೇಳಿದರು ಸುಮಾರು 40 ನಿಮಿಷಗಳ ಪ್ರಯಾಣದ ಬಳಿಕ ಪೈಕ್ಸ್ ಪೀಕ್ ತುದಿಯನ್ನು ತಲುಪಿದೆವು.

ರೈಲಿನಿಂದ ಇಳಿದು ಸುತ್ತಲೂ ನೋಡಿದಾಗ ಕಂಡ ದೃಶ್ಯ ನಮ್ಮ ಕಣ್ಮನ ಸೆಳೆಯಿತು. ಕಣ್ಣು ಹಾಯಿಸಿದಷ್ಟೂ ದೂರ ಕಾಣಿಸುವ ಪರ್ವತಗಳು, ಅವುಗಳ ನಡುವೆ ಅಲ್ಲಲ್ಲಿ ಕಾಣಿಸುವ ಸರೋವರಗಳು, ಬಹಳ ದೂರದಲ್ಲಿ ಕಾಣುವ ಭೂಪ್ರದೇಶ - ಎಲ್ಲವನ್ನೂ ನೋಡಿ ಒಂದುಕ್ಷಣ ಮೈಮರೆತೆವು. ಎಲ್ಲವೂ ಸ್ಪಷ್ಟವಾಗಿ ಕಾಣಿಸದೆ ಮಸುಕು ಮಸುಕಾಗಿ ಕಾಣುತ್ತಿರುವಂತೆ ಅನಿಸಿತು. ಆಮೇಲೆ ಗೊತ್ತಾಯಿತು ನಾನು ಮೊದಲೇ ಹೇಳಿದ ಕಾಡ್ಗಿಚ್ಚಿನ ಹೊಗೆಯಿಂದ ಹಾಗೆ ಅಸ್ಪಷ್ಟವಾಗಿ ಕಾಣಿಸಿದ್ದು ಎಂದು. 20 ನಿಮಿಷಗಳ ಕಾಲ ಅಲ್ಲೆಲ್ಲ ಸುತ್ತಾಡಿ, ಅನೇಕ ಚಿತ್ರಗಳನ್ನು ಸೆರೆಹಿಡಿದು, ವಾಪಸ್ ಹೋಗಲು ರೈಲನ್ನು ಹತ್ತಿ ಕುಳಿತೆವು. ಕಾಡ್ಗಿಚ್ಚಿನ ಪ್ರಭಾವದಿಂದ ನಮಗೆ ಪೈಕ್ಸ್ ಪೀಕ್ ನ ಪ್ರಕೃತಿ ಸೌಂದರ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಲು ಸಾಧ್ಯವಾಗದಿದ್ದರೂ, ರೈಲು ಪ್ರಯಾಣವೇ ಒಂದು ಮರೆಯಲಾಗದ ಅನುಭವವಾಗಿತ್ತು. ಏನನ್ನೂ ನೋಡಲಾಗದ ಸ್ಥಿತಿಗಿಂತ ಅಷ್ಟಾದರೂ ಮಸುಕಾಗಿ ನೋಡಿದೆವಲ್ಲ ಎಂಬ ಸಮಾಧಾನ ನಮಗಿತ್ತು.
ಅಂತೂ ನಮ್ಮ ರೋಡ್ ಟ್ರಿಪ್ ಮುಕ್ತಾಯದ ಹಂತ ತಲುಪಿತ್ತು. ನಾವಿದ್ದಲ್ಲಿಂದ ತಂಗಿಯ ಮನೆಗೆ 16 ಗಂಟೆಗಳ ದೀರ್ಘ ಪ್ರಯಾಣವಿತ್ತು. ಮಾರನೆಯ ದಿನ ಬೆಳಗ್ಗೆ ಏಳು ಗಂಟೆಗೆಲ್ಲ ಹೊರಡುವುದು ಎಂದು ಮಾತಾಡಿಕೊಂಡಿದ್ದೆವು. ಆದರೆ ರಾತ್ರಿಯೇ ಕಾಡ್ಗಿಚ್ಚು ನಾವಿದ್ದ ಪಕ್ಕದ ಊರು ತಲುಪಿದೆ ಎಂಬ ಅಲರ್ಟ್ ಸಂದೇಶ ನಮ್ಮೆಲ್ಲರ ಮೊಬೈಲ್ ಗೆ ಬಂದಿದ್ದರಿಂದ, ಮಾರನೆಯ ದಿನ ಬೆಳಗ್ಗೆ 2- 3 ಗಂಟೆಗೆಲ್ಲ ಅಲ್ಲಿಂದ ಹೊರಟು, ರಾತ್ರಿ 7 ಗಂಟೆಗೆಲ್ಲಾ ತಂಗಿಯ ಮನೆ ತಲುಪಿದೆವು.
ಈ 12 ದಿನಗಳ ಪಯಣದಲ್ಲಿ ಪ್ರಕೃತಿಯ ವಿಭಿನ್ನ ರೂಪಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ನಮಗೆ ಲಭಿಸಿತ್ತು. ಮೈಲುಗಟ್ಟಲೆ ಸಾಗುವ ಹೆದ್ದಾರಿಗಳು, ಕಣ್ಣಿಗೆ ಹಬ್ಬದಂತಿದ್ದ ಪರ್ವತ ಶ್ರೇಣಿಗಳು, ವಿಶಾಲವಾದ ಬಯಲು ಪ್ರದೇಶಗಳು,ನಿರ್ಮಲ ಸರೋವರಗಳು,ಕಾಡುಪ್ರಾಣಿಗಳು,ಭೋರ್ಗರೆವ ಜಲಪಾತಗಳು, ಕುತೂಹಲಭರಿತ ಗೀಸರ್ ಗಳು, ಬಿಸಿನೀರ ಬುಗ್ಗೆಗಳು - ಹೀಗೆ ನಾವು ನೋಡಿದ ಪ್ರತಿಯೊಂದು ಸ್ಥಳವೂ, ಒಂದೊಂದು ಸುಂದರ ನೆನಪನ್ನು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಕೆಲವೆಡೆ ಪ್ರಕೃತಿ ಸೌಂದರ್ಯ ನಮ್ಮನ್ನು ಮೂಕ ವಿಸ್ಮಿತರನ್ನಾಗಿಸಿದರೆ, ಇನ್ನೂ ಕೆಲವೆಡೆ ಇಂಥ ವೈಚಿತ್ರ್ಯವೂ ಪ್ರಕೃತಿಯಲ್ಲಿದೆಯೇ ಎಂದು ಆಶ್ಚರ್ಯಗೊಂಡಿದ್ದೆವು. ಈ ದಿನಗಳನ್ನು ಮತ್ತೊಮ್ಮೆ ಯಾವತ್ತಾದರೂ ನೆನಪಿಸಿಕೊಂಡಾಗಲೂ ಮುಖದಲ್ಲಿ ನಗು ಮೂಡಿಸುವ, ಬದುಕಿನ ಸುಂದರ ನೆನಪುಗಳ ಬುತ್ತಿಗೆ ಮತ್ತಷ್ಟು ಮುತ್ತುಗಳನ್ನು ಸೇರಿಸಿದ ಒಂದು ಅಪೂರ್ವ ಪಯಣ.


