
Article · November 13, 2025
" ಕಪ್ಪು ಬಣ್ಣ"
(ಕಿರುಕಥೆ)ಲೇಖಕಿ : ಸ್ಮಿತಾ ಬಾಯಾರು
ಆ ಬೇಸಿಗೆ ರಜೆಯಲ್ಲಿ ನನ್ನ ಅವಳಿ ಮಕ್ಕಳಾದ ರಾಮ ಹಾಗೂ ಕೃಷ್ಣರನ್ನು ಕರೆದುಕೊಂಡು ಊರಿಗೆ ಹೋದಾಗ ಈಜಲು ಮಕ್ಕಳು ಆಸೆ ಪಟ್ಟದ್ದು... ಮಕ್ಕಳ ಅಪ್ಪನನ್ನು ಕರೆದುಕೊಂಡು ನಮ್ಮ ಕೆರೆಗೆ ಹೋಗಿದ್ದಾಗ ನಾನು ನನ್ನ ಮಕ್ಕಳು ಮಾತ್ರ ಕೆರೆ ಬಳಿ ಇದ್ದೆವು, ಮಕ್ಕಳಿಗೆ ಈಜು ಚೆನ್ನಾಗಿ ಬರುತ್ತಾ ಇತ್ತು. ನೀರಿನ ಅಡಿಯಲ್ಲಿ ಸ್ವಲ್ಪ ಹೊತ್ತು ಉಸಿರು ಬಿಗಿ ಹಿಡಿದು ಅಡಗಿ ಕೂರುವ ಆಟ ದೊಡ್ಡವ ರಾಮನಿಗೆ ಬಲು ಇಷ್ಟ... ಹಾಗೆ ನಾನು ಸುಮ್ಮನೇ ಕೆರೆ ಬಳಿ ಕಾದು ನೋಡಬೇಕು ಅನ್ನುತ್ತಾ , ರಾಮನು ಕೆರೆಯಲ್ಲಿ ಮುಳುಗಿ ಸ್ವಲ್ಪ ಹೊತ್ತಾದರೂ, ಕಾಣದಾದಾಗ , ಕೃಷ್ಣನನ್ನು ಕರೆದು ನೋಡಲು ಹೇಳಿದ್ದೇ, ಮೇಲಿಂದ ಕೆಳಗೆ ಹಾರಿ ರಾಮನನ್ನು ಎತ್ತಿ ಮೇಲೆ ತಂದಾಗ, ರಾಮನ ಬೋಧ ಹೋಗಿತ್ತು, ಆಸೆಯೆಲ್ಲಾ ಬಿಟ್ಟೆ, ಅಪ್ಪಾ....ಎನ್ನುವ ಬೊಬ್ಬೆ ಕೇಳಿ ಎಲ್ಲರೂ ಸೇರಿದರು , ಕೆಲವೇ ನಿಮಿಷಗಳಲ್ಲಿ ರಾಮನಿಗೆ ಬೋಧ ಬಂದು ಸರಿಹೋದ, ಆ ಕ್ಷಣ ನನ್ನ ಸಮೀಪ ಕೃಷ್ಣ ಇಲ್ಲದಿದ್ದಲ್ಲಿ ನಾನು ನನ್ನ ರಾಮನನ್ನು ಕಳೆದುಕೊಳ್ಳಬೇಕಾಗಿತ್ತಾ ಏನೋ.... ಕೃಷ್ಣಾ.....ಎಂದು ಬೊಬ್ಬೆ ಹಾಕೋ ಹೊತ್ತಿಗೆ, ನನ್ನ ಸುತ್ತಲೂ ದಾದಿಯರೂ , ಡಾಕ್ಟರು ಇರುವುದನ್ನು ನೋಡಿ ನಾನು ಸಹಜ ಸ್ಥಿತಿಗೆ ಬಂದಾಗ, ಡಾಕ್ಟರು ನನ್ನಲ್ಲಿ ಹೇಳಿದರು," ನೋಡಮ್ಮ ನಿನ್ನ ಮಗನನ್ನು... " ಎಂದರು,ಅಗತಾನೆ ಹುಟ್ಟಿದ ನನ್ನ ಮಗುವಿನ ಮೇಲೆ ಕಣ್ಣು ಹಾಯಿಸಿ, ಇಷ್ಟು ಹೊತ್ತು ಕಂಡದ್ದು ಕನಸಾಗಿತ್ತು ಎನ್ನುವ ಸತ್ಯ ಅರಿತು ನಿಟ್ಟುಸಿರು ಬಿಟ್ಟೆ. ಡಾಕ್ಟರಲ್ಲಿ ನನ್ನ ಇನ್ನೊಂದು ಮಗುವಿನ ಬಗ್ಗೆ ವಿಚಾರಿಸಿದೆ, ಆಗ ಡಾಕ್ಟರು ನನ್ನಲ್ಲಿ ಹೇಳಿದರು, ''ನಿನ್ನ ಇನ್ನೊಂದು ಮಗು ಈ ಮಗುವಿಗೆ ಜೀವದಾನ ಮಾಡಿ ಹೋಗಿಬಿಟ್ಟ, ಕಣಮ್ಮಾ, I am sorry'' ಎಂದರು.
ಅಂದರೆ ಏನು ಸರಿಯಾಗಿ ಬಿಡಿಸಿ ಹೇಳಿ ಅಂದಾಗ , ಡಾಕ್ಟರು ನನ್ನಲ್ಲಿ ಹೀಗೆ ಹೇಳುತ್ತಾರೆ ,ಹೆರಿಗೆ ಸಮಯ ಹತ್ತಿರವಾಗುತ್ತಿರುವಾಗ ಒಂದು ಮಗುವಿನ ಕುತ್ತಿಗೆ ಬಳಿ ಹೊಕ್ಕುಳ ಬಳ್ಳಿ ಬಿಗಿದಿತ್ತು, ನಾವು ಎಷ್ಟು ಟ್ರೈ ಮಾಡಿದರೂ, ಪ್ರಯೋಜನವಾಗಲಿಲ್ಲ, ಆದರೆ ಕೊನೇ ಕ್ಷಣದಲ್ಲಿ ಅದೇನು ಮಾಯೆಯೋ ಈ ಮಗುವಿನ ಹೊಕ್ಕುಳ ಬಳ್ಳಿ ತಿರುಗಿ ಆಚೆ ಮಗುವಿಗೆ ಬಂದು..., ಎಂದು ಸ್ವರ ಗದ್ಗದಿತ ವಾದಾಗ, ಕೊನೆ ಕ್ಷಣಾನಾದರೂ ನನ್ನ ಬಿಟ್ಟು ಹೋದ ಮಗುವನ್ನು, ತೋರಿಸಲು ಹೇಳಿದೆ, ಅದೇ ನೀಲಿ ಬಣ್ಣ ಹಾಗೂ ಕೃಷ್ಣ ವರ್ಣಗಳು , ನನ್ನ ಕಣ್ಣುಗಳನ್ನು ತುಂಬಿದವು..... ದೂರದಲ್ಲಿ ಮುರಳಿ ನಾದ, ಸುಂದರವಾದ ಅನುಭೂತಿಯಲಿ ಲೀನವಾಯಿತು .......
