
Article · August 24, 2026
ಪರಿಮಿತಿ
By ಗಾಯತ್ರಿ ಕೆ ನಾಗರಾಜ
ಗಾಯತ್ರಿ ಕೆ ಅಡ್ಕತೊಟ್ಟಿ
ಕೈ ಚಾಚಿ ಪ್ರೀತಿ ಕೊಟ್ಟೆ,
ಇಡೀ ಜಗವೇ ನಿನ್ನದಾಯ್ತೆಂದು
ನಿನ್ನ ನಗುವಿಗಾಗಿ ನನ್ನ ಕನಸನ್ನೇ ಒತ್ತೆಯಿಟ್ಟೆ
ನೀರಿಲ್ಲದ ಹೂವಿಗೆ ಪ್ರಾಣ ತುಂಬಿದಂತೆ,
ನಿನ್ನ ಮಾತಿಗಾಗಿ ನನ್ನ ಮೌನವನ್ನೇ ಮುರಿದೆ
ಆದರೆ ಮಿತಿ ಮೀರಿದ ನನ್ನ ಅಕ್ಕರೆಗೆ,
ಬೆಲೆ ಇಲ್ಲದ ನಾಣ್ಯದಂತಾಯ್ತು ನನ್ನ ಹೆಸರು
ನಾನು ದೇವಸ್ಥಾನ ಕಟ್ಟಿದ ದೇವರೇ
ನನ್ನನ್ನು ಕಲ್ಲಿನ ಮೂರ್ತಿಯಂತೆ ನೋಡಿದ
ಅತಿಯಾದ ಪ್ರಾಮುಖ್ಯತೆ ಅಭಿಶಾಪವಾಯ್ತು,
ಅತಿಯಾದ ಪ್ರೀತಿ ಬಂಧನವಾಯ್ತು
ಕೊಟ್ಟಷ್ಟು ಬರಿದಾಗುವ ಬಾವಿಯಂತೆ,
ನಾನು ಬತ್ತಿ ಹೋದೆ ನಿನ್ನ ನಿರ್ಲಕ್ಷ್ಯದಲ್ಲಿ
ಗೌರವ ಕೇಳಿ ಬೇಡಲಿಲ್ಲ, ಅದು ಯಾಚನೆಯಲ್ಲ,
ಅದು ಬದುಕುವ ಹಕ್ಕು, ಉಸಿರಿನಂತೆ ಅಗತ್ಯ
ಈಗ ಅರ್ಥವಾಯ್ತು, ಕಡಿಮೆ ಮಾತು ಹೆಚ್ಚು ಮೌನ,
ಅದೇ ಮನುಷ್ಯನಿಗೆ ಅತಿ ದೊಡ್ಡ ಗಾಂಭೀರ್ಯ
ಮತ್ತೆ ಎದ್ದೇಳುವೆ, ನನ್ನ ಕಾಲ ಮೇಲೆ ನಿಂತು,
ನೋವನ್ನು ಪಾಠವಾಗಿ, ಕಣ್ಣೀರನ್ನು ಶಕ್ತಿಯಾಗಿ
ಯಾರಿಗಾಗಿ ಬದುಕಿದೆನೋ ಅವರಿಲ್ಲದೆ ಬದುಕುವೆ,
ಯಾಕೆಂದರೆ ನಾನು ನನಗೆ ಮುಖ್ಯ...
ನಾನೇ ನನಗೆ ಮರ್ಯಾದೆ
