
News · March 27, 2026
"ನುಡಿ ನಮನ"
✒️ ರವೀ ಸಜಂಗದ್ದೆ
ಪ್ರಜ್ವಲಿಸಿ ಬೆಳಕಾಗಬೇಕಾದವನು ಸುಳಿವು ನೀಡದೆ ನಡೆದು ಹೋದ!
ವಿಧಿಯಾಟದ ಕ್ರೌರ್ಯಕ್ಕೆ ಸಾಕ್ಷಿಯಾದಂತೆ, ನಮ್ಮ ಸಮುದಾಯದ ಭರವಸೆಯ ನಗು ಈಗ ಮೌನವಾಗಿದೆ. ಇಪ್ಪತ್ತಾರರ ಹರೆಯದ ಪ್ರಜ್ವಲ್, ಕೇವಲ ಒಬ್ಬ ಯುವಕನಾಗಿರಲಿಲ್ಲ; ಅವನು ಕ್ರಿಕೆಟ್ ಮೈದಾನದ ಜೀವಂತಿಕೆಯಾಗಿದ್ದ, ತನ್ನ ಮನೆಯನ್ನು ಬೆಳಗಬೇಕಾದ ನಂದಾದೀಪವಾಗಿದ್ದ. ಅಕಾಲಿಕ ರಸ್ತೆ ಅಪಘಾತವೊಂದು ಆ ಸುಂದರ ಕನಸುಗಳನ್ನು, ಆ ನಿಷ್ಕಲ್ಮಶ ನಗುವನ್ನು ನಮ್ಮಿಂದ ಶಾಶ್ವತವಾಗಿ ಕಸಿದುಕೊಂಡಿದೆ.
ಪ್ರಜ್ವಲ್ ಎಂದರೆ ನೆನಪಾಗುವುದು ಆ ಅಕರ್ಷಕ ನೀಲಿ ಕಂಗಳ ಕ್ರಿಕೆಟ್ ಆಸಕ್ತ ಹುಡುಗ. ಆ ಕಣ್ಣುಗಳಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಠವಿತ್ತು, ಬದುಕಿನ ಬಗ್ಗೆ ಅಪಾರವಾದ ಪ್ರೀತಿಯಿತ್ತು. ಕ್ರಿಕೆಟ್ ಅವನ ಉಸಿರಿನ ಭಾಗವಾಗಿತ್ತು. ಮೈದಾನಕ್ಕೆ ಇಳಿದರೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದ, ಮಿಂಚಿನ ವೇಗದ ಕ್ಷೇತ್ರರಕ್ಷಣೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದ. ಅವನ ರಿವರ್ಸ್ ಸ್ವೀಪ್ ಹೊಡೆತಗಳು ನೋಡಲು ಸೊಬಗು! ಅಷ್ಟೇ ಅಲ್ಲ, ಕೈಯಲ್ಲಿ ಮೈಕ್ ಹಿಡಿದು ಅವನು ಮಾಡುತ್ತಿದ್ದ ಕಾಮೆಂಟರಿ ಇಡೀ ಪಂದ್ಯಾಟಕ್ಕೆ ಕಳೆ ತರುತ್ತಿತ್ತು. ಮೈದಾನದ ಒಳಗೆ ಆಟಗಾರನಾಗಿ, ಹೊರಗೆ ಒಬ್ಬ ಉತ್ತಮ ವಿಶ್ಲೇಷಕನಾಗಿ ಅವನು ತೋರುತ್ತಿದ್ದ ಆ ಉತ್ಸಾಹ ಈಗ ಕೇವಲ ನೆನಪು ಮಾತ್ರ. ಕಲಿತು ಒಳ್ಳೆಯ ಉದ್ಯೋಗ ಗಳಿಸಿ ಬದುಕನ್ನು ಕಟ್ಟಿಕೊಳ್ಳುವ ಮೊದಲೇ ದೇವರು ಆತನನ್ನು ನಮ್ಮ ನಡುವಿನಿಂದ ಇಲ್ಲವಾಗಿಸಿದನಲ್ಲ!
ಹಲವಾರು ಕ್ರಿಕೆಟ್ ದಿಗ್ಗಜರ ಜೊತೆಗಿನ ಪ್ರಜ್ವಲ್‌ನ ಫೋಟೋಗಳನ್ನು ನೋಡುವಾಗ ಕಣ್ಣಂಚಿನಲ್ಲಿ ನೀರಾಡುತ್ತದೆ. ಕ್ರಿಕೆಟ್ ಬಗ್ಗೆ ಅವನಿಗೆ ಭಯಂಕರ ಅನಿಸುವಷ್ಟು ಆಸಕ್ತಿ, ಅಭಿರುಚಿ! ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದ ಆ ಹುಡುಗನ ಬಾಳಪಯಣಕೆ ಕಾಲ ಇಷ್ಟು ಬೇಗ ಮುಕ್ತಾಯ ಹಾಡಬಾರದಿತ್ತು. ವಿಧಿಯ ಕ್ರೌರ್ಯ ಎಷ್ಟು ಭೀಕರ ಎಂದರೆ, ಒಂದೆಡೆ ಮಗನನ್ನು ಕಳೆದುಕೊಂಡ ದುಃಖ, ಇನ್ನೊಂದೆಡೆ ಅನಾರೋಗ್ಯದೊಂದಿಗೆ ಹೋರಾಡುತ್ತಿರುವ ಅವನ ತಂದೆಯ ವಿಷಣ್ಣ ಪರಿಸ್ಥಿತಿ. ಮಗ ತನಗೆ ಆಸರೆಯಾಗುತ್ತಾನೆ, ತನ್ನ ನೋವಿಗೆ ಮದ್ದಾಗುತ್ತಾನೆ ಎಂದು ನಂಬಿದ್ದ ಆ ತಂದೆತಾಯಿಗೆ ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಆ ದೈವವೇ ನೀಡಬೇಕಿದೆ. ಈ ಸಾವು ಖಂಡಿತಾ ನ್ಯಾಯವಲ್ಲ!
ಪ್ರಜ್ವಲ್ ಕೇವಲ ಒಬ್ಬ ಪ್ರತಿಭಾವಂತ ಆಟಗಾರನಲ್ಲ, ಅವನೊಬ್ಬ 'ಜಂಟಲ್‌ಮ್ಯಾನ್'. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತಿದ್ದ ಅವನ ಗುಣ, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಅವನ ನಗುಮುಖ ಸದಾ ಅಮರ. ಮೈದಾನದ ಒಳಗೆ ಮತ್ತು ಹೊರಗೆ ಅವನ ಹೆಜ್ಜೆಗುರುತುಗಳು ಮತ್ತು ಗಾಳಿಯಲ್ಲಿ ಅವನ ಧ್ವನಿ, ವಾಟ್ಸಪ್ ಗುಂಪುಗಳಲ್ಲಿ ಅವನು ಛಾಪಿಸುತ್ತಿದ್ದ ಕ್ರಿಕೆಟ್ ಸಂಬಂಧಿತ ಮೆಸೇಜ್‌ಗಳು ಸದಾ ನಮ್ಮ ನಡುವೆ ಅನುರಣಿಸುತ್ತಿರುತ್ತವೆ.
ಬದುಕೂ ಕ್ರಿಕೆಟ್ ಆಟದಂತೆ ಇದ್ದರೆ ಎಷ್ಟು ಚೆನ್ನಾಗಿತ್ತು! ದೇವರೆಂಬ ಅಂಪಾಯರ್ ತನ್ನ ವಿವೇಚನೆ ಬಳಸಿ ಔಟ್ ಎಂದು ತೀರ್ಪು ನೀಡಿದಾಗ ಅದನ್ನು ಪ್ರಶ್ನಿಸುವ DRS ಪ್ರಕ್ರಿಯೆ ಇಂಥಾ ವಿಷಯಗಳಲ್ಲೂ ಇರಬೇಕಾಗಿತ್ತು, ಓ ದೇವರೇ!!!
ಪ್ರಜ್ವಲ್‌ನ ಆತ್ಮಕ್ಕೆ ಸದ್ಗತಿ ಸಿಗಲಿ, ಅವನ ಕುಟುಂಬ, ಬಂಧುಗಳಿಗೆ ಮತ್ತು ಸ್ನೇಹಿತರಿಗೆ ಈ ಮಹಾ ಸಂಕಟ-ಸಂಕಷ್ಟವನ್ನು ಎದುರಿಸುವ ಧೈರ್ಯ-ಶಕ್ತಿ ಆ ಜಗನ್ಮಾತೆ ನೀಡಲಿ ಎಂಬುದಷ್ಟೇ ಈ ಕ್ಷಣದ ಪ್ರಾರ್ಥನೆ.
Dear Prajju, we will miss you gentleman – both on-field and off-field.
ಪ್ರಿಯ ಪ್ರಜ್ವಲ್, ನಿನ್ನ ಅಗಲಿಕೆ ತುಂಬಲಾರದ ನಷ್ಟ. ಈ ಅಕಾಲಿಕ ಸಾವು ನಮ್ಮನ್ನೆಲ್ಲ ಬಹುಕಾಲ ಕಾಡಲಿದೆ. ಮುಂದಿನ ದಿನಗಳಲ್ಲಿ, ನಮ್ಮ ಕ್ರೀಡಾಕೂಟಗಳಲ್ಲಿ ನಿನ್ನ ಸ್ಮರಣಾರ್ಥ ಏನಾದರೂ ಹಮ್ಮಿಕೊಂಡು ನಿನ್ನ ನೆನಪು ಅಮರವಾಗಿಸುವ ಕುರಿತು ಸಂಬಂಧ ಪಟ್ಟವರಲ್ಲಿ ವಿನಂತಿಸುವೆನು. ಆ ಮೂಲಕ ನಮ್ಮೆಲ್ಲರ ಕಡೆಯಿಂದ ಸದಾ ನಿನಗೊಂದು ಸಣ್ಣ ಭಾವಪೂರ್ಣ ಶ್ರದ್ಧಾಂಜಲಿ. ಹೋಗಿ ಬಾ ಪ್ರಜ್ವಲ್. ಓಂ ಶಾಂತಿ ಶಾಂತಿ ಶಾಂತಿಃ. 🙏
Obituary
