
Article · March 30, 2026
ಸೀರೆಯ ಸ್ವಗತ
- ಜ್ಯೋತಿ . ಎಸ್ ಅಂಗ್ರಾಜೆ
(100 ವರ್ಷಕ್ಕೂ ಹೆಚ್ಚು ಹಳೆಯದಾದ ಈ ಸೀರೆಗಳನ್ನು ನಮ್ಮ ಅಜ್ಜಮ್ಮ ಪ್ರೀತಿಯಿಂದ ಸಂರಕ್ಷಿಸಿ ಮುಂದಿನ ತಲೆಮಾರಿಗೆ ಒಪ್ಪಿಸಿದ್ದಾರೆ. ಒಂಬತ್ತು ವರ್ಷದ ವಯಸ್ಸಿನಲ್ಲಿ ವಿವಾಹವಾದ ಅವರು, ತಮ್ಮ ಮದುವೆ ಹಾಗೂ ಸೀಮಂತ ಸಮಾರಂಭಗಳಲ್ಲಿ ಧರಿಸಿದ್ದ ಈ ಸೀರೆಗಳು ಇಂದಿಗೂ ಒಂದೇ ಒಂದು ನೂಲು ಕೂಡ ಹಾನಿಯಾಗದೆ ಅದೇ ಸೌಂದರ್ಯದಲ್ಲಿ ಉಳಿದಿವೆ. ಇಂದಿಗೂ ಅವುಗಳನ್ನು ಸುಲಭವಾಗಿ ಧರಿಸಬಹುದಾದ ಸ್ಥಿತಿಯಲ್ಲಿವೆ.
ಇತಿಹಾಸವು ಕೆಲವೊಮ್ಮೆ ಮಾತಾಡುವುದಕ್ಕಿಂತ ಹೆಚ್ಚು ಮೌನವಾಗಿ ಕಥೆಗಳನ್ನು ಹೇಳುತ್ತದೆ; ಇಂತಹ ಅಮೂಲ್ಯ ವಸ್ತುಗಳು ಕಾಲದ ಅನೇಕ ನೆನಪುಗಳನ್ನು ತಮ್ಮೊಳಗೆ ಹೊತ್ತುಕೊಂಡಿವೆ. ಇಂತಹ ಸಣ್ಣ ವಿಷಯಗಳಲ್ಲೇ ಸಂಪೂರ್ಣ ಯುಗಗಳ ಕಥೆಗಳು ಅಡಗಿರುವುದು ಸದಾ ನನ್ನ ಮನಸ್ಸನ್ನು ತಟ್ಟುತ್ತದೆ.)
ನನ್ನ ಸೌಭಾಗ್ಯವಿದು ಆರೋಗ್ಯವಾಗಿರುವೆ
ಹೊನ್ನಿನಂತೆಯೆ ಜತನದಿಂದ ಕಾಪಾಡಿ
ಬೆನ್ನು ಬಾಗಿದ ಅಜ್ಜಿ ಉಟ್ಟು ಎತ್ತಿಟ್ಟಿಹಳು
ಕನ್ನೆ ಮೊಮ್ಮಗಳಿಂದು ತೋರಿಹಳು ನೋಡಿ
ಪತಿದೇವನಿತ್ತಿರುವ ಸೀರೆ ನಾನಾಗಿರಲು
ಲತೆಯಂತೆ ಬಳಸಿರುವೆ ಮದುವೆ ದಿನದಂದು
ರತಿ ಚೆಲುವು ಇಮ್ಮಡಿಸೆ ಕಾರಣವ ಹುಡುಕಿರಲು
ಚ್ಯುತಿಯಿರದ ನನ್ನಂದ ಕಚಗುಳಿಯ ತಂದು
ಹಲವು ವರುಷಗಳಿಂದ ಬೆಸುಗೆ ಮೂಡಿಸಿ ಮೈಗೆ
ಕುಲದೀಪ ಬೆಳಗಿಸುವ ಕುಡಿಯ ಹೊತ್ತು
ಕಲರವದ ಸಂಭ್ರಮಕೆ ನನ್ನನುಡಿಸಿದ ಪರಿಗೆ
ಕೆಲ ಜನರು ಮೆಚ್ಚಿದರು ನನಗಂದು ಮತ್ತು
ಹಳತಾದ ನನ್ನನ್ನು ಎತ್ತೊಗೆಯದೆಯೆ ಮಡಚಿ
ತಳದ ಪೆಟ್ಟಿಗೆಯಲ್ಲಿ ನನ್ನನಿರಿಸಿ
ಹೊಳೆಯುತಿಹ ನೂಲಿನಲಿ ಬೆಚ್ಚನೆಯ ಭಾವವಿರೆ
ಮಳೆಬಿಲ್ಲು ಬಣ್ಣಗಳ ಸುರಿಸಿ ಮಡಿಲಿನಲಿ
ಶತಮಾನ ಕಳೆದರೂ ನನ್ನಂತೆ ನಾನಿರುವೆ
ಗತವೈಭವಕೆ ಸಾಕ್ಷಿ ಮಾಸಿರದ ಬದುಕು
ಹಿತವಾದ ನೆನಪುಗಳು ಮರುಕಳಿಸಿ ಅನುಗಾಲ
ಕಥೆಗೊಂದು ಮುನ್ನುಡಿಯ ನೆರಳ ತುಣುಕು
Creative Writings
