Karada Vishwa

Article · June 10, 2026

(ಅಕ್ಷರ ನಮನ) ಇರಬೇಕು ಇರುವಂತೆ ದೈತೋಟ ಅಜ್ಜಿಯಂತೆ..!

- ರವೀ ಸಜಂಗದ್ದೆ

ಶತಾಯುಷಿ ದೈತೋಟ ಲಕ್ಷ್ಮೀ ಅಮ್ಮನವರು ಇಹದ ದೀರ್ಘ ಪಯಣ ಮುಗಿಸಿ ನಾಕದೆಡೆಗೆ ಹೆಜ್ಜೆ ಹಾಕಿದ್ದಾರೆ. ಅವರ ನಿರ್ಗಮನದೊಂದಿಗೆ ಶತಕದ ಬೃಹತ್ ಅನುಭವ, ಅಪಾರ ಜೀವನಾಮೃತ ಮತ್ತು ನಮ್ಮ ಸಮಾಜದ ಏಳು ತಲೆಮಾರುಗಳ ಸ್ಥಿತ್ಯಂತರವನ್ನು ನೋಡಿದ ವಿಸ್ತೃತ ಒಳನೋಟ ಭೌತಿಕವಾಗಿ ಮರೆಯಾಗಿದೆ. ಆ ಹಿರಿಯ ಜೀವವು ಕರಾಡ ಜನಾಂಗದ ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯ ಜ್ಯೇಷ್ಠ ರಾಯಭಾರಿಯಾಗಿದ್ದರು ಎಂದರೆ ಅತಿಶಯೋಕ್ತಿಯಲ್ಲ. ಅವರ ಅಗಲುವಿಕೆಯಿಂದ ಜೀವನದ ಸಾಕ್ಷಾತ್ಕಾರ ಮತ್ತು ಅನುಭವದ ಗಣಿಯೊಂದನ್ನು ಕಳೆದುಕೊಂಡು ನಮ್ಮ ಬಳಗ ಬಡವಾಗಿದೆ.

ಕಷ್ಟ-ಕಾರ್ಪಣ್ಯಗಳನ್ನು, ಬಾಳಿನ ಏಳು-ಬೀಳುಗಳನ್ನು, ಸಾವು-ನೋವುಗಳನ್ನು ಎದುರಿಸಿ-ಅನುಭವಿಸಿ, ಪ್ರತಿಸಲವೂ ಭೋರ್ಗರೆಯುವ ಜಲಪಾತದಿಂದ ಮೇಲೆದ್ದು ಪುನರ್ಜನ್ಮ ಪಡೆದುಕೊಂಡು, ನಿರ್ಲಿಪ್ತತೆಯಿಂದ ನೂರಕ್ಕೂ ಹೆಚ್ಚು ವಸಂತಗಳನ್ನು ಕಂಡ ಅವರ ಸಾಧನೆ ಸಣ್ಣದಲ್ಲ! ತನಗಿಂತ ಕಿರಿಯರ, ತನ್ನ ಆಪ್ತೇಷ್ಟರ ಸಾವನ್ನು ಕಣ್ಣಾರೆ ಕಂಡರೂ ಅವರು ದೃಢವಾಗಿ ಜೀವನ ಕಟ್ಟಿಕೊಂಡು ಸಾಗಿದ್ದು ಖಂಡಿತಾ ಕಲ್ಲು-ಮುಳ್ಳಿನ ದುಸ್ತರ ಹಾದಿ. ‘ಛಲ’ ಎನ್ನುವ ಪದಕ್ಕೆ ಸೂಕ್ತವಾಗಿ ಹೊಂದುವ ಸ್ನೇಹಜೀವಿಯವರು.

ಅಷ್ಟಿದ್ದೂ, ಇಂತಹ ಬಿಕ್ಕಟ್ಟುಗಳು, ದುರಂತಗಳು ಮತ್ತು ಮಾನಸಿಕವಾಗಿ ಜರ್ಜರಿತಗೊಳಿಸುವ ಸನ್ನಿವೇಶಗಳ ನಡುವೆಯೂ ಅವರು ಬಾಳಿದ ರೀತಿ ಎಲ್ಲಾ ಕಾಲಕ್ಕೂ ಮಾದರಿ! ಒಂದು ಸಣ್ಣ ತೊಂದರೆಗೆ ಸಿಲುಕಿದಾಗ ಆಕಾಶವೇ ಕಳಚಿ ಬಿದ್ದಂತೆ ಆಡುವ ನಮ್ಮಗಳ ನಡುವೆ, ಹತ್ತಾರು ಆಪ್ತರ ಅಗಲಿಕೆಯ ನೋವನ್ನೂ ನುಂಗಿ-ಜೀರ್ಣಿಸಿಕೊಂಡು ಶತಮಾನ ದಾಟಿ ನಿಂತದ್ದು ಪದಗಳಿಗೆ ನಿಲುಕದ ವಿಸ್ಮಯ! ಅವರದ್ದು ಯಾವುದೇ ರೀತಿಯ ಅಡೆತಡೆಗಳಿಗೂ ಎದೆಗುಂದದೆ ಸಾಗಿದ ನಿರಂತರ ಯಾನ.

ತನ್ನ ಬದುಕಿನ ಅಸ್ತಿತ್ವವನ್ನು ಬಂದಂತೆ ಸ್ವೀಕರಿಸಿ, ಸಣ್ಣ-ಪುಟ್ಟ ಖುಷಿಗಳನ್ನು ಸಂಭ್ರಮಿಸಿದ ಪರಿಣಾಮವೇ ಅವರು ಇಷ್ಟು ಸುದೀರ್ಘವಾಗಿ, ಸದೃಢವಾಗಿ ಬಾಳ್ವೆ ನಡೆಸಲು ಕಾರಣವಾಯಿತು ಎನ್ನುವುದು ಸರ್ವಸತ್ಯ! ಆಕೆ ವಾಸವಿದ್ದ ಮನೆಯ ಗೋಡೆ, ಕಿಟಕಿ, ಬಾಗಿಲು, ಅಂಗಳ, ಮಾಡು, ಮಂಚ, ಅಡುಗೆ ಕೋಣೆ, ತೋಟ, ದೇವರ ಮನೆ, ಚಾವಡಿ, ಕುರ್ಚಿ, ಈಸೀಚೇರ್, ದನದ ಹಟ್ಟಿ ಹೀಗೆ ಪ್ರತಿಯೊಂದು ವಿಷಯ-ವಸ್ತುವೂ ಈ ಹಿರಿಯ ಚೇತನದ ಸಾವಿರಾರು ದಿನಗಳ ಹೆಜ್ಜೆಗುರುತುಗಳನ್ನು ತನ್ನ ಬೊಗಸೆಯಲ್ಲಿ ಭದ್ರವಾಗಿ ಇರಿಸಿ ನಿಂತಿವೆ. ಅವರ ಅಗಲುವಿಕೆಯಿಂದ ಆ ಇಡೀ ಪರಿಸರದ ಕಣ್ಣಿನಲ್ಲೂ ನೀರಾಡಿದೆ ಎನ್ನುವುದಕ್ಕೆ ನಿಧನದಂದು ಧೊತ್ತನೆ ಸುರಿದ ಮಳೆಯೇ ನಿದರ್ಶನ! ನೆಂಟರಿಷ್ಟರಷ್ಟೇ ಅಲ್ಲದೆ, ಅವರ ಗೈರು ಆ ವಾತಾವರಣವನ್ನೂ ತೀವ್ರವಾಗಿ ಕಾಡಲಿದೆ. ದೇಹ ಸದೃಢವಾಗಿದ್ದ ದಿನಗಳಲ್ಲಿ, ನಿತ್ಯವೂ ಹೋಗಿ ಸೇವೆ ಮಾಡಿ ಅನ್ನಪ್ರಸಾದ ಸ್ವೀಕರಿಸಿದ ಪಂಜಾಂಬಿಕೆಯ ಸನ್ನಿಧಾನದಲ್ಲೂ ಅವರ ಗೈರು ಹಾಜರಿ ಎದ್ದು ಕಾಣಲಿದೆ. ಅವರು ತಮ್ಮ ಭೂ ವಾಸವನ್ನು ಮುಗಿಸಿ, ಅದೇ ಪಂಜಾಂಬಿಕೆಯ ಪಾದತಲ ಸೇರಿದ ಸಂತೃಪ್ತಿಯಷ್ಟೇ ನಮ್ಮದು! 🙏🏻

ಜೀವನದ ವಿವಿಧ ಮಜಲುಗಳಲ್ಲಿ ಬಂದೆರಗಿದ ನೂರಾರು ಬಿರುಗಾಳಿಗಳಿಗೆ ಅಂಜದೆ ಗಟ್ಟಿಯಾಗಿ ನಿಂತು, ಪ್ರಕ್ಷುಬ್ಧತೆ ತಣ್ಣಗಾದ ಮೇಲೆ ಸಾವರಿಸಿಕೊಂಡು ಮತ್ತೆ ಮುಂದಕ್ಕೆ ಹೆಜ್ಜೆ ಹಾಕಿದ್ದು ಈ ಶತಾಯುಷಿಯ ಶ್ರೇಷ್ಠ ಸಾಧನೆ. ಅವರಲ್ಲಿದ್ದ ಕರಾಡ ಪರಂಪರೆಯ ಕುರಿತಾದ ಜ್ಞಾನವನ್ನು ಸಂಪೂರ್ಣವಾಗಿ ದಾಖಲಿಸಿದ್ದರೆ ಅದು ಮುಂದಿನ ಪೀಳಿಗೆಗಳಿಗೆ ಅದ್ಭುತ ಆಕರ ಗ್ರಂಥ (reference guide) ಆಗುತ್ತಿತ್ತು. ಆದರೂ, ಆ ಕುರಿತು ಒಂದಿಷ್ಟು ಕೆಲಸಗಳು ಆಗಿವೆ ಎನ್ನುವುದು ಸಂತೋಷದ ಸಂಗತಿ.

ಅವರು ನಮ್ಮ ಸಮಾಜದ ಸರ್ವರಂಗದ, ಸಾರ್ವಕಾಲಿಕ ಪ್ರತಿನಿಧಿ. ತನ್ನ ಹಿಂದಿನ ಎರಡು, ತನ್ನ ನಂತರದ ನಾಲ್ಕು ಹಾಗೂ ತನ್ನನ್ನೂ ಸೇರಿಸಿ ಒಟ್ಟು ಏಳು ಪೀಳಿಗೆಗಳನ್ನು (generations) ಕಂಡ, ಅವರೆಲ್ಲರೊಂದಿಗೆ ಬೆರೆತ ಅವರ ಅನುಭವವೇ ಒಂದು ಅಮೃತ ಸಿಂಚನ! ಏಳು ತಲೆಮಾರುಗಳೊಡನೆ ಒಡನಾಡುವ ಅವಕಾಶ ಹತ್ತು ಕೋಟಿಯಲ್ಲಿ ಒಬ್ಬರಿಗೆ ಮಾತ್ರ ದೊರಕುವ ವಿಶೇಷ, ವಿಶಿಷ್ಟ ಹಾಗೂ ಅಪರೂಪದ ಆರೋಗ್ಯ ಭಾಗ್ಯ,‌ ಸೌಭಾಗ್ಯ.

ನನಗಿರುವ ಮಾಹಿತಿಯ ಪ್ರಕಾರ, ಕರಾಡರ ಬಹುತೇಕ ಮನೆತನಗಳೊಂದಿಗೆ ಆಕೆಗೆ ನೇರ ನಂಟಿದೆ! ಯಾಕೆಂದರೆ ಅವರ ಮೊದಲ ವೃತ್ತದ (first circle) ಸಂಬಂಧಿಕರ ಸಂಖ್ಯೆಯೇ ಹತ್ತಿರಹತ್ತಿರ ಎಂಟುನೂರು ಎಂದು ಅವರ ಮನೆಯವರೇ ಒಮ್ಮೆ ಹೇಳಿದ್ದ ನೆನಪು!

ಶತಮಾನದ ಆಲದಮರವೊಂದು ಸಮಾಜಕ್ಕೆ ಉತ್ತಮ ಆಶ್ರಯ, ನೆರಳು ಹಾಗೂ ಹಲವಾರು ಪ್ರದೇಶಗಳಲ್ಲಿ ತನ್ನ ಕುಡಿಗಳನ್ನು ನೀಡಿ ಈಗ ಧರೆಗುರುಳಿದೆ! ಇದರೊಂದಿಗೆ ನಮ್ಮ ಒಡನಾಡಿಯಾಗಿದ್ದ ಅತಿ ಹಿರಿಯ ಸದಸ್ಯರೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ. ಆದರೆ ಹಲವಾರು ನೆನಪಿನ ಬುತ್ತಿಗಳನ್ನು ನಮ್ಮ ಮಡಿಲಲ್ಲಿ ಬಿಟ್ಟು ಅವರು ಅಮರರಾಗಿದ್ದಾರೆ. ಅವರ ದಿವ್ಯಾತ್ಮಕ್ಕೆ ಸದ್ಗತಿ ಸಿಗಲಿ. ಲಕ್ಷ್ಮೀ ಅಮ್ಮನವರು ನಮಗೆಲ್ಲರಿಗೂ ಅಮ್ಮ, ನಮ್ಮೆಲ್ಲರ ಸದಾಕಾಲದ ಪ್ರೀತಿಯ ಲಕ್ಷ್ಮ್ಯಜ್ಜಿ!

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ |
ನವಾನಿ ಗೃಹ್ಣಾತಿ ನರೋಽಪರಾಣಿ ||
ತಥಾ ಶರೀರಾಣಿ ವಿಹಾಯ ಜೀರ್ಣಾ- |
ನ್ಯನ್ಯಾನಿ ಸಂಯಾತಿ ನವಾನಿ ದೇಹೀ ||

ಅರ್ಥ: ಮನುಷ್ಯನು ಹಳೆಯ ಬಟ್ಟೆಗಳನ್ನು ತೊರೆದು ಹೊಸ ಬಟ್ಟೆಗಳನ್ನು ಧರಿಸುವಂತೆ, ಆತ್ಮವು ಜೀರ್ಣವಾದ (ಮುಪ್ಪಾದ) ದೇಹವನ್ನು ತೊರೆದು ಪರಮಾತ್ಮನನ್ನು ಸೇರುತ್ತದೆ. ನಮ್ಮೆಲ್ಲರನ್ನು ಅಗಲಿದ ಅಜ್ಜಿಯ ಆತ್ಮಕ್ಕೆ ಸದ್ಗತಿ ಸಿಗಲಿ ಎಂಬ ಪ್ರಾರ್ಥನೆಯ ಅಕ್ಷರ ನಮನವಿದು.

ಆವಳಮಠ ದೇವಸ್ಥಾನದ ದಾರಿಯಲ್ಲಿ ಸಾಗುವಾಗ, ಬಲಕ್ಕೆ ಸಿಗುವ, ನೀವು ಬಹುಕಾಲ ಬದುಕು ಕಳೆದ ಆ ಹಂಚಿನ ಮನೆಯನ್ನು ನೋಡಿದಾಗ, ನಿಮ್ಮ ಭೌತಿಕ ಇರುವಿಕೆಯನ್ನು ನಾವೆಲ್ಲರೂ ಅಲ್ಲಿ ಖಂಡಿತಾ ಮಿಸ್ ಮಾಡಿಕೊಳ್ಳಲಿದ್ದೇವೆ. ಪ್ರೀತಿಯ ಪಿಜ್ಜೀ, ಹೋಗಿ ಬನ್ನಿ. ಓಂ ಶಾಂತಿ ಶಾಂತಿ ಶಾಂತಿಃ. 🙏

✍️ ರವೀ ಸಜಂಗದ್ದೆ
Obituary