Karada Vishwa

Article · June 5, 2026

ಕಲೆಯ ಹಾದಿಯಲ್ಲಿ ಅನಂತ ಪಯಣ ......

ಉದಯೋನ್ಮುಖ ಕಲಾವಿದ ವಿಷ್ಣು ಪ್ರಶಾಂತ ಬಿ. ಎಂ. ಅವರ ಬಗ್ಗೆ ವಿಶೇಷ ಬರಹ .

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಭರಣಿ ಕೆರೆಯ ಸುಂದರ ಪರಿಸರದಲ್ಲಿ ಜನಿಸಿದ ವಿಷ್ಣು ಪ್ರಶಾಂತ ಬಿ.ಎಂ. ಅವರು ಮಧುಸೂದನ ಭಟ್ ಹಾಗೂ ಗೀತಾ ದಂಪತಿಯ ಪುತ್ರ. ಬಾಲ್ಯದಿಂದಲೇ ಕಲೆಗಳತ್ತ ಅಪಾರ ಆಸಕ್ತಿ ಹೊಂದಿದ್ದ ಅವರು ಇಂದು ಚಿತ್ರಕಲೆ, ಶಿಲ್ಪಕಲೆ ಹಾಗೂ ವಿವಿಧ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿದ್ದಾರೆ.

ವಿಷ್ಣು ಅವರ ಕಲಾಯಾತ್ರೆಗೆ ಮನೆಯ ಸುಮಾರು 200 ವರ್ಷಗಳ ಪುರಾತನ ಸಂಪ್ರದಾಯವೇ ಮೊದಲ ಪ್ರೇರಣೆಯಾಯಿತು. ಅವರ ಮನೆಯಲ್ಲಿ ಪ್ರತಿವರ್ಷ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮಣ್ಣಿನ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯವಿತ್ತು. ಬಾಲ್ಯದಲ್ಲಿ ಆ ವಿಗ್ರಹಗಳನ್ನು ನೋಡುತ್ತಾ ಬೆಳೆದ ವಿಷ್ಣು ಅವರ ಮನದಲ್ಲಿ “ಒಂದು ದಿನ ನಾನು ಸ್ವತಃ ಗಣಪತಿಯನ್ನು ನಿರ್ಮಿಸಬೇಕು” ಎಂಬ ಕನಸು ಮೂಡಿತು.

ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ತಮ್ಮ ಆಸೆಯನ್ನು ಪೋಷಕರೊಂದಿಗೆ ಹಂಚಿಕೊಂಡ ಅವರು, ಅವರ ಪ್ರೋತ್ಸಾಹದಿಂದ ಮೊದಲ ಬಾರಿಗೆ ಸ್ವತಃ ಮಣ್ಣಿನ ಗಣಪತಿ ವಿಗ್ರಹವನ್ನು ನಿರ್ಮಿಸಿದರು. ಅದೇ ವರ್ಷ ಆ ವಿಗ್ರಹವನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಈ ಘಟನೆ ಅವರ ಕಲಾಜೀವನದ ಮಹತ್ವದ ತಿರುವಾಗಿ ಪರಿಣಮಿಸಿತು.

ಪಿಯುಸಿ ನಂತರ ಕಲೆಯನ್ನು ವೃತ್ತಿಪರವಾಗಿ ಮುಂದುವರಿಸುವ ಉದ್ದೇಶದಿಂದ ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಾಲ್ಕು ವರ್ಷದ ಬಿವಿಎ (Bachelor of Visual Arts) ಪದವಿಗೆ ಸೇರ್ಪಡೆಗೊಂಡರು. ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಉತ್ತಮ ಅಂಕಗಳನ್ನು ಗಳಿಸಿದ ಪರಿಣಾಮ ದ್ವಿತೀಯ, ತೃತೀಯ ಹಾಗೂ ನಾಲ್ಕನೇ ವರ್ಷದ ಶಿಕ್ಷಣವನ್ನು ಉಚಿತವಾಗಿ ಪಡೆಯುವ ಅವಕಾಶ ದೊರೆಯಿತು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮೂರನೇ ರಾಂಕ್ ನೊಂದಿಗೆ ಬಿವಿಎ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಈ ಅವಧಿಯಲ್ಲೇ ದೇಶದಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡಿದ್ದರಿಂದ ಅವರ ಮುಂದಿನ ವಿದ್ಯಾಭ್ಯಾಸ ಎರಡು ವರ್ಷಗಳ ಕಾಲ ಮುಂದೂಡಲ್ಪಟ್ಟಿತು. ಆದರೆ ಈ ಸಮಯವನ್ನು ವ್ಯರ್ಥಗೊಳಿಸದೆ ತಮ್ಮ ವಂಶಪಾರಂಪರ್ಯ ವೃತ್ತಿಯಾದ ಕೃಷಿಯಲ್ಲಿ ತೊಡಗಿಸಿಕೊಂಡರು. ಕೃಷಿಯ ಮೂಲಕ ಜೀವನದ ಮೌಲ್ಯಗಳು, ಶ್ರಮದ ಮಹತ್ವ ಮತ್ತು ಪ್ರಕೃತಿಯೊಂದಿಗಿನ ನಂಟನ್ನು ಆಳವಾಗಿ ಅರಿತುಕೊಂಡರು.

2022ರಲ್ಲಿ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ MFA (Master of Fine Arts) ಪದವಿಗೆ ಮೆರಿಟ್ ಸೀಟ್ ದೊರೆಯಿತು. ಅಲ್ಲಿ ತಮ್ಮ ಕಲಾಭ್ಯಾಸವನ್ನು ಇನ್ನಷ್ಟು ವಿಸ್ತರಿಸಿ, 2025ರಲ್ಲಿ ಅತ್ಯುತ್ತಮ ಅಂಕಗಳೊಂದಿಗೆ MFA ಪದವಿಯನ್ನು ಪೂರ್ಣಗೊಳಿಸಿದರು.

ಅವರ ಕಲಾ ಸಾಧನೆಗೆ ಹಲವು ಗೌರವಗಳು ಮತ್ತು ಪ್ರೋತ್ಸಾಹಗಳು ದೊರೆತಿವೆ. MFA ಅಧ್ಯಯನದ ವೇಳೆ 2024–25ನೇ ಸಾಲಿನ ಶಿಲ್ಪಕಲಾ ಅಕಾಡೆಮಿ ವಿದ್ಯಾರ್ಥಿವೇತನ ಲಭಿಸಿತು. ಅಲ್ಲದೆ 2025ರಲ್ಲಿ ಕಲಾಮಾಲ ಫೌಂಡೇಶನ್ ವತಿಯಿಂದಲೂ ವಿದ್ಯಾರ್ಥಿವೇತನ ದೊರೆತಿದ್ದು, ಇವುಗಳು ಅವರ ಕಲಾಸಾಧನೆಗೆ ಮತ್ತಷ್ಟು ಉತ್ತೇಜನ ನೀಡಿವೆ.

ವಿಷ್ಣು ಅವರ ಕಲಾಯಾತ್ರೆಯ ವಿಶೇಷತೆ ಎಂದರೆ ಅವರು ಅನೇಕ ಕಲಾ ಕೌಶಲ್ಯಗಳನ್ನು ಸ್ವಯಂ ಕಲಿತಿರುವುದು. ಸಾಂಪ್ರದಾಯಿಕ ಕಲೆಯನ್ನು ಕಲಿಯಲು ಅನೇಕ ಕಲಾವಿದರನ್ನು ಸಂಪರ್ಕಿಸಿದರೂ ಸೂಕ್ತ ಮಾರ್ಗದರ್ಶನ ದೊರೆಯಲಿಲ್ಲ. ಆದರೆ ಅದನ್ನು ಹಿನ್ನಡೆಯಾಗಿ ಪರಿಗಣಿಸದೆ, ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ಕಲಾ ಪ್ರಕಾರಗಳನ್ನು ಅಧ್ಯಯನ ಮಾಡಿ ನಿರಂತರ ಅಭ್ಯಾಸದ ಮೂಲಕ ಪರಿಣತಿ ಗಳಿಸಿದರು. ಈ ಸ್ವಯಂಪ್ರೇರಿತ ಕಲಿಕೆಯೇ ಅವರನ್ನು ಬಹುಮುಖ ಪ್ರತಿಭೆಯ ಕಲಾವಿದನನ್ನಾಗಿ ರೂಪಿಸಿದೆ.

ವಿಷ್ಣು ಪ್ರಶಾಂತ್ ಅವರ ಪ್ರಮುಖ ಕಲಾಪ್ರಕಾರಗಳು - 

• ಚಿತ್ರಕಲೆ (Drawing)
• ಪೇಂಟಿಂಗ್ (Painting)
• ಶಿಲ್ಪಕಲೆ (Terracotta, POP, Fibre, Metal, Wax)
• ತ್ರೆಡ್ ಆರ್ಟ್ (Thread Art)
• ವುಡ್ ಬರ್ನಿಂಗ್ ಆರ್ಟ್ (Wood Burning Art)

ಕಲಾ ಶೈಲಿಗಳು -

• ಸಾಂಪ್ರದಾಯಿಕ ಶಿಲ್ಪಕಲೆ
• ಸಮಕಾಲೀನ ಶಿಲ್ಪಕಲೆ

ಇತರ ಆಸಕ್ತಿಗಳು -

ಕಲೆಯ ಜೊತೆಗೆ ವಿಷ್ಣು ಅವರಿಗೆ ಕೃಷಿ, ಜೇನು ಸಾಕಾಣಿಕೆ, ಫೋಟೋಗ್ರಫಿ ಹಾಗೂ ಪರಿಸರ ಸಂರಕ್ಷಣೆಯಲ್ಲಿಯೂ ವಿಶೇಷ ಆಸಕ್ತಿ ಇದೆ. ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಈ ಹವ್ಯಾಸಗಳು ಅವರ ಕಲಾಕೃತಿಗಳಲ್ಲಿಯೂ ಸ್ಪಷ್ಟವಾಗಿ ಪ್ರತಿಫಲಿಸುತ್ತವೆ. ಅವರ ಸೃಜನಶೀಲತೆಯಲ್ಲಿ ಮಣ್ಣು, ಮಾನವೀಯತೆ, ಸಂಸ್ಕೃತಿ ಮತ್ತು ಪ್ರಕೃತಿಯ ಸುಂದರ ಸಂಗಮವನ್ನು ಕಾಣಬಹುದು.

ಕನಸಿನಿಂದ ಆರಂಭವಾದ ಈ ಪಯಣ ಇಂದು ನಿರಂತರ ಸೃಜನಶೀಲತೆಯತ್ತ ಸಾಗುತ್ತಿರುವ “Infinity Journey”ಯಾಗಿ ರೂಪುಗೊಂಡಿದೆ.

ವಿಷ್ಣು ಪ್ರಶಾಂತ್ ಅವರ Wood Burning Art



Thread Art




Art