Karada Vishwa

Article · March 27, 2026

ಯಾರ ಭಾರವೆಷ್ಟೋ

- ಸೌಮ್ಯಾ ಭಟ್ ಅಂಗ್ರಾಜೆ

ಯಾರ ಹೆಗಲಲೆಷ್ಟು ಬಾಧೆ
ಸಾರಿ ಹೇಳಲಾರರಿಲ್ಲಿ
ಬೀರಿ ನಗುವ ಸಾಗಬೇಕದನ್ನು ಹೊರುತಲಿ
ಮಾರಲಾಗದೆಂದು ಹೊರೆಯ
ಹೇರುತದನು ಪರರ ಮೇಲೆ
ಹಾರಿ ದೂರ ಹೋಗಲಾಗದೆಲ್ಲು ಬಿಡುತಲಿ

ಪುಟ್ಟ ಕೀಟ ನರನು ಸೇರಿ
ಪಟ್ಟು ಬಿಡದೆ ದುಡಿಯಬೇಕು
ಹೊಟ್ಟೆ ಭರಿಸಲಿನಿತು ಕೂಳು ಸಿಗದು ಸುಲಭದಿ 
ಅಟ್ಟಬೇಕು ಬಾಳನೌಕೆ
ಮೆಟ್ಟುತೆಲ್ಲ ಕಷ್ಟವನ್ನು
ಹುಟ್ಟಿ ಬಂದ ಮೇಲೆ ರಟ್ಟೆ ಬಲದ  ಧೈರ್ಯದಿ

ಇರುವೆ ಗಜದ ಭಾರವವಕೆ
ಬರುವರೇನು ಹಗುರ ಮಾಡೆ
ಸರಳವಿಲ್ಲ ಕಾರ್ಯವೆಂದು ಬಿಟ್ಟು ಬಿಡುವುದೇ 
ಸರಿಸಿ ಕಲ್ಲು ಮುಳ್ಳುಗಳನು
ಕರೆದು ಕೇಳದೇನೆ ನೆರವು
ನಿರುತ ಪಯಣ ಪ್ರಾಣಶಕ್ತಿಯಿರುವ ತನಕವು

 ನಲಿವ ನೋವ  ಪಾಲು ಸಮವು 
ತಳೆಯಬೇಕು ಗಟ್ಟಿ ನಿಲುವು
ಬಳಿಯಲಿರರು ಯಾವ ಬಂಧು ಬಳಗವನುದಿನ
ಅಳೆಯಬೇಡ ಮಂದಿಯನ್ನು
ಬೆಳೆಸುತಾಸೆ ಮನಸಿನೊಳಗೆ
ತಿಳಿದರೊಳಿತು ಕೊನೆಗೆ ನಮಗೆ ಸಂಗ ನಮ್ಮದೆ


          

Creative Writings
ಯಾರ ಭಾರವೆಷ್ಟೋ