
Article · September 1, 2026
ಬಾಲ್ಯದಲೊಂದು ದಿನ ಅಪ್ಪನ ಜತೆಗೆ.......
By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ಸವಿ ಸವಿ ನೆನಪು ಅಪ್ಪನ ನೆನಪು.
ಅದೊಂದು ದಿನ ಸಂಜೆ ಸಾಧಾರಣ ಐದು ಘಂಟೆಯ ಸಮಯ.. ಆ ವೇಳೆಗೆ ಅಪ್ಪ ಒಬ್ಬ ವ್ಯಕ್ತಿಯ ಜೊತೆಗೆ ಮನೆಗೆ ಬಂದರು.
ಅವರಿಬ್ಬರ ಹೆಗಲ ಮೇಲೆಯೂ ಭಾರವಾದ ಮೂಟೆಗಳಿತ್ತು.
ಅದೇನೆಂದು ತಿಳಿಯುವ ಕುತೂಹಲ ಆಗ ನನಗೆ.
ಆದರೆ ಅದಕ್ಕೂ ಮೊದಲು ಅಪ್ಪನಿಗೂ, ಅವರ ಜೊತೆ ಬಂದ ವ್ಯಕ್ತಿಗೂ ಬಾಯಾರಿಕೆ ನೀಗಿಸಲು
ತಣ್ಣನೆಯ ನೀರು ಬೇಕಿತ್ತು. ಸುಡು ಬೇಸಿಗೆಯ ಕೊನೆಯ ದಿನಗಳು.
ಅಮ್ಮ ನೀರು ಬೆಲ್ಲ ತಂದು ಇಬ್ಬರಿಗೂ ನೀಡಿದರು. ಬಂದ ವ್ಯಕ್ತಿ ಬೆಲ್ಲ ತಿಂದು, ನೀರು ಗಟಗಟನೆ ಕುಡಿದರು. ಆಮೇಲೆ ಆಯಾಸ ನೀಗಿಸಲು ಕಂಬಕ್ಕೆ ಒರಗಿಕುಳಿತರು. ಉಸ್ಸಪ್ಪಾ ಎನ್ನುವ ಉದ್ಗಾರ ಬಾಯಲ್ಲಿ. ಅಪ್ಪನೂ ನೀರುಕುಡಿದು ಹಾಯಾಗಿ ಕಾಲು ಚಾಚಿ ಕುಳಿತರು.
ಮುಖದಲ್ಲಿ ಆಯಾಸ, ಹಣೆಯಲ್ಲಿ ನೆರಿಗೆಗಳು, ಕಣ್ಣಿನ ಸುತ್ತಲು ಕಪ್ಪಗಿನ ವೃತ್ತ. ಅಪ್ಪನ ಜವಾಬ್ದಾರಿ, ಹೊಣೆ ಎಷ್ಟೆಂದು ಸೂಚಿಸುತ್ತಿತ್ತು.
ಈಗ ಅಮ್ಮ ಕಾಫಿ, ಅವಲಕ್ಕಿ ತಂದು ಇಬ್ಬರಿಗೂ ಕೊಟ್ಟರು. ಜೊತೆಗೆ ತೋಟದಲ್ಲಿ ಬೆಳೆದ ಸಿಹಿಯಾದ
ಬಾಳೆಯ ಹಣ್ಣುಗಳು ಬೇರೆ. ಕಾಫಿ ಕುಡಿದು ಹಣ್ಣುಗಳನ್ನು ತಿನ್ನುತ್ತಾ ಆ ವ್ಯಕ್ತಿ ಸುತ್ತಲೂ ನೋಡುತ್ತಿದ್ದರು. ಇಬ್ಬರೂ ಸದ್ಯದ ವೃತ್ತಾಂತಗಳ ಬಗ್ಗೆ ಮಾತಾಡುತ್ತಾ, ಆಗಾಗ ನಗುತ್ತಾ ಹಣ್ಣುಗಳನ್ನೆಲ್ಲಾ ತಿಂದು ಡರ್ ಎಂದು ತೇಗಿದರು. ಆಮೇಲೆ ಆ ವ್ಯಕ್ತಿ ಹೊರಡಲು ಮೇಲೆದ್ದರು. ಆಗ ಅಪ್ಪ ಅವರಿಗೆ ಸ್ವಲ್ಪ ಹಣವನ್ನಿತ್ತರು. ಆ ವ್ಯಕ್ತಿ ಹಣ ಪಡೆದು ಅಪ್ಪನಿಗೆ ಕೈಮುಗಿದು ನಾನಿನ್ನು ಬರ್ತೇನೆ ಭಟ್ರೆ ಎಂದು ಹೊರಟರು. ಅಪ್ಪ ಸರಿ, ಹೋಗಿ ಬನ್ನಿ ಕೃಷ್ಣಪ್ಪ ಅವರೇ ಎಂದು ಕಳಿಸಿ ಕೊಟ್ಟರು.
ಹಾಗೆ ಬರಿಗೈಲಿ ಅಲ್ಲ. ಚೀಲದ ತುಂಬ ಹಣ್ಣುಗಳ ಜೊತೆಗೆ,. ಅವರ ಕಣ್ಣುಗಳು ತುಂಬಿದವು... ಆತ್ಮೀಯತೆಗಾಗಿ.
ಈಗ ನಿಧಾನವಾಗಿ ಮೇಲೆದ್ದ ಅಪ್ಪ ಕತ್ತಿ ಹಿಡಿದು ತೋಟದ ಕಡೆಗೆ ನಡೆದರು. ಬರುವಾಗ ಅಡಿಕೆಯ ಮರದ ಸಲಿಕೆಗಳನ್ನು ನಾಲ್ಕಾರು ತುಂಡುಗಳನ್ನು ಹೊತ್ತು ತಂದರು.
ಹಾಗೆಯೇ ಬಾಳೆಯ ಗಿಡದ ಒಣ ನಾರುಗಳನ್ನು ನೀರಿನಲ್ಲಿ ಮುಳುಗಿಸಿ, ಮೆತ್ತಗಾಗಿಸಿ ತಂದರು.
ಮತ್ತೆ ಸಲಿಕೆಗಳನ್ನು ಗೋಡೆಯ ಹತ್ತಿರ ಕಂಬದಂತೆ ನೆಲದಿಂದ ಮಾಡಿನೆಡೆಗೆ ನೇರವಾಗಿ, ಸಾಲಾಗಿ ಅಂತರವಾಗಿ ಕಟ್ಟಿದರು.
ನಾನು ಅಪ್ಪನ ಕೆಲಸಗಳನ್ನೆ ನೋಡಿದೆ. ಅಪ್ಪ ನಿಧಾನವಾಗಿ ಅವರು ತಂದಿದ್ದ ಮೂಟೆಗಳನ್ನು ಎಳೆದು ತಂದರು. ಬಿಡಿಸಿದರು.
ನೆಲದ ಮೇಲೆ ಅವರು ತಂದಿದ್ದ ಸೌತೆಕ್ಕಾಯಿ, ಕುಂಬಳ, ಚೀನಿಕ್ಕಾಯಿಗಳನ್ನು ಸುರಿದರು.
ನಾನು ಆಶ್ಚರ್ಯದಿಂದ ಕೇಳಿದೆ, ಅಪ್ಪಾ ಇಷ್ಟೊಂದು ಯಾಕಪ್ಪಾ? ಏನಾದರೂ ಹಬ್ಬವಿದೆಯೆ?
ಆಗ ಅಪ್ಪ ಹೇಳಿದ್ದು ಹೀಗೆ, 'ಮಗೂ, ಇದೆಲ್ಲ ಮಳೆಗಾಲಕ್ಕೆ ಉಪಯೋಗಿಸಲು . ಆಗ ತರಕಾರಿಗಳು ಸಿಗುವುದು, ಬೆಳೆಯುವುದು ಕಡಿಮೆ. ಇದ್ದಾಗ ಉಳಿಸಿಕ್ಕೊಳ್ಳಬೇಕು.' ಎನ್ನುತ್ತಾ ಒಂದೊಂದೆ ಸೌತೆಯನ್ನು ಕಂಬಗಳಿಗೆ ಕಟ್ಟಿದರು. ನೆಲಬಿಟ್ಟು ಎತ್ತರವಾಗಿ ಅಡ್ಡಕ್ಕೆ ಸಲಿಕೆಗಳಿಟ್ಟು ಕುಂಬಳ, ಚೀನಿಕ್ಕಾಯಿಗಳನ್ನಿಟ್ಟರು. ಕಡಿಮೆ ಜಾಗ ಬಳಸಿ ಎಲ್ಲವನ್ನು ಒಪ್ಪವಾಗಿ ಇರಿಸಿದರು.
ಅಡಿಕೆಯ ಗೊಂಚಲಿನಂತಿರುವ ನಾಲ್ಕು ದೊಡ್ಡ ನೀರುಳ್ಳಿಯ ಗೊಂಚಲುಗಳನ್ನು ಮಾಡಿಗೆ ಬಳ್ಳಿಯ ಮೂಲಕ ಜೋಡಿಸಿ ಕಟ್ಟಿದರು. ಉಳಿದ ಬಳ್ಳಿಗಳನ್ನು ಹೂವು ಕಟ್ಟುವುದಕ್ಕೆ ತೆಗೆದಿರಿಸಲಾಯಿತು.
ತಿಂಡಿ ಏನೂ ಇಲ್ಲದಾಗ ಅಪ್ಪ ಸೌತೆಯನ್ನ ಕೊಯ್ದು ಸಿಪ್ಪೆ ತೆಗೆದು ಬೆಲ್ಲದ ಜೊತೆ ತಿನ್ನಲು ಕೊಡುತ್ತಿದ್ದರು. ಅದರ ಜೊತೆಗೆ ತೆಂಗಿನ ತಿರುಳು, ಬೆಲ್ಲ ಸಹ ಸಿಗುತ್ತಿತ್ತು.ಅಪ್ಪನ ಪ್ರೀತಿಯ ಸವಿ ಸವಿ ನೆನಪುಗಳ ಜೊತೆಗೆ ಅವರು ಕಲಿಸಿದ ಪಾಠಗಳು, ಜೀವನಮೌಲ್ಯಗಳು ನೆನಪಾದಾಗ ಮನಸ್ಸು ಭಾರವಾಯ್ತು.
ಈಗ ಇದೆಲ್ಲ ಯಾರಿಗೂ ಬೇಕಿಲ್ಲ. ಪಿಜ್ಜಾ ತರಿಸಿಕೊಂಡು ತಿನ್ನುವವರೇ ಈಗೆಲ್ಲ . ಕೆಂಡದಲ್ಲಿ ಸುಟ್ಟ ನೀರುಳ್ಳಿ, ಹಲಸಿನ ಬೀಜಗಳು ಆಹಾ ಅದರ ರುಚಿಯೇ.! ಬಲ್ಲವನೇ ಬಲ್ಲ ಇದನೆಲ್ಲ. ಇದನ್ನು ತಿಂದು ಎಂದಿಗೂ ಆರೋಗ್ಯ ಕೆಟ್ಟದ್ದಿಲ್ಲ.
ಅಪ್ಪ ಅಮ್ಮ ಎನ್ನುವ ವ್ಯಕ್ತಿಗಳು, ಅವರ ನೆನಪು, ಪ್ರೀತಿ , ವಿಶಾಲ ಹೃದಯಕ್ಕೆ ಯಾರು ಸಾಟಿ? ಬೆಲೆ ಕಟ್ಟಲಾದೀತೆ? ಅಮ್ಮಾ ನಿನ್ನ ಮಡಿಲಿನಲ್ಲಿ ಹುಟ್ಟಿ ಬಂದ ಕ್ಷಣದಲಿ ಅಪ್ಪ ತೋರಿದಂಥ ಪ್ರೀತಿ,ಮಧುರ ನೆನಪು ಮನದಲಿ......

