Karada Vishwa

Article · October 19, 2026

ನವದುರ್ಗೆ

ವೀಣಾ ಎಂ ಭಟ್

ಶ್ರೀಶೈಲೇಶ ಕುವರಿ ಶೈಲಪುತ್ರಿ

ಪಾಹಿಮಾಂ ತವ ಚರಣಕೆ ಶರಣು ॥ಶ್ರೀಶೈಲೇಶ ॥

ಹಿಮಗಿರಿತನಯೆ ವೃಷಭವಾಹಿನಿ

ಶ್ರೀ ಮಹೇಶ್ವರಿ ಅಖಿಲಾಂಡೇಶ್ವರಿ

ಆದಿವಂದಿತೆ ತ್ರಿಶೂಲಧಾರಿಣಿ

ಭಕ್ತವತ್ಸಲೆ ತವ ಪಾದಕೆ ಶರಣು ॥ಶ್ರೀಶೈಲೇಶ ॥ ೧

ಬ್ರಹ್ಮಚಾರಿಣಿ ದೇವಿ ಜಪಮಾಲಾಧರಿ

ಅಮೃತವರ್ಷಿಣಿ ಸುಮಂಗಲದಾಯಿನಿ

ಪಾಪನಾಶಿನಿ ಸಕಲೋದ್ಧಾರಿಣಿ

ಪಾಹಿಮಾಂ ತವ ಚರಣಕೆ ಶರಣು ದೇವಿ ॥ಶ್ರೀಶೈಲೇಶ ॥ ೨

ಆದಿಶಕ್ತೀ ಚಂದ್ರಭೂಷಣ ಪ್ರಿಯೆ

ಚಂದ್ರವದನೆ ಚಂದ್ರಲಲಾಟ ಧಾರಿಣಿ

ಆಪದ್ಭಾಂದವಿ ಸಿಂಹವಾಹಿನಿ

ಚಂದ್ರಘಂಟೆ ತವ ಪಾದಕೆ ಶರಣು ॥ಶ್ರೀಶೈಲೇಶ ॥೩

ಆದಿಮಾಯೆ ಜಗನ್ಮಾತೆ ಮಂದಸ್ಮಿತೆ

ಮಹಾಶಕ್ತಿ ಮಹಾರೂಪೆ ಕೂಶ್ಮಾಂಡಿನಿ

ಮಂಗಲ ರೂಪಿಣಿ ಜ್ಯೋತಿರ್ಮಯಿಯೆ

ಪಾಹಿಮಾಂ ಸರ್ವಾರೋಗ್ಯ ಪಾಲಿಸು ಮಾತಾ ॥ಶ್ರೀಶೈಲೇಶ ॥೪

ಪದ್ಮಹಸ್ತೇ ದೇವಿ ಸಿಂಹವಾಹಿನಿ ಮಾತಾ

ಕಾರುಣ್ಯರೂಪಿಣಿ ದೇವಿ ಸ್ಕಂದಮಾತ

ಭಕ್ತಪ್ರಿಯೆ ದುರ್ಗೆ ಶಕ್ತಿಸ್ವರೂಪಿಣಿ

ಪಾಹಿಮಾಂ ಪಾರ್ವತಿ ತವ ಚರಣಕೆ ಶರಣು ॥ಶ್ರೀಶೈಲೇಶ ॥೫

ದುರ್ಗಾಮಾತಾ ಕಾತ್ಯಾಯಿನಿ ದೇವಿ

ಚತುರ್ಭುಜೆ ಸ್ವರ್ಣವರ್ಣ ಸುಶೋಭಿತೆ

ಮುನಿಜನ ವಂದಿತೆ ದುಷ್ಟ ಸಂಹಾರಿಣಿ

ಶಂಕರಪ್ರಿಯೆ ಶಿವೆ ತವ ಚರಣಕೆ ಶರಣು ॥ಶ್ರೀಶೈಲೇಶ ॥೬

ಕರಾಲ ಮೂರುತಿಯೆ ಕಾಳೀ ಜಗನ್ಮಾತೆ

ಘೋರರೂಪಿಣಿ ತ್ರಿಶೂಲಧಾರಿಣಿ

ಜಗದೋದ್ಧಾರಿಣಿ ದುಷ್ಟ ನಿವಾರಿಣಿ

ಶುಭಮಂಗಲೇ ತವ ಚರಣಕೆ ಶರಣು ॥ಶ್ರೀಶೈಲೇಶ ॥೭

ಸುಖಶಾಂತಿದಾತೆ ದೇವೀ ಮಹಾಗೌರಿ

ತ್ರಿಪುರಸುಂದರಿ ಶ್ವೇತವರ್ಣ ರೂಪೆ

ಧನಧಾನ್ಯ ಪ್ರದಾಯಿನಿ ಸೌಮ್ಯ ಸ್ವರೂಪಿಣಿ

ಪಾಹಿಮಾಂ ಮಾತೆ ತವ ಚರಣಕೆ ಶರಣು ॥ಶ್ರೀಶೈಲೇಶ ॥೮

ಸಿದ್ಧಿಬುದ್ಧಿ ಪ್ರದಾಯಿನಿ ಸಿದ್ಧಿಧಾತ್ರಿ ಮಾತೆ

ಭಕ್ತರ ಅಭೀಷ್ಟವ ಪೂರೈಸುವ ದಾತೆ

ಆಧ್ಯಾತ್ಮಿಕ ಅನುಗ್ರಹ ನೀಡು ತಾಯೆ

ಶಕ್ತಿಸ್ವರೂಪಿಣಿ ತವ ಚರಣಕೆ ಶರಣು ॥ಶ್ರೀಶೈಲೇಶ ॥೯

ನವದುರ್ಗೆಯರಿಗೆ ನಮೋ ನಮಃ

Creative Writings