
Article · June 22, 2026
ಪಾಕಶಾಸ್ತ್ರ ಪ್ರವೀಣೆ?!!
(ಲಘು ಧಾಟಿಯ ಬರಹ) ✍🏻 ದಿವ್ಯಾ ಶಿರಂತಡ್ಕ
' ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞ ' ಸೋಮೇಶ್ವರ ಶತಕದ ಈ ಮಾತಿನಂತೆ ಹಲವು ಮೂಲಗಳಿಂದ ಕಲಿಕೆ ಸಾಗುತ್ತದೆ. ಜೀವನ ಪೂರ್ತಿ ಕಲಿತರೂ ಕಲಿತು ಮುಗಿಯದ ಅಡುಗೆ ಎಂಬ ಮಹಾಯಜ್ಞ ನಮ್ಮೆಲ್ಲರ ಬದುಕಿನ ನಿತ್ಯ ಕಾಯಕವೂ ಹೌದು.
ಅದೇಕೋ... ಚಿಕ್ಕಂದಿನಿಂದಲೇ ನನಗೆ ಅಡುಗೆ ಎಂಬ ಮಹಾನ್ ಕಲೆಯ ಕುರಿತು ಒಂದು ವಿಚಿತ್ರ ಕುತೂಹಲ. ಕೊತಕೊತ ಎಂದು ಕುದಿಯುವ ನೀರಿಗೆ ತೊಳೆದ ಅಕ್ಕಿ ಹಾಕುವುದರಿಂದ ಹಿಡಿದು ಬಿಸಿ ಕಾವಲಿಯ ಮೇಲೆ ತೆಳ್ಳಗಿನ ನೀರು ದೋಸೆ ಎಸೆಯುವುದರವರೆಗೆ, ಧಿಡೀರಾಗಿ ಕಲಸುವ ಅವಲಕ್ಕಿಯಿಂದ ಹಿಡಿದು ಗಂಟೆಗಟ್ಟಲೆ ಬೇಯುವ ಕೊಟ್ಟಿಗೆಯವರೆಗೆ ತಣಿಯದ ಕುತೂಹಲ. ಇದಕ್ಕೆ ಪೂರಕವಾಗಿ ನನ್ನ ತಂದೆಯವರಿಗೆ ಇದ್ದದ್ದು ಹೋಟೆಲ್ ಉದ್ಯಮ. ಅಂದ ಮೇಲೆ ಕೇಳಬೇಕೆ... ಅಲ್ಲಿ ಈ ಯಜ್ಞದ ನಿತ್ಯ ಸಮಾರಾಧನೆ ನಡೆಯಲೇಬೇಕು. ಹಿಂದಿನ ದಿನ ರಾತ್ರಿಯೇ ಇಡ್ಲಿ, ದೋಸೆಗೆ ಕಡೆಯುವುದು, ಬನ್ಸು ಮುಂತಾದ ತಿಂಡಿಗಳಿಗೆ ಕಲಸಿ ಇಡುವುದು, ಕಾಫಿ ಚಾಯ ಮುಂತಾದ ಪೇಯಗಳನ್ನು ಮಾಂತ್ರಿಕವಾಗಿ ಮಗಚುವುದು, ಅಗಲವಾದ ಕಬ್ಬಿಣದ ಹಂಚಿನ ಮೇಲೆ ಎರೆಯುವ ವಿಧವಿಧ ದೋಸೆಗಳು ಒಂದೇ ಎರಡೇ ಪ್ರತಿದಿನವೂ ಇದೇ ದೃಶ್ಯಗಳು ನಮ್ಮ ಕಣ್ಣಿಗೆ ಅಭ್ಯಾಸವಾಗಿ ಬಿಟ್ಟಿತ್ತು. ಒಂದರಿಂದ ಹತ್ತನೇ ತರಗತಿಯವರೆಗೂ ನನ್ನ ಜಠರಾಗ್ನಿಯನ್ನು ತಣಿಸುತ್ತಿದ್ದುದು ನಮ್ಮದೇ ಹೋಟೆಲು.
'ಒಂದು ಮಸಾಲೆ ..ಒಂದು ಚಪ್ಪೆ ಚಾ...ಒಂದು ಪ್ಲೇಟ್ ಪೂರಿ ಬಾಜಿ, ಒಂದು ಕಾಪಿ' ಹೀಗೆ ನಾನಾ ರಾಗದಿಂದ ಹೇಳುವ ಹೋಟೆಲ್ ಸಿಬ್ಬಂದಿಗಳ ಸುಸ್ವರವೇ ನಮಗಾಗ ಸಂಗೀತ. ನೌಕರರನ್ನು ಸಂಭಾಳಿಸಿ ಹೋಟೆಲ್ ನಡೆಸುವುದಕ್ಕೆ ಶತಾಯಗತಾಯ ಪ್ರಯತ್ನಿಸುತ್ತಾ ತಂದೆಯವರು ದಿನದೂಡುತ್ತಿದ್ದರೆ ಅದರ ಪರಿವೆಯೇ ಇಲ್ಲದ ನಾವು ವಿಧವಿಧವಾದ ತಿಂಡಿಗಳನ್ನು ತಿನ್ನುತ್ತಾ ಖುಷಿಯಿಂದ ದಿನಗಳೆಯುತ್ತಿದ್ದೆವು. ಆದರೆ ಈ ಸಂತೋಷಕ್ಕೆ ತೆರೆ ಎಳೆದಂತಾದದ್ದು ನಮ್ಮ ಹೋಟೆಲ್ ಮುಚ್ಚಬೇಕಾಗಿ ಬಂದಾಗ. ನನ್ನ ಪಾಲಿಗೆ ಆ ದಿನವಂತೂ ಕರಾಳ ದಿನವಾಯ್ತು. ಇದೇ ಆಘಾತ ತಲೆಯ ತುಂಬಾ ತುಂಬಿದ್ದರಿಂದ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಗೆ ಏನು ಬರೆದೆನೋ ಬಿಟ್ಟೆನೋ ಒಂದೂ ಗೊತ್ತಾಗಿರಲಿಲ್ಲ.
ಅಂತೂ ಅನಂತರ ಪ್ರತಿದಿನವೂ ಸಜ್ಜಿಗೆ ರೊಟ್ಟಿ ತಿನ್ನುತ್ತಾ ಕಾಲೇಜಿಗೆ ಹೋಗುತ್ತಿದ್ದೆ. ಬೆಳಗ್ಗೆ ಮಾಡಿಕೊಡಲು ಸುಲಭ ಎಂದು ಅಮ್ಮನೂ ಅದಕ್ಕೇ ಒಗ್ಗಿಕೊಂಡಿದ್ದರು. ನಾಲಗೆ ಸತ್ತು ಹೋದಂತಾಗಿತ್ತು. ಅಡುಗೆಯ ರುಚಿಯನ್ನು ಸಮರ್ಥವಾಗಿ ನ್ಯಾಯ ಹೇಳುವ ನ್ಯಾಯಾಧೀಶೆಯಂತೆ ಹೇಳುತ್ತಿದ್ದ ನಾನು ಅಡುಗೆ ಮಾಡುವ ವಿಧಾನವನ್ನು ಕಲಿತಿರಲಿಲ್ಲ. ಪದವಿ ತರಗತಿಯಲ್ಲಿ ಓದುತ್ತಿದ್ದಾಗ ವಾರಪತ್ರಿಕೆಯನ್ನು ನೋಡಿ ಅಪರೂಪಕ್ಕೊಮ್ಮೆ ಒಂದೊಂದು ಪ್ರಯೋಗ ಶುರು ಮಾಡುತ್ತಿದ್ದೆ.
ನನ್ನ ತರಗತಿಯಲ್ಲಿ ಒಬ್ಬಳು ವಾರಕ್ಕೊಮ್ಮೆಯಾದರೂ ಪಲಾವ್ ತರುತ್ತಿದ್ದಳು. ಆಗೆಲ್ಲ ಪಲಾವ್ ಎಂದರೆ ಅದು ಅಪರೂಪದ ತಿಂಡಿ. ಊರಿನ ಎಲ್ಲರಿಗೂ ಅದರ ಪಾಕ ತಿಳಿಯುತ್ತಿರಲಿಲ್ಲ. ಹಳದಿ ಬಣ್ಣದ ಆಕೆ ತರುವ ಪಲಾವ್ ತರಕಾರಿ ಬಟಾಣಿಗಳಿಂದ ತುಂಬಿ ರುಚಿಕರವಾಗಿ ಇರುತ್ತಿತ್ತು. ನಮ್ಮ ಆಸೆಗಳನ್ನು ಅರಿತ ಆಕೆ ತರುವಾಗಲೇ ಎರಡು ಬುತ್ತಿಗಳಿಗಾಗುವಷ್ಟು ತಂದು ನಮಗೆಲ್ಲ ಪ್ರಸಾದದಂತೆ ಸ್ವಲ್ಪ ಸ್ವಲ್ಪ ಹಂಚುತ್ತಿದ್ದಳು. ತಿನ್ನುವ ಬಾಯಿಗಳು ಸಾಕಷ್ಟು ಇದ್ದುದರಿಂದ ಒಂದೆರಡು ತುತ್ತಿಗೆ ನಾವು ತೃಪ್ತರಾಗಬೇಕಿತ್ತು. ಹಾಗಾಗಿಯೋ ಏನೋ ಅದರ ರುಚಿ ಮಾತ್ರ ನನಗೆ ಅದ್ಭುತ ಎನಿಸುತ್ತಿತ್ತು. ಆದರೆ ಮನೆಯಲ್ಲಿ ಅಮ್ಮನಲ್ಲೇ ಹೇಳಿ ಮಾಡಿಸಿದರೆ ಅದು ಅಜ್ಜಿಗೆ ಮಾಡಿದ ಮೇಕಪ್ಪಿನಂತೆ ಚಿತ್ರಾನ್ನದ ಹಂತದಲ್ಲೇ ಇರುತ್ತಿದ್ದರಿಂದ ಪಲಾವಿನ ಹೆಸರಿಗೇ ಮಸಿ ಬಳೆಯುವಂತೆ ಅನಿಸುತ್ತಿತ್ತು.
ಅಂತೂ ಪದವಿ ಮುಗಿದ ತಕ್ಷಣ ಮದುವೆ ಆದ ಕಾರಣ ಅಡುಗೆ ಮನೆಯ ಅ(ನ)ಧಿಕೃತ ರಾಣಿ ನಾನಾದೆ. ಅದುವರೆಗೆ ಬೇರೆಯವರು ಮಾಡಿದ ಅಡುಗೆಯನ್ನೇ ತಿಂದು ತೇಗುತ್ತಿದ್ದ ನಾನು ನಿಜಕ್ಕೂ ಅತಂತ್ರಳಾದೆ. ಆದರೂ ಯಾರಿಗೂ ತೋರಕೊಡದೆ ಮನೆಯೊಳಗೆ ಅಡುಗೆಮನೆ ಎಂಬ ಒಳ ಸಾಮ್ರಾಜ್ಯವನ್ನು ಕಟ್ಟಿ ತುಂಡರಸನಂತೆ ಮೆರೆಯಲು ಪಣ ತೊಟ್ಟೆ.
ನನ್ನ ಪತಿರಾಯರು ಅಧ್ಯಾಪಕರು. ಅಡುಗೆ ಬಗ್ಗೆ ಅವರೂ ಶುದ್ಧ ಅಜ್ಞಾನಿಗಳಾದದ್ದು ನನ್ನ ಗ್ರಹಚಾರವೋ ಅದೃಷ್ಟವೋ ನಾನರಿಯೆ. ಅವರೂ ನನ್ನಂತೆ ಇತರರು ತಯಾರಿಸಿದ ರುಚಿಕರ ಆಹಾರ ತಿಂದು ಬೆಳೆದವರು ಎನ್ನುವ ನಿಟ್ಟಿನಲ್ಲಿ ನಾವಿಬ್ಬರೂ ಒಂದೇ ದೋಣಿಯ ಸಹಪ್ರಯಾಣಿಕರು. ಅಂತೂ ಗೃಹಿಣಿಯಾದ ನಾನು ನನ್ನ ಸ್ಥಾನವನ್ನು ಬಿಟ್ಟು ಕೊಡದೆ ಅಡುಗೆ ಕಾಯಕಕ್ಕೆ ಇಳಿದೇ ಬಿಟ್ಟೆ. ತೀರಾ ಸರಳವಾದ ಆಹಾರ ತಯಾರಿಕೆಯಿಂದ ಪ್ರಾರಂಭಿಸಿದರೂ ಆಗಾಗ ಎಡವಟ್ಟಾಗುತ್ತಿತ್ತು. ಒಮ್ಮೆ ಚಿತ್ರಾನ್ನ ಮಾಡಿದಾಗ ಉಪ್ಪು ಕಡಿಮೆಯಾಗಿ ಏನು ಮಾಡಬೇಕೆಂದೆ ತೋಚದೆ, ಒಂದು ಗ್ಲಾಸಿನಲ್ಲಿ ಉಪ್ಪು ನೀರು ತಂದು, 'ಬೇಕಾದರೆ ಸ್ವಲ್ಪ ಮೇಲೆ ಚಿಮುಕಿಸಿ' ಎಂದು ಹೇಳಿ ನಗೆ ಪಾಟಲಿಗೀಡಾಗಿದ್ದೆ. ಸಂಸಾರ ನಡೆಸಲು ಬೇಕಾದ ಜಾಣ್ಮೆ ಇವರಿಗೆ ಇದ್ದಿದ್ದರಿಂದಲೋ ಏನೋ 'ಒಳ್ಳೆದಾಗಿದೆ' ಎನ್ನುತ್ತಿದ್ದರೇ ವಿನಹ ಮಾಡಿದ ಪಾಕವನ್ನು ಎಂದಿಗೂ ದೂರುತ್ತಿರಲಿಲ್ಲ.ಈ ಸಂದರ್ಭದಲ್ಲಿ ಯಾರಾದರೂ ನೆಂಟರು ಮನೆಗೆ ಬಂದರೆ ಮಾತ್ರ ನನಗೆ ಕಸಿವಿಸಿಯಾಗುತ್ತಿತ್ತು. ಬಂದವರು 'ಸರಿಯಾದ ಸ್ಥಿತಿಯಲ್ಲಿ' ಹೋದರೆ ಸಾಕಪ್ಪ ಎಂದೇ ಅನಿಸುತ್ತಿತ್ತು. ಈ ಹೆದರಿಕೆಯಿಂದಲೇ ನಾನು ಯಾರನ್ನೂ ಅಪ್ಪಿತಪ್ಪಿಯೂ ಮನೆಗೆ ಆಹ್ವಾನಿಸುತ್ತಿರಲಿಲ್ಲ. ಆದರೂ ಮನೆ ಅಂದಮೇಲೆ ನೆಂಟರು ಬಂದೇ ಬರುತ್ತಾರೆ. ಒಮ್ಮೊಮ್ಮೆ ಆದಾಯ ತೆರಿಗೆ ಇಲಾಖೆಯವರಂತೆ ಕೆಲವರು ಧಿಡೀರ್ ಪ್ರತ್ಯಕ್ಷರಾಗುತ್ತಿದ್ದರು. ಆಗ ಏನಾದರೂ ಒಂದು ಪಾಕ ಮಾಡಿ ಬಡಿಸಿಯೇ ಅವರನ್ನು ಸಾಗಹಾಕಬೇಕಾಗುತ್ತಿತ್ತು. 'ಹೇಗಾಗಿದೆ' ಎಂದು ಕೇಳುವ ಧೈರ್ಯ ಸಾಲದೆ ಅವರ ಮುಖವನ್ನೇ ನಿರೀಕ್ಷಿಸುತ್ತಿದ್ದೆ. ನವರಸದಲ್ಲಿ ಯಾವುದೋ ಒಂದು ರಸ ಕಂಡರೂ, ವ್ಯಕ್ತವಾಗಿ ಗುರುತಿಸಲು ನಾನು ಅಸಮರ್ಥಳಾಗಿ ಬಿಡುತ್ತಿದ್ದೆ.
ಬೊಗಳಿ ಬೊಗಳಿ ರಾಗ ಎಂಬಂತೆ 'ಅಡುಗೆ 'ಪ್ರತಿದಿನದ ಕೆಲಸವಾದ್ದರಿಂದ ಒಂದಷ್ಟು ಪ್ರಾವೀಣ್ಯತೆ ಅದರಲ್ಲಿ ಬಂತು. ರುಚಿ ಹೇಗಾಗಿದೆ ಎಂದು ಕೇಳುವ ಧೈರ್ಯವನ್ನು ನಾನು ತೋರಿಸುತ್ತಿದ್ದುದು ನನ್ನ ಪತಿರಾಯರಲ್ಲಿ ಮಾತ್ರ . ಹೇಗಿದ್ದರೂ 'ಚೆನ್ನಾಗಿದೆ' ಎಂದೇ ಉತ್ತರಿಸುವ ಅವರಲ್ಲಿ ಕೇಳುವುದೇ ಸುಮ್ಮನೆ ಎಂದು ಮನಸ್ಸಿಗೆ ಬಂದು ನಗು ಬರುತ್ತಿತ್ತು. ಆದರೂ ಯಾರನ್ನೂ ಒಮ್ಮೆಯೂ ನೋಯಿಸದ ಅವರ ಮನಸ್ಸಿಗೆ ಮನಸಲ್ಲೇ ಸೆಲ್ಯೂಟ್ ಹೊಡಿಯುತ್ತಿದ್ದೆ.
ಕಾಲ ಕಳೆದಂತೆ ತಿಂದವರು ಮೆಚ್ಚುಗೆಯ ನುಡಿಗಳನ್ನಾಡುತ್ತಿದ್ದರು. ಇದರ ಪಾಕ ಹೇಗೆಂದು ಕೂಡ ಕೇಳುತ್ತಿದ್ದರು. ಆಗ ನನಗೆ ನೊಬೆಲ್ ಪಾರಿತೋಷಕ ಸಿಕ್ಕಷ್ಟೇ ಖುಷಿಯಾಗುತ್ತಿತ್ತು. ಹೆಚ್ಚಾಗಿ ನಾನು ಹೋದ ಮನೆಯ ಹೆಂಗಳೆಯರಲ್ಲಿ ಪಾಕ ವಿಧಾನವನ್ನು ಕೇಳಿ ತಿಳಿಯುತ್ತಿದ್ದೆ. ನನ್ನ ಈ ಹುಚ್ಚನ್ನು ಅರಿತ ಕೆಲವು ಆತ್ಮೀಯ ಮಹಿಳೆಯರು ನಾನು ಕೇಳದೆಯೇ ಪಾಕವನ್ನು ಬಿಡಿಸಿ ಬಿಡಿಸಿ ಹೇಳುತ್ತಿದ್ದರು ಕೂಡ!
ನಾವು ಯಾರಿಂದಲೋ ಯಾವುದೋ ಪಾಕವನ್ನು ಕಲಿತಿರುತ್ತೇವೆ (ಈಗ ಈ ವಿಷಯದಲ್ಲಿ ಯೂಟ್ಯೂಬ್ ಗುರುವಾಗಿ ಬಿಟ್ಟಿದೆ) ಆ ಪಾಕವನ್ನು ತಿಂದವರು ಯಾರಾದರೂ ನಮ್ಮಲ್ಲಿ ಕೇಳಿದಾಗ ಅದು ನಮ್ಮದೇ ಸ್ವಯಂಪಾಕವೆಂಬಂತೆ ಹೇಳಿಕೊಟ್ಟವರ ಹೆಸರನ್ನು ಅಡಗಿಸಿ ಇಟ್ಟು ನಾವೇ ಮೆರೆಯುವುದಿದೆ. ಅಂತೆಯೇ ಯಾರಾದರೂ ನಮ್ಮ ಪಾಕವನ್ನು ಹೊಗಳಿದಾಗ ' ಈ ಸಲ ಅಷ್ಟು ಸರಿಯಾಗಿಲ್ಲ, ಕಳೆದ ಸಲ ಮಾಡಿದ್ದು ಸೂಪರ್ ಆಗಿತ್ತು ' ಎನ್ನುವ ಹಸಿ ಸುಳ್ಳನ್ನೂ ಸೇರಿಸುವುದಿದೆ. ಪಾಕ ಕೆಟ್ಟರೆ 'ಈ ಸಲ ಅಕ್ಕಿ ಹುಡಿ ಮಿಸ್ಟೇಕ್ ... ಹಾಗೆ ಹೀಗೆ ಎಂದು ಯಾವುದರ ಮೇಲೋ ಗೂಬೆ ಕೂರಿಸುವುದೂ ಇದೆ.
ಚಿಕ್ಕ ಚಿಕ್ಕ ಅಡುಗೆಗಳ ಪಾಕವೆಲ್ಲ ಗಟ್ಟಿಯಾದ ನಂತರ ಮೈಸೂರು ಪಾಕ್ ನಂತಹ ತಿಂಡಿಗಳಿಗೆ ಅದಾಗಲೇ ಎಂಟ್ರಿ ಕೊಟ್ಟಿದ್ದೆ. ಒಂದು ಕುಡ್ತೆ ತುಪ್ಪವಾಗಲು ಸಾಕಷ್ಟು ದೊಡ್ಡ ಗಾತ್ರದ ಬೆಣ್ಣೆ ಉಂಡೆಯನ್ನು ಕರಗಿಸಬೇಕಾಗಿ ಬರುವುದರಿಂದ ಅದರ ಬೆಲೆಯಂತೂ ನನಗೆ ಚೆನ್ನಾಗಿ ಗೊತ್ತಿತ್ತು. ಆದರೆ ಒಮ್ಮೊಮ್ಮೆ ಮೈಸೂರುಪಾಕ್ ಮಾಡಿದಾಗಲೂ ಒಂದೊಂದು ರೀತಿಯ ಪಾಕವಾಗುತ್ತಿತ್ತು. ಆಗೆಲ್ಲ ನನಗೆ 'ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ' ನೆನಪಾಗುತ್ತಿತ್ತು. ಆಗಲೂ ಪತಿದೇವರು ಇನ್ನಿಲ್ಲದಂತೆ ಸಮಾಧಾನ ಹೇಳುತ್ತಿದ್ದರು. ಎಡಿಸನ್ ಬಲ್ಬು ಕಂಡುಹಿಡಿಯಲು ಸಾವಿರಕ್ಕಿಂತಲೂ ಹೆಚ್ಚು ಬಾರಿ ಪ್ರಯೋಗ ಮಾಡಿದ್ದಾನಂತೆ. ಅಂತದ್ರಲ್ಲಿ .. ನೀನೂ ಪ್ರಯತ್ನಿಸುತ್ತ ಇರು ಎನ್ನುತ್ತಿದ್ದರು. ಆದರೆ ಬಲು ದುಬಾರಿಯಾದ ತುಪ್ಪವನ್ನು ಯಾರಾದರೂ ಉದಾರವಾಗಿ ದೇಣಿಗೆ ಕೊಟ್ಟರೆ ಮಾತ್ರ ನಮ್ಮಂತಹವರು ಪ್ರಯತ್ನವನ್ನಾದರೂ ಮುಂದುವರಿಸಬಹುದಾಗಿತ್ತು. ಅಂತಹ ಪುಣ್ಯಾತ್ಮರ ಸಂಪರ್ಕ ನಮಗೆ ಬಹು ವಿರಳವಾಗಿ ಇದ್ದುದರಿಂದ ಪಾಕ ಮಾಡುವ ಅಭ್ಯಾಸ ತಪ್ಪಿ ಇನ್ನೂ ಹದಗೆಡುತ್ತಿತ್ತು. ಆಗ ನಾನು ಮೈಸೂರು ಎನ್ನುವ ಹೆಸರು ತೆಗೆದು ಬೇರೆ ಬೇರೆ ಹೆಸರಿನ ಜೊತೆ ಪಾಕ ಎಂದು ಸೇರಿಸುತ್ತಿದ್ದೆ....
ಇದೆಲ್ಲ ಕಳೆದು ಸುಮಾರು ಒಂದುವರೆ ದಶಕವೇ ಸರಿದಿದೆ... ಲೇಖನ ಓದಿ ನೀವು ನನ್ನ ಅಡುಗೆಯ ಬಗ್ಗೆ ಹಗುರವಾಗಿ ಯೋಚಿಸುವುದು ತರವಲ್ಲ. ಕಾರಣ ನಾನು ಪಾಕದೊಂದಿಗೆ ಒಂದಷ್ಟು ಪಕ್ವವಾಗಿದ್ದೇನೆ. 'ನಮ್ಮಲ್ಲಿಗೆ ಬನ್ನಿ' ಎಂದು ಧೈರ್ಯದಿಂದಲೇ ಕರೆಯುತ್ತೇನೆ. 'ಅತಿಥಿ ದೇವೋಭವ' ಎನ್ನುವ ನಮ್ಮ ಸಂಸ್ಕೃತಿಯಂತೆ ನನ್ನಿಂದ ಸಾಧ್ಯವಾದಷ್ಟು ಚೆನ್ನಾಗಿ ಅಡುಗೆ ತಯಾರಿಸಿ ಸತ್ಕರಿಸುತ್ತೇನೆ. ಹಾಗಾದರೆ ನೀವೂ ಒಮ್ಮೆ ಧೈರ್ಯ ಮಾಡಿ ಬರುವಿರಲ್ಲ.... ಜೊತೆ ಸೇರಿ ಊಟ ಮಾಡಲು...
