Karada Vishwa

Article · November 13, 2026

ಪ್ರಾಯಶ್ಚಿತ್ತ? (ಸತ್ಯಕಥೆ)

By ರಾಧಾಕೃಷ್ಣ ಭಟ್ ಕುರುಮುಜ್ಜಿ

ರಾಧಾಕೃಷ್ಣ ಭಟ್ ಕುರುಮುಜ್ಜಿ

ಎಷ್ಟೇ ಕೊಲೆಗಳನ್ನು ಮಾಡಿದರೂ ಒಂದಿಷ್ಟೂ ಪಶ್ಚಾತ್ತಾಪವಿಲ್ಲದ ಮನುಷ್ಯನಿಗಿಂತ ಸಣ್ಣ ತಪ್ಪಾಗಿದ್ದರೂ ಅದು ತಪ್ಪೆಂದು ತಿಳಿದಾಗ ಪಶ್ಚಾತ್ತಾಪದಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳುವ ದೊಡ್ಡಗುಣ ಸಣ್ಣ ಪ್ರಾಣಿಗಳಿಗಿದೆ...

ಅದೊಂದು ಹಳ್ಳಿಯ ಪ್ರದೇಶದ ಮನೆ. ಮನೆಯ ಮುಂದೆ ಸಣ್ಣದೊಂದು ತೆಂಗಿನ ತೋಟ. ಮನೆಯಲ್ಲಿ ಗಂಡಹೆಂಡತಿ ನಾಲ್ಕೈದು ಹೆಣ್ಣುಮಕ್ಕಳೊಂದಿಗೆ ವಾಸಮಾಡುತ್ತಿದ್ದರು.
ಅಂತೂ ಅಚ್ಚುಕಟ್ಟಾದ ಸುಂದರ ಸಂಸಾರ ಅವರದ್ದು. ಒಂದು ದಿನ ಮಕ್ಕಳೆಲ್ಲ ಬಂದು ಅಲ್ಲಿರುವ ಇಬ್ಬರು ಮಕ್ಕಳೂ ಸೇರಿ ಲಗೋರಿ ಆಟ ಆಡುತ್ತಿದ್ದರು. ಆಟ ಆಡುತ್ತಿದ್ದಾಗ ಚೆಂಡು ಅಲ್ಲಿರುವ ತೆಂಗಿನ ಮರದ ಬುಡದಲ್ಲಿ ಬಿದ್ದಿತು. ಅದನ್ನು ಹೆಕ್ಕಿ ತರುವುದಕ್ಕೆ ಆ ಮನೆಯ ಹೆಣ್ಣು ಮಗು ಹೋಗಿತ್ತು. ಸ್ವಲ್ಪ ಸಮಯ ಕಳೆದಾಗ ಆ ಮಗುವಿನ ಕಿರುಚಾಟದೊಂದಿಗೆ ಜೋರಾದ ಅಳು ಕೇಳಿಸಿತು. ಮಗುವಿನ ತಂದೆತಾಯಿ ಉಳಿದವರೆಲ್ಲ ಬಂದು ನೋಡಿದಾಗ ಮಗುವಿನ ಕಾಲಿಗೆ ನಾಗರಹಾವೊಂದು ಕಚ್ಚಿ ತೆಂಗಿನಮರದ ಬುಡದಿಂದ ಮೇಲಕ್ಕೇರಿ ಮುಂದೆ ಸಾಗುತ್ತಿತ್ತು. ಇನ್ನೇನು?ಮಗುವನ್ನು ಎತ್ತಿ ಅಲ್ಲಿಂದ ಕರೆತರುವ ಪ್ರಯತ್ನದಲ್ಲಿದ್ದಾಗ ಅದೇ ನಾಗರಹಾವು ಬಂದು ಅದೇ ಮಗುವಿನ ಕಾಲಿಗೆ ಮೊದಲು ಕಚ್ಚಿದಲ್ಲಿಗೇ ಪುನಃ ಕಚ್ಚಿತು. ಅನಿರೀಕ್ಷಿತ ಆಕಸ್ಮಿಕವಾಗಿ ಸಂಭವಿಸಿದ ದುರಂತದಿಂದ ಎಲ್ಲರಿಗೂ ಹೆದರಿಕೆ ಹಾಗೂ ಗಾಬರಿಯಾಯಿತು.
ಕೂಡಲೆ ಎಲ್ಲರೂ ಸೇರಿ ಮಗುವನ್ನು ಸಮೀಪದ ಪೇಟೆಯ ವಿಷ ವೈದ್ಯರಲ್ಲಿಗೆ ಕರೆತಂದರು. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗುವಿನ ಶರೀರದಲ್ಲಿ ಸ್ವಲ್ಪವೂ ಕೂಡ ಹಾವಿನ ವಿಷವಿಲ್ಲವೆಂಬುದನ್ನು ತಂದೆ ತಾಯಿಗೆ ಸ್ಪಷ್ಟಪಡಿಸಿದರು.
ನಡೆದ ವಿಷಯವನ್ನೆಲ್ಲ ಅವರಿಂದ ಮೊದಲೆ ತಿಳಿದಿದ್ದ ವೈದ್ಯರು ಒಮ್ಮೆ ಕಚ್ಚಿದ ಹಾವು ಪುನಃ:ಕಚ್ಚುವುದಿಲ್ಲ ಆದರೆ ಅಪರೂಪದ
ಈ ದುರಂತ ಘಟನೆಯಲ್ಲಿ ಪುನಃ:ಕಚ್ಚಿದ್ದು ಅದರಲ್ಲೂ ವಿಶೇಷ. ಮಗುವಿಗೆ ಮಗದೊಮ್ಮೆ ಹಾವು ಕಚ್ಚುವಾಗ ಮೊದಲು ಕಚ್ಚಿ
ಮಗುವಿನ ಶರೀರದಲ್ಲಿ ಸೇರಿದ ವಿಷವನ್ನು ಅದೇ ಹಾವು ಪುನಃ ತನ್ನದೇ ಶರೀರದೊಳಗೆ ಸೇರಿ‌ಸಿಕೊಂಡಿದೆ. ಇದರಿಂದ ಮಗುವಿನ ಜೀವಕ್ಕೆ ಅಪಾಯವಿಲ್ಲದೆ ಇದ್ದರೂ ಹಾವಿನ ಜೀವಕ್ಕೇ ಅಪಾಯ. ಆದುದರಿಂದ ಅದೇ ಹಾವು ಅಲ್ಲೆ ಎಲ್ಲಾದರೂ ಮೃತಪಟ್ಟಿರಬಹುದು ನೋಡಿ ಎಂದ ವೈದ್ಯರ ಮಾತಿನಂತೆ ಬಂದು ನೋಡಿದಾಗ ನಿಜವಾಗಿತ್ತು. ಬಾಲಕಿಗೆ ಕಚ್ಚಿದ ಅದೇ ಹಾವು ಅಲ್ಲೆ ಸ್ವಲ್ಪ ದೂರದಲ್ಲಿ ಸತ್ತು ಬಿದ್ದಿತ್ತು.
ಹಾವಿನ ದ್ವೇಷ ಹನ್ನೆರಡು ಎನ್ನುವ ಗಾದೆಯಂತೆ ಯಾರೋ ನೋವನ್ನುಂಟುಮಾಡಿದ ಸೇಡನ್ನು ಮುಗ್ಧ ಬಾಲಕಿಯ ಮೇಲೆ ತೀರಿ‌‌ಸಿದೆನಲ್ಲ ಎಂದು ತಾನು ಮಾಡಿದ ತಪ್ಪಿನ ಅರಿವಾಗಿ ಮೂಕ ಜಂತುವೊಂದು ಪಶ್ಚಾತ್ತಾಪದಿಂದ ಪ್ರಾಣಾರ್ಪಣೆ ಮಾಡಿ ಪ್ರಾಯಶ್ಚಿತ್ತ ಮಾಡಿಸಿಕೊಂಡಿತೇ? ತನಗೆ ತಿಳಿದೇ ಅದೆಷ್ಪೋ ಕೊಲೆಗಳನ್ನು ಮಾಡಿ ಒಂದಿಷ್ಟೂ ಪಶ್ಚಾತ್ತಾಪವಿಲ್ಲದೆ ರಾಜಾರೋಷವಾಗಿ ಓಡಾಡುವ ಬುದ್ಧಿಜೀವಿ ಮನುಷ್ಯನಿಗಿಂತ ತನ್ನ ಅರಿವಿಗೆ ಬಾರದೆ ಕೊನೆಗೆ ತನ್ನಿಂದಾದ ತಪ್ಪಿನ ಅರಿವಾಗಿ ಉಂಟಾದ ಪಶ್ಚಾತ್ತಾಪದಿಂದ ಪ್ರಾಯಶ್ಚಿತ್ತ ಮಾಡಿಕೊಂಡ ಮುಗ್ಧ ಜಂತುವೊಂದು ಗುಣದಲ್ಲಿ ಮನುಷ್ಯನಿಗಿಂತಲೂ ಅದೆಷ್ಟೋ ಮೇಲಲ್ಲವೇ?

ಕೆಲವು ವರ್ಷಗಳ ಹಿಂದೆ ನಮ್ಮೂರಿನ ಸಮೀಪದ ಹಳ್ಳಿಯಲ್ಲಿ ನಡೆದ ಸತ್ಯಘಟನೆ...

















Creative Writings