Karada Vishwa

Article · September 8, 2026

ಮೊದಲು ಮಾನವನಾಗು..

ಅಮೃತಾ ಒ. ಬೇಂದ್ರೋಡು

ಮನುಷ್ಯನ ಮನಸ್ಸು ಮಂದಿರವಾಗಿಯೂ ಮಸಣವಾಗಿಯೂ ರೂಪುಗೊಳ್ಳಬಹುದು, ಅದನ್ನು ದೈವತ್ವದತ್ತ ಕೊಂಡೊಯ್ಯುವುದೋ, ನಾಶದತ್ತ ಕರೆದೊಯ್ಯುವುದೋ - ನಮ್ಮ ಆಯ್ಕೆ. ನಂಬಿಕೆ, ಮಾನವೀಯತೆ ಮತ್ತು ಬದುಕಿನ ಅಂತಃಸತ್ವವನ್ನು ಕಾಪಾಡಿ, ಮೊದಲು ಒಳ್ಳೆಯ ಮನುಷ್ಯರಾಗುವುದೇ ನಿಜವಾದ ದೈವತ್ವ.

ಮನವೊಂದು ಮಂದಿರವೊ ಮಸಣವೋ ಹೇ ಮನುಜ

ಹೊಕ್ಕವರು ಅರಳುವರೊ ಅಳಿಯುವರೊ ಕಾಣೆ l

ದೇವರೆನ್ನುವ ಸೋಗು ದೆವ್ವಗಳಲರಳಿರಲು

ಕೈಮುಗಿದು ಬಂದವನ ಬದುಕೆಲ್ಲ ಬವಣೆ ll

ತಿಂದ ನೋವ್ಗಳಿಗೆಲ್ಲ ಹೊಸ ಬದುಕ ಬೆಸೆಯುತಿರೆ

ಜೀವವಿಲ್ಲದ ಶಿಲೆಯಲರಳುವುದು ಶಿಲ್ಪ

ಕೈಮುಗಿದ ಮಂದಿಗಳ ಕೈಹಿಡಿದು ನಡೆಸುತಿರೆ

ದೇವರಾಗುವುದಿಲ್ಲಿ ಈ ಶಿಲೆಯ ಬಿಂಬ ll

ಮನವು ಮಂದಿರವೆಂದು ಕೈಬೀಸಿ ಕರೆತಂದು

ಸತ್ತವರ ಲೋಕದಲಿ ಎಳೆದಾಡಬೇಡ l

ಸತ್ತಂತೆ ಬದುಕುವರು ಸತ್ತವನ ಬದುಕಿಸರು

ದೇವರನು ದೆವ್ವದೆಡೆ ಕರೆದು ಕೊಲಬೇಡ ll

ಬದುಕ ಕೊನೆಗಾಣಿಸಲು ಚಿತೆಯಗ್ನಿಯುರಿಯುವುದು

ಮನವೆಂಬ ಮಸಣದಲಿ ಬದುಕೆಲ್ಲ ಬೂದಿ ; l

ಗುಡಿಯ ನಂದಾದೀಪ ಬೆಳಕಲ್ಲಿ ನಡೆಸುವುದು

ಮನದ ಮಂದಿರದಲ್ಲಿ ಬದುಕಿಗೆ ಬುನಾದಿ ll

ಮಸಣವೋ ಮಂದಿರವೊ ದೆವ್ವವೋ ದೇವತೆಯೊ

ಆಯ್ಕೆ ನಿನ್ನದು ತಾನೆ ಬಾಳಪಥದಲ್ಲಿ ?

ಅರಳುವನ ಅಳಿಸದಿರು ನಂಬುಗೆಯ ಕೆಡಿಸದಿರು

ಮೊದಲು ಮಾನವನಾಗು ನಿನ್ನ ಯಾತ್ರೆಯಲಿ ll

Creative Writings