Karada Vishwa

Article · July 9, 2026

ಶಂಕರ ಸದನ ಕಟ್ಟಡ ನಿರ್ಮಾಣಕಾರ್ಯಕ್ಕೆ ಒದಗಿಬಂದ ಆಪತ್ಕಾಲದ ಬಾಂಧವ ...

-- ಬಿ. ಕೆ. ಶ್ರೀರಾಮ ಭಟ್

ನನ್ನ ಒಂದು ಹಳೆಯ ಲೇಖನವಿದು .

B K Shri Rama, Camp: Bengaluru


ಉಡುಪಿ

06-10-2023

ಆತ್ಮೀಯರೇ,

ವಂದನೆಗಳು....

ಇಂದಿನ ವ್ಯಕ್ತಿ ವಿಶೇಷದಲ್ಲಿ ಒಬ್ಬ ಶ್ರಮಿಕ, ಶೋಧಕ, ಸರಳತೆಯ ದ್ಯೋತಕ, ಯುವಕರ ನಾಯಕ, ಕರಾಡ ಸಮಾಜದ ಅಪರೂಪದ ಸಾಧಕ, ನಿಗರ್ವಿ, ಇನ್ನೂ ಹಲವು ವಿಶೇಷಣಗಳನ್ನು ಹೇಳಬಹುದಾದ ಒಬ್ಬ "ತುಂಬಿದ ಕೊಡ "ದ ಬಗ್ಗೆ ಹೇಳೋಣ ಅನ್ನಿಸ್ತು.

ಅವರ ಬಗ್ಗೆ ನಮಗೆ ಅರಿವಾಗಿದ್ದು 1998 ಜನವರಿ ತಿಂಗಳಲ್ಲಿ. ಶ್ರೀ ಶಂಕರ ಸದನದ ಕೊನೆಯ ಹಂತದ ಕ್ಲಿಷ್ಟಕರವಾದ ಕೆಲಸಗಳನ್ನು ಮುಗಿಸುವ ಸಂದರ್ಭದಲ್ಲಿ. 20,000 ಲೀಟರ್ ಕ್ಷಮತೆಯ ಓವರ್ ಹೆಡ್ ಟ್ಯಾಂಕ್ ನಿರ್ಮಾಣ,110 ಅಡಿ x50 ಅಡಿ ವಿಸ್ತಾರದ ಮಾಡಿನ (ರೂಫ್) ವಿನ್ಯಾಸ, ಸಿಮೆಂಟ್ ಶೀಟ್ ನ ಹೊದಿಸುವಿಕೆ ಇವುಗಳ ಬಗ್ಗೆ, ಅಧ್ಯಕ್ಷನಾದ ನನಗಾಗಲಿ, ಕಾರ್ಯದರ್ಶಿಯಾದ ಡಾಕ್ಟರ್ ಶ್ರೀಪತಿಯವರಿಗಾಗಲಿ ಯಾವುದೇ ಅನುಭವ ಇರಲಿಲ್ಲ. ಅಲ್ಲದೆ ಈ ರೂಫ್ 29 ಅಡಿ ಎತ್ತರದಲ್ಲಿರುವಂತೆ ವಿನ್ಯಾಸ ಮಾಡಬೇಕಿತ್ತು. ಶಟಲ್ ಕಾಕ್ ಇಂಡೋರ್ ಸ್ಟೇಡಿಯಂ ಮತ್ತು ಬೇಸಿಗೆಯಲ್ಲಿ ಶೂನ್ಯ ಬಿಸಿಲಿನ ಬೇಗೆಯ ಅನುಭವವಾಗುವಂತೆ 29 ಅಡಿ ಎತ್ತರದಲ್ಲಿ ಸಿಮೆಂಟ್ ಶೀಟ್ ಜೋಡಿಸಲು ಬೇಕಾದ ಟ್ರೆಸ್ ವರ್ಕ್ ನ ಅಸಾಧ್ಯ ಕೆಲಸ ಇಪ್ಪತ್ತು ದಿನಗಳಲ್ಲಿ ಆಗಬೇಕಿತ್ತು. ಯಾರಲ್ಲಿ ವಿಚಾರಿಸಿದರೂ, ನಮ್ಮ ಕೆಲಸದ ಅಗಾಧತೆ ಕೇಳಿ ಮಾಡುವ ಜನ ಸಿಕ್ಕಲೇ ಇಲ್ಲ. ಎರಡುವಾರ ಕಳೆದರೂ ನಮ್ಮಿಂದ ಮಾಡಬಲ್ಲ ಜನ ಗುರುತಿಸಲು ಆಗಲೇ ಇಲ್ಲ.

ಮಾತನಾಡಿದವರೆಲ್ಲ ಒಂದು ಲಕ್ಷ, ಎರಡು ಲಕ್ಷ ಅಡ್ವಾನ್ಸ್ ಕೊಡಿ ಅನ್ನುವವರೇ. ಕೆಲಸ ಆದ ಮೇಲೆ ಬಿಲ್ ಸಿಕ್ಕದಿದ್ದರೆ ಅನ್ನುವ ಭಯವೂ ಇದ್ದಿರಬಹುದು. ಆಗ ಟ್ರೆಸ್ ವರ್ಕ್ ಮಾಡಬಲ್ಲರು ಅಂತ ನಮಗೆ ತೋರಿದ ಒಬ್ಬ ಮೇಸ್ತ್ರಿ ಈ ಕೆಲಸಕ್ಕೆ ಒಪ್ಪಿಕೊಂಡು ಖರೀದಿಸಬೇಕಾದ ಕಬ್ಬಿಣದ ಪೈಪ್, ಮುಂತಾದ ಸಾಮಗ್ರಿಯ ಪಟ್ಟಿ ಕೊಡುತ್ತಾರೆ.

ಅಂಗಡಿಯಲ್ಲಿ ಆ ಪಟ್ಟಿ ತೋರಿಸಿ, ಅದರ ಬೆಲೆ ಬಗ್ಗೆ ಕೇಳಿದಾಗ ಹೃದಯ ಜೋರಾಗಿ ಹೊಡಕೊಳ್ಳುತ್ತದೆ. ಶೀಟ್ ಬಗ್ಗೆ ವಿಚಾರಿಸಿದಾಗ ಹೃದಯ ಸ್ತಂಭನವಾಗುತ್ತದೋ ಅಂತ ಭಯವಾಗುತ್ತದೆ.

ಕೊನೆಗೆ ಡಾಕ್ಟರ್ ರ ಬ್ಯಾಂಕ್ FD ಮುರಿದು ಸಾಮಗ್ರಿಗಳು ಬಂದು ಬೀಳುತ್ತವೆ. ಆ ಸಾಮಗ್ರಿಗಳ ಭೀಮ ಗಾತ್ರ ಕಂಡು ನಮ್ಮ ಊರಿನ ಬುದ್ಧಿವಂತರು ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಮಾನಸಿಕ ತೊಂದರೆ ಇದೆ ಎಂಬ ರೀತಿ ಗುಸುಗುಸು ಮಾತನಾಡುತ್ತಾರೆ. ಪೆರ್ಲದಲ್ಲಿ ಗಾಳಿ, ಮಳೆಗೆ ಅಷ್ಟು ಎತ್ತರದಲ್ಲಿ ಶೀಟಿನ ಮಾಡು ಉಳಿದೀತೆ? ಇದು ಹುಚ್ಚಾಟದ ಪರಮಾವಧಿ ಅಲ್ಲವೇ? ಅನ್ನುವ ರೀತಿಯ ಮಾತುಗಳೂ ಕೇಳಿ ಬಂದಿದ್ದವು.

ನಮಗೆ exposure ಇರಲಿಲ್ಲ ಎಂಬುದನ್ನು ನಾವು ತಿಳಿದೇ ಇದ್ದೆವು ಮತ್ತು ಊರಿನ ಕೊಳದಲ್ಲಿ ಈಜುವ ಕಪ್ಪೆ, ಸಮುದ್ರ ಲಂಘನಕ್ಕೆ ತಯಾರಾದಂತೆ ನಾವು ಈಜಲು ಇಳಿದೇ ಬಿಟ್ಟೆವು.

ಫೆಬ್ರುವರಿ 1998 ಮೂರನೇ ವಾರದಲ್ಲಿ ಮೇಸ್ತ್ರಿಯವರು, ಮತ್ತು ಹತ್ತು ಹದಿನೈದು ಕೆಲಸಗಾರರು, ಜನರೇಟರ್, ಐದು ಸಾವಿರ ಲೀಟರ್ ಸಾಮರ್ಥ್ಯದ ಉಕ್ಕಿನ ಟ್ಯಾಂಕ್, ಅಡಿಗೆಯ ಪಾತ್ರೆ ಪಗಡಿಗಳು, ಹದಿನೈದು ದಿನಗಳಿಗೆ ಬೇಕಾದ ದಿನಸಿ ವಸ್ತುಗಳು, ಗ್ಯಾಸ್ ಸ್ಟವ್, ಬಟ್ಟೆ ಬರೆಗಳನ್ನು ಒಳಗೊಂಡ ಒಂದು ಸರ್ಕಸ್ ಕಂಪನಿ (ಮೃಗಗಳನ್ನು ಹೊರತುಪಡಿಸಿ) ಶಂಕರ ಸದನಕ್ಕೆ ಆಗಮಿಸಿತು. ಅನಂತರ ನಡೆದುದು ಒಂದು ಪವಾಡ.

ಕೇವಲ ಹದಿನೈದು ದಿನಗಳಲ್ಲಿ ಟ್ರೆಸ್ ಕೆಲಸ, ವಾಟರ್ ಟ್ಯಾಂಕ್ ನ ಕೆಲಸವನ್ನು ಪೂರೈಸಿದ ಆ ಮೇಸ್ತ್ರಿ ಮತ್ತು ಸಹಾಯಕರು ಸಿಮೆಂಟ್ ಶೀಟ್ ಗಳನ್ನು ಹೊದಿಸಿ ವಿಜಯದ ನಗೆ ಉಕ್ಕಿಸಿದರು. 24X7 ಎಂಬ ಶಬ್ದದ ನಿಜಾರ್ಥ ನಮಗೆ ಮನವರಿಕೆ ಯಾದುದು ಆ ಹದಿನೈದು ದಿನಗಳಲ್ಲಿ. ಮೇಸ್ತ್ರಿ ಮತ್ತು ಸಹಾಯಕರು ಪೈಪೋಟಿಯಲ್ಲಿ ದುಡಿದುದಲ್ಲದೆ ಸ್ನಾನ ,ಕಾಫಿ, ಊಟ, ನಿದ್ದೆಯನ್ನು ತಾರತಮ್ಯವಿಲ್ಲದೆ ಪೂರೈಸಿ, ಒಪ್ಪಿದ ಕೆಲಸವನ್ನೂ ಮುಗಿಸಿ ಕೊಟ್ಟು ,ಕೂಲಿಯ ವಿವರಗಳ ಪಟ್ಟಿಯನ್ನೂ ಕೊಟ್ಟು ಸ್ವಸ್ಥಾನಕ್ಕೆ ಮರಳಿದಾಗ ನಮಗೆ ಉಂಟಾದ ಭಾವಸಾಂಧ್ರತೆ ಮತ್ತು ಅನುಭೂತಿ ಇಂದೂ ರೋಮಾಂಚನ ಉಂಟುಮಾಡುತ್ತದೆ.

ಒಟ್ಟು ಬಿಲ್ಲು ಕೂಡ ನಮ್ಮ ಅಂದಾಜಿಗಿಂತ ತುಂಬಾ ಕಡಿಮೆಯಿತ್ತು ಅನ್ನುವುದು ಇಂದು ಕೂಡ ಒಂದು ಸೋಜಿಗವಾಗಿ ಕಾಡುತ್ತಿದೆ. ಉಳಿದವರು ಲಕ್ಷಗಟ್ಟಲೆ ಮುಂಗಡ ಕೇಳಿ ಸತಾಯಿಸಿದಾಗ ಆಪದ್ಬಾಂಧವರಂತೆ ಬಂದು ಸಹಕರಿಸಿದ ಮಹನೀಯರು ನಮ್ಮ ಮಟ್ಟಿಗೆ ಸದಾಕಾಲ ವಂದನೀಯರು.

ಇಲ್ಲಿ ಉತ್ಪ್ರೇಕ್ಷೆ ಇಲ್ಲದ ಇನ್ನೊಂದು ತಿರುವು. ಅವರ ಬಿಲ್ಲಿನಲ್ಲಿ ಭೀಮಭಾಗ ಪಾವತಿಯಾಗಿದ್ರೂ ಒಂದು ಚಿಕ್ಕ ಭಾಗ ಕೆಲವು ತಿಂಗಳ ಕಾಲ ಬಾಕಿಯಾಗಿ ಉಳಿಯಿತು. ಉದ್ಘಾಟನೆ 5 ಮೇ 1998 ರಂದು ಮುಗಿದು, ಎರಡು ತಿಂಗಳಲ್ಲಿ ಹೆಚ್ಚಿನ ಪಾವತಿಗಳನ್ನು ಚುಕ್ತಾಮಾಡಿ ಜುಲೈ ತಿಂಗಳಲ್ಲಿ ಹೊಸ ಜನರಲ್ ಬೋಡಿ ಕರೆದು ಹೊಸ ಸಮಿತಿ ಆಯ್ಕೆಮಾಡಿ ನಾನು ಮತ್ತು ಡಾಕ್ಟರ್ ಶ್ರೀಪತಿಯವರು ಅಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನಗಳನ್ನು ತೆರವು ಮಾಡಿದೆವು.

ಹೊಸ ಸಮಿತಿಗೆ ಬೇಕಾದ ನಿರ್ದೇಶಗಳನ್ನು ಕೊಟ್ಟು ನಮ್ಮ 13 ತಿಂಗಳ ಜವಾಬ್ದಾರಿಗೆ ಮಂಗಳ ಹಾಡಿದೆವು. ಎಲ್ಲ ಬಿಲ್ಲುಗಳು ಪಾವತಿ ಆದರೂ ಒಂದು ಚಿಕ್ಕ ಬಿಲ್ಲು ಕಣ್ತಪ್ಪಿನಿಂದ ಪಾವತಿಯಾಗದೆ ಬಾಕಿ ಉಳಿಯಿತು. ಅದರ ಸಂಪೂರ್ಣ ಜವಾಬ್ದಾರಿ ನಮ್ಮದಾಗಿತ್ತು.

ಡಿಸೆಂಬರ್ 98 ರಲ್ಲಿ ಹೀಗೊಂದು ಬಿಲ್ಲು ಪಾವತಿಗೆ ಬಾಕಿ ಇದೆಯೇ ಎಂಬ ಒಂದು ಕಾಗದ ಬಂದಾಗಲೇ ನಮ್ಮ ತಪ್ಪಿನ ಮನವರಿಕೆಯಾಗಿ ನಾವು ಹೊಸ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ಕರೆದುಕೊಂಡು ಸಂಜೆ ಹೊತ್ತು ಹೊರಟೆವು. ಬಿಲ್ಲಿನ ಬಾಬ್ತು ಬೇಕಾದ ಮೊಬಲಗು ಡಾಕ್ಟರ್ ಕೈಯಲ್ಲಿತ್ತು.

ಯಾವುದೇ ಸೂಚನೆ ಕೊಡದೆ ರಾತ್ರೆ 8:00 ಗಂಟೆಗೆ ಬಂದ ನಮ್ಮನ್ನು ಕಂಡು ಆ ಮನೆಯವರೇ ಅಚ್ಚರಿ ಪಟ್ಟರು. ಕ. ಬ್ರಾ. ಅ. ಸಂಘದ ಅಧ್ಯಕ್ಷ ಇಂದಾಜೆ ಯವರೂ ನಮ್ಮೊಂದಿಗಿದ್ದರು. ನಾವು ಹೇಗೆ ಆರಂಭಿಸುವುದು ಎಂದು ಯೋಚನೆ ಮಾಡುತ್ತ ಬೆಲ್ಲ, ನೀರು ಕುಡಿದಾದೊಡನೆ ಕೈಕಾಲು ತೊಳೆಯುವ ಸೂಚನೆ ಕೊಟ್ಟ ಮನೆ ಯಜಮಾನ ನಮ್ಮ ಐದು ಜನರಿಗೆ ರಾತ್ರೆ ಭೋಜನ ಕೂಡ ಉಣಬಡಿಸಿ, ನಮ್ಮೊಂದಿಗೆ ಬಂದು ಕೂತರು.

ನಾನು ಮತ್ತು ಡಾಕ್ಟರ್ ಪಾವತಿಯಲ್ಲಿ ಆದ ವಿಳಂಬಕ್ಕೆ ನಾವೇ ಹೊಣೆ ಎಂದು ಹೇಳಿದಾಗ ಅವರು ಒಂದು ಕವರ್ ಮುಂದೆ ಚಾಚಿದರು. ತೆರೆದು ನೋಡಿದಾಗ ರೂ 25000/=ರೂಪಾಯಿಗಳ ಗರಿಗರಿ ನೋಟುಗಳು. ಬಾಕಿಯಾದ ಪಾವತಿ ಬಗ್ಗೆ ನಿರ್ಲಕ್ಷ ತೋರಿಸಿದ ಅವರು, ಅವರ ದೇಣಿಗೆ ಪಡೆಯಲು ನಾವು ವಿಳಂಬ ಮಾಡಿದ್ದು ಸರಿಯೇ? ಅಂತ ಕೇಳಿದಾಗ ಏನು ಹೇಳಬೇಕು ಅಂತ ತಲೆ ಕೆರೆಯಬೇಕಾಯಿತು. ಇಂಥಹ ಅಪರೂಪದ ವ್ಯಕ್ತಿ ನಮ್ಮ ಜಾತಿಯ ಹೆಮ್ಮೆ ಪದ್ಮಶ್ರೀ ವಿಜೇತ ಗಿರೀಶ್ ಭಾರದ್ವಾಜ್ ಅವರು. ನಾನು" ಮೇಸ್ತ್ರಿ" ಅಂತ ಸಂಬೋಧಿಸಿದ್ದು ಇವರನ್ನೇ. ಯಾಕೆಂದರೆ ಫೆಬ್ರುವರಿ ತಿಂಗಳ ಅಂದಿನ ಹದಿನೈದು ದಿನಗಳಲ್ಲಿ ಕೆಲಸಗಾರರೊಡನೆ, ನಿಕ್ಕರ್ ತೊಟ್ಟು ದಾಖಲೆ ಸೃಷ್ಟಿಸಿ ಶ್ರೀ ಶಂಕರ ಸದನದ ನಿರ್ಮಾಣ ಕಾರ್ಯಕ್ಕೆ ಕಿರೀಟವಿಟ್ಟವರು ನಮ್ಮ ಗೌರವಾನ್ವಿತ ಗಿರೀಶಣ್ಣ. ಅವರ ತಕರಾರು ಇದ್ದುದು ಅವರಿಂದ ದೇಣಿಗೆ ಪಡೆಯಲು ಆ ಕಡೆ ಬಂದಿಲ್ಲ ಎಂಬುದಕ್ಕೆ. ಪಾವತಿ ಬಾಕಿ ಇದೆ ಅಂತ ಕಾಗದ ಬರೆದದ್ದು ನಮ್ಮನ್ನು ಅವರ ಮನೆಗೆ ಕರೆಸಿಕೊಳ್ಳಲು ಮಾಡಿದ ಉಪಾಯ ಅಂತ ಅವರು ತಿಳಿ ಹೇಳಿದಾಗ ನಮ್ಮ ಯೋಜನೆ ಬಗ್ಗೆ ಅವರ ಗೌರವ ಕಂಡು ಆ ವ್ಯಕ್ತಿತ್ವಕ್ಕೆ ನಮೋ ಹೇಳಬೇಕು ಅನಿಸಿತು.

ಮೊನ್ನೆ ಜೂನ್ ತಿಂಗಳ 24 ರಂದು ನಡೆದ ರಜತ ಮಹೋತ್ಸವ ಪ್ರಾರಂಭೋತ್ಸವಕ್ಕೆ ಆಗಮಿಸಿದ ನಮ್ಮ ನೆಚ್ಚಿನ ಗಿರೀಶಣ್ಣ ಪುನಃ ರೂ 25000/= ದೇಣಿಗೆ ನೀಡಿ ಪ್ರೋತ್ಸಾಹಿಸಿದ್ದಾರೆ. ಸಮಿತಿಯ ಪರವಾಗಿ ಮತ್ತು ನನ್ನ ವೈಯಕ್ತಿಕ ನೆಲೆಯಲ್ಲಿ ತುಂಬು ಹೃದಯದ ಅಭಿನಂದನೆಗಳು.

ಇಪ್ಪತ್ತೈದು ವರ್ಷ ಹಿಂದೆ ಕಟ್ಟಿದ ಶಂಕರ ಸದನದ ನೆರಳಲ್ಲಿ, ಅವರು ಕಟ್ಟಿದ ನೀರಿನ ಟ್ಯಾಂಕ್ ನ ಉಪಯೋಗವನ್ನು ಪಡೆಯುತ್ತ ಮತ್ತೊಮ್ಮೆ ಅವರಿಗೆ ಧನ್ಯವಾದ ಸಮರ್ಪಿಸಿದರೆ ಇದು ನಮ್ಮದೇ ಕಾರ್ಯ ಅಲ್ಲವೇ? ಇದಕ್ಕೆ ಧನ್ಯವಾದ ಯಾಕೆ? ಅನ್ನುವ ಅವರ ಔನ್ನತ್ಯಕ್ಕೆ ತಲೆ ಬಾಗೋಣವೆ?

ಇಂತು ತಮ್ಮ ವಿಶ್ವಾಸಿ

ಬಿ ಕೆ ಶ್ರೀರಾಮ

ಉಡುಪಿ 576102


06-10-2023 ರಂದು ಪದ್ಮಶ್ರೀ ಗಿರೀಶಣ್ಣ ಭಾರದ್ವಾಜ್ ಬಗ್ಗೆ ಕಿರು ಪರಿಚಯ, ಅವರೊಂದಿಗಿನ ಪ್ರಥಮ ಭೇಟಿ, ಅವರು ಕೆಲಸ ಮಾಡಿಸಿದ ಕ್ರಮ,ಅವರ ತಮ್ಮನಿಂದಾದ ಟ್ಯಾಂಕ್ ಕೆಲಸ ಮತ್ತು ಅದರ ಪಾವತಿ ಬಗ್ಗೆ ಇದ್ದ ಸರಳತೆ ಎಲ್ಲವನ್ನೂ ಬರೆದಿದ್ದೆ. ಇದು ನಮ್ಮೊಡನೆ ಫೆಬ್ರುವರಿ 1998 ರಲ್ಲಿ ಅಲ್ಪಕಾಲದ ಸಖ್ಯದ ಅನುಭವದಲ್ಲಿ ಬರೆದದ್ದು.

ನಮ್ಮ ದೇಣಿಗೆದಾರರ ಪಟ್ಟಿಯಲ್ಲಿ ಕ್ರಮಸಂಖ್ಯೆ 28ರ ಪ್ರಕಾರ ಶ್ರಿಯುತ ಗಿರೀಶ್ ಭಾರದ್ವಾಜರು ರೂ1,00,000/=ಕೊಟ್ಟು ನಮ್ಮ ಯೋಜನೆಗೆ ಉಸಿರು ತುಂಬಿದ್ದಾರೆ. ಸಮಿತಿ ಪರವಾಗಿ ಅವರಿಗೆ ಹೃದಯದ ಭಾಷೆಯಲ್ಲಿ ಅಭಿನಂದನೆ ಸಲ್ಲಿಸಲು ಅತೀವ ಸಂತೋಷವಾಗುತ್ತದೆ.........

ಬಿ ಕೆ ಶ್ರೀರಾಮ

ಉಡುಪಿ 576102

30-11-2023


ಈ ಹಳೆಯ ಲೇಖನಗಳ ತುಣುಕುಗಳ ಮೂಲಕ ಗಿರೀಶಣ್ಣನಿಗೆ ಆದರಾಂಜಲಿಗಳನ್ನು ಸಮರ್ಪಿಸಲು ಶ್ರಮಿಸಿದ್ದೇನೆ.

ನಿಮ್ಮ ಅಕಾಲ ಅಗಲುವಿಕೆಯ ನಷ್ಟವನ್ನು ಸಮಾಜ, ರಾಜ್ಯ, ರಾಷ್ಟ್ರ ಸರಿದೂಗಿಸಲು ಬಹಳ ಕಾಲ ಬೇಕಾಗಬಹುದು.

ತಮ್ಮ ದಿವ್ಯಾತ್ಮಕ್ಕೆ ಮೋಕ್ಷ ಕರುಣಿಸಲು ಸರ್ವಶಕ್ತನಲ್ಲಿ ವಿನಮ್ರವಾಗಿ ಪ್ರಾರ್ಥಿಸುವುದೊಂದೇ ಈಗ ಉಳಿದಿರುವ ದಾರಿ. ದುಃಖತಪ್ತ ಬಂಧುಗಳಿಗೂ ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿ ನೀಡಲಿ ಎಂಬ ಪ್ರಾರ್ಥನೆ.

Creative Writings