
Article · June 21, 2026
ಶತಾಯುಷಿ ಲಕ್ಷ್ಮಿ ಅಮ್ಮ ಇವರ ಚರಣಗಳಿಗೆ ನಮಸ್ಕರಿಸುತ್ತಾ..
ನುಡಿನಮನ : ಶಾಂತಾ ನಾಗರಾಜ್ ಭಟ್ , ಕೆದುಕೋಡಿ
ಬಾಯಾರಿನಲ್ಲಿ ಸಜಂಕಿಲದಿಂದ ಆವಳ ಮಠದ ಕಡೆಯ ಪ್ರತಿ ಮನೆಯ ಮಕ್ಕಳಿಗೂ ಲಕ್ಷ್ಮಿಯಮ್ಮನಿಗೂ ( ಕಾವತೆಯ ಅಜ್ಜಿ,/ಮ್ಹಾವೇ ) ಬಾಯಾರಿನ ಬಾಯಾರಿಕೆಯ ನಂಟು.
1980 ರ ಹಿಂದೆ ಮುಂದಿನ ಐದಾರು ವರ್ಷಗಳು ಬೇಸಿಗೆಕಾಲದಲ್ಲಿ ಹೆಚ್ಚಿನದಿನವೂ ಸಂಜೆ ನಾನು ದೈತೋಟದ ಈ ಮನೆಗೆ ಬಂದು ಸಂಜೆ ನೀರು ಕುಡಿಯುತ್ತಿದ್ದ ನೆನಪು ಇನ್ನೂ ಹಸಿರಾಗಿದೆ ....
ಆಗಿನ್ನೂ ಬಾಟಲಿಗಳ ಹಾವಳಿ ಇರಲಿಲ್ಲ. ಸಂಜೆ ಶಾಲೆ ಬಿಟ್ಟು ಒಡನೆ ನಾವೆಲ್ಲ ಹತ್ತಾರು ಜನ ಈ ಮನೆಗೆ ಬಂದು ಅವರು ಒಳಗಿನ ಜಗಲಿಯ ಮೇಲೆ ಒಂದು ದೊಡ್ಡ ಚೊಂಬಿನಲ್ಲಿ ಇಡುತ್ತಿದ್ದ ನೀರನ್ನು ಕುಡಿಯುತ್ತಿದ್ದೆವು ಅದೊಂದು ಹಿತ್ತಾಳೆಯ ಚೆಂಬು ಹಾಗೆಯೇ ಅದರ ಜೊತೆ ಹಿತ್ತಾಳೆಯ ಲೋಟ.. ಒಮ್ಮೊಮ್ಮೆ ಅದರೊಳಗೆ ಅಡಗಿ ಕುಳಿತಿರುತ್ತಿದ್ದ ಒಂದು ತುಳಸಿ ತುದಿ..
ಅಜ್ಜಿ ಅವರ ಪುರುಸೊತ್ತಿಗೆ ಬಾವಿಯಿಂದ ದಿನವೂ ಶಾಲೆ ಮಕ್ಕಳಿಗಾಗಿ ನೀರು ಎಳೆದು ತಂದಿಡುತ್ತಿದ್ದರು .
ಮತ್ತು ಯಾರು ಮಕ್ಕಳು ಬರುತ್ತಾರೆಂದು ಓಣಿಉದ್ಧಕ್ಕೂ ಸಂಜೆ ಹೊತ್ತು ಕಾಯುತ್ತಾ ಇರುತ್ತಿದ್ದರು.
ಅಲ್ಲೇ ಹೊರಗಡೆ ಕುಳಿತು ಸಂಜೆ ಹೊತ್ತು ಸೋಗೆಯ ಹಿಡಿಸೂಡಿ ಕಡ್ಡಿ ಮಾಡುತ್ತಿದ್ದ ನೆನಪು.
ಅಲ್ಲೊಂದು ಸಣ್ಣ ಪನ್ನೀರು ಗುಲಾಬಿಯ ಗಿಡ..
ಇನ್ನು ಮಳೆಗಾಲದಲ್ಲಿ ಜೋರಾಗಿ ಮಳೆ ಬಂದರೆ ಅವರ ಮನೆಯ ಕಡೆಗೆ ಓಡುತ್ತಿದ್ದ ನೆನಪು.. ನಮ್ಮಲ್ಲಿ ಕೊಡೆ ಇಲ್ಲದಿದ್ದಾಗ ಒಂದು ಮುಂಡಿಯ ಎಲೆ ಕಡಿದು ಕೊಟ್ಟ ನೆನಪು.
ಅಜ್ಜಿಯ ಮಗ ದಿl ರಾಮಣ್ಣನವರು ಧರ್ಮಸ್ಥಳದಲ್ಲಿ ಉದ್ಯೋಗಿಯಾಗಿದ್ದಾಗ ಊರಿನಿಂದ ಬಂದ ಪ್ರತಿಯೊಬ್ಬರಿಗೂ ದೇವರ ದರ್ಶನಕ್ಕೆ ತಮ್ಮಿಂದಾಗುವ ಸಹಕಾರ ನೀಡುತ್ತಿದ್ದರು.
ಮಗಳು ಶ್ರೀಮಂತುಕ್ಕ ಕೂಡ ವರ್ಷಕ್ಕೊಮ್ಮೆಯಾದರೂ ಬಂದು ತಮ್ಮ ಅಮ್ಮನ ಜೊತೆ ಇರುತ್ತಿದ್ದ ನೆನಪು.
ಅದರಲ್ಲೂ ಒಂದೆರಡು ಸಲ..ಅಜ್ಜಿ ಬಿಕಂಡ ಸುಟ್ಟುಕೊಟ್ಟ ನೆನಪು ಮರೆಯುವಂತೆಯೇ ಇಲ್ಲ.. ಹೀಗೆ ಇನ್ನೂ ಹತ್ತಾರು ನೆನಪುಗಳು. ಅದೇ ಮನೆಯ ಕಿಟಿಕಿ ಎಡೆಯಿಂದ ಅದೆಷ್ಟು ವರ್ಷಗಳಿಂದ ದೃಷ್ಟಿಸುತ್ತಿದ್ದ ಎರಡು ಕಣ್ಣುಗಳು.. ಇನ್ನೂ ಇವೆ ಏನೋ..
ಕಳೆದ ಏಳು ತಿಂಗಳ ಹಿಂದೆ ನವರಾತ್ರಿ ಪೂಜೆಗಾಗಿ ಆವಳ ಮಠಕ್ಕೆ ಬಂದಿದ್ದು ಪ್ರತಿಯೊಬ್ಬರ ಹೆಸರು ನೆನಪಿನಲ್ಲಿ ಇಟ್ಟು ಮಾತನಾಡಿಸಿದ್ದರೆಂಬುದು ವಿಶೇಷ...
ಇಂತಹ ಲಕ್ಷ್ಮಿ ಅಜ್ಜಿಗೆ ನಮ್ಮ ಶ್ರದ್ಧಾಂಜಲಿ ಅರ್ಪಣೆ 🙏🏻

- ಶಾಂತಾ ನಾಗರಾಜ್ ಭಟ್ , ಕೆದುಕೋಡಿ
Creative Writings
