
Article · March 23, 2026
ನಾನು ಕಂಡ 'ರಮಣೀಯ ಚಿತ್ರಕಲೆ'
🖊️ ಶೈಲಜ ಭಟ್ ಕನಿಯಾಲ
ಪ್ರತಿಯೊಬ್ಬರ ಜೀವನದಲ್ಲಿ ಹವ್ಯಾಸಗಳಿಗೆ ವಿಶೇಷ ಸ್ಥಾನವಿದೆ. ಹವ್ಯಾಸಗಳು ನಮ್ಮ ಬಿಡುವಿನ ಸಮಯವನ್ನು ಸಂತೋಷಕರವಾಗಿಸುತ್ತವೆ ಹಾಗೂ ಮನಸ್ಸಿಗೆ ಹಿತ ನೀಡುತ್ತವೆ. ಅವು ನಮ್ಮ ಸೃಜನಶೀಲತೆಯನ್ನು ಹೆಚ್ಚಿಸಿ ಹೊಸ ಆಲೋಚನೆಗಳನ್ನು ಮೂಡಿಸುತ್ತವೆ. ಇಂತಹ ಹವ್ಯಾಸಗಳಲ್ಲಿ ಚಿತ್ರಕಲೆ ಕೂಡ ಒಂದು.
ಚಿತ್ರಕಲೆ ಒಂದು ಸುಂದರ ಹಾಗೂ ಸೃಜನಾತ್ಮಕ ಕಲೆ. ಹಲವರಿಗೆ ಇದು ಕೇವಲ ಹವ್ಯಾಸವಲ್ಲ, ಮನಸ್ಸಿಗೆ ಉಲ್ಲಾಸ ನೀಡುವ ಒಂದು ಉತ್ತಮ ಮಾರ್ಗವಾಗಿದೆ. ಬಣ್ಣಗಳು ಮತ್ತು ರೇಖೆಗಳ ಮೂಲಕ ತಮ್ಮ ಕಲ್ಪನೆಗಳನ್ನು ಕಾಗದದ ಮೇಲೆ ಮೂಡಿಸುವುದು ಚಿತ್ರಕಲೆಯ ವಿಶೇಷತೆ.
ಇಂತಹ ಒಂದು ರಮಣೀಯವಾದಂತಹ ಚಿತ್ರಕಲೆಯ ಹವ್ಯಾಸವನ್ನು ನಾನು ಕಂಡದ್ದು ಶಾರದಾ ಪ್ರಸನ್ನ ಅವರಲ್ಲಿ. ಇವರು ಮೈಕ್ಕಾನ (ಪೆರ್ಲ) ಗುರು ದಿ| ಎಸ್. ಸುಬ್ರಹ್ಮಣ್ಯ ಭಟ್ ಮತ್ತು ರಮಣಿ ಎಸ್. ಭಟ್ ದಂಪತಿಗಳ ಪುತ್ರಿ ಹಾಗೂ ಶ್ರೀರಾಮ ಭಟ್ ಮವ್ವಾರು ಇವರ ಪತ್ನಿ. ಇವರ ವಿದ್ಯಾರ್ಹತೆ: CA, DipIFRS, ಚೆನ್ನೈಯ ಮಲ್ಟಿ ನ್ಯಾಷನಲ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಯಾವುದೇ ರೀತಿಯ ತರಬೇತಿ ಪಡೆಯದೆ ರಕ್ತಗತವಾಗಿ ಬಂದಂತಹ ಕಲೆಯಲ್ಲಿ ಮೂಡಿದ ಇವರ ಚಿತ್ರಕಲೆಗಳು ಮನೋಹರವಾಗಿದೆ.

ಕಲಾವಿದೆ - ಶಾರದಾ ಪ್ರಸನ್ನ
" ಶಾಲೆಗೆ ಹೋಗುತ್ತಿರುವಾಗಲೇ ಚಿತ್ರ ಮಾಡುವ ಹವ್ಯಾಸ. ಅಪ್ಪನಿಗೆ ಡ್ರಾಯಿಂಗ್, ಪೇಂಟಿಂಗ್ ಅಂದರೆ ತುಂಬಾ ಇಷ್ಟ ಇತ್ತು. ಅಮ್ಮ ತುಂಬ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮ ವಿದ್ಯಾಭ್ಯಾಸ ಮತ್ತು ಇತರ ಎಲ್ಲ ಹವ್ಯಾಸಗಳಿಗೆ (ಚಿತ್ರಕಲೆ, ಬರಹ ಇತ್ಯಾದಿ) ಅಮ್ಮನ ಸಂಪೂರ್ಣ ಬೆಂಬಲವಿತ್ತು, ಅವರೇ ನಮ್ಮ ಮಾರ್ಗದರ್ಶಕರು ಮತ್ತು ಸ್ಪೂರ್ತಿ ಕೊಟ್ಟವರು, ಶಾಲೆಯ ಬಳಿಕ ನಂತರದ ಜೀವನದಲ್ಲಿ ಬೇರೆ ಯಾವುದೇ ಹವ್ಯಾಸಕ್ಕೆ ಆಸ್ಪದ ಇರಲಿಲ್ಲ - ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಮಕ್ಕಳ ಲಾಲನೆ ಪಾಲನೆಗಳಲ್ಲಿ ವರ್ಷಗಳು ಉರುಳಿದವು.ಈಗ ಮಕ್ಕಳು ದೊಡ್ಡವರಾದ ಮೇಲೆ, ಪುನಃ ನನ್ನ ಹಳೆಯ, ತುಂಬ ಇಷ್ಟದ ಹವ್ಯಾಸ - ಡ್ರಾಯಿಂಗನ್ನು ಶುರು ಮಾಡಿದೆ (2023ರಲ್ಲಿ).ಇದು ನನ್ನ ಹೃದಯಕ್ಕೆ ಹತ್ತಿರವಾದದ್ದರಿಂದ, ವಾರಾಂತ್ಯದಲ್ಲಿ ಸಮಯ ಹೊಂದಿಸಿಕೊಳ್ಳುವುದು ಕಷ್ಟವೆನಿಸುವುದಿಲ್ಲ.
Pencil drawing, acrylic painting ಮತ್ತು water colour ಬಳಸಿ ಚಿತ್ರ ಮಾಡುವಾಗ ಸಮಯದ ಅರಿವೇ ಇರುವುದಿಲ್ಲ. ಇದೊಂದು ತುಂಬ ಖುಷಿ ಕೊಡುವ ಹವ್ಯಾಸ, ಬಣ್ಣಗಳು ಮನಸ್ಸಿಗೆ ಮುದ ನೀಡುತ್ತವೆ, ಒಂದೊಂದು ಚಿತ್ರದ ರೇಖೆಗಳು ಹೊಸ ಚೈತನ್ಯ ತುಂಬುತ್ತವೆ" ಎಂದು ಅವರು ಹೇಳುತ್ತಾರೆ.
ಇವರ ಚಿತ್ರದ ಪ್ರಮುಖ ವಿಷಯ: ಪ್ರಕೃತಿ (nature). ತಮ್ಮ ಊರಿನ ರಮಣೀಯ ತಾಣಗಳು, ಹಸಿರ ಸಿರಿಯನ್ನು ಸ್ಪೂರ್ತಿಯನ್ನಾಗಿಸಿ ಕೊಂಡು ತಮ್ಮಕುಂಚದಿಂದ ಅದಕ್ಕೆ ಬಣ್ಣವನ್ನು ತುಂಬುತ್ತಾರೆ. ಇದರ ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಇರುವ ವಿವಿಧ ಚಿತ್ರಗಳನ್ನು ಉಲ್ಲೇಖವಾಗಿ ತೆಗೆದುಕೊಂಡು ಚಿತ್ರಗಳನ್ನು ಮಾಡುತ್ತಾರೆ. ಜಾಲತಾಣಗಳಲ್ಲಿ ದೊರೆಯುವಂತಹ ವೈವಿಧ್ಯಮಯ ಅವಕಾಶಗಳು ಜೊತೆಗೆ ಹತ್ತಿರದ ಬಂಧು ಮಿತ್ರರ ಪ್ರೀತಿ ಮತ್ತು ನಿರಂತರ ಪ್ರೋತ್ಸಾಹ ತುಂಬ ಸಹಾಯ ಮಾಡುತ್ತದೆ ಎನ್ನುತ್ತಾರೆ.
ತಮ್ಮ ವೃತ್ತಿ ಬದುಕಿನ ಜೊತೆಗೆ ತಮ್ಮ ಮನೆಯ ಜವಾಬ್ದಾರಿಯನ್ನು ನಿಭಾಯಿಸಿಕೊಂಡು , ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿರುವ ಇವರ ಕಲಾಪಯಣ ಹೀಗೆ ಮುಂದುವರಿಯಲಿ ಹಾಗು ಮತ್ತಷ್ಟು ಚಿತ್ರಗಳು ಮೂಡಿಬರಲಿ ಎಂಬುದೇ ನನ್ನ ಹಾರೈಕೆ.
ಇವರ ಕುಂಚದಿಂದ ಅರಳಿದ ಹಲವು ಚಿತ್ರಗಳಲ್ಲಿ ಕೆಲವೊಂದು ಇಲ್ಲಿವೆ.




























Art
