
Article · August 28, 2026
ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನ - ಬಿಸಿ ನೀರಿನ ಬುಗ್ಗೆಗಳ ಮತ್ತು ಗೀಸರ್ ಗಳ ಲೋಕದಲ್ಲಿ
ಪದ್ಮಶ್ರೀ ಮಾದೇರಿ, ಬೆಂಗಳೂರು.
ಅಮೆರಿಕಾ ಪ್ರವಾಸ ಭಾಗ- 2
ಅಮೆರಿಕದ ವಾಯುವ್ಯ ಭಾಗದಲ್ಲಿರುವ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನವು ಪ್ರಕೃತಿಯ ಅಪೂರ್ವ ವೈವಿಧ್ಯವನ್ನು ಒಂದೇ ಸ್ಥಳದಲ್ಲಿ ಕಾಣಬಹುದಾದ ಅದ್ಭುತ ತಾಣ. ಸುಮಾರು 2.2 ಮಿಲಿಯನ್ ಎಕರೆ ವಿಸ್ತೀರ್ಣ ಹೊಂದಿರುವ ಈ ಬೃಹತ್ ಉದ್ಯಾನವು ವ್ಯೋಮಿಂಗ್, ಮೊಂಟಾನ ಮತ್ತು ಐಡಾಹೋ ರಾಜ್ಯಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. 1872 ರಲ್ಲಿ ಸ್ಥಾಪನೆಯಾದ ಈ ಉದ್ಯಾನ, ಜಗತ್ತಿನ ಮೊದಲ ರಾಷ್ಟ್ರೀಯ ಉದ್ಯಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನದಲ್ಲಿ ಪರ್ವತಗಳು,ದಟ್ಟ ಕಾಡುಗಳು,ಹುಲ್ಲುಗಾವಲುಗಳು, ನದಿಗಳು, ಸರೋವರಗಳು, ಜಲಪಾತಗಳು, ಬಿಸಿ ನೀರಿನ ಬುಗ್ಗೆಗಳು ಮತ್ತು ನೂರಾರು ಗೀಸರ್ ಗಳು ಕಾಣಸಿಗುತ್ತವೆ. ಕರಡಿ, ನರಿ,ಕಾಡುಕೋಣ, ಜಿಂಕೆ, ಎಲ್ಕ್, ಮೂಸ್ ಮುಂತಾದ ವನ್ಯಜೀವಿಗಳಿವೆ. ಇಷ್ಟು ದೊಡ್ಡ ಪ್ರದೇಶವನ್ನು ತಿರುಗಾಡಲು ಕನಿಷ್ಠ ಎರಡು ವಾರಗಳಾದರೂ ಬೇಕು. ನಮಗೆ ಇದು ಸಾಧ್ಯವಾಗದ ಕಾರಣ, ಯೆಲ್ಲೋಸ್ಟೋನ್ ಪ್ರವಾಸಕ್ಕೆ ಮೂರು ದಿನಗಳನ್ನು ಮೀಸಲಿಟ್ಟಿದ್ದೆವು. ಅತಿ ಮುಖ್ಯವಾದ ಸ್ಥಳಗಳನ್ನು ಮಾತ್ರ ನೋಡುವುದೆಂದು ತೀರ್ಮಾನಿಸಿದ್ದೆವು. ಮೂರು ದಿನಗಳ ವಾಸ್ತವ್ಯಕ್ಕೆ "ನೀಲ್ಸ್ ನೆಸ್ಟ್" ಎಂಬ ಸುಂದರ ಕ್ಯಾಬಿನ್ ಅನ್ನು ತಂಗಿ ಬುಕ್ ಮಾಡಿದ್ದಳು. ಇಲ್ಲಿ ನಾವೇ ಅಡುಗೆ ಮಾಡಬಹುದಿತ್ತು. ಅಡುಗೆಗೆ ಬೇಕಾದ ಪಾತ್ರೆಗಳು, ಗ್ಯಾಸ್ ಸ್ಟವ್, ಓವನ್ ಎಲ್ಲವೂ ಇತ್ತು. ಬಟ್ಟೆ ಒಗೆಯಲು ವಾಷಿಂಗ್ ಮಷೀನ್ ಕೂಡ ಇತ್ತು.
ನಾವು ಇಲ್ಲಿನ ಬಿಸಿ ನೀರಿನ ಬುಗ್ಗೆ ಗಳನ್ನು ಮತ್ತು ಗೀಸರ್ ಗಳನ್ನು ನೋಡಲು ಉತ್ಸುಕರಾಗಿದ್ದೆವು. ಅದರ ಬಗ್ಗೆ ಅಲ್ಪಸ್ವಲ್ಪ ಓದಿ ತಿಳಿದುಕೊಂಡಿದ್ದೆವು. ಈ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನದ ಅಡಿಯಲ್ಲಿ ಒಂದು ದೊಡ್ಡ ಜಾಗೃತ ಜ್ವಾಲಾಮುಖಿ ಇದೆ. ಇದು ಸಾಮಾನ್ಯ ಜ್ವಾಲಾಮುಖಿಗಳಿಗಿಂತ ತುಂಬಾ ದೊಡ್ಡದಿರುವ ಕಾರಣ ಇದನ್ನು ಸೂಪರ್ ಜ್ವಾಲಾಮುಖಿ ಎಂದು ಕರೆಯುತ್ತಾರೆ. ಭೂಮಿಯ ಒಳಗಿರುವ ಈ ತೀವ್ರವಾದ ಶಾಖವು ಮೇಲಿನ ನೀರನ್ನು ಕಾಯಿಸುತ್ತದೆ.ಇದರಿಂದ ಈ ಉದ್ಯಾನವನದಲ್ಲಿ ನಮಗೆ ಬಿಸಿ ನೀರಿನ ಬುಗ್ಗೆಗಳು ಮತ್ತು ಕಾರಂಜಿ ಯಂತೆ ನೀರು ಮೇಲಕ್ಕೆ ಚಿಮ್ಮುವ ಅದ್ಭುತ ದೃಶ್ಯಗಳು ನೋಡಲು ಸಿಗುತ್ತವೆ. ನಾವು ಮೊದಲೆರಡು ದಿನಗಳನ್ನು ಇದಕ್ಕಾಗಿ ಮೀಸಲಿಟ್ಟಿದ್ದೆವು. ನಮ್ಮನ್ನು ರೋಮಾಂಚನಗೊಳಿಸಿದ ಕೆಲವು ಬಿಸಿ ನೀರಿನ ಬುಗ್ಗೆಗಳು ಮತ್ತು ಗೀಸರ್ ಗಳ ಬಗ್ಗೆ ಇಲ್ಲಿ ತಿಳಿಸುವೆ.
ಮ್ಯಾಮತ್ ಹಾಟ್ ಸ್ಪ್ರಿಂಗ್ಸ್ -
ಇಲ್ಲಿ ಭೂಮಿಯ ಒಳಗಿನಿಂದ ಬಿಸಿನೀರು ಮೇಲಕ್ಕೆ ಬರುತ್ತದೆ. ಈ ನೀರಿನಲ್ಲಿ ಕರಗಿರುವ ಖನಿಜಗಳು ಹೊರಗೆ ಬಂದು, ಅನೇಕ ವರ್ಷಗಳ ಕಾಲ ಒಂದರ ಮೇಲೊಂದು ಶೇಖರಣೆಯಾಗಿ, ಬಿಳಿ,ಹಳದಿ, ಕಂದು ಮತ್ತು ಕಿತ್ತಳೆ ಬಣ್ಣದ ಕಲ್ಲಿನ ಪದರಗಳನ್ನು ನಿರ್ಮಿಸಿವೆ. ನೋಡಲು ಬಣ್ಣದ ಕಲ್ಲಿನ ಮೆಟ್ಟಿಲುಗಳಂತೆ ನಮಗೆ ಕಾಣಿಸುತ್ತದೆ.ಭೂಮಿಯ ಆಳದಲ್ಲಿರುವ ಉಷ್ಣತೆ,ನೀರು ಮತ್ತು ಖನಿಜಗಳು ಸೇರಿ ಸಾವಿರಾರು ವರ್ಷಗಳಲ್ಲಿ ಇಂತಹ ಅದ್ಭುತ ರಚನೆಗಳನ್ನು ಸೃಷ್ಟಿಸಿವೆ. ಇದನ್ನು ನೋಡಿದಾಗ ಪ್ರಕೃತಿ ತನ್ನ ಕಲಾಕೃತಿಗಳನ್ನು ಎಷ್ಟು ಅಪೂರ್ವವಾಗಿ ನಿರ್ಮಿಸುತ್ತದೆ ಎಂದು ಆಶ್ಚರ್ಯವಾಗುತ್ತದೆ.


ಗ್ರ್ಯಾಂಡ್ ಪ್ರಿಸ್ಮಾಟಿಕ್ ಸ್ಪ್ರಿಂಗ್ -
ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನದಲ್ಲಿ ನಮ್ಮನ್ನು ಅಚ್ಚರಿಗೊಳಪಡಿಸಿದ ಸ್ಥಳಗಳಲ್ಲಿ ಇದೂ ಒಂದು. ಇದು ಯೆಲ್ಲೋಸ್ಟೋನ್ನ ಅತ್ಯಂತ ಪ್ರಸಿದ್ಧ ಬಿಸಿನೀರಿನ ಬಗ್ಗೆಗಳಲ್ಲಿ ಒಂದಾಗಿದೆ. ದೂರದಿಂದ ನೋಡಿದಾಗ ಭೂಮಿಯ ಮೇಲೆ ಯಾರೋ ದೊಡ್ಡದೊಂದು ಬಣ್ಣದ ಚಿತ್ರ ಬಿಡಿಸಿರುವಂತೆ ಕಾಣುತ್ತದೆ. ಈ ಸ್ಪ್ರಿಂಗ್ ನ ಮಧ್ಯಭಾಗವು ನೀಲಿಯಾಗಿದ್ದು,ಅದರ ಸುತ್ತಲೂ ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣಗಳು ವೃತ್ತಾಕಾರದಲ್ಲಿ ಹರಡಿಕೊಂಡಿವೆ. ಬಿಸಿ ನೀರಿನಲ್ಲಿ ಬೆಳೆಯುವ ವಿವಿಧ ರೀತಿಯ ಸೂಕ್ಷ್ಮಜೀವಿಗಳಿಂದ ಈ ಬಣ್ಣಗಳು ಉಂಟಾಗುತ್ತವೆ. ನೀರಿನ ತಾಪಮಾನ ಮತ್ತು ಖನಿಜಗಳ ಪ್ರಮಾಣದಲ್ಲಿ ವ್ಯತ್ಯಾಸ ಇರುವುದರಿಂದ, ವಿವಿಧ ಭಾಗಗಳಲ್ಲಿ ವಿವಿಧ ಬಣ್ಣಗಳು ಕಾಣಿಸುತ್ತದೆ.

ಗ್ರಾಂಡ್ ಪ್ರಿಸ್ಮಾಟಿಕ್ ಸ್ಪ್ರಿಂಗ್ ಅನ್ನು ನೋಡಿದಾಗ, ನಮಗೆ, ಪ್ರಕೃತಿಯ ಸೃಜನಶೀಲತೆಗೆ ಮನುಷ್ಯನ ಕಲೆಯೇನೂ ಸಾಟಿಯಿಲ್ಲ ಎಂದು ಅನಿಸಿತು. ಇದನ್ನು ಕಣ್ಣಾರೆ ಕಂಡ ಅನುಭವ ಯೆಲ್ಲೋಸ್ಟೋನ್ ಪ್ರವಾಸದ ಅತ್ಯಂತ ಸುಂದರ ನೆನಪುಗಳಲ್ಲಿ ಒಂದಾಗಿ ಉಳಿಯುತ್ತದೆ.
ಓಲ್ಡ್ ಫೇತ್ ಫುಲ್ ಗೀಸರ್ -
ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದಾಗ ನೋಡಲೇಬೇಕಾದ ಸ್ಥಳಗಳಲ್ಲಿ ಇದೂ ಕೂಡ ಒಂದು. ಭೂಮಿಯೊಳಗಿನಿಂದ ಬಿಸಿನೀರು ಮತ್ತು ಆವಿಯನ್ನು ದೊಡ್ಡ ಪ್ರಮಾಣದಲ್ಲಿ ಮೇಲಕ್ಕೆ ಚಿಮ್ಮಿಸುವುದು ಇದರ ವಿಶೇಷತೆ. ಇದು ಪ್ರತೀ ಒಂದು- ಒಂದೂವರೆ ಗಂಟೆಯ ಅಂತರದಲ್ಲಿ, ನಿಯಮಿತವಾಗಿ ನೀರನ್ನು ಮೇಲಕ್ಕೆ ಚಿಮ್ಮಿಸುತ್ತದೆ . ಪ್ರತಿಯೊಂದು ಸಿಡಿತವೂ ಕೆಲವು ನಿಮಿಷಗಳ ಕಾಲ ನಡೆಯುತ್ತದೆ. ಇದನ್ನು ವೀಕ್ಷಿಸಲು ಬಂದ ಪ್ರವಾಸಿಗರು ಕುಳಿತುಕೊಳ್ಳಲು ಸುತ್ತಲೂ ಬೆಂಚುಗಳನ್ನು ಹಾಕಿದ್ದರು. ನಾವು ಅಲ್ಲಿಗೆ ಹೋದಾಗ, ಸಿಡಿತ ಪ್ರಾರಂಭವಾಗಲು ಇನ್ನೂ ಅರ್ಧ ಗಂಟೆ ಇತ್ತು. ಅನೇಕ ಪ್ರವಾಸಿಗರು ನಮ್ಮ ಹಾಗೆಯೇ ಕಾತರದಿಂದ ಕಾಯುತ್ತಿದ್ದರು. ನಮ್ಮೆಲ್ಲರ ಗಮನ, ಏಕಾಗ್ರತೆ ಸಂಪೂರ್ಣವಾಗಿ ಗೀಸರ್ ನ ಮೇಲೆಯೇ ಇತ್ತು . ಕೆಲವು ನಿಮಿಷಗಳ ನಂತರ, ನೆಲದಿಂದ ದಟ್ಟವಾಗಿ ಆವಿ ಮೇಲಕ್ಕೆ ಏರತೊಡಗಿತು . ವಿಡಿಯೋ ಮಾಡಲು ನಾವೆಲ್ಲ ಮೊಬೈಲನ್ನು ರೆಡಿ ಮಾಡಿ ಇಟ್ಟೆವು. ನಿಧಾನವಾಗಿ ಆವಿಯ ಪ್ರಮಾಣ ಹೆಚ್ಚಾಗಿ, ಇದ್ದಕ್ಕಿದ್ದಂತೆ ಬಿಸಿನೀರು ದೊಡ್ಡ ಶಬ್ದದೊಂದಿಗೆ ಆಕಾಶದತ್ತ ಚಿಮ್ಮತೊಡಗಿತ್ತು. ಬಿಳಿ ಆವಿಯ ನಡುವೆ ಎತ್ತರಕ್ಕೆ ಚಿಮ್ಮುತ್ತಿದ್ದ ನೀರಿನ ದೃಶ್ಯ ಅದ್ಭುತವಾಗಿತ್ತು. ಗೀಸರ್ ನ ಸುತ್ತ ನೀರಿನ ಕಾರಂಜಿಯೇ ನಿರ್ಮಾಣವಾದಂತೆ ಕಾಣಿಸಿತು.

ಓಲ್ಡ್ ಫೇತ್ ಫುಲ್ ನ ಸಿಡಿತದ ಹಿಂದೆ ಭೂಮಿಯ ಆಳದಲ್ಲಿರುವ ಉಷ್ಣತೆಯೇ ಕಾರಣ. ನೆಲದ ಅಡಿಯಲ್ಲಿರುವ ಬಿಸಿನೀರಿನ ಮತ್ತು ಆವಿಯ ಒತ್ತಡ ಹೆಚ್ಚಾದಾಗ, ಮೇಲಕ್ಕೆ ಚಿಮ್ಮುತ್ತದೆ. ಈ ಸಿಡಿತವನ್ನು ಕಣ್ಣಾರೆ ನೋಡಿದಾಗ,ಭೂಮಿ ನಮ್ಮ ಕಾಲಡಿಯಲ್ಲಿ ಜೀವಂತವಾಗಿಯೇ ಕೆಲಸ ಮಾಡುತ್ತಿದೆ ಎಂಬ ಅನುಭವವಾಗುತ್ತದೆ . ನಮಗಂತೂ ಪ್ರಕೃತಿಯ ಶಕ್ತಿ, ಸೌಂದರ್ಯ ಮತ್ತು ರಹಸ್ಯವನ್ನು ಕಣ್ಣಾರೆ ಕಂಡ ಈ ಅನುಭವ ಅಭೂತಪೂರ್ವವಾಗಿತ್ತು.
ಇವು ಮೂರಲ್ಲದೆ, ಇನ್ನೂ ಹಲವಾರು ಬಿಸಿನೀರಿನ ಬುಗ್ಗೆಗಳನ್ನು, ಗೀಸರ್ ಗಳನ್ನು ಮತ್ತು ಕೊತಕೊತನೆ ಕುದಿಯುವ ಕೆಸರಿನ ಕೊಳಗಳನ್ನು ನೋಡಿದೆವು. ಕೆಲವು ಜಾಗಗಳಲ್ಲಂತೂ ಗಂಧಕದ ಕಾರಣದಿಂದ ಕೊಳೆತ ಮೊಟ್ಟೆಯಂತಹ ವಾಸನೆ ಬರುತ್ತಿತ್ತು. ಇದು ಭೂಮಿಯೊಳಗಿನ ಅನಿಲಗಳು ಹೊರಬರುವ ಸೂಚನೆ. ಒಟ್ಟಿನಲ್ಲಿ ಹೇಳುವುದಾದರೆ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನ ಕೇವಲ ಸುಂದರವಾದ ಪರ್ವತಗಳು ಮತ್ತು ಕಾಡುಗಳಿರುವ ಪ್ರದೇಶವಲ್ಲ. ಭೂಮಿಯ ಒಳಗಿನ ಚಟುವಟಿಕೆಗಳು ಇಂದಿಗೂ ಜೀವಂತವಾಗಿರುವ ಅದ್ಭುತ ಸ್ಥಳ.

Mud Volcano
