
Article · July 17, 2026
ನಂಟು
--ವೀಣಾ ಎಂ ಭಟ್
ನನ್ನ ನಿನ್ನ ನಂಟು ಇಂದು ನಿನ್ನೆಯದಲ್ಲ
ಜನನ ಮರಣದ ಬಳಿಕ ಬಿಡುವ ನಂಟೇನಲ್ಲ
ಉಷಃ ಕಾಲದೆ ಕಣ್ಣು ತೆರೆದಾಗ ಬರುವ ನಾಮ
ನಾರಾಯಣ ನಾರಾಯಣ ಎಂಬ ಹರಿನಾಮ
ಆಕಳಿಸಿ ಮೈಮುರಿದು ಏಳುತ್ತ ಕರದಲ್ಲಿ
ನೆಲಸಿದ ಲಕ್ಷ್ಮೀ ಸರಸ್ವತಿ ಗೌರಿಯ ಸ್ಮರಣೆಯಲಿ
ಸ್ನಾನದಿ ಗಂಗೆ ಯಮುನೆ ಗೋದಾವರಿ ನೆನೆದು
ಪಾನದಿ ಅಶನದಿ ಅನ್ನ ಬ್ರಹ್ಮನ ಮಣಿದು
ಮಧ್ಯಾಹ್ನ ಕಾಲದಲಿ ಅನ್ನಪೂರ್ಣೆಯ ಸ್ಮರಣೆ
ದಧ್ಯನ್ನ ಉಂಡಾಗ ಮುದ್ದು ಕೃಷ್ಣನ ನೆನೆ
ಸುಖ ದುಃಖದಲಿ ಬಿಡದೆ ಹರಿನಾಮ ಒಂದಿರಲಿ
ಬಿದ್ದಾಗ ಎದ್ದಾಗ ಮಾಧವನ ಧ್ಯಾನದಲಿ
ಮುಸ್ಸಂಜೆಯ ಜ್ಯೋತಿ ಜನಾರ್ದನನ ನೆನಪಲ್ಲಿ
ನಿಶೆಯಲ್ಲಿ ಪವಡಿಸಲು ರಾಮನಾಮ ಜಪವಿರಲಿ
ಅನುದಿನವು ಕೃಷ್ಣ ಪರಮಾತ್ಮನ ನೆನೆ ಮನವೆ
ಭವ ಬಂಧಗಳೆಲ್ಲ ಬಿಟ್ಟು ದೂರಕೆ ಸರಿವೆ
ಕಾಲ ಪಾಶಕೆ ಸಿಲುಕಿ ಯಮ ಕಿಂಕರರ ನಡುವೆ
ನಾರಾಯಣ ನಾಮ ಬರಲಿ ಈ ನಾಲಗೆಗೆ
Creative Writings
