Karada Vishwa

Article · May 24, 2026

ಇಂಥ ಸಂಭ್ರಮ ಸಂಪ್ರದಾಯವಾಗಬೇಕೇ?

- ಶಾರದಾ ಕಜೆಗದ್ದೆ, ಬಾಯಾರು

ಇಳೆಯಿಂದ ಮೊಳಕೆ ಒಗೆವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ 
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನ್ನು ಮಂಕುತಿಮ್ಮ. 

ಸಂತಸದ ಪ್ರತಿ ಕ್ಷಣಗಳನ್ನು ಸಂಭ್ರಮಿಸುವ ಚಾಳಿ ಹತ್ತಿಸಿಕೊಂಡಿರುವ ಮಾನವ ಜೀವಿ ಒಂದು ಸಲವಾದರೂ ಡಿವಿಜಿಯವರ ಕಗ್ಗದ ಈ ಸಾಲುಗಳನ್ನು ಮತ್ತದರ ಅರ್ಥವನ್ನು ಮನನ ಮಾಡಿ ಚಿಂತಿಸಿ ಕಾರ್ಯಗತವಾದರೆ ನಮ್ಮೀ ಭೂಮಿಯ ಪ್ರಕೃತಿಯನ್ನು ಮುಂದಿನ ಭವಿಷ್ಯತ್ತಿಗೆ ಸ್ವಚ್ಛವಾಗಿ ಉಳಿಸಿ ಕಾಪಾಡಬಹುದೇನೋ.

ಹುಟ್ಟಿನಿಂದ ಸಾವಿನ ತನಕ ಇದ್ದಬದ್ದ ನೆಪಗಳನ್ನೆಲ್ಲ ಹೇಳಿ ವಿಶೇಷ ಕ್ಷಣಗಳನ್ನೆಲ್ಲ ವಿಚಿತ್ರವಾಗಿ ಸಂಭ್ರಮಿಸುವ ಅಭ್ಯಾಸ ಬೆಳೆಸಿಕೊಂಡು ತಾನೇ ಶ್ರೇಷ್ಠ ಅನ್ನುವ ಭಾವನೆಯನ್ನು ಬೆಳೆಸಿ ಪೋಷಿಸುತ್ತಿದ್ದಾನೆ ಮಾನವ.

ಸಂತಸವನ್ನು ಎಲ್ಲರೊಂದಿಗೆ ಹಂಚಿಕೊಂಡು ಸಂಭ್ರಮಿಸುವುದು ಖಂಡಿತ ತಪ್ಪಲ್ಲ. ಆದರೆ ಅದನ್ನು ಇಂದು ನಾವು ಎಷ್ಟರ ಮಟ್ಟಿಗೆ ಪ್ರಕೃತಿ ವಿರೋಧಿಯಾಗಿಸಿದ್ದೇವೆ ಅನ್ನುವುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಎಲ್ಲರೂ ದುಡಿಯುವುದು ಹೊಟ್ಟೆಗಾಗಿ ಮತ್ತು ಬಟ್ಟೆಗಾಗಿ ಎನ್ನುವಂಥ ಕಾಲವನ್ನು ಮೀರಿ ಅದೆಂಥದೋ ಆಧುನಿಕತೆಯತ್ತ ಹೆಜ್ಜೆ ಇಟ್ಟು ಈ ಜಗತ್ತಲ್ಲಿ ನಾವೇ ಶ್ರೇಷ್ಠ, ನಾವು ಸಂಭ್ರಮಿಸದೇ ಇನ್ಯಾರಿಗೋ ಇದೆಲ್ಲ ಅನ್ನುವ ಕಾಲ್ಪನಿಕ ಕ್ಷಣಿಕತೆಯಲ್ಲಿ ಮುಳುಗಿದ್ದೇವೆ.

25 ವರುಷಗಳ ಹಿಂದೆ ಹೀಗಿರಲಿಲ್ಲ. ಒಂದು ಮಗು ಹುಟ್ಟಿ 11ನೇ ದಿನಕ್ಕೆ ಕುಟುಂಬ ಶುದ್ಧಿಯಾಗಿಸಿ, , ಶೇಡಿ ಮಣ್ಣಿನಿಂದ ರಂಗೋಲಿಸಿದ ಮರದ ತೊಟ್ಟಿಲನ್ನು ಹುರಿಹಗ್ಗದಲ್ಲಿ ಕಟ್ಟಿ, ತೊಟ್ಟಿಲಲ್ಲಿ ಕೂಡುಕುಟುಂಬದ ಅಮ್ಮಂದಿರ ಕೈಮಗ್ಗದ ಹಳೆ ಮೆತ್ತನೆ ಸೀರೆಯನ್ನೇ ದಪ್ಪಗೆ ಹಾಸಿ, ತೊಟ್ಟಿಲಡಿಗೆ ಧೂಪ ಹಾಕಿ, ದೀಪ ಬೆಳಗಿಸಿ, ಶೋಭಾನೆಯೊಂದಿಗೆ ಅಪ್ಪನದೋ ಅಜ್ಜಂದೋ ಬೆಳ್ಳನೆ, ಮೆತ್ತನೆ, ಶುಭ್ರ ಹಳೇಬಿಳಿ ಪಂಚೆಯಲ್ಲಿ ಮಗುವನ್ನು ಸುತ್ತಿ ಇಟ್ಟು ತೂಗಿ, ಮಗುವಿನ ಕೈಯಲ್ಲಿ ಒಂದಷ್ಟು ದುಡ್ಡಿಟ್ಟು ಹರಸಿದರಾಯಿತು ತೊಟ್ಟಿಲ ಶಾಸ್ತ್ರ.  ಆದರೆ ಇಂದು ಇಡೀ ಚಿತ್ರಣವೇ ಸಂಪೂರ್ಣ ವಿಭಿನ್ನ. ಮಗುವಿನೊಂದಿಗೆ ಮನೆಮಂದಿಗೆಲ್ಲ ಹೊಸಬಟ್ಟೆ, ಹೊಸ ತೊಟ್ಟಿಲು, ಹೊಸ ಪ್ಲಾಸ್ಟಿಕ್ ಬೆಡ್, ನೈಲಾನ್ ಮೃದು ಹಾಸು, ಹೊದಿಕೆ,ಡೈಪರ್, ಇತ್ಯಾದಿ ಸಾಲದೆಂಬಂತೆ ತೊಟ್ಟಿಲಿಗೆ ಬಣ್ಣದ ಬುಗ್ಗೆಗಳಿಂದ ಅಲಂಕಾರ, ತಿರುಗುವ ಪ್ಲಾಸ್ಟಿಕ್ ಆಟದ ನೇಲಿಕೆ,  ಪ್ಲಾಸ್ಟಿಕ್ ಹೂಗಳಲಂಕಾರ. ಇನ್ನು ಬಂದ ಅಥಿತಿಗಳೆಲ್ಲ ಕೊಡಮಾಡುವ ವಿವಿಧ ಬಟ್ಟೆಗಳು, ಪ್ಲಾಸ್ಟಿಕ್ ಆಟಿಕೆಗಳು, ಸೋಪ್, ಪೌಡರ್, ಕ್ರೀಮ್ ಗಳನ್ನೊಳಗೊಂಡ ಗಿಫ್ಟ್ ಬೋಕ್ಸ್ ಇಷ್ಟಲ್ಲದೆ ಎಲ್ಲಾ ಭಾಷೆಯ ಸಿನೆಮಾ ಲಾಲಿಹಾಡುಗಳನ್ನು ಅರಚುತ್ತಿರುವ ಸ್ಪೀಕರ್. 

ಇಲ್ಲಿಂದ ಶುರುವಾದ, ಮಾನವಜೀವಿಗೆ ಮಾತ್ರ ಸೀಮಿತವಾದ, ಸಂಭ್ರಮಾಚರಣೆ ಹಾಗೇ ಮುಂದುವರಿಯುತ್ತದೆ. ಮೊದಲ ವರ್ಷದ ಬರ್ತಡೇ ಅದ್ಯಾವುದೋ ದೊಡ್ಡ ಮದುವೆ ಹಾಲ್ ನಲ್ಲಿ ಕೇಕ್ ಕಟ್ ಮಾಡಿ, ಪಟಾಕಿ ಸಿಡಿಸಿ ಅದೇನೇನೋ ತಿಂಡಿತಿನಿಸುಗಳನ್ನು ತಿನ್ನುವುದರೊಂದಿಗೆ ಮಧ್ಯರಾತ್ರಿಗೆ ಮುಕ್ತಾಯ. 

ಇಲ್ಲಿಂದ ಶುರುವಾಗುವ ಈ ಪ್ರಕೃತಿವಿರೋಧೀ ಸ್ವಕೇಂದ್ರಿತ ಸಂಭ್ರಮಾಚರಣೆ ಪ್ರತೀ ವರ್ಷದ ಹುಟ್ಟುಹಬ್ಬಗಳಿಗೆ ಮುಂದುವರಿಯುತ್ತದೆ. ಇನ್ನು ಗಂಡುಹೆಣ್ಣು ನೋಡಿ ಜೋಡಿಯಾಗಬಹುದೆಂದು ಒಪ್ಪಿದರೆ ಅಲ್ಲಿಂದ ಒಂದು ಮಟ್ಟಿನ ಪ್ರಕೃತಿ ವಿರೋಧಿ ಕಾರ್ಯಾಚರಣೆ ಶುರುವಿಟ್ಟಂತೆ. ವಿವರಿಸುವ ಆವಶ್ಯಕತೆ ಇಲ್ಲವಷ್ಟೇ. ಏಕೆಂದರೆ ಕ್ಷಣ ಕ್ಷಣವೂ ಕಣ್ಣಿಗೆ ಕಟ್ಟುವಂತೆ ಅಚ್ಚಳಿಯದಂತೆ ನೆನಪಿನಲ್ಲಿ ಇರುವಂಥ ಕ್ಷಣಗಳವು.

ಈ ಸೃಷ್ಟಿಯ ಕೋಟ್ಯಂತರ ಜೀವಸಂಕುಲದಲ್ಲಿ ಮಾನವ ಜೀವಿಯೊಂದನ್ನು ಹೊರತು ಪಡಿಸಿ ಯಾವುದಾದರೊಂದು ಜೀವಿ ಹೀಗೆ ವ್ಯತಿರಿಕ್ತವಾಗಿ ಸಂಭ್ರಮಿಸಿದ ಒಂದು ಉದಾಹರಣೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೆ?

ಇಡೀ ಜೀವಸಂಕುಲಕ್ಕೆ ಪರಿಪೂರ್ಣ ಪರೋಪಕಾರಿ ಕಲ್ಪವೃಕ್ಷ ಈ ರೀತಿಯಾಗಿ ಒಂದು ಸಲವಾದರೂ ಸಂಭ್ರಮಿಸಿರಬಹುದೇ? ತೆಂಗಿನ ಮರ ಹೂಬಿಟ್ಟಾಗ, ಅಳಿದುಳಿದ ಕೆಲವೊಂದು ಹೂಗಳು ಕಾಯಾಗಿ, ಬೊಂಡವಾಗಿ, ಮಾಗುತ್ತಾ ತೆಂಗಿನಕಾಯಿಯಾಗಿ ಕೆಳಗುದುರಿ, ಮಣ್ಣಲ್ಲಿ ಹೂತು ಮಳೆಗಾಲದಲ್ಲಿ ಒದ್ದೆಯಾಗುತ್ತಾ ಯಾರಿಗೂ ತಿಳಿಯದಂತೆ ಒಂದು ದಿನ ಮೆಲ್ಲಗೆ ಮೊಳಕೆಯೊಡೆದು ನಿಧಾನಕ್ಕೆ ಚಿಗುರುತ್ತಾ, ಒಂದೊಂದೇ ಗರಿಗಳನ್ನು ಬಿಡುತ್ತಾ ಮೇಲಕ್ಕೆದ್ದಾಗ ಎಂದಾದರೂ ಕೂಗಿ ಕರೆದು ಸಂಭ್ರಮಿಸಿದ್ದಿದೆಯೇ?! ಆದರೆ ಈ ಪ್ರಕೃತಿ ಎಷ್ಟು ಅಕ್ಕರೆಯಿಂದ  ಕಾಲಕಾಲಕ್ಕೆ ಬೆಳಕು, ನೀರು, ಮಣ್ಣು, ಆಹಾರ, ಅನುಕೂಲಕರ ವಾತಾವರಣವನ್ನು ಒದಗಿಸುತ್ತಾ ಅದನ್ನು ಕಾಪಾಡಿಕೊಂಡು ಬಂದಿದೆ. 

ಅಂತೆಯೇ ಪ್ರತಿಯೊಂದು ಹುಲ್ಲು, ಬಳ್ಳಿ, ಗಿಡ, ಮರ, ಪ್ರಾಣಿ, ಪಕ್ಷಿ, ಜಲಚರ, ಸೂಕ್ಷ್ಮಾಣುಜೀವಿ ಹೀಗೇ  ಪ್ರತಿಯೊಂದು ಜೀವಜಂತುವನ್ನು ಸಣ್ಣದು, ದೊಡ್ಡದೆಂಬ ಭೇದವಿಲ್ಲದೆ ಈ ಪ್ರಕೃತಿ ಕಲ್ಲು,ಮಣ್ಣು,ಕಾಡು,ಬೆಟ್ಟ,ಗುಡ್ಡ, ಬಯಲು, ನದಿ, ಸಾಗರ, ಪರ್ವತ,ಮರುಭೂಮಿ,ಆಕಾಶ, ಹಿಮಪ್ರದೇಶ ಹೀಗೆ ಎಲ್ಲಾ ರೀತಿಯ ಪರಿಸರವನ್ನು ಸೃಷ್ಟಿಸಿ ಮಳೆ, ಚಳಿ,ಬೇಸಗೆ ಕಾಲಗಳೆಂಬ ನಿಯಮಾನುಸಾರ ಬೇಕಾದಂತಹ ಬದಲಾವಣೆಗಳನ್ನು ಮಾಡುತ್ತ ತನ್ನ ಸೃಷ್ಟಿಯನ್ನು ಆರೋಗ್ಯಪೂರ್ಣವಾಗಿ ಕಾಪಾಡಿಕೊಂಡು ಬಂದಿರುವ ಪ್ರಕೃತಿಗೆ ಮಾನವ ಆಧುನಿಕತೆ, ಅಭಿವೃದ್ಧಿಯ ಹೆಸರಿನಲ್ಲಿ ಹೊಸಪಾಠ ಕಲಿಸಲು ಹೊರಟ್ಟಿದ್ದಾನಲ್ಲ, ಏನು ಹೇಳೋಣ ಈ ಅತೀಬುದ್ಧಿವಂತಿಕೆಗೆ??!!. 


Creative Writings
ಇಂಥ ಸಂಭ್ರಮ ಸಂಪ್ರದಾಯವಾಗಬೇಕೇ?