Karada Vishwa

Article · June 24, 2026

ಹೀಗೊಂದು ಹಳೆ ನೆನಪು...

✍🏻ಜಯಶ್ರೀ ಕೆ. ಆರ್. ಭಟ್ ಪಳ್ಳತಡ್ಕ

ನಾನೊಂದು ಹಳೆಯ ಕಾಲದ ಮನೆಯ 'ನೆನಪು.'

ನನ್ನ ತಲೆಯ ಮೇಲೆ ಅಂದು ಮುಳಿಹುಲ್ಲಿನ ಅಥವಾ ಹಂಚಿನ ನೆರಳಿತ್ತು. ಮಣ್ಣಿನ ಗೋಡೆ, ನೆಲ ಒಂದು ಅದಮ್ಯ ಬಂಧದ ನಂಟು ಅದಾಗಿತ್ತು. ಸೆಗಣಿ ಸಾರಿಸಿದ ನೆಲವಾದರೂ ಬಾಂಧವ್ಯಕ್ಕೆ ಸಾಕ್ಷಿಯಾಗಿತ್ತು. ಎಷ್ಟೋ ತಲೆಮಾರು ಮಂದಿ ನನ್ನ ನೆರಳಲ್ಲಿ ನೆರಳು ಪಡೆದರು. ಆಡಿದರು, ಓಡಿದರು, ಸಂತಸದ ಬಾಳ್ವೆಯನ್ನುಮಾಡಿದರು. ಹುಟ್ಟಿನಿಂದ ಸಾವಿನ ತನಕದ ಏಳು ಬೀಳುಗಳ ನೆನಪನ್ನು ಉಳಿಸಿ ಹೋದರು. ಆದರೇನು ? ನಾನಿಲ್ಲೆ ಉಳಿದೆ. ಹುಟ್ಟು,ಸಾವು, ನೋವು, ನಲಿವು, ಸುಖ, ದುಃಖ ಎಲ್ಲದಕ್ಕೂ ನಾನೇ ಸಾಕ್ಷಿ. ಆದರೆ ಈಗೆಲ್ಲ ಬದಲಾವಣೆಯಾಗಿದೆ. ಮೊದಲು ವಾಸವಿದ್ದವರ ವಂಶದ ಕುಡಿಯೇ ಆದರೂ ನನ್ನಲ್ಲಿ ಅವರಿಗೆ ಯಾವುದೇ ಬಂಧವಿಲ್ಲ. ನನ್ನ ರೂಪ ಅವರಿಗೆ ಒಪ್ಪಿಗೆ ಇಲ್ಲ, ಅದಕ್ಕೆಂದೆ ನನ್ನನ್ನು ನೆಲಸಮ ಮಾಡಿ ನನ್ನ ಸಮಾಧಿಯ ಮೇಲೆ ಬೇರೊಂದು ಗಟ್ಟಿಮುಟ್ಟಾದ ಕಾಂಕ್ರೀಟ್ ಮನೆ ಕಟ್ಟಿಸಿದರು. ಹೊಸಮನೆಯಲ್ಲಿ ನನ್ನ ಕುರುಹೂ ಕೂಡ ಇರಲಿಲ್ಲ. ಕಲ್ಲು ಕಟ್ಟಿ ಸಿಮೆಂಟಿನ ತೇಪೆ ಹಚ್ಚಿದ ಗೋಡೆಗಳು. ಹೊಸ ಬಾಗಿಲು, ಕಿಟಿಕಿಗಳು ಬಂದವು. ಜಗಲಿಗಳು ಮರೆಯಾಗಿ ಕೋಣೆಗಳು ಬಂದವು. ಚಾವಡಿ ಈಗ 'ಸಿಟೌಟ್', ಆಯಿತು. ನಡುಕೋಣೆ 'ಹಾಲ್ 'ಆಯಿತು. ನೆಲದ ಮೇಲೆ ಕುಳಿತು ಉಣ್ಣುವ ಬದಲು ಟೇಬಲ್ ಗಳು ಬಂದವು. ಚಾಪೆಗಳ ಬದಲು ಸೋಫಾ, ಕುರ್ಚಿಗಳು ಬಂದವು. ಸೆಗಣಿ ನೆಲದ ನನ್ನ ಮಡಿಲಲ್ಲಿ ಈಗ ಯಾರೂ ಕುಳಿತುಕೊಳ್ಳುವುದಿಲ್ಲ. ಕಾರಣ ಆ ನೆಲವೆ ಈಗಿಲ್ಲ. ನೆಲಕ್ಕೆ ಟೈಲ್ಸ್, ಮಾರ್ಬಲ್ಸ್ ಗಳೆಲ್ಲಾ ಬಂದವು. ಆದರೇನು, ? ಅಲ್ಲಿ ಕುಳಿತುಕೊಳ್ಳಲು, ಓಡಾಡಲು ಜನರಿದ್ದರೆ ತಾನೇ? ಇವುಗಳೆಲ್ಲ ಫಳಫಳ ಹೊಳೆದರೂ ನನ್ನ ಆ ಸೆಗಣಿ ನೆಲದ ಆರೋಗ್ಯ ಇದರಲ್ಲಿಇಲ್ಲವಲ್ಲ, ನೆಲದ ಮೇಲೆ ನಡೆದಾಡಿ ಕಾಲು ನೋವು ಬರುತ್ತಿದೆ ಮನೆಯ ತಾಯಂದಿರಿಗೆ . ನಾನು ಮೂಲೆಗುಂಪಾದೆ. ನನ್ನಲ್ಲಿದ್ದ ಯಾವುದೇ ವಸ್ತುಗಳೂ ಈಗಿಲ್ಲ. ಯಾರಿಗೂ ಬೇಕಾಗಿಲ್ಲ. ಮಣ್ಣಿನ ಪಾತ್ರೆಗಳು, ಒರಳು ಕಲ್ಲು, ಕಟ್ಟಿಗೆಯ ಒಲೆ ಎಲ್ಲಾ ಮಾಯವಾಯಿತು. ನನ್ನಲ್ಲಿ ಓಡಾಡಿದ್ದವರ ನೆನಪುಗಳೂ ಮರೆಯಾದವು. ಆಗ ಇದ್ದ ಒಲವು, ಬಾಂಧವ್ಯ, ಶ್ರಮ, ದುಡಿಮೆ, ಪ್ರೀತಿ, ನಂಬಿಕೆ, ಗೌರವ ಯಾವುದೂ ಈಗಿಲ್ಲ. ಆಗ ವಿದ್ಯೆ, ಸಿರಿವಂತಿಕೆ ಇಲ್ಲದಿದ್ರೂ ಅಭಿಮಾನಕ್ಕೆ ಪ್ರೀತಿಗೆ, ಗೌರವಕ್ಕೆ ಕೊರತೆ ಇರಲಿಲ್ಲ, ಈಗ? ಮನೆಯಲ್ಲಿರುವ ನಾಲ್ಕು ಮಂದಿ ನಾಲ್ಕು ಮೂಲೆ ಸೇರಿದರೆ ಮುಗಿಯಿತು. ಒಬ್ಬೊಬ್ಬರೇ ಬಂದು ಅವರವರ ಹೊತ್ತಿಗೆ ಊಟ ಮಾಡುವುದು. ಆಳು ಕಾಳಿಲ್ಲ. ನೀನ್ಯಾರೋ ನಾನ್ಯಾರೋ. ಅರ್ಥವಿಲ್ಲದ ಬಾಂಧವ್ಯಕ್ಕೆ ಬೆಲೆ ಇಲ್ಲದ ಆಧುನಿಕ ಜೀವನ ಶೈಲಿ. ಬೆಳಗಾಯಿತು, ರಾತ್ರಿಯಾಯಿತು. ಯಾಂತ್ರಿಕ ಯುಗದ ಯಾಂತ್ರಿಕ ಜೀವನ. ಹಬ್ಬ ಹರಿದಿನಕ್ಕೆ ಒಟ್ಟಾಗುತ್ತಿದ್ದ ಬಂಧುಗಳು, ಬಾಂಧವರು - ಆ ಗೌಜಿ, ಸಂಭ್ರಮ ಈಗಿಲ್ಲ. ಈಗ ಇರುವುದೊಂದೇ.....

🤣ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನೂ ..

ನೀನಿಲ್ಲದೆ ಜೀವನ ಸಾಗದಯ್ಯಾ...

ಜೇಬಿನ ದೂರವಾಣಿ ದೇವಾ.......

ಮಳೆಯಲ್ಲದ್ದು.....ಒಲೆಯೊಳದ್ದು...

ದೂರವಾಣಿ ದೇವಾ..... ಜಂಗಮ ದೂರವಾಣಿ ದೇವಾ...

ನೀನಲ್ಲದೇ ಬೇರಾರೂ ಬೇಡವಯ್ಯಾ....

ಎಂಬಂತಾಗಿದೆ.🤣

ಆದರೇನು ? ನಾನು ಹಳೆಯ ಮನೆಯೇ ಆದರೂ ನನ್ನ ನೆನಪುಗಳು ಅಳಿಸಿದರೂ ನನ್ನ ಬಂಧುಗಳಿದ್ದಾರೆ ಇಲ್ಲಿ. ಬಿಸಿಲು , ಮಳೆ, ಗಾಳಿ, ಬೆಳಕು, ಪ್ರಕೃತಿ, ಈ ಮಣ್ಣು ಇದರಲ್ಲಿ ನಾನಿದ್ದೇನೆ. ನನ್ನ ನೆನಪುಗಳಿವೆ. ಅವೆಲ್ಲಾ ಇಲ್ಲದೆ ಯಾರೂ ಬದುಕಲಾರರು. ಅವುಗಳೊಳಗೆ ನಾನಿದ್ದೇನೆ ಗತಕಾಲದ ನೆನಪಾಗಿ. ಜೀವನ ಶೈಲಿ ಬದಲಾಗಿರಬಹುದು. ತಿನ್ನುವ ಅನ್ನ ಬದಲಾಗುವುದೇ? ಅದೇ ನೀರು, ಅದೇ ಗಾಳಿ ಅದೇ ಬೆಳಕು. ಕಾಲಚಕ್ರ ತಿರುಗಿದಾಗ ಮುಂದೊಯ ದಿನ ನನ್ನ ನೆನಪು ಬರಬಹುದು. ಅಂದಿನ ಬದುಕೆ ಚಂದ ಅಂತ ಅನ್ನಿಸಿದರೂ ಅನ್ನಿಸಬಹುದು. ಸೌಕರ್ಯ, ಸೌಲಭ್ಯಗಳು ಹೆಚ್ಚಿರಬಹುದು ಈಗ, ಆದರೆ ಆಗ ಇದ್ದ ಸಂತೋಷ, ತೃಪ್ತಿ, ಬಾಂಧವ್ಯ, ಆರೋಗ್ಯ ಈಗಿಲ್ಲ. ಆ ಮನಸ್ಥಿತಿಯಾದರೂ ಈಗೆಲ್ಲಿದೆ? ಒಟ್ಟಿನಲ್ಲಿ ನಾನು ಅಂದರೆ ಹಳೆ ಮನೆಯ ನೆನಪ ಛಾಯೆ ಮರೆಯಾದದ್ದಂತೂ ಸತ್ಯ.....

☘️☘️☘️☘️☘️☘️

Creative Writings