Karada Vishwa

Article · July 15, 2026

ಭಜನೆ

--ವೀಣಾ ಎಂ ಭಟ್

(ಭಾಗ್ಯದ ಲಕ್ಷ್ಮಿ ಬಾರಮ್ಮಾ..ರಾಗ)

ಬಾಲಗೋಪಾಲ ಓಡುತ ಬಾ

ಗೋಪಾಲ ಕೃಷ್ಣ ಲೀಲೆಯ ತೋರಲು ಬೇಗನೆ ಬಾ ||

ಕದ್ದು ನೋಡಿ ಮೆಲ್ಲ ಮುಂದಡಿ ಇರಿಸಿ

ಮುದ್ದು ಕರದೊಳು ಬೆಣ್ಣೆಯ ಹಿಡಿದು

ಸದ್ದು ಮಾಡದೆ ಚಿಣ್ಣರ ಜತೆಯಲಿ

ಮೆದ್ದು ಬಿದ್ದು ನೀ ಓಡಿದೆಯಲ್ಲೊ l

ಕಾಳಿಯ ಮರ್ದನ ಮಾಡಿ ತೋರಿದೆ

ಕಾಳಸರ್ಪವನು ಹೆಡೆಮುರಿ ಕಟ್ಟಿದೆ

ಕಾಳಿಂದಿ ನದಿಯ ವಿಷವನು ನೀಗಿದೆ

ಕಾಳರಕ್ಕಸರಿಗೆ ಯಮನು ನೀನಾದೆ l

ಕಾಲನ ಪಾಶಕೆ ಮಾವನ ದೂಡಿದೆ

ಕಾಡುವ ಕಾಟವ ಭವದಿಂದ ನಶಿಸಿದೆ

ಕಾಲಗರ್ಭದಿ ಖಳರ ಲೀನಗೊಳಿಸುವ

ಕಾರಣವಾಗಿ ಭುವಿಗೆ ಬಂದೆ ನೀl

ಪರಿ ಪರಿ ವಿಧದಲಿ ಪೂಜೆಯ ಗೈಯುವೆ

ಫಲದ ಬಯಕೆಯ ವ್ಯಾಮೋಹವು ಇಲ್ಲದೆ

ಪರಮ ಪಾವನ ಪುರುಷೋತ್ತಮನ

ಪಾದಕೆರಗಿ ಶರಣು ಶರಣು ದೇವನೆl

Creative Writings