Karada Vishwa

Article · June 15, 2026

ಬಿಸಿಲು - ಮಳೆ

✍🏻ವೀಣಾ ಎಂ. ಭಟ್

ಕಣ್ಣುಮುಚ್ಚಾಲೆಯನು ಆಡುವನು ನೇಸರನು 
ಎಡೆಬಿಡದೆ ಸುರಿವ ಈ ವರ್ಷಧಾರೆಯಲಿ 
ಹರ್ಷ ತಂದಿತು ಬಿಸಿಲ ಕಿರಣ ನೋಡುತ ಅಮ್ಮ 
ವಸ್ತ್ರ ಒಣಗಿಸಿ ಇಡುವ ಭಾರಿ ಆಸೆಯಲಿ 

ಊಟ ಸಮಯದಿ ಬಿಸಿಲು ಕಾಣುತ್ತ ವೇಗದಲಿ 
ಹೊರಟಳು ಉಡುಪುಗಳ ದರಬರನೆ ಎಳೆದು 
ಅರ್ಧ ಊಟಕೆ ತಡೆಯು ಎದ್ದು ಹೊರಟಳು ಶೀಘ್ರ 
ಊಟದ ಜೊತೆಯಲ್ಲಿ ಬೇಗ ಒಣಗಲಿ ಎಂದು 

ಒಂದೆರಡು ಉಡುಪೆಂದು ಹೊಂದಿ ಬಂದಿತು ಹಲವು 
ಬಿಸಿಲ ತಾಪಕೆ ನೀರು ಆರಲೆಂದು 
ಬೆಸೆದ ಜೀವಕೆ ಮುದ್ದು ಮಕ್ಕಳ ಉಡುಪುಗಳ 
ಜೋಡಿಸಿಡುವಲ್ಲಿ ತಲ್ಲೀನಳು ಎಂದೂ 

ಕಸಿಯಬಂದಿತು ಕಳ್ಳ ಬೆಕ್ಕು ಆ ವೇಳೆಯಲಿ 
ಮೊಸರನ್ನದಾ   ಊಟ ತಟ್ಟೆಯಿಂದ 
ಉಸಿರ ಬಿಗಿ ಹಿಡಿದಿಟ್ಟು ಮೆದ್ದು ಹೋಗುವ ಭರದಿ 
ಮೊದ್ದು ಮೊಸರಿನ ಪಾತ್ರೆಯಲಿ ಹಾರಿ ಬಿತ್ತು 

ಸದ್ದಿಗೆ ಒಳಬಂದ ಅಮ್ಮ ನೋಡಿದಳಲ್ಲಿ 
ತಟ್ಟೆಯಲಿ ಮೊಸರನ್ನದ ಹೆಸರೆ ಇಲ್ಲ 
ಎದ್ದು ಬಿದ್ದು ಬೆಕ್ಕು ಸಾವರಿಸಿ ಓಡುವಲಿ 
ಹಲ್ಲುಕಡಿದಳು ಅಮ್ಮ ಒದ್ದು ಬಿಡಲೆಂಬ ಸಿಟ್ಟಿನಲಿ 

ಅಮ್ಮ ಒಳ ಬಂದಾಗ ನೇಸರನು ಒಳ ಸೇರಿ 
ಮೇಘಗಳು ಸಾಗಿದವು ನಾಲ್ಕು ಹನಿ ಚೆಲ್ಲುತ್ತ 
ಒದ್ದೆ ಆಯಿತು ವಸ್ತ್ರ ಧಾವಂತ ಅಂಗಳಕೆ 
ಹಿಂದೆ ಮುಂದೆ ಬಂದು ಅಮ್ಮನಿಗೆ ಸುಸ್ತು 

ದಿನವೆಲ್ಲ ಈ ಗೋಳು ಅಮ್ಮ ನನ್ನ ಕೇಳು 
ಎಂದು ನಂಬಲೆ ಬೇಡ ಮಳೆಗಾಲದ ಬಿಸಿಲು 
ಒದ್ದೆ ಆಯಿತು ಬಟ್ಟೆ ಹಸಿದು ಉರಿಯಿತು ಹೊಟ್ಟೆ 
ಹುಟ್ಟುಗುಣ ಬೆಟ್ಟ ಹತ್ತಿದರು ಬಿಡಲಿಲ್ಲ 

*****

Creative Writings