
News · October 28, 2026
ಕರಾಡ ಬ್ರಾಹ್ಮಣ ಸಭಾ ಮೈಸೂರು (ರಿ) - ಒಳಾಂಗಣ ಕ್ರೀಡಾಕೂಟ ಸಂಪನ್ನ
ಕಾರ್ಯದರ್ಶಿ, ಕಬ್ರಾಸ, ಮೈಸೂರು
ಕರಾಡ ಬ್ರಾಹ್ಮಣ ಸಭಾ(ರಿ), ಮೈಸೂರು ಮತ್ತು ಕರಾಡ ಬ್ರಾಹ್ಮಣ ಅಭ್ಯುದಯ ಸಂಘ(ರಿ), ಅಗಲ್ಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ‘ವಾರ್ಷಿಕ ಸಂಭ್ರಮ’ದ ಪ್ರಯುಕ್ತ ಒಳಾಂಗಣ ಕ್ರೀಡಾಕೂಟವನ್ನು ದಿನಾಂಕ 25.10.2026 ಭಾನುವಾರ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಆವರಣದಲ್ಲಿ ಆಯೋಜಿಸಲಾಯಿತು.
ಈ ಕ್ರೀಡಾಕೂಟವನ್ನು ಸಂಘದ ಅಧ್ಯಕ್ಷರಾದ ಕೃಷ್ಣಮೋಹನ ಐಲುಕುಂಜೆ ಮತ್ತು ಸಮಾಜ ಬಾಂಧವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಾರ್ಥನೆಯನ್ನು ಕುಮಾರಿ ಪಲ್ಲವಿ ಕೆ ಅವರು ನಡೆಸಿಕೊಟ್ಟರು.
ಈ ಕ್ರೀಡಾಕೂಟದ ಭಾಗವಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಎಲ್ಲಾ ವಯೋಮಾನದವರಿಗಾಗಿ ಆಯೋಜಿಸಲಾಯಿತು. ಕಲರಿಂಗ್, ಚಿತ್ರಕಲೆ, ಚದುರಂಗ, ಕೇರಂ, ನೆನಪಿನ ಪರೀಕ್ಷೆ, ಸಂಗೀತ ಕುರ್ಚಿ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಯಿತು. 70ಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಆಟೋಟ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನವನ್ನು ಸಂಘದ ವಾರ್ಷಿಕೋತ್ಸವದ ದಿನ ವಿತರಿಸಲಾಗುವುದು. ಸಂಘದ ಸಹ ಕಾರ್ಯದರ್ಶಿಗಳಾದ ಶ್ರೀ ನಾಗರಾಜ ಕಜಂಪಾಡಿಯವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮಕ್ಕೆ ಉತ್ತಮ ಭೋಜನ ಹಾಗೂ ಉಪಹಾರದ ವ್ಯವಸ್ಥೆ ಮಾಡಿದ ರಾಧಾಕೃಷ್ಣ ಭಟ್ ದೈತೋಟ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಲಾಯಿತು. ಕಾರ್ಯಕ್ರಮಕ್ಕೆ ಸ್ಥಳಾವಕಾಶ ಮಾಡಿಕೊಟ್ಟ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘಕ್ಕೆ ಧನ್ಯವಾದಗಳನ್ನು ಸಮರ್ಪಿಸಲಾಯಿತು. ಈ ಕ್ರೀಡಾಕೂಟದ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಎಲ್ಲ ಹಂತದ ಚಟುವಟಿಕೆಗಳನ್ನು ಸಮರ್ಥವಾಗಿ ನಿರ್ವಹಿಸಿ ಯಶಸ್ವಿಗೊಳಿಸಿದ ಶ್ರೀಯುತ ಮಹೇಶ್ ಜಿ ಘಾಟೆ ಅವರಿಗೆ ಕರತಾಡನದೊಂದಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಲಾಯಿತು.ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದ ಹಾಗೂ ಭಾಗವಹಿಸಿದ ಎಲ್ಲ ಸಮಾಜ ಬಾಂಧವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಲಾಯಿತು.
