
Article · September 3, 2026
ಅನಾಥ ಹನಿಗಳು
By ಗಾಯತ್ರಿ ನಾಗರಾಜ "ಕೃಷ್ಣಗಾನಂ" ಅಡ್ಕತ್ತೊಟ್ಟಿ
ಗಾಯತ್ರಿ ಕೆ ಅಡ್ಕತೊಟ್ಟಿ
ಸ್ತಬ್ಧತೆಯೇ ಜೀವಕೆ ಮೈಯಾದಾಗ
ಚಲನೆಯೇ ಇಲ್ಲದ ಶಿಲೆಯಾದಾಗ
ರುಚಿಯೇ ಇಲ್ಲದ ಬದುಕಿನ ಬಟ್ಟಲಲಿ
ಮೌನವೇ ಮಾತಿಗೆ ಕಾಯಿಲೆಯಾದಾಗ
ನಂಬಿಕೆಯ ದೀಪವು ಕರಗಿ ಹೋಗಿ
ಸಂಬಂಧದ ದಾರವು ಹರಿದು ಬಿದ್ದಾಗ
ಗಾಳಿ, ಬೆಳಕು, ಮಳೆ ಎಲ್ಲವೂ ಸುಳ್ಳಾಗಿ
ಇಡೀ ಜಗವೇ ಒಂದು ಭ್ರಮೆಯಾದಾಗ...
ಗಂಟಲೊಳಗೆ ದುಃಖ ಗಂಟು ಕಟ್ಟಿ
ಒಳಗೊಳಗೇ ಪ್ರಾಣವ ಹಿಂಡಿ ಹಿಪ್ಪೆ ಮಾಡಿ
ಸಂಚಿನಂತೆ ಮನುಜನ ಕೊಲ್ಲುತಿದೆ
ತಳಮಳದಿ ಮನವು ಎಲ್ಲೂ ನಿಲ್ಲದೆ ಓಡಿ...
ಅತ್ತು ಬಿಡು ಜೋರಾಗಿ ಎನ್ನುತಿದೆ ಮನ
ಬಾನು-ಭೂಮಿ ಸಿಡಿಯುವಷ್ಟು ಜೋರಾಗಿ
ಒಳಗಿನ ಹಿಮಗಡ್ಡೆ ಕರಗುವಷ್ಟು
ಕರುಳು ಕಿತ್ತು ಬರುವಷ್ಟು ಜೋರಾಗಿ...
ಆಕ್ರಂದನ ಮುಗಿಲು ಮುಟ್ಟಿ ಅಬ್ಬರಿಸಿದರೇನು
ಒಡೆದ ಬಿಂದಿಗೆಯ ಕೊನೆಯಲಿ ಉಳಿದಂತೆ
ಜಾರಿ ಬೀಳುವುದು ಕಣ್ಣಂಚಿನಿಂದ
ಬರೀ ಎರಡೇ ಎರಡು ಅನಾಥ ಹನಿಗಳು ಮಾತ್ರವೇ
Creative Writings
