Karada Vishwa

Article · August 26, 2026

ಮನದಾಳದ ಮೌನ

By ರೂಪಾ

- ರೂಪ.ಕೆ. ಎಂ

ಇದು ಸತ್ಯ ಕಥೆಯನ್ನಾಧಾರಿತವಾಗಿದ್ದು, ನಮ್ಮ ಸಮಾಜದ ಹಲವಾರು ಹೆಂಗಳೆಯರ ಮನದಾಳದಿ ಹುದುಗಿದ ನೋವನ್ನು ಹೊರತರುವ ಕವನ. ವಿಶೇಷವಾಗಿ ಸಮಾಜ ಇದನ್ನು ಸೂಕ್ಷ್ಮತೆಯಿಂದ ಜೀರ್ಣಿಸಿಕೊಂಡು, ಸಾಮಾಜಿಕ ವರ್ತನೆಯಲ್ಲಿ ಪರಿವರ್ತನೆ ಕೋರುವ ಒಂದು ಸಣ್ಣ ಪ್ರಯತ್ನ.

ಅಂದೆಂದೋ ಹೊರಟಿದ್ದೆ ಒಗ್ಗೂಡಲು

ಮನೆಯ ಮದುವೆಯ ಸಂಭ್ರಮದ ಕ್ಷಣದಿ,

ಮದುವೆಯ ಸಮಯದಿ ಒಬ್ಬರು ಉಪನ್ಯಾಸಕರಂತೆ,

ಹೊರಟರು ಕಾರ್ಯಕ್ರಮದ ನಿರೂಪಕನಾಗಿ

ಕೆಲವು ಆಟಗಳನ್ನಾಡಿಸಲು


ಕುಳಿತಿದ್ದರು ಹತ್ತಾರು ಮಹಿಳೆಯರು

ಸೌಭಾಗ್ಯವತಿಯರ ಸೌಭಾಗ್ಯವನ್ನು ಕಂಡು

ಕಳೆದುಕೊಂಡು ನೊಂದ ಜೀವಗಳು,

ಉಪನ್ಯಾಸಕರು ಬಂದರು ಹರ್ಷೋಲ್ಲಾಸಿತರಾಗಿ,

ಕೆಲವು ಆಟಗಳನ್ನಾಡಿಸಿದರು ಮಕ್ಕಳಿಗಾಗಿ

ಬಂದಿತು ಬಾರಿ ಕೆಲವಾಟಗಳು ಮಹಿಳೆಯರಿಗಾಗಿ,

ಕರೆದರು ಜೋರಾಗಿ " ಬನ್ನಿ ಮುತ್ತೈದೆಯರೆ ವೇದಿಕೆಯೆಡೆಗೆ",

ಆ ಕ್ಷಣದಿ ಮುದುಡಿತು ಹಲವು ಹೆಂಗಳೆಯರ ಮನವು

ಮಾನವನ ಕೆಳಮಟ್ಟದ ಚಿಂತನೆಯ ಕಂಡೆನಂದು,

ಅದೂ ಮಕ್ಕಳಾ ತಿದ್ದಿ ತೀಡುವ ಉಪನ್ಯಾಸಕನ ಕಡೆಯಿಂದ,

ಮನನೊಂದ ಹೆಂಗಳೆಯರ ಕಣ್ಣಿನಂಚಿನ ಹನಿಯು,

ಕಥೆಯ ಹೇಳಿತು ತಲೆಮಾರುಗಳಿಂದ ನಡೆದ ಮಾನಸಿಕ ಅತ್ಯಾಚಾರದ ಗಾಥೆಯ

ಸಂಭ್ರಮಿಸುವೆವು ನಾವು ವಿದ್ಯಾವಂತರೆಂದು,

ವಿಪರ್ಯಾಸವು ಆ ಸೂಕ್ಷ್ಮತೆ ತಿಳಿಸದಾ ಶಿಕ್ಷಣವು,

ಎಚ್ಚೆತುಕೋ ಮನವೇ ಮೂಢತೆಯ ತಳದಿಂದ.

Creative Writingsಅಭಿಮತ
ಮನದಾಳದ ಮೌನ