Karada Vishwa

Article · September 4, 2026

ಬಾಲಕಿಶೋರ

ವೀಣಾ ಎಂ ಭಟ್

ಪಟ್ಟು ಹಿಡಿಯಲೆ ಬೇಡ ಎಲೊ ಮುದ್ದು ಚೋರ

ಕೊಟ್ಟು ಬಿಡಲೋ ನಿನ್ನ ಗುಮ್ಮ ಬೇಗ ಬಾರ//ಪಟ್ಟು//

ತುತ್ತು ಅನ್ನವ ನೀವೆ ಮುತ್ತು ಮಾಣಿಕ ನಿನಗೆ

ಹೆತ್ತೊಡಲು ಉರಿಯುತಿದೆ ತುತ್ತು ತಿನ್ನದೆ ಇರಲು

ಅತ್ತು ಕರೆಯುವೆ ಯಾಕೊ ಹೊತ್ತು ತಿರುಗುವೆ ನಿನ್ನ

ಅತ್ತಿತ್ತ ಹೋಗದಿರು ಮುತ್ತು ನೀಡುವೆ ಬಾರೋ//ಪಟ್ಟು//

ಚಿಣ್ಣರ ಬಳಗದಲಿ ಕಣ್ಣಾ ಮುಚ್ಚಾಲೆಯನು

ಅಣ್ಣನ ಜತೆಗೂಡಿ ಆಡುವೆಯಾ ಬಾರೋ

ಮಣ್ಣು ತಿನ್ನಲೆ ಬೇಡ ಬೆಣ್ಣೆ ನೀಡುವೆ ಕಂದಾ

ಗಿಣ್ಣು ಹಾಲನು ಕೊಡುವೆ ಗಿಂಡಿ ತುಂಬಾ//ಪಟ್ಟು//

ನಂದನ ಕಂದಾ ಮುಕುಂದ ಗೋವಿಂದನ

ಆನಂದದಿಂದ ಓಲೈಸಿದಳು ಆ ತಾಯಿ

ಇಂದಿರೇಶನ ಕಪಟ ಸೂತ್ರ ಅರಿಯದೆ

ಮುದದಿಂದ ಲಾಲಿಸಿ ಮುದ್ದುಗರೆದಳೂ ಯಶೋದೆ //ಪಟ್ಟು//

Creative Writings