Karada Vishwa

Article · July 2, 2026

ಸುಲಭದ ಸವಾರಿ

✍️ಚಂದ್ರಹಾಸ ಕನ್ನಡ್ಕ

ಹದಿನೆಂಟು ಅಧ್ಯಾಯ ಗೀತೆಯೊಳಗುಂಟು

ಅದರೊಳಗೆ ತತ್ವ ಪರಮಾರ್ಥದಾ ಗಂಟು॥೧॥

ಸಹಜ ಬದುಕಿನ ಮಧ್ಯೆ ಸುಳಿಯವ ವಿವಾದ

ಮೊದಲನೆಯ ಅಧ್ಯಾಯ ಅರ್ಜುನ ವಿಷಾದ

ಕರ್ಮ ಭಕ್ತಿಯ ಮಾರ್ಗ ಶೋಧಿಸಿರಿ ಆತ್ಮ

ಜ್ಞಾನ ಮಾರ್ಗಕೆ ದಾರಿ ಅಂದ ಪರಮಾತ್ಮ॥೨॥

ವಿಶ್ವರೂಪದ ದರುಶನಕ್ಕೆ ಒತ್ತಾಯ

ನೋಡಿದಾಕ್ಷಣಕೆ ಅಜ್ಞಾನ ಮುಕ್ತಾಯ

ಸತ್ವ ರಜ ತಮಗಳೇ ಬದುಕಿನಲಿ ಆಟ

ಅದರ ಮರ್ಮವನರಿಯೆ ಮುಗಿವ ತಿಕ್ಕಾಟ॥೩॥

ಕರ್ಮ ಬಂಧನದಿಂದ ಬಿಡುಗಡೆಗೆ ದಾರಿ

ಫಲವ ಅವನಿಗೆ ಅರ್ಪಿಸೆಂದನು ಮುರಾರಿ

ಈಶ್ವರಾನುಗ್ರಹವ ಸ್ವೀಕರಿಸೆ ನಮಗೆ

ಈಶ್ವರಾರ್ಪಣೆಯೆ ಬದುಕನ್ನು ತಿಳಿವ ಬಗೆ॥೪॥

ನಾನು ನನ್ನವರೆಂಬ ಸಂಸಾರ ಬಂಧ

ಮೌಲ್ಯಯುತ ಜೀವನವೆ ತರುವುದಾನಂದ

ಲೌಕಿಕದ ಬದುಕಿನಲಿ ಹಲವು ತಿಕ್ಕಾಟ

ಗೀತೆ ತೋರುವ ಸೂಕ್ಷ್ಮ ಬದುಕಿನೊಳ ನೋಟ॥೫॥

ಗೀತೆಯಲ್ಲಿಯ ಸಾರ ಬದುಕಿನದೆ ದಾರಿ

ಕೃಷ್ಣ ಬೋಧನೆ ಕೊಡುವ ಸುಲಭದ ಸವಾರಿ॥೬॥

Creative Writings