
Article · March 21, 2026
ಏಕೀ ಯುದ್ಧೋನ್ಮಾದ ?
- ಸಾಗರಿ
ಹಾಲುಗಲ್ಲದ ತನ್ನ ಪುಟ್ಟ ಕಂದಮ್ಮಗಳನು
ಮುತ್ತಿಟ್ಟು ಕಳುಹಿಸಿದರು ಶಾಲೆಗೆಂದು
ಅಕ್ಕರೆಯ ಅಕ್ಷರಗಳು ಆಟವಾಡುತಲಿತ್ತು
ಹಲವು ಬಣ್ಣಗಳು ಬರೆದ ಚಿತ್ರವಂದು
ಅರಳುವ ಸುಮಗಳಂತೆ ಆ ಬಾಲೆಯರು
ಕಂಪ ಬೀರುತ ತಮ್ಮ ಲೋಕದಲ್ಲಿ
ಎಲ್ಲಿತ್ತೋ ಆ ವಕ್ರದೃಷ್ಟಿಯದು ಬೀರಿತ್ತು
ಪುಟ್ಟ ಕನಸುಗಳನ್ನು ಹೊಸಕಿ ಹಾಕಿ
ಹಾರಿ ಬಂತಾ ಕ್ಷಿಪಣಿ ನುಂಗಿತ್ತು ಜೀವವನು
ಜವರಾಯನೇಕಿಷ್ಟು ಕ್ರೂರಿಯಾಗಿಹನು
ಒಡೆದ ಒಡಲಿನ ಹಡೆದ ಮಾತೆಯ ಕಣ್ಣೀರು
ನಿಲಿಸಲಾರದೇ ಯುದ್ಧೋನ್ಮಾದವನ್ನು?!
ಯುದ್ಧ ದಾಹವದು ಅಬ್ಬರಿಸಿ ಕೊಬ್ಬುತಿದೆ
ರೋಗಿಗಳ ಮೇಲೂ ದಯೆಯು ಇರದೆ
ಈ ಕ್ರೂರ ನರಬಲಿಯು ಕೊನೆಗೊಳ್ಳಲೆಂದು
ವಿಶ್ವ ಶಾಂತಿಗಾಗಿ ನಮ್ಮ ಪ್ರಾರ್ಥನೆ ಇದೆ..
Creative Writings
