Karada Vishwa

Article · November 12, 2026

ಹೀಗೊಂದು ಕಥೆ

By ಶ್ರೀವಿದ್ಯಾ ಎಸ್ ಗೋಖಲೆ

ಶ್ರೀವಿದ್ಯಾ ಎಸ್

ಸಣ್ಣ ಕಥೆ

ಅವರಿಬ್ಬರೂ ದಿನಾ ಸಂಜೆ ಆ ಕಲ್ಲು ಮಂಟಪದ ಬಳಿ ಮಾತನಾಡುತ್ತ ಕುಳಿತಿರುತ್ತಿದ್ದರು.ಆ ಮಂಟಪದ ಕಲ್ಲಿಗೋ ತುಂಬಾ ಖುಷಿ.. ಇವರಿಬ್ಬರ ಪ್ರೀತಿ ತುಂಬಿದ ಮಾತುಗಳು, ಹುಸಿಮುನಿಸು, ಜಗಳ, ಭವಿಷ್ಯದ ಕುರಿತಾದ ಕನಸುಗಳು ಇತ್ಯಾದಿ ವಿಷಯಗಳ ಆಲಿಸುತ್ತಾ ಒಳಗೊಳಗೇ ನಾಚುತ್ತಾ ಅರಿವಿಲ್ಲದೇ ಅದೂ ಕೂಡ ಕನಸು ಕಾಣುತಿತ್ತು.

ಅದ್ಯಾಕೋ ಎರಡು ದಿನದಿಂದ ಆತನ ಸುಳಿವಿಲ್ಲ. ಆಕೆ ಅದೇ ಮಂಟಪದ ಬಳಿ ಎರಡು ಸಂಜೆಗಳನ್ನು ಆತಂಕದಿಂದ ಕಳೆದಿದ್ದು ,ಕೊನೆಗೊಮ್ಮೆ ಆತನಿಂದ ಕರೆ ಬಂತು " ಇಷ್ಟು ದಿವಸ ನಿನ್ನ ಜೊತೆ ಸಮಯ ಕಳೆಯುತ್ತಿದ್ದೆ ಅಷ್ಟೇ..ನನ್ನ ಮದುವೆ ನಿಶ್ಚಿತಾರ್ಥ ಕಳೆಯಿತು,ಶ್ರೀಮಂತ ಹುಡುಗಿ ಇನ್ನು ಕೆಲವೇ ತಿಂಗಳಲ್ಲಿ ನನ್ನ ಮಡದಿಯಾಗಿ ಬರುತ್ತಾಳೆ.ನನ್ನ ಮರೆತು ಬಿಡು..”ಎಂದು ಯಾವುದೇ ಪಶ್ಚಾತ್ತಾಪ ಇಲ್ಲದೇ ಕರೆ ತುಂಡರಿಸಿದ.

ಆತನ ಮನ ಇದ್ದಕಿದ್ದಂತೆ ಯಾಕಿಷ್ಟು ಕಲ್ಲಾಗಿ ಹೋಯಿತು ಎನ್ನುವ ಆಘಾತದಿಂದ ಆಕೆ ಭಾವರಹಿತ ಬಂಡೆ ಕಲ್ಲಿನಂತೆ ಕುಳಿತರೆ ಇದು ಯಾವುದೂ ಅರಿಯದೆ ,ಇವರಿಬ್ಬರ ಸಹವಾಸ ಸಾಮೀಪ್ಯದಿಂದ ಕಲ್ಲು ಮಂಟಪದ ಬಂಡೆ ಮಾತ್ರ ಮೃದುವಾಗತೊಡಗಿತ್ತು.

Creative Writings