Karada Vishwa

Article · August 20, 2026

ಶ್ರಾವಣದ ಪ್ರೀತಿ

By ಶಾರದಾ ಕಜೆಗದ್ದೆ, ಬಾಯಾರು

ಶಾರದಾ ಕಜಕದ್ದೆ

ಶ್ರಾವಣ ಮಾಸಕ್ಕೊಂದು ಸರಳ ಸುಂದರ ಪ್ರೇಮಕಥೆ

ಮೈ ಉಷಾರಿಲ್ಲವೆಂದು ವಾರದ ಕೊನೆಯ ರಜೆಯೊಂದಿಗೆ ಹೆಚ್ಚುವರಿ ಒಂದು ವಾರದ ರಜೆಯನ್ನು ತೆಗೆದುಕೊಂಡು ಒಂದು ಹತ್ತು ದಿನಗಳ ವಿಶ್ರಾಂತಿ ಪಡೆದು ಕೆಲಸಕ್ಕೆ ವಾಪಸ್ಸಾದರೆ ಯಾರೋ ನನಗಾಗಿ ಕಾಯುತ್ತಿದ್ದ ಅನುಭವ. ಹಾಗೇ ಸುಮ್ಮನೆ ನೋಡಿದೆ ಎಲ್ಲರೂ ಕೈಬೀಸಿ ಅವರವರ ಕೆಲಸದಲ್ಲಿ ನಿರತರಾಗಿದ್ದರು. ಸುಮ್ಮನೆ ಮುಂದೆ ಸಾಗಿ ನನ್ನ ಕ್ಯಾಬಿನ್ ನಲ್ಲಿ ಕುಳಿತಾಗ ಯಾರೋ ನನ್ನನ್ನು ಕಣ್ಣಲ್ಲೇ ಹಿಂಬಾಲಿಸಿದಂತಾಯಿತು. ಮೆಲ್ಲನೆ ಕುಳಿತು ನಿಧಾನಕ್ಕೆ ಗಮನಿಸಿದೆ. ಹೌದು, ಆ ಎರಡು ಬೆರಗು ಕಣ್ಣುಗಳಲ್ಲಿ ಏನೋ ಪುಳಕ, ತವಕ , ಕಾತರ ಕಂಡೆ. ನೋಡಿಯೂ ನೋಡದವರಂತೆ ಸುಮ್ಮನೆ ನನ್ನ ಕೆಲಸ ಶುರು ಮಾಡಿದೆ. ಆದರೆ ಯಾಕೋ ಹೃದಯ, ಮನಸ್ಸುಗಳಲ್ಲಿ ಒಂಥರಾ ಸುಪ್ತವಾದ ಆಪ್ತತೆ. ಪುನಃ ತಲೆ ಎತ್ತಿ ನೋಡಿದೆ. ನನ್ನ ಬರವಿಗಾಗಿ ಆಸಕ್ತಿಯಿಂದ ಕಾಯುತ್ತಿದ್ದರು ಎಂದು ಆ ಕಣ್ಣ ಮಿಂಚು ನೋಡಿಯೇ ತಿಳಿಯಿತು. ನನ್ನ ಕಣ್ಣುಗಳನ್ನು ನೋಡುತ್ತಲೇ ಅವಳ ಹೃದಯ ಹಗುರಾದುದು ನನ್ನ ಮನಸ್ಸಿಗೆ ಭಾಸವಾಯಿತು.

ಆಕೆ ಹೊಸಬಳು. ಈ ಆಫೀಸ್ ಸೇರಿ ಒಂದು ವರುಷ.ನಾನು ಇದೇ ಕಂಪನಿಯಲ್ಲಿ ಮೂರು ವರುಷಗಳ ಅನುಭವಸ್ಥ. ಹಾಗಾಗಿ ಆಕೆ ನನ್ನ ಟ್ರೈನಿಯಾಗಿ ಪರಿಚಯ. ಬೇಗನೆ ಕೆಲಸವನ್ನೂ ಕಲಿತಳು. ಜೊತೆಗೇ ನನ್ನ ಮೊದಲ ಒಬ್ಬೊಳ್ಳೆ ಗೆಳತಿಯಾದಳು. ಆಕೆಯನ್ನ ನಾನು ಗಮನಿಸಿದಂತೆ ಬೇರೆ ಉದ್ಯೋಗಿಗಳ ಜೊತೆ ಬೆರೆಯುತ್ತಿದ್ದುದೇ ಬಹಳ ಕಮ್ಮಿ. ನನ್ನೊಂದಿಗೂ ಅಷ್ಟಕ್ಕಷ್ಟೇ ಇದ್ದವಳು ಈಗ ಆರು ತಿಂಗಳಿನಿಂದ ಕೊಂಚ ಕ್ಲೋಸ್ ಆಗಿ ಮಾತನಾಡುವಳು. ಯಾಕೆಂದರೆ ಆಕೆಯ ಮನೆಯ ಪಕ್ಕದ ರೂಮಿನಲ್ಲಿ ನನ್ನ ವಾಸ. ನನ್ನ ಸರಳ ಜೀವನಶೈಲಿಯನ್ನು ಸಂಪೂರ್ಣವಾಗಿ ಗಮನಿಸಿ ಅಷ್ಟೋ ಇಷ್ಟೋ ಮಾತನಾಡಲು ಶುರು ಮಾಡಿದಂತೆ ಅನಿಸುತಿತ್ತು.

ಸಂಜೆ ನನ್ನ ಕೆಲಸ ಮುಗಿಸಿ ಹೊರಡುತ್ತಿದ್ದಂತೆ ಅವಳೂ ನನ್ನ ಜೊತೆಯಲ್ಲಿಯೇ ಹೊರಟಳು. ನನ್ನ ಜೊತೆ ಮಾತನಾಡಲು ಇದೆ ಎಂದು ಕಣ್ಣಲಿ ಕಣ್ಣಿಟ್ಟು ಮೆಲ್ಲನೆ ಹೇಳಿದಳು. ನಾವಿಬ್ಬರು ನಡೆದುಕೊಂಡು ಬಂದು ಅನತಿದೂರದಲ್ಲಿರುವ ಒಂದು ಕೆಫೆಯ ಪ್ರೈವೇಟ್ ಕ್ಯಾಬಿನ್ ನಲ್ಲಿ ಕುಳಿತು ಎರಡು ಕಾಫಿ ಹೇಳಿದೆ. ಇಬ್ಬರೂ ಸ್ವಲ್ಪ ಹೊತ್ತು ಏನು ಮಾತಾಡಬೇಕೆಂದು ತಿಳಿಯದೆ ಮುಖ ಮುಖ ನೋಡಿ ತಿಳಿಯಲಾಗದ ಭಾವದಲ್ಲಿ ಸುಮ್ಮನಿದ್ದೆವು. ಮತ್ತೆ ಆಕೆಯೇ ನಿಮ್ಮನ್ನು ತುಂಬ ಮಿಸ್ ಮಾಡಿಕೊಂಡೆ ಎಂದು ಮೆಲ್ಲನೆ ಹೇಳಿದಳು. ಹಾಗೇ ಸೂಕ್ಷ್ಮವಾಗಿ ಆಕೆಯ ಕಣ್ಣುಗಳಲ್ಲಿ ಇಣುಕಿದಾಗ ಅವ್ಯಕ್ತ ಮಿಂಚೊಂದು ಕಂಡಿತು. ನನ್ನ ಮೇಲೆ ಸಣ್ಣದೊಂದು ಒಲವು ಕಂಡಂತಾಗಿ ನನ್ನ ಹೃದಯ ಆ ಮಿಂಚಿನ ಬೆಳಕಿಗೆ ಪ್ರತಿಫಲಿಸಿದ ಅನುಭವ. ಇಬ್ಬರಿಗೂ ಭಾವ ವಿನಿಮಯವಾದುದು ಅರಿವಿಗೆ ಬಂದಾಗ ಆರ್ಡರ್ ಮಾಡಿದ ಬಿಸಿ ಕಾಫಿ ಸಿಕ್ಕಿ ಮೆಲ್ಲನೆ ಕುಡಿದು ಅಲ್ಲಿಂದ ಹೊರಬಂದೆವು. ಇಬ್ಬರೂ ಜೊತೆಗೆ ಬಸ್ ಹತ್ತಿಕೊಂಡು ಮನೆಗೆ ಬಂದೆವು. ಅಂದುಕೊಂಡತಹ ಯಾವ ಮಾತನ್ನೂ ಆಡದೇ ಇಬ್ಬರ ಭಾವ ವಿನಿಮಯ ಆಗಿಯಾಗಿತ್ತು.

ರಾತ್ರಿಯ ಊಟ ಮುಗಿಸಿ ಮೊಬೈಲ್ ನೋಡಿದರೆ ಒಂದು ಮೆಸೇಜ್ ತಿಳಿಯದ ನಂಬರ್ ನಿಂದ. ಓದುತ್ತಿದ್ದಂತೆ ತಿಳಿಯಿತು ಇದು ಆಕೆಯದ್ದೇ ಎಂದು. ಅವಳು ಬರೆದಿದ್ದಳು ನಿಮ್ಮನ್ನು ಎರಡು ತಿಂಗಳಿನಿಂದ ಗಮನಿಸುತ್ತಿದ್ದೇನೆ ಮನೆಯಲ್ಲಿ ಮತ್ತು ಆಫೀಸ್ ನಲ್ಲಿ. ನಿಮ್ಮ ವ್ಯಕ್ತಿತ್ವ, ಜೀವನಶೈಲಿ, ಮಾತುಗಾರಿಕೆ, ರೀತಿನೀತಿ ಎಲ್ಲವೂ ಇತಿಮಿತಿ, ಎಲ್ಲಿಯೂ ಅತಿಯಿಲ್ಲಾ. ಯಾಕೆ ಹಾಗೆ ಗಮನಿಸಿದೇನೋ ಅರಿಯೆನು. ಈಗ ನನಗೆ ತಿಳಿಯದೆಯೇ ನಿಮ್ಮ ಮೇಲೆ ಒಲವಾಗಿದೆ ಎಂಬುದು ನಿಮಗೂ ಇಂದು ತಿಳಿದಾಯಿತು. ಹಾಗಾಗಿ ನಿಮಗೂ ಇದೇ ಭಾವವಿದ್ದಲ್ಲಿ ಒಂದು ದಿನ ಭೇಟಿಯಾಗಿ ಮಾತಾಡಬಹುದೇ? ಎಂದು ಕೇಳಿದ್ದಳು. ಏನು ಉತ್ತರಿಸಲು ತಿಳಿಯದೇ ಹಾಗೇ ನನ್ನೊಳಗೆ ನಾನೇ ಯೋಚಿಸುತ್ತಾ ಆರಾಮಕುರ್ಚಿಗೆ ಒರಗಿ ಅದೆಷ್ಟೋ ಹೊತ್ತು ಕುಳಿತಿದ್ದೆ. ಏನಾಗುತ್ತಿದೆ ಈ ನನ್ನ ಮನಸಿನಲ್ಲಿ?! ಏಕೆ ಈ ಹೃದಯ ತಲ್ಲಣಿಸುತ್ತಿದೆ?! ಆಂತರ್ಯದಲ್ಲಿ ಏನಿದು ಭಾವೋದ್ವೇಗ?!! ಇಷ್ಟು ವರ್ಷಗಳಲ್ಲಿ ಒಂದು ಕ್ಷಣವೂ ಇಲ್ಲದ ಉನ್ಮಾದ ಏನೋ ಹೇಳುತ್ತಿದೆಯಲ್ಲ??!!

ಹಾಗೇ ಎದ್ದು ಫೋನ್ ಮೇಜಿನ ಮೇಲಿಟ್ಟು ಹಾಸಿಗೆ ಮೇಲೆ ಮಲಗಿಕೊಂಡೆ. ಇದೇ ಗುಂಗಿನಲ್ಲಿ ಅದೆಷ್ಟು ಹೊತ್ತಿಗೆ ನಿದ್ದೆ ಹತ್ತಿತೋ ತಿಳಿಯಲೇ ಇಲ್ಲ. ಬೆಳೆಗೆದ್ದಾಗ ಮಾತ್ರ ತುಸು ಹೆಚ್ಚೇ ತಡವಾಗಿತ್ತು. ಹಾಗಾಗಿ ಬೇಗಬೇಗನೆ ಹೊರಟು ಹೊರಗೆ ಬಂದು ನೋಡಿದರೆ ಆಕೆ. ಮನಸ್ಸಲ್ಲೇನೋ ಉಲ್ಲಾಸ, ಪುಳಕ. ಆಕೆ ನನ್ನನ್ನು ನೋಡಿದ ತಕ್ಷಣ ಬಳಿ ಬಂದು ನಿಂತು ಕಣ್ಣಲ್ಲೇ ಏನುತ್ತರ ಎಂದು ಕೇಳಿದಂತಾಯಿತು. ಸಂಜೆ ತುಂಬಾ ವಿಚಾರವಿನಿಮಯವಿದೆ, ಹಾಗಾಗಿ ನನ್ನ ಮನೆಗೇ ಬರಲು ಹೇಳಿದೆ. ಒಂದು ಕ್ಷಣವೂ ಯೋಚಿಸದೆ ಸರಿ ಎಂದು ಒಪ್ಪಿಗೆ ಇತ್ತಳು.

ಈ ದಿನ ಬಹುಬೇಗ ಸಂಜೆಯಾದಂತೆ ಅನಿಸಿತು. ಎದ್ದು ಹೊರಡಲನುವಾದಾಗ ಮೊದಲ ಬಾರಿಗೆ ನನ್ನ ಕಣ್ಣುಗಳು ಅವಳೆಲ್ಲಿ ಎಂದು ಹುಡುಕ ಹೊರಟವು. ನನ್ನ ಕಣ್ಣೋಟ ಅವಳ ಸೋಕಿದಾಕ್ಷಣದಲ್ಲಿ ಹೋಗೋಣ ಎಂದು ಕಣ್ಸನ್ನೆ ಮಾಡಿದಳು. ಇಬ್ಬರೂ ಎಂದಿನಂತೆ ಆಫೀಸ್ ಕ್ಯಾಬ್ ನಲ್ಲೇ ಮನೆಗೆ ಬಂದೆವು. ಈಗ ತನ್ನ ಮನೆಗೆ ಹೋಗಿ ಒಂದು ಗಂಟೆ ಕಳೆದು ನನ್ನ ಮನೆಗೆ ಬರುವುದಾಗಿ ಹೇಳಿ ಹೋದಳು.

ನಾನೂ ಮನೆಗೆ ಬಂದು ಫ್ರೆಶ್ ಅಪ್ ಆಗಿ ಏನು ಹೇಳಲಿ, ಹೇಗೆ ಹೇಳಲಿ ಎಂದು ಯೋಚಿಸುತ್ತಾ ತಿನ್ನಲು ಕುಡಿಯಲು ತಯಾರಿ ಮಾಡಿ ಅವಳ ಬರವಿಗಾಗಿ ಕಾಯುತ್ತಿದ್ದೆ. ಹೇಳಿದಂತೆ ಸಮಯಕ್ಕೆ ಸರಿಯಾಗಿ ಬಂದು ನನ್ನೆದುರಿನಲ್ಲೇ ಕುಳಿತಳು. ಏನಾದರೂ ತಿಂದು ಕುಡಿದು ಮಾತು ಶುರು ಮಾಡೋಣ ಎಂದು ಹೇಳಿದೆ. ಸರಿ ಎಂದು ನನ್ನ ಜೊತೆಗೆ ಅಡುಗೆ ಕೋಣೆಗೆ ಬಂದಳು. ಎಲ್ಲವೂ ತಯಾರಿದ್ದ ಕಾರಣ ಖುಷಿಯಲ್ಲೇ ಕುಳಿತು ಉಪಾಹಾರ ಸೇವಿಸುತ್ತಾ ಮಾತನಾಡಲು ಶುರುವಿಟ್ಟೆವು.

ಮೊದಲಿಗೆ ನಾನು, ನನ್ನ ಹೆತ್ತವರು, ಮನೆ ಮತ್ತು ನನ್ನ ಮುಂದಿನ ನಿರ್ಧಾರದ ಬಗ್ಗೆ ತಿಳಿಸಿದೆ. ಮನೆಗೆ ಹತ್ತಿರದ ಪೇಟೆಯಲ್ಲಿ ಇರುವ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಉದ್ಯೋಗ ಸಿಕ್ಕಿರುವ ಕಾರಣ ಈ ಉದ್ಯೋಗವನ್ನು ಬಿಟ್ಟು ಊರಿಗೆ ತೆರಳಿ ಅಪ್ಪ ಅಮ್ಮನ ಜೊತೆ ಬಾಳುವುದಾಗಿ ನಿರ್ಧರಿಸಿರುವ ವಿಷಯವನ್ನು ಹೇಳಿದೆ. ಸುಮ್ಮನೆ ಎಲ್ಲವನ್ನೂ ಕೇಳಿಸಿಕೊಂಡಳು.

ಆಕೆ ಅವಳ ಬಗ್ಗೆ ನಿಧಾನಕ್ಕೆ ಹೇಳಲು ಹೊರಟಳು. ಅವಳ ಅಪ್ಪ ಅಮ್ಮ ಇವಳು PUC ಓದುತ್ತಿರುವಾಗಲೇ ಡಿವೋರ್ಸ್ ಆಗಿ ಇಬ್ಬರೂ ಬೇರೆ ವಿವಾಹವಾಗಿದ್ದರೂ ಆಕೆಯ ಓದಿಗೆ ಯಾವ ತೊಂದರೆಯನ್ನು ಮಾಡಲಿಲ್ಲ. ಆಕೆ ತನ್ನ ಮುಂದಿನ ಶಿಕ್ಷಣವನ್ನು ಮುಂದುವರಿಸಿ ಉದ್ಯೋಗ ದೊರೆತು ಸಂಪಾದಿಸಲು ತೊಡಗಿದ ನಂತರ ಇಬ್ಬರಿಗೂ ಯಾವುದೇ ಧನಸಹಾಯದ ಅಗತ್ಯವಿಲ್ಲ ಎಂದು ತಿಳಿಸಿದರೂ, ಅವಳ ಹೆತ್ತವರು ಆಕೆಯ ಹೆಸರಲ್ಲಿ ದೊಡ್ಡ ಮೊತ್ತದ ಡೆಪಾಸಿಟ್ ಇಟ್ಟು ಆಕೆಯ ಜೀವನಕ್ಕೆ ಭದ್ರತೆ ಒದಗಿಸಿರುತ್ತಾರೆ ಎಂದು ಹೆಮ್ಮೆಯಲ್ಲಿ ಹೇಳಿದಳು. ಇನ್ನೆಂದೂ ಅವರು ತನ್ನ ಜೀವನದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ವಿಚಾರವನ್ನು ತಿಳಿಸಿ, ತನ್ನ ಜೀವನ ಕೇವಲ ತನ್ನೊಬ್ಬಳ ನಿರ್ಧಾರ ಎಂದು ಏನೂ ಆಗಿಲ್ಲ ಎಂಬಂತೆ ಹೇಳಿ ಬಿಟ್ಟಳು. ನನಗೆ ಮಾತ್ರ ಇದನ್ನರಗಿಸಲು ಒಂದಷ್ಟು ದಿವಸಗಳೇ ಬೇಕಾಗಬಹುದೇನೋ.

ಮಾತನಾಡುತ್ತಾ ರಾತ್ರಿಯ ಅಡುಗೆಯನ್ನು ಇಬ್ಬರೂ ಒಟ್ಟಿಗೆ ಸೇರಿ ಮಾಡಿದೆವು. ಇಬ್ಬರಿಗೂ ಕೆಲಕ್ಷಣ ಮೌನದ ಆವಶ್ಯಕತೆ ಇದ್ದಂತೆ ಭಾಸವಾಗಿ ಆಕೆ ಸುಮ್ಮನೆದ್ದು ಹೊರಗೆ ಹೋಗಿ ಕುಳಿತುಕೊಂಡಳು. ನನ್ನ ಮೊಬೈಲ್ ರಿಂಗ್ ಕೇಳಿ ನೋಡಿದರೆ ಅಮ್ಮ. ಅವಳಲ್ಲಿ ಹೇಳಿ ನಾನು ಅಡುಗೆ ಕೋಣೆಯಲ್ಲಿ ಮಾತನಾಡುತ್ತಾ ಕುಳಿತೆ. ಈ ಯಾವ ವಿಚಾರವನ್ನೂ ಅಮ್ಮನಲ್ಲಿ ಹೇಳಲು ಮನಸಾಗಲಿಲ್ಲ. ಹಾಗೇ ಮಾತು ಮುಗಿಸಿ ಹೊರಗೆ ಬಂದು ನೋಡಿದರೆ ಈಕೆ ಸುಮ್ಮನೆ ಕಣ್ಣು ಮುಚ್ಚಿ ಕುಳಿತಿದ್ದಳು. ಎಂಥಾ ಶಾಂತ ಪ್ರಬುದ್ಧ ಮುಖಚರ್ಯೆ. ಅವಳನ್ನೇ ಗಮನಿಸಿದೆ. ಏನೋ ನನಗರಿವಾಗದಂಥ ಸೆಳೆತವಿದೆ ಅನಿಸಿತು. ಅಲ್ಲಿದ್ದ ಇನ್ನೊಂದು ಕುರ್ಚಿಯಲ್ಲಿ ಮೆಲ್ಲಗೆ ಹೋಗಿ ಕುಳಿತು ಮೊಬೈಲ್ ನೋಡತೊಡಗಿದೆ. ಸ್ವಲ್ಪ ಹೊತ್ತು ಕಳೆದು ಸಮಯ ಎಷ್ಟೆಂದು ನೋಡಿದರೆ ಗಂಟೆ ಎಂಟು. ಮೆಲ್ಲಗೆ ಅವಳನ್ನು ಕರೆದು ಊಟ ಮಾಡೋಣವೆಂದೆ. ಇಬ್ಬರೂ ಏನೊಂದು ಮಾತನಾಡದೆ ಊಟ ಮಾಡಿ ಆಕೆ ಅವಳ ಮನೆಗೆ ಹೋದಳು. ನಾನು ಟೆರೇಸ್ ಮೇಲೆ ಹೋಗಿ ಸ್ವಲ್ಪ ಹೊತ್ತು ನಡೆದಾಡಿ ಬಂದು ಮಲಗಿದೆ.

ಸುಮಾರು ದಿನಗಳು ಹೀಗೇ ಸಾಗಿದವು. ಒಂದು ದಿನ ಅಮ್ಮ ಕಾಲ್ ಮಾಡಿ ಎರಡು ದಿನಗಳ ಬಿಡುವು ಮಾಡಿಕೊಂಡೇ ಊರಿಗೆ ಬರಲು ಹೇಳಿದಳು. ಹಾಗಾಗಿ ಶುಕ್ರವಾರ ಸಂಜೆಗೆ ಹೊರಟೆ. ಮನೆ ತಲುಪಿ ತುಸು ವಿಶ್ರಮಿಸಿದ ನಂತರ ಹೇಳಿದಳು. ವಿವಾಹಕ್ಕೆ ಒಂದು ಸಂಬಂಧ ಬಂದಿರುವುದಾಗಿ ಆದಿತ್ಯವಾರ ಬೆಳಗ್ಗೆ ಹೋಗಿ ನೋಡಿ ಬರೋಣ ಎಂದರು ಅಪ್ಪ. ಯಾಕೋ ಮನಸಲ್ಲಿ ಕಸಿವಿಸಿ. ನನ್ನ ಆಫೀಸ್ ಗೆಳತಿಯ ನೆನಪು ಆಗಲು ಶುರುವಾಯಿತು. ಏನಾದರಾಗಲಿ ಹೋಗಿ ನೋಡಿ ಬರೋಣ ಎಂದೊಪ್ಪಿಗೆಯಿತ್ತೆ.

ಮರುದಿನ ನಾವು ಮೂವರು ಮತ್ತು ಪಕ್ಕದ ಮನೆಯ ದಂಪತಿಗಳನ್ನು ಕರೆದುಕೊಂಡು ಹೆಣ್ಣು ನೋಡುವ ಕ್ರಮಕ್ಕೆ ಹೋಗಿಬಂದೆವು. ನಾನು ಪೇಟೆ ಬಿಟ್ಟು ಊರಲ್ಲಿರುವುದಾಗಿ ಹೇಳಿದ ಕ್ಷಣವೇ ಹುಡುಗಿಯ ಮನಸಲ್ಲಿ ಸಣ್ಣ ಅಸಮಾಧಾನತೆ ಕಂಡಿತು. ಮನೆಗೆ ಬಂದು ಸ್ವಲ್ಪ ವಿರಮಿಸಿ ನಾನು ಹೊರಟೆ. ಅಮ್ಮ ಎರಡು ದಿನಗಳೊಳಗೆ ವಿಷಯ ತಿಳಿಸುವುದಾಗಿ ಹೇಳಿದಳು. ಮತ್ತೆರಡು ದಿನ ಕಳೆದು ಅಮ್ಮ ಕಾಲ್ ಮಾಡಿ ಹೇಳಿದಳು ಜಾತಕ ಸೇರದ ಕಾರಣ ಈ ಸಂಬಂಧ ಬೇಡವೆಂದು. ಸರಿ ಎಂದು ಸುಮ್ಮನಾದೆ.

ದಿನಗಳು ಉರುಳುತ್ತಲೇ ಇದ್ದುವು. ಒಂದು ಸಂಜೆ ಆಫೀಸ್ ನಿಂದ ಹೊರಡುತ್ತಲೇ ಇವಳು ಕೇಳಿದಳು ಹಬ್ಬವಿರುವ ಕಾರಣ ನಾಲ್ಕು ದಿನಗಳ ರಜೆ ಹಾಗಾಗಿ ನಾನೂ ನಿಮ್ಮ ಜೊತೆ ನಿಮ್ಮ ಮನೆಗೆ ಬರಬಹುದೇ ಎಂದು. ಬೇಡ ಎಂದು ಹೇಳಲು ಸಾಧ್ಯವಾಗಲೇ ಇಲ್ಲ. ಏಕೆಂದರೆ ಅವ್ಯಕ್ತವಾಗಿ ಮನಸ್ಸು ಖುಷಿಯಲ್ಲಿ ಕುಣಿಯುತಿತ್ತು. ಸರಿ ಎಂದು ಇಬ್ಬರಿಗೂ ಮರುದಿನ ರಾತ್ರಿಯ ಬಸ್ಸಿಗೆ ಟಿಕೆಟ್ ಕಾದಿರಿಸಿದೆ. ಮತ್ತೆ ಅಮ್ಮನಿಗೂ ಕಾಲ್ ಮಾಡಿ ನಾವಿಬ್ಬರು ಬರುವ ವಿಚಾರವನ್ನು ತಿಳಿಸಿದೆ.

ಮರುದಿನ ನಾವಿಬ್ಬರೂ ಖುಷಿಖುಷಿಯಾಗಿ ನನ್ನೂರಿಗೆ ಹೊರಟೆವು. ಈಕೆಗೇನೋ ಕಾತರ, ಹಂಬಲ, ಉತ್ಸಾಹ . ಎಲ್ಲವನ್ನೂ ಅವಳ ಕಣ್ಣುಗಳೇ ಹೇಳುತ್ತಿದ್ದವು. ಬಸ್ ಹತ್ತಿ ನನ್ನ ಪಕ್ಕದಲ್ಲೇ ಕುಳಿತು ನನ್ನ ಬಲ ತೋಳನ್ನು ಆಕೆಯ ಎಡತೋಳಿನಿಂದ ಬಳಸಿ ಹಿಡಿದು ಹಿಂಜರಿಕೆ ಇಲ್ಲದೆ ಕುಳಿತುಕೊಂಡಳು. ನಾನೂ ಯಾಕೋ ಏನೋ ನಕಾರ ಹೇಳಲಿಲ್ಲ, ಏನೊಂದು ಕೇಳಲಿಲ್ಲ. ಪ್ರತೀ ಸಲದಂತೆ ಮುಂಜಾನೆಯೇ ಮನೆಗೆ ತಲುಪಿದೆವು. ಅಪ್ಪ ಅಮ್ಮ ಇಬ್ಬರೂ ಕಾತರದಿಂದ ನಮಗಾಗಿ ಕಾಯುತ್ತಿದ್ದರು. ಕೈಕಾಲು ಮುಖ ತೊಳೆದು ಇಬ್ಬರೂ ಒಳನಡೆಡೆವು. ಅಮ್ಮ ಬಿಸಿಬಿಸಿ ಚಾ ತಂದಿಟ್ಟಳು. ಇಬ್ಬರೂ ಕುಡಿಯಲು ಶುರುಮಾಡುತ್ತಾ ಎಲ್ಲರೂ ಮಾತಿಗಿಳಿದೆವು.

ಸ್ನಾನಾದಿಗಳನ್ನು ಮುಗಿಸಿ ತಿಂಡಿ ತಿಂದು ಎಲ್ಲರೂ ಮಾತನಾಡುತ್ತಾ ಕುಳಿತುಕೊಂಡೆವು. ಸ್ವಲ್ಪ ಹೊತ್ತು ಕಳೆದು ಅಮ್ಮ ಒಳಗೆ ಕೆಲಸ ಮಾಡುತ್ತಿರುವುದನ್ನು ಕಂಡು ಈಕೆ ಮೆಲ್ಲನೆದ್ದು ಅಮ್ಮನ ಸಹಾಯಕ್ಕೆ ಹೋದಳು. ನಾನು ನಿಧಾನಕ್ಕೆ ಈಕೆಯ ವಿಚಾರವನ್ನೆಲ್ಲ ಅಪ್ಪನಲ್ಲಿ ಹೇಳಿ ನನ್ನ ಮನದ ಮಾತನ್ನು ಹೇಳಿದೆ. ಸಂಜೆ ಹೊತ್ತಲ್ಲಿ ಎಲ್ಲವನ್ನೂ ಕೂಲಂಕುಶವಾಗಿ ಮಾತಾಡಿ ನಿರ್ಧರಿಸೋಣ ಎಂದು ಹೇಳಿದರು. ಈಕೆ ಮತ್ತು ಅಮ್ಮ ಅಡುಗೆ ಕೆಲಸ ಮುಗಿಸಿ ಖುಷಿಯಲ್ಲಿ ಮಾತನಾಡುತ್ತಾ ನಮ್ಮ ಜೊತೆಗೂಡಿದರು.

ಸಂಜೆಯಾಗುತ್ತಲೇ ನಾವು ನಾಲ್ಕೂ ಜನ ಹೊರಗೆ ಜಗಲಿಯಲ್ಲಿ ಕುಳಿತು ಮಾತನಾಡುತ್ತ ಅಪ್ಪ ನಮ್ಮ ಮನೆಯ ಆಚಾರ, ಸಂಪ್ರದಾಯ, ಜೀವನಶೈಲಿ, ರೀತಿನೀತಿ ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಹೇಳುತ್ತಾ, ಅಮ್ಮ ಈಕೆಯ ಮನೆಯವರ ಬಗ್ಗೆ ಕೇಳಿದಾಗ ಎಲ್ಲವನ್ನೂ ಹೇಳಿ ನನ್ನ ಮೇಲೆ ಒಲವಿರುವುದಾಗಿ ಹೇಳಿದಳು. ಅಮ್ಮ ನೇರವಾಗಿ ನನ್ನಲ್ಲೇ ನನ್ನ ಅಭಿಪ್ರಾಯವೇನೆಂದು ಕೇಳಿದಳು. ನನ್ನ ಮನಸ್ಸಿಗೂ ಈಕೆ ಹತ್ತಿರದವಳಾಗಿದ್ದಾಳೆ ಎಂದುತ್ತರಿಸಿದೆ. ಇಬ್ಬರಿಗೂ ಬಾಳಸಂಗಾತಿಗಳಾಗಲು ಮನಸಾರೆ ಒಪ್ಪಿಗೆಯಾದರೆ ಆದಷ್ಟು ಬೇಗನೆ ವಿವಾಹವೇರ್ಪಡಿಸಲು ತಮ್ಮ ಅಭ್ಯಂತರವಿಲ್ಲ ಎಂದರು. ಈಕೆಯಂತೂ ಖುಷಿಯಿಂದ ಅಮ್ಮನನ್ನು ಮೆಲ್ಲನೆ ಅಪ್ಪಿಕೊಂಡಳು. ಅಪ್ಪ ನನ್ನ ಕೈ ಹಿಡಿದು ಬೆನ್ನು ತಟ್ಟಿದರು. ಅಪ್ಪ ಅಮ್ಮನ ಕಣ್ಣಿನಿಂದ ಇಳಿದ ಆ ಆನಂದಭಾಷ್ಪಗಳು ನಮ್ಮ ಮೇಲಿನ ಪ್ರೀತಿ, ವಾತ್ಸಲ್ಯ, ನಂಬಿಕೆಗಳಿಗೆ ಸಾಕ್ಷಿಯಾಗಿದ್ದವು. ಏನೋ ಒಂದು ಅವಿಸ್ಮರಣೀಯ ಆನಂದದಲ್ಲಿ ಅಮ್ಮ ತುಳಸೀ ದೀಪವಿಡಲು ಹೋದರೆ ಅಪ್ಪ ಸಂಧ್ಯಾವಂದನೆಗೆ ತೆರಳಿದರು.

ಈಕೆಯಂತೂ ತುಂಬಾ ಖುಷಿಯಲ್ಲಿರುವುದನ್ನು ಅವಳ ನೋಟವೇ ಹೇಳುತ್ತಿತ್ತು. ಯಾವೊಂದು ನಾಟಕೀಯತೆ ಇಲ್ಲದ ಅತ್ಯಂತ ಸರಳ ಸುಂದರ ಜೀವನ ರೀತಿಗೆ ಮನಸೋತಿದ್ದಳು. ಎಷ್ಟೊಂದು ನಂಬಿಕೆ, ನೆಮ್ಮದಿ ಅವಳ ಆಂತರ್ಯದಲ್ಲಿ ಹೆಜ್ಜೆ ಇಟ್ಟಾಗಿತ್ತು ಅನಿಸುತ್ತದೆ. ಎಂದೆಂದೂ ಅದನ್ನು ಉಳಿಸಿ ಕಾಪಿಡುವ ಆತ್ಮಸ್ಥೈರ್ಯ ನನ್ನಲ್ಲಿರಲಿ ಎಂದುಕೊಳ್ಳುತ್ತಾ ಸುಮ್ಮನೆ ನೆಲದಲ್ಲೇ ಕಾಲುನೀಡಿ ಕಣ್ಣು ಮುಚ್ಚಿ ಕುಳಿತುಕೊಂಡೆ. ಒಬ್ಬೊಬ್ಬರಾಗಿ ಸ್ನಾನಾದಿಗಳನ್ನು ಮುಗಿಸಿ ದೇವರಿಗೆ ವಂದಿಸಿ ಸುಮ್ಮನೆ ಕುಳಿತುಕೊಂಡೆವು. ರಾತ್ರಿಯಾಗುತ್ತಿದ್ದಂತೆ ಊಟಮಾಡಿ ಮಲಗಿಕೊಂಡೆವು.

ಒಂಥರಾ ನಿಶ್ಚಿಂತೆಯ ಸುಖನಿದ್ರೆ ಬಂದಿತ್ತು. ನಾನು ಎದ್ದಾಗ ತಡವಾದರೂ ಮತ್ತೆಲ್ಲರೂ ಬೇಗನೆದ್ದು ಅವರವರ ಕೆಲಸಗಳಲ್ಲಿ ತೊಡಗಿದ್ದರು. ನಾನು ಬಂದು ಹೊರಗೆ ಕುಳಿತುಕೊಂಡಾಗ ಈಕೆ ಬಂದು ಚಾ ಕೊಟ್ಟು ನನ್ನ ಪಕ್ಕದಲ್ಲೇ ಕುಳಿತು ಬಿಸಿಬಿಸಿ ಕಾಫಿ ಹೀರಲು ಶುರುಮಾಡಿದಳು. ಏನಿದು ನಮ್ಮ ಮನೆಯಲ್ಲಿ ಮೊದಲ ಸಲ ಕಾಫಿಯ ಘಮ. ಆಕೆ ಖುಷಿಯಿಂದ ಗುಟುಕು ಗುಟುಕಾಗಿ ಕುಡಿಯುವುದನ್ನು ಕಂಡು ನಾನೂ ಚಾ ಹೀರಲು ಶುರುವಿಟ್ಟೆ. ಅಮ್ಮ ನೋಡಿ ಕಣ್ಸನ್ನೆಯಲ್ಲೇ ಸಂತಸ ಪಟ್ಟು ತನ್ನ ಕೆಲಸದಲ್ಲಿ ನಿರತವಾದಳು.

ನನಗೆ ಈಕೆಯ ಮನಸ್ಥಿತಿ, ನಿರ್ಧಾರಗಳು, ಆಲೋಚನೆಗಳು ಎಲ್ಲವೂ ಆಶ್ಚರ್ಯ ಹಾಗೂ ಹೆಮ್ಮೆಯ ಸಂಗತಿಗಳು. ಯಾಕೆಂದರೆ ಈ ಆಡಂಬರದ ಆಧುನಿಕ ಯುಗದಲ್ಲಿ ಅದೂ ಸಂಪೂರ್ಣ ಸ್ವತಂತ್ರ ಜೀವನ ತನ್ನದಾಗಿದ್ದರೂ ಯಾಕೆ ಈ ವಿವಾಹ ಬಂಧನ, ಹಳ್ಳಿಯ ಕುಟುಂಬ ಜೀವನದ ಆಯ್ಕೆ ಎಂದು. ನನ್ನಿಷ್ಟವೇ ಅವಳಂಥ ಸಂಗಾತಿಯೇ ಆಗಿರುವ ಕಾರಣ ಯಾವ ಗೊಂದಲವಿಲ್ಲದೆ ಎಲ್ಲವನ್ನೂ ಇದ್ದಂತೆ ನಂಬಿಕೆಯಿಂದ ಸ್ವೀಕರಿಸಿದೆ. ಯಾಕೆಂದರೆ ನಮ್ಮ ಯಾರದ್ದೂ ಒತ್ತಾಯದ, ಹೇರಿಕೆಯ, ತೋರಿಕೆಯ ತೀರ್ಮಾನಗಳಲ್ಲ.

Creative Writings