Karada Vishwa

Article · July 7, 2026

ವರ್ಷ ಋತುಗಾನ

- ವೀಣಾ ಎಂ ಭಟ್

ವರ್ಷ ಋತುಗಾನದ ವೈಖರಿಯ ವೈಭೋಗ

ಕರಿ ಮೋಡ ಸುರಿವ ನೀರಿನ ಧಾರೆಯ ರಾಗ

ಗಿರಿ ಶಿಖರಗಳ ನೀರು ಹರಿವ ಜಲಪಾತದ ಸೊಬಗು

ಹಳ್ಳ ಕೊಳಗಳು ತುಂಬಿ ಕಲರವದ ಬೆಡಗು

ಮರಗಳ ಅಂಚಿನಲಿ ಮಿಂಚುಹುಳುಗಳ ಮಿಂಚು

ರೋಮಾಂಚನದ ಕ್ಷಣವು ಮರದಿ ತಾರೆಯ ಗಡಣ

ಕೋಲ್ಮಿಂಚಿನ ಸರಮಾಲೆ ದೀಪಾವಳಿ ಬಾನಲ್ಲಿ

ಧರೆಗೆ ನೀಡುವ ಕೊಡುಗೆ ಸಿಡಿಲ ಅಬ್ಬರದಲ್ಲಿ

ದೂರದಲಿ ವಟಗುಟ್ಟುವ ಕೂಪಮಂಡೂಕ

ವಂಶಾಭಿವೃದ್ಧಿಯ ಹುನ್ನಾರದ ಬಲು ತವಕ

ಕ್ರಿಮಿಕೀಟಗಳು ನುಡಿಸೊ ಕಾಮವರ್ಧಿನಿ ರಾಗ

ನಿಶೆಯಿಂದ ಉಷೆ ತನಕ ಗಾನದ ವೈಭೋಗ

ತಾಳಮೇಳಗಳು ಸೇರಿ ಗಾನ ಕಿವಿಗಳಿಗೆ ಇಂಪು

ನಿದಿರಾದೇವಿಯು ಬೆನ್ನು ನೇವರಿಸಿ ಜೊಂಪು

ವಸುಮತಿಗೆ ಹಸಿರನೆಲ ದೈವದತ್ತದ ಕೊಡುಗೆ

ಹಸಿರೆಲ್ಲ ಉಸಿರಾಗಿ ಮನುಜ ಪ್ರಾಣದ ಬೆಸುಗೆ

ಕಸಿಯದಿರು ಭೂದೇವಿಯ ಸೌಭಾಗ್ಯವ ಮನುಜ

ಜತನದಲಿ ಉಳಿಸಿಕೋ ಹಸಿರು ಪ್ರಾಣವು ಸಹಜ

ಸಸಿಯ ನೆಡುವ ಕೆಲಸ ಅನವರತ ಸಾಗುತ ಇರಲಿ

ಭೂ ರಮೆಯ ಋಣವನ್ನ ತೀರಿಸುವ ನೆಪದಲ್ಲಿ

Creative Writings