
Article · October 27, 2026
ಎಂದಿಗು ನಾನೂ ಹೀಗೇ ಇರುವೆ...
ರವೀ ಸಜಂಗದ್ದೆ
(ಹೀಗೊಂದು ಬಹುತೇಕರ ಮನಸ್ಸಿನ ಆಲಾಪನೆ, ಆಲೋಚನೆ, ರೋದನೆ, ಭಾವನೆಗೆ ಬರಹದ ರೂಪ ನೀಡುವ ಸಣ್ಣ ಪ್ರಯತ್ನ...)
_ಬದುಕಲ್ಲಿ ಬಯಸಿದ್ದು ನೆಮ್ಮದಿ,_
_ಕಾಲ ದಯಪಾಲಿಸಿದ್ದು ಜವಾಬ್ದಾರಿ;_
_ಮನಸು ಬಯಸಿದ್ದು ಸ್ವಾತಂತ್ರ್ಯ,_
_ವಿಧಿ ಕರುಣಿಸಿದ್ದು ಅನಿವಾರ್ಯತೆ!_
ಬಾಯ್ತುಂಬಾ ಮಾತನಾಡಿ ನಲಿಯುತ್ತಾ ಸಾಗುತ್ತಿದ್ದ ಬದುಕು ವರ್ಷಗಳು ಕಳೆದಂತೆ ನಿಧಾನವಾಗಿ ಮೌನವಾಗಿರಲು ಕಲಿಸಿತು. ಹೆಚ್ಚು ಹೆಚ್ಚು ನಗುತ್ತಿದ್ದ ತುಟಿಗಳಿಗೆ ಅಳುವಿನ, ಬೇಸರದ, ಕಣ್ಣೀರಿನ ರುಚಿಯನ್ನು-ದಾರಿಯನ್ನೂ ತೋರಿಸಿತು. ಮನಸ್ಸಿನಲ್ಲಿ ಸಾವಿರಾರು ಕನಸುಗಳ ಸಾಮ್ರಾಜ್ಯ ಕಟ್ಟಿದ್ದರೂ, ಕ್ರಮೇಣ ವಾಸ್ತವದ ಬದುಕು ಅದೊಂದು ಭ್ರಮೆಯೆಂದು ಮುಗುಳ್ನಕ್ಕಿತು. ಸುತ್ತಮುತ್ತಲಿನ ಎಲ್ಲರನ್ನೂ ನಂಬಿ, ವಿಶಾಲ ಮನಸ್ಸಿನಿಂದ ಬೆರೆಯಲು ಹೋದ ನನಗೆ, ಅನುಭವಿಸಿದ ನೋವುಗಳು 'ನಮಗೆ ನಾವೇ ಅತ್ಯುತ್ತಮ ಸಂಗಾತಿ, ನಮ್ಮವರು ಎಂದು ಇರುವವರು ಅತಿ ಕಡಿಮೆ ಜನ' ಎಂಬ ಪಾಠವನ್ನು ಮನವರಿಕೆ ಮಾಡಿಸಿದವು.
ಕಾಲ ಕಳೆದಂತೆಲ್ಲಾ ಮುಗ್ಧತೆಯ, ನಂಬಿಕೆಯ, ಒಳ್ಳೆಯತನದ ಲಾಭ ಪಡೆಯುವ ಜನರ ಚಹರೆ ಸ್ಪಷ್ಟವಾಯಿತು. ನಮ್ಮವರು ಎಂದುಕೊಂಡವರು ಬೆನ್ನ ಹಿಂದೆ ಆಗೀಗ ಆಡುವ ಕುಹಕದ ನಗು, ಚುಚ್ಚು ಮಾತುಗಳು ಮನಸ್ಸಿಗೆ ತೀವ್ರ ವೇದನೆ ತಂದವು. ಸ್ವಂತದವರು ಎನ್ನುವ ಅಭಿಮಾನ, ನಂಬಿಕೆಯಿಂದ ಅವರೊಂದಿಗೆ ಹಂಚಿಕೊಂಡ ಹೃದಯದ ನೋವು-ಮಾತುಗಳು, ಯಾರೋ ಇನ್ನೊಬ್ಬರ ಕೈಯಲ್ಲಿ ಆಯುಧವಾಗಿ, ತಮಾಷೆಯಾಗಿ ಬಳಕೆಯಾಗುತ್ತಿರುವುದನ್ನು ಕಂಡು ಹೃದಯ, ಮನಸ್ಸು ಮೌನವಾಯಿತಲ್ಲ! 'ಎಲ್ಲರೂ ನನ್ನವರು ಎಂದುಕೊಳ್ಳುವ ನಿನ್ನ ಭ್ರಮೆಯೇ ಶುದ್ಧ ತಪ್ಪು ಹುಚ್ಚಾ...' ಎನ್ನುವ ಶ್ರೇಷ್ಠ ಪಾಠವನ್ನು ಬದುಕು ತನ್ನ ಕಠಿಣ ಅನುಭವಾಮೃತದ ಮೂಲಕ ಕಲಿಸಿತು.
ಹಾಗಾದರೆ, ಈ ಜಗತ್ತಿನಲ್ಲಿ ನಿಜವಾಗಿಯೂ ‘ನನ್ನವರು/ನಮ್ಮವರು’ ಎಂದರೆ ಯಾರು? ಯಾರೂ ಇಲ್ಲವೇ?? ರಕ್ತದ ಸಂಬಂಧವೇ ಅಥವಾ ಒಡನಾಟದಿಂದ ಬೆಸೆದ ಬಾಂಧವ್ಯವೇ??? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿದಾಗಲೆಲ್ಲ ಮನದಾಳದ ಅಂತರಂಗದಿಂದ ಬಹುತೇಕ ಸಾರಿ ದಿವ್ಯಮೌನವೇ ಉತ್ತರವಾಗಿ ಬಂತು! ಕಪಟವಿಲ್ಲದ ಶುದ್ಧ ಮಾತಿಗಿಲ್ಲಿ ಬೆಲೆಯಿಲ್ಲ, ಒಳ್ಳೆಯ ಮನಸ್ಥಿತಿಗೆ ಇಲ್ಲಿ ಗೌರವ ಕೊಡುವವರಿಲ್ಲ, ನಿಷ್ಕಲ್ಮಷ ಹೃದಯ ಮತ್ತು ಪ್ರೀತಿಗೆ ಇಲ್ಲಿ ಸಿಗುವುದು ಬೇಸರ-ಮೂದಲಿಕೆ-ವಿಶ್ವಾಸಘಾತುಕತನ ಮಾತ್ರ - 'ಬದುಕು ನಾಟಕೀಯ ಒಡನಾಟ, ತೋರಿಕೆಯ ಮಾತುಗಳಿಗೆ ಮಾತ್ರ ಸೀಮಿತ' ಎನ್ನುವ ಕಹಿಯಾದ ಸತ್ಯಾನ್ವೇಷಣೆ ಆಯಿತು. ಚಿಂತೆಗಳು ಹೆಚ್ಚಿದಂತೆ ನೆಮ್ಮದಿಯೂ ನಿದ್ದೆಯೂ ದೂರವಾಯಿತಲ್ಲ!
ಆದರೂ ಕಷ್ಟ ಕೊಡುವವರ, ಆಡಿಕೊಳ್ಳುವವರ, ಒಳ್ಳೆಯತನವನ್ನು ಉಪಯೋಗಿಸಿಕೊಳ್ಳುವ, 'ನಮ್ಮವರು' ಎಂಬ ಭ್ರಮಾಲೋಕದಲ್ಲಿ ಇರುವ ಜನರುಗಳ ಸುಳ್ಳಿನ ಕಂತೆಗಳಿಗೆ ಯಾವ ವಾಗ್ವಾದವನ್ನೂ ಮಾಡದೆ, ಒಂದು ಹುಸಿ ನಗುವನ್ನು, ದೀರ್ಘ ನಿಟ್ಟುಸಿರನ್ನು ಮಾತ್ರ ಪ್ರತಿಫಲವಾಗಿ ನೀಡಿದೆ/ನೀಡುತ್ತಿರುವೆ. ಸಮಸ್ಯೆ-ನೋವು ನೀಡುತ್ತಿರುವ ಹತ್ತಿರದವರನ್ನು ಸಂಪೂರ್ಣವಾಗಿ ದೂರಮಾಡಲು, ಕಳಚಿಕೊಳ್ಳಲು ಮನಸ್ಸು-ಹೃದಯ ಸುತಾರಾಂ ಒಪ್ಪಲಿಲ್ಲ. ಹೀಗಾಗಿ ನೋವಿನ ಪ್ರತಿಯೊಂದು ಕ್ಷಣವನ್ನೂ ಮೌನವಾಗಿ ನುಂಗುತ್ತಲೇ ಬದುಕನ್ನು ಸಾಗಿಸುತ್ತಾ, ನನ್ನನು ನಾನು ಪ್ರತಿಕ್ಷಣ-ಪ್ರತಿದಿನ ಗೆಲ್ಲುತ್ತಾ ಬಂದಿರುವೆ. ಮನಸ್ಸಿನಲ್ಲಿ ಹತಾಶೆ, ಸಿಟ್ಟು, ಬೇಸರಗಳು ಸುಳಿದಾಡುವುದು ಸಹಜವೇ. ಏನೇ ಆದರೂ 'ದ್ವೇಷ', 'ಅಸೂಯೆ', 'ಹಗೆತನ' ಎನ್ನುವ ಕೆಟ್ಟ ವಿಚಾರಗಳತ್ತ ಖಂಡಿತಾ ಮುಖ ಮಾಡದಿರಲು ನಿರ್ಧಾರ ಅಂದೆಂದೋ ಆಗಿದೆ. 'ಯಾರೊಂದಿಗೂ ಹಗೆತನ ಸಾಧಿಸಬಾರದು' ಎನ್ನುವ ನಿರ್ಧಾರಕ್ಕೆ ಸದಾ ಬದ್ಧ. ಇದು ಬದುಕಿನಲ್ಲಿ ನಾನು ಕಂಡುಕೊಂಡ ನಿತ್ಯ ಸತ್ಯ.
ಎಷ್ಟೊಂದು ನೋವು, ಬೇಸರ, ಚುಚ್ಚುಮಾತುಗಳನ್ನು ನುಂಗಿಕೊಂಡು, ಮುಖದ ಮೇಲೆ, ನಡವಳಿಕೆಯ ಮೇಲೆ ಅದರ ಪರಿಣಾಮ ಎಲ್ಲಿಯೂ ಮೂಡದಂತೆ ನಗುನಗುತ್ತಾ ಬದುಕು ಸಾಗುತಿದೆ. 'ನಗುನಗುತಾ ನಲೀ ನಲೀ ಏನೇ ಆಗಲಿ, ಎಲ್ಲಾ ದೇವರಾ ಕಲೆ ಎಂದೇ ನೀ ತಿಳಿ, ಅದರಿಂದಾ ನೀ ಕಲೀ'! ನನ್ನ ನಡುವಿನವರಿಗೆ ಪ್ರೀತಿ, ಅಕ್ಕರೆ, ಮಮಕಾರ, ಗೌರವಾರದ, ಬಾಂಧವ್ಯ ಎನ್ನುವುದೆಲ್ಲ ಬಹಳಷ್ಟು ಸುಂದರವೆಂದು ಸಾರುತ್ತಾ ಬಂದೆ, ಅದನ್ನು ಪಾಲಿಸುತ್ತಾ ಇದ್ದೇನೆ. ಮುಂದೆಯೂ ಅದೇ ಹಾದಿಯಲ್ಲಿ ಹೆಜ್ಜೆ ಹಾಕುವ ಸಂಕಲ್ಪ. ಈ ಸಕಾರಾತ್ಮಕ ಯೋಚನೆ-ಯೋಜನೆ ಮುಂದೊಂದು ದಿನ ನಿಜವಾಗಿಯೂ ನಮ್ಮೆಲ್ಲರ ಬದುಕಿನ ಗೊಂದಲ-ಗೋಜಲುಗಳನ್ನು ಸರಿಪಡಿಸಿ, ಸಂಬಂಧಗಳಿಗೆ ಮತ್ತೆ ಜೀವ ತುಂಬುತ್ತದೆ ಎಂಬ ಅಚಲ ವಿಶ್ವಾಸ.
ಇವು ನನ್ನಿಷ್ಟದ, ಮನಸ್ಸಿಗೆ ಬಹಳ ಆಪ್ತವಾಗುವ ಸಾಲುಗಳು:
_ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು,_
_ತೇಯುತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು,_
_ತಾನೇ ಉರಿದರೂ ದೀಪವು ಮನೆಗೆ ಬೆಳಕ ತರುವುದು..._
ಏನೇ ಬರಲಿ ಯಾರಿಗೂ ಎಂದೂ ತಲೆಯ ಬಾಗದು, ಎಂದಿಗು ನಾನೂ ಹೀಗೇ ಇರುವೆ! ಅಷ್ಟೇ...
