
Article · August 17, 2026
ಚಾರಣ..ಆಸ್ಟ್ರೇಲಿಯ
_ವೀಣಾ ಎಂ ಭಟ್
ರುದ್ರ ರಮಣೀಯವಿದು ಸ್ನಿಗ್ಧ ಸುಂದರ ಬೆಡಗು
ಗಿರಿಶಿಖರ ಮೇಲಿಂದ ಧವಳಗಿರಿಯ ಸೊಬಗು
ಹಾಲಿನ ಹೊಳೆಯೊ ಇದು ದುಗ್ಧ ಸಾಗರವೊ
ಪಾದತಲದಲಿ ಚುಮುಚುಮು ಶೀತಲ ಆಗರವೊ
ಕಣ್ಮನ ತಣಿಸುವ ಪೃಕೃತಿ ಸುಂದರ ನೋಟ
ಮೈನವಿರೇಳುವ ಬೀಸೊ ಗಾಳಿಯ ಕಾಟ
ಮೊಸರು ಚೆಲ್ಲಿದ ಖನಿಯು ಗಿಡ ಮರಗಳ ಮೇಲೆ
ತೂಗುತಿವೆ ರಜತ ಎಲೆ ಪೋಣಿಸಿದ ಮಾಲೆ
ಬಿಸಿಲ ತಾಪವು ಇಲ್ಲ ಬೆಚ್ಚನೆಯ ಸುಳಿವೇ ಇಲ್ಲ
ಮೈ ಕೊರೆಯುವ ಚಳಿಯಲ್ಲಿ ಹಿತದ ಕಂಪನವೆಲ್ಲ
ಹಿಮದ ಸವಿ ನೋಟದಲಿ ಕೋರೈಸುವ ಬಿಳುಪು
ನಗ್ನ ಕಂಗಳಲಿ ಕಾಣಲಾರದಂಥ ಹೊಳಪು
ನಾಕದಿಂ ಮಲ್ಲಿಗೆಯ ಹೂ ಮಳೆ ಸುರಿದಂತೆ
ನಿಸರ್ಗದಲಿ ಸ್ವರ್ಗವೇ ಇಳಿದು ಬಂದಂತೆ
ಚಾರಣದ ಸುಖ ಅನುಭೋಗ ಈ ಪರಿಯಲ್ಲಿ
ಭಾವ ರಸಮಂಜರಿಯು ಕೊರೆಯುವ ಚಳಿಯಲ್ಲಿ


Creative Writings
