Karada Vishwa

Article · June 4, 2026

ಮರೆವು

- ವೀಣಾ ಎಂ ಭಟ್

ಕವನ ಸಾಲುಗಳೆಲ್ಲ ಬರೆಯ ಮರೆತೆನು ದೇವಾ 
ಭವನ ವಾರ್ತೆಯಲಿ ಬೆರೆತು ಹೋಗಿದೆ ಜೀವ 
ದಮನವಾಯಿತೆ ನೀನು ಎನಗಿತ್ತ ವರವೆಲ್ಲ 
ಗಮನ ಹರಿಯದೆ ಹರಿದು ಹೋಯಿತೆ ಹುರುಪೆಲ್ಲ 

ಪ್ರಾಸಬದ್ಧತೆ ಇಲ್ಲ ಲೇಸು ಬಿಡು ಬರವಣಿಗೆಯ 
ತ್ರಾಸದಾಯಕ ಇಲ್ಲಿ ಪದದ ಜೋಡಣೆಯು 
ಭಾಸವಾಯಿತು ಎನಗೆ ದಿಟ್ಟಿಸಿದೆ ಆಗಸದೆಡೆಗೆ 
ನೇಸರನು ನಗುವ ಕಿರಣವ ಚೆಲ್ಲಿ ನನ್ನೆಡೆಗೆ 

ಸವಿ ನೆನಪ ಬಾನಿನಲಿ ಕವಿದಿದೆ ಕಾರ್ಮೋಡ 
ಭುವಿಗೆ ಸುರಿಯಿತು ಮರೆವಿನ ವರ್ಷ ಧಾರೆ 
ಹನಿಗಳಲಿ ಅರಸಿದೆ ಮುತ್ತಿನ ನುಡಿಗಳನು 
ಭರದಿ ಹೋಯಿತು ತೇಲಿ ಸೇರೆ ಸಾಗರವನ್ನು 

ಸಾಲುಗಳು ಅಂತರಂಗವ ಹೊಕ್ಕು ನಿಂದಿಹವಲ್ಲ 
ಗೋಳು ಹೇಳಲಿ ನಾನು ಯಾರ ಬಳಿಯಲ್ಲಿ 
ಅಚ್ಚರಿಯು ಕಾದಿಹುದು ಶಬ್ದ ಕೋಶವೆ ಶೂನ್ಯ 
ಬಿಚ್ಚಲಾರದೆ ಹೃದಯ ಮಥನವಾಗಲು ದೈನ್ಯ 


Creative Writings