
Article · March 25, 2026
ಮುಕ್ತಕಗಳು
- ಸಂಧ್ಯಾ ಕೊರೆಕ್ಕಾನ
೧ .
ನೊಂದುಬಂದವನನ್ನು ನಿಂದಿಸಲು ಹೋಗದಿರು
ಬಂಧುವಾಗವನೀಗೆ ಸಾಂತ್ವನವ ನೀಡು
ಸಂದಿಗ್ಧ ಸಂದರ್ಭ ಯಾವಾಗ ಬರಬಹುದು
ಎಂದರಿತವರು ಯಾರು ಬಾಳಸಂಧ್ಯೆ
೨ .
ಚಿಕ್ಕಗಾಯವಕೆರೆದುಹುಣ್ಣಾಗಿಸುವವರಾ
ಪಕ್ಕದಲಿ ನಿಲ್ಲದಿರು ಆಗುವುದಪಾಯ
ಕುಕ್ಕಿತಿನ್ನಲುಬರುವ ಹದ್ದುಗಳು ಹಲವಿರಲು
ಮಿಕ್ಕಿರುವುದೇನಯ್ಯ ಬಾಳಸಂಧ್ಯೆ
೩ .
ಬಿರುಕು ಬಿಟ್ಟಿಹ ಬಳೆಯ ಸದ್ದನ್ನು ಗಮನಿಸಲು
ಗುರುತಿಸುವೆ ಸುಲಭದಲಿ ಅದು ಯಾವುದೆಂದು
ಮುರಿದುಹೋಗಿಹ ಬಂಧ ತಿಳಿಸುವುದು ಇತರರಿಗೆ
ಉರಿಯಾಡೊ ಮಾತಿನಿಂ ಬಾಳಸಂಧ್ಯೆ
Creative Writings
