
Article · October 14, 2026
ನವದುರ್ಗಾ ಕೀರ್ತನೆ
By ಗಾಯತ್ರಿ ಕೆ ನಾಗರಾಜ ಅಡ್ಕತೊಟ್ಟಿ
ಗಾಯತ್ರಿ ಕೆ ಅಡ್ಕತೊಟ್ಟಿ
ನವದುರ್ಗೆಯರ ಪಾದಕೆರಗುವೆ ನಾನು
ಹಾಕುವೆನು ಶಬ್ದಮಂಜರಿಯ ಮಾಲೆಯನು
ಶ್ರದ್ಧಾ ನಿಷ್ಠೆಯ ಜೊತೆಯಲಿ
ಶೈಲೋನ್ನತ ಭಕ್ತಿರಾಗದಲಿ
ಶೈಲಪುತ್ರಿ – ಶೈಲಾಧಿರಾಜತನಯಾ
ಹಿಮಶೈಲದ ಮಗಳೇ ವೃಷಭವಾಹಿನಿ
ಮೂಲಾಧಾರದಿ ಜ್ಯೋತಿ ಬೆಳಗುವೆ
ಶಿಲೆಯಂತಿರ್ದ ಮನವ ಕರಗಿಸುವೆ
ಶಿವನೊಲವಿನ ಪಾರ್ವತಿಯೇ ನೀನೆ
ಎನ್ನಯ ಎದೆಯ ಗಟ್ಟಿತನಕೆ
ಶೈಲದಂತಹ ಧೈರ್ಯವ ನೀಡುವೆ
ಬ್ರಹ್ಮಚಾರಿಣಿ – ತಪೋನಿಷ್ಠೆ
ಘೋರ ತಪದಿ ನಿಂತ ತಾಪಸಿಯೆ
ಜಪಮಾಲೆ ಕಮಂಡಲಧಾರಿಣಿಯೆ
ಬ್ರಹ್ಮಜ್ಞಾನದ ಬೆಳಕನು ತೋರುವೆ
ವೈರಾಗ್ಯದ ಪರಮಾವಧಿ ನೀನೆ
ಎನ್ನಯ ಬಾಳಿನ ಸಾಧನೆಯಲಿ
ಸಂಯಮದ ಸಿದ್ಧಿಯ ಕರುಣಿಸುವೆ
ಚಂದ್ರಘಂಟಾ – ನಿನಾದಿನಿ
ಲಲಾಟದಲಿ ಚಂದ್ರಖಂಡ ಘಂಟೆಯ
ಝಣಝಣ ನಿನಾದದ ಧೀರನಾದಿನಿ
ದಶಭುಜದಲಿ ಶಸ್ತ್ರವ ಹಿಡಿದಿಹೆ
ದಾನವರ ಕುಲವನು ಬೆದರಿಸುವೆ
ಎನ್ನಯ ಕಿವಿಯಲಿ ನಿನ್ನ ನಾದವು
ಅಭಯದ ಶಂಖದಂತೆ ಮೊಳಗುವೆ
ಕೂಷ್ಮಾಂಡಾ – ಬ್ರಹ್ಮಾಂಡಕಾರಿಣಿ
ಕುಸುಮಿತ ಮಂದಹಾಸದಲಿ ನೀನು
ಬ್ರಹ್ಮಾಂಡವನ್ನೇ ಸೃಜಿಸಿದ ಜಗನ್ಮಾತೆ
ಅಷ್ಟಭುಜದಿ ಅಷ್ಟಸಿದ್ಧಿ ಹೊತ್ತಿಹೆ
ಸಿಂಹಪೀಠದಿ ಮೆರೆವ ಸೃಷ್ಟಿಬೀಜೆ
ಎನ್ನಯ ಬದುಕಿನ ಶೂನ್ಯತೆಯಲಿ
ಚೈತನ್ಯದ ಬೀಜವ ಬಿತ್ತುವೆ
ಸ್ಕಂದಮಾತಾ – ವಾತ್ಸಲ್ಯವಾರಿಧಿ
ತೊಡೆಯಲಿ ಸ್ಕಂದನನನು ಹೊತ್ತಿಹೆ
ಚತುರ್ಭುಜದಿ ಪದ್ಮವ ಧರಿಸಿಹೆ
ಯುದ್ಧದೇವನ ತಾಯಿಯು ನೀನಾದರೂ
ಕರುಣಾರಸದ ಸಾಗರದಂತಿಹೆ
ತಾಯಿಯ ಮಮತೆಯಂತೆಯೆ
ನನ್ನನು ಸದಾ ಸಲಹುವೆ ಕಾಯುವೆ
ಕಾತ್ಯಾಯನೀ – ದುರ್ಗಮಸಂಹಾರಿಣಿ
ಕಾತ್ಯಾಯನ ಋಷಿಯ ಯಾಗಶಾಲೆಯಲಿ
ಅವತರಿಸಿದ ಉಗ್ರರೂಪಿಣಿಯೆ
ಮಹಿಷನ ಮದವನು ಮರ್ದಿಸಿದವಳೆ
ಧರ್ಮಕೆ ಜಯವನು ತಂದ ಧೀರೆಯೆ
ಎಲ್ಲರ ಎದೆಯಲಿ ಅಧರ್ಮ ಕಂಡರೆ
ಖಡ್ಗದಂತೆ ನಿಂತು ಸೀಳುವೆ
ಕಾಲರಾತ್ರಿ – ಭಯಭಂಜಿನಿ
ಕದಂಬದಂತೆ ಚದುರಿದ ಕೇಶದಿ
ಕರಾಲ ವದನದಿ ಗರ್ಜಿಸುವ ಕಾಳಿ
ಕತ್ತಲೆಯನ್ನೇ ನುಂಗುವ ಬೆಳಕೇ
ಭಕ್ತರ ಭಯವನು ಸುಡುವ ಜ್ವಾಲೆ
ಎಲ್ಲರ ಬಾಳಿನ ಕಗ್ಗತ್ತಲೆಯನು
ನಿನ್ನ ನೋಟದಲೇ ಸುಟ್ಟು ಬಿಡುವೆ
ಮಹಾಗೌರೀ – ಶುಭ್ರವರ್ಣಿನಿ
ಶಂಖದಂತೆ ಶುಭ್ರವಸನ ಧರಿಸಿ
ವೃಷಭದ ಮೇಲೆ ಬಂದ ಗೌರಾಂಗಿ
ತಪದ ಬೆಂಕಿಯಲಿ ಕಪ್ಪು ಕಳೆದು
ಬೆಳ್ಳಕ್ಕಿಯಂತೆ ಬೆಳಗಿದ ಪಾವನಿ
ಎನ್ನಯ ಮನದಾ ಕಲ್ಮಶವನು
ಗಂಗೆಯಂತೆ ತೊಳೆದು ಬಿಡುವೆ
ಸಿದ್ಧಿದಾತ್ರೀ – ಸರ್ವಫಲಪ್ರದಾಯಿನಿ
ಅಣಿಮಾ ಮಹಿಮಾ ಮೊದಲಾದ ಸಿದ್ಧಿಯ
ಕಮಲಾಸನದಲಿ ಕರುಣಿಸುವ ಮಾತೆ
ಶಿವನೇ ನಿನ್ನನು ಪೂಜಿಸಿ ಪಡೆದನು
ಸರ್ವಶಕ್ತಿಯ ಅಧಿದೇವತೆಯೆ
ಎನ್ನಯ ಈ ಕೀರ್ತನೆಗೆ
ಸಿದ್ಧಿಯ ಮುದ್ರೆಯನೊತ್ತಿ ಹರಸುವೆ
ಒಂಬತ್ತು ರೂಪದಿ ಒಂದೇ ಶಕ್ತಿಯು
ಎನ್ನಯ ನಾಲಿಗೆಯಲಿ ನಲಿದಾಡೆ
ಪದದಿ ಕಟ್ಟಿದ ಮಾಲೆಯಿದು
ನವದುರ್ಗೆಯರ ಕೊರಳಲಿ ಬೆಳಗಾಡೆ
