
Article · April 14, 2026
ತಂತ್ರಜ್ಞಾನ ಯುಗ: ಭರವಸೆಯ ನಾಳೆಗಳು ನಮದೆನಿಸಿವೆ!
- ರವೀ ಸಜಂಗದ್ದೆ
{ ಕರ್ಹಾಡ ಬ್ರಾಹ್ಮಣ ಸಮಾಜ (ರಿ), ಮಂಗಳೂರು ಇದರ ರಜತ ಮಹೋತ್ಸವದ ಸಂದರ್ಭದಲ್ಲಿ ಹೊರತಂದ ಸ್ಮರಣ ಸಂಚಿಕೆ ಬೆಳ್ಳಿ ಹೆಜ್ಜೆಯಲ್ಲಿ ಪ್ರಕಟವಾದ ಬರಹ }
ಹೊಸತನ, ಆವಿಷ್ಕಾರ, ತಂತ್ರಜ್ಞಾನದ ಉನ್ನತಿ, ಬದಲಾವಣೆ ಜಗದ ನಿಯಮ. ನಿನ್ನೆ ಇದ್ದಂತೆ ಇಂದು ಇಲ್ಲ; ಇಂದಿನದು ನಾಳೆಗೆ ಹಳತು! ಇನ್‌ಲ್ಯಾಂಡ್ ಪತ್ರಗಳ ಮೂಲಕ ಸಂದೇಶ ಕಳುಹಿಸುತ್ತಿದ್ದ ಆ ಕಾಲದಿಂದ ವಾಟ್ಸ್‌ಆಪ್ ಸಂದೇಶಗಳ ಜಗತ್ತಿಗೆ; ಟ್ರಂಕ್‌ಕಾಲ್ ಮಾಡಿ ಪರವೂರಿನಲ್ಲಿರುವ ಬಂಧುಗಳೊಂದಿಗೆ ಮಾತನಾಡುವ ಆ ಕಾಲದಿಂದ ವೀಡಿಯೋ ಕಾಲ್ ಮಾಡಿ ಗಂಟೆಗಟ್ಟಲೆ ಮಾತನಾಡುವ ಈ ಕಾಲಕ್ಕೆ; ಚಿಮಣಿ ದೀಪದ ಅಸ್ಪಷ್ಟ ಬೆಳಕಿನಿಂದ ಅಬ್ಬರದ, ಝಗಮಗಿಸುವ ಎಲ್‌ಇಡಿ ದೀಪಗಳ ಕಾಲಕ್ಕೆ; ರೇಡಿಯೋದಲ್ಲಿ ಕ್ರಿಕೆಟ್ ಕಾಮೆಂಟರಿ ಆಲಿಸುತ್ತಿದ್ದ ಕಾಲದಿಂದ ಮೊಬೈಲ್‌ನಲ್ಲೇ ಲೈವ್ ಕ್ರಿಕೆಟ್ ವೀಕ್ಷಿಸುವ ಕಾಲಕ್ಕೆ; ತೋಟದ ಮೂಲೆಯ ಬಾವಿಯಿಂದ ದಿನನಿತ್ಯದ ಉಪಯೋಗಕ್ಕೆ ನೀರು ಹೊತ್ತು ತರುವ ಕಾಲದಿಂದ ಆಟೋಮ್ಯಾಟಿಕ್ ತಂತ್ರಜ್ಞಾನದ ಸಹಾಯದಿಂದ ಮನೆಯ ನಳ್ಳಿಯಲ್ಲಿ ನೀರು ಬರುವ ಕಾಲಕ್ಕೆ; ದೈಹಿಕ ಶ್ರಮದಿಂದ ಕೃಷಿ ಚಟುವಟಿಕೆಗಳು ನಡೆಸುತ್ತಿದ್ದ ಕಷ್ಟದ ಕಾಲದಿಂದ ಕೃಷಿಗೆ ನೆರವಾಗುವ ಹಲವಾರು ಯಂತ್ರೋಪಕರಣಗಳನ್ನು ಉಪಯೋಗಿಸುವ ಕಾಲಕ್ಕೆ ನಮ್ಮ ಬದುಕು ನಿರಂತರ ಸಾಗಿ ಬಂದು, ಉನ್ನತಗೊಂಡು ಸಮೃದ್ಧವಾಗಿದೆ. 'ಆಗಿನ ಕಾಲದ ದೈಹಿಕ-ಆರ್ಥಿಕ ಸಂಕಷ್ಟಗಳು ಈಗ ಇಲ್ಲವೇ ಇಲ್ಲ' ಎನ್ನುವ ಉತ್ತಮ ಸ್ಥಿತಿಗೆ ಬದುಕು ಬಂದು ನಿಂತಿದೆ. ಎರಡು-ಮೂರು ತಲೆಮಾರು ಹಿಂದೆ ಇದ್ದ ಕಷ್ಟಗಳು ಸಂಪೂರ್ಣ ಮಾಯವಾಗಿವೆ ಮತ್ತು ಆ ಪರಿಪಾಡುಗಳನ್ನು ಈಗ ಯಾರೇ ಹೇಳಿದರೂ ಕೇಳಲು-ನಂಬಲು ಬಲು ಕಷ್ಟ. ತಂತ್ರಜ್ಞಾನ-ಆವಿಷ್ಕಾರ ನಮ್ಮ ಬದುಕನ್ನು ಹೆಚ್ಚು ಆರಾಮಗೊಳಿಸಿ ಸರಳಗೊಳಿಸಿದೆ.
ಉಳಿದ ಬ್ರಾಹ್ಮಣ ಪಂಗಡಗಳಿಗೆ ಹೋಲಿಸಿದರೆ ಈ ಎಲ್ಲಾ ಬದಲಾವಣೆಗಳಿಗೆ ನಮ್ಮ ಕರಾಡ ಸಮುದಾಯ ತೆರೆದುಕೊಂಡಿದ್ದು ಇತ್ತೀಚೆಗೆ. ನಾವು ಈ ಬದಲಾವಣೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡದ್ದು ಇತರ ಪಂಗಡದವರು ಅಳವಡಿಸಿಕೊಂಡು ಕೆಲವು ವರ್ಷಗಳು ಕಳೆದ ಅನಂತರ ಎನ್ನುವುದು ಒಪ್ಪಲೇಬೇಕಾದದ್ದು. ಇರಲಿ, better late than never!
ಕರಾಡ ಸಮುದಾಯವು ತಂತ್ರಜ್ಞಾನ, ಆವಿಷ್ಕಾರ ಮತ್ತು ಹೊಸತನಗಳಿಗೆ ಒಗ್ಗಿಕೊಂಡು, ಒಡ್ಡಿಕೊಂಡು, ಒಪ್ಪಿಕೊಂಡು, ಅಪ್ಪಿಕೊಂಡು ಎಲ್ಲರೂ ತಂತಮ್ಮ ಜೀವನ ಮಟ್ಟವನ್ನು ಕಾಲಾಂತರದಲ್ಲಿ ಸುಧಾರಿಸಿಕೊಂಡಿದ್ದಾರೆ. ಊರಿನ ಬೆರಳೆಣಿಕೆಯಷ್ಟು ಮನೆಗಳಲ್ಲಿ ಮಾತ್ರ ಇದ್ದ ದ್ವಿಚಕ್ರ, ನಾಲ್ಕುಚಕ್ರದ ವಾಹನಗಳು ಪ್ರತಿಯೊಂದು ಮನೆಯಲ್ಲೂ ಈಗ ಒಂದಕ್ಕಿಂತ ಹೆಚ್ಚು ಪಾರ್ಕ್ ಆಗಿವೆ. ಟೀವಿ, ವಾಷಿಂಗ್ ಮೆಷಿನ್, ಫ್ರಿಡ್ಜ್, ಇನ್ವರ್ಟರ್, ಎಸಿ, ಇಂಟರ್‌ನೆಟ್ ಮುಂತಾದ ಒಂದು ಕಾಲದ ಐಷಾರಾಮಿ ವಸ್ತು-ವ್ಯವಸ್ಥೆಗಳು ಈಗ ಅತ್ಯಗತ್ಯ ಸಾಧನಗಳಾಗಿ ನಮ್ಮೆಲ್ಲರ ಮನೆ ಸೇರಿ ಕುಳಿತಿವೆ! ಕೆಲವೇ ಕೆಲವು ಮನೆಗಳಲ್ಲಿ ಇದ್ದ ಲ್ಯಾಂಡ್‌ಲೈನ್ ಫೋನಿನ ಕಾಲದಿಂದ ಪ್ರತಿಯೊಂದು ಮನೆಯಲ್ಲೂ ಜನರಷ್ಟೇ ಸಂಖ್ಯೆಯ ಮೊಬೈಲ್‌ಗಳು ವಕ್ಕರಿಸಿವೆ. ಈ ಎಲ್ಲಾ ಹೊಸತನಗಳಿಗೆ ನಾವು ಬಹುಬೇಗ ಒಗ್ಗಿಕೊಂಡು ಮುಂದಡಿ ಇಡುತ್ತಿದ್ದೇವೆ.
ಕಳೆದ ಒಂದೂವರೆ ದಶಕಗಳಿಂದ ಇತರ ಎಲ್ಲಾ ಸಮಾಜ-ಪಂಗಡದವರಂತೆ ನಮ್ಮ ಸಮಾಜವೂ ಬದಲಾವಣೆಗೆ ಅನಿವಾರ್ಯವಾಗಿ ಒಗ್ಗಿಕೊಂಡು ಜೀವನಶೈಲಿಯ ಸಂಪೂರ್ಣ ಚಿತ್ರಣವೇ ಬದಲಾಗಿದೆ! ಮುಖ್ಯವಾಗಿ ಕೃಷಿಯ ಆದಾಯದಿಂದ ಜೀವನ ನಡೆಸುತ್ತಿದ್ದ ಬಹುತೇಕ ಕರಾಡ ಕುಟುಂಬಗಳಿದ್ದ ಆ ಕಾಲದಿಂದ, ಈಗ ಕೃಷಿ ಮತ್ತದರ ಆದಾಯ ಕೇವಲ ಐಚ್ಛಿಕ (optional) ಆಗಿದೆ. ನಮ್ಮ ಮನೆಗಳ/ಕುಟುಂಬದ ಎಲ್ಲರೂ ಕೃಷಿಯೇತರ ರಂಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಗರವಾಸಿಗಳಾಗಿ ಉತ್ತಮ ಆದಾಯ ಗಳಿಸುತ್ತಾ ಸಮೃದ್ಧ ಜೀವನ ನಡೆಸುತ್ತಿದ್ದಾರೆ. ಊರಿನ ಬಹುತೇಕ ಮನೆಗಳು ವೃದ್ಧರು ವಾಸಿಸುವ ಮನೆಗಳಾಗಿವೆ. ಅಲ್ಲಿನ ಕೃಷಿ ಚಟುವಟಿಕೆ ಕ್ಷೀಣಿಸಿದೆ ಮತ್ತು 'ಕೃಷಿ ತನ್ನ ಕಾಲದಲ್ಲಿ ನಿಂತಿತು' ಎನ್ನುವ ಅಪವಾದ ಬಾರದಿರಲಿ ಎಂಬ ಆತಂಕವೂ ಮಿಳಿತಗೊಂಡು, ಕೃಷಿಗೆ ಸಂಬಂಧಿಸಿದ ವಿಚಾರದಲ್ಲಿ ಒಂದಷ್ಟು ತಂತ್ರಜ್ಞಾನ, ಯಂತ್ರೋಪಕರಣಗಳು ಹಳ್ಳಿಯ ಎಲ್ಲ ಮನೆಗಳಲ್ಲಿ ಬಂದಿವೆ. ಕಣಿಗಳಲ್ಲಿ ನೀರು ಬಿಟ್ಟು ಮರದ ಸಣ್ಣ ಸಾಧನ ಬಳಸಿ ಕೈಯಿಂದ ತೋಟದಲ್ಲಿ ನೀರು ಸಿಂಪಡಿಸುವ ಕಾಲದಿಂದ ಸ್ಪ್ರಿಂಕ್ಲರ್, ಹನಿ ನೀರಾವರಿ ಯುಗಕ್ಕೆ ಬಂದಿದ್ದೇವೆ. ಕುಳಿತಲ್ಲಿಂದಲೇ ಆನ್/ಆಫ್ ಮಾಡಬಹುದಾದ ಅಟೊಮ್ಯಾಟಿಕ್ ನೀರಾವರಿ ವ್ಯವಸ್ಥೆ, ಆಪ್‌ಗಳು ಅದಾಗಲೇ ಬಂದಿವೆ. ತೆಂಗು-ಕಂಗಿನ ಮರ ಹತ್ತಿ ಕೊಯ್ಲು ಕೊಯ್ಯುವ, ಮದ್ದು ಬಿಡುವ ಕಾಲದಿಂದ ದೋಟಿಗಳು ಮತ್ತು ಮೋಟಾರ್‌ಗಳ ಸಹಾಯದಿಂದ ಈ ಕೆಲಸಗಳು ಸರಳವಾಗಿವೆ. ಹುಲ್ಲು-ಕಳೆ ಕೀಳಲು ಮೆಷಿನ್ ಉಪಯೋಗ, ಜಾಬ್ ವರ್ಕ್ ಜಾರಿಯಲ್ಲಿದೆ. ಕೊಯ್ಲು, ಗೊಬ್ಬರ ಸಾಗಿಸಲು ತಳ್ಳುಗಾಡಿ, ಮೋಟಾರ್ ಚಾಲಿತ ಗಾಡಿಗಳು ಬಳಕೆಯಲ್ಲಿವೆ. ಆಳ ಪ್ರದೇಶದ ತೋಟದಿಂದ ಅಂಗಳಕ್ಕೆ ಕೊಯ್ಲು ಸಾಗಿಸಲು, ಅಂಗಳದಿಂದ ಕೆಳಗಿನ ತೋಟಕ್ಕೆ ಹಟ್ಟಿಗೊಬ್ಬರ ಸಾಗಿಸಲು ಸ್ವಯಂಚಾಲಿತ ರೋಪ್‌ವೇ ಅಳವಡಿಕೆಯಾಗಿದೆ. ಅಡಿಕೆ, ತೆಂಗಿನಕಾಯಿ ಸುಲಿಯಲು ತರಹೇವಾರಿ ಯಂತ್ರೋಪಕರಣಗಳು ಇವೆ. ಕೃಷಿಗೆ ಹಾಕುವ ದೈಹಿಕ ಶ್ರಮ ಮತ್ತು ಸಮಯ ಗಣನೀಯವಾಗಿ ತಗ್ಗಿದೆ. ಇದು ಸಾಧ್ಯವಾದದ್ದು ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ.
ತಂತ್ರಜ್ಞಾನದ ಇನ್ನೊಂದು ಮಹತ್ತರ ಉಪಯೋಗ ಹವಾಮಾನ ಮುನ್ಸೂಚನೆ. ಮೊದಲೆಲ್ಲ ಮಳೆ, ಚಳಿ, ಬಿಸಿಲಿನ ಕುರಿತಾದ ನಿಖರ ಮಾಹಿತಿ ಕೃಷಿಕರಿಗೆ ದೊರಕುತ್ತಿರಲಿಲ್ಲ. ಈಗ ಮಳೆಯ ಸಾಧ್ಯತೆ, ಬಿಸಿಲಿನ ವಿವರ ಮುಂತಾದವು ಕೃಷಿಕನ ಬೆರಳ ತುದಿಯಲ್ಲಿ ಲಭ್ಯ. ಹೀಗಿರುವಾಗ ತನ್ನ ಕೃಷಿ ಚಟುವಟಿಕೆಗಳು, ಅಂಗಳದಲ್ಲಿ ಹರಡಿದ ಅಡಿಕೆಯನ್ನು ಸಂಭಾವ್ಯ ಮಳೆಯಿಂದ ರಕ್ಷಿಸುವುದು ಇತ್ಯಾದಿ ನಮ್ಮ ಕೃಷಿಕರಿಗೆ ಸುಲಭವಾಗುತ್ತಿದೆ. ಅಡಿಕೆ, ತೆಂಗು, ಕಾಳುಮೆಣಸು, ರಬ್ಬರ್ ಮುಂತಾದ ಉತ್ಪನ್ನಗಳ ಮಾರುಕಟ್ಟೆ ವಿವರಗಳೂ ತಂತ್ರಜ್ಞಾನದ ಮುಖಾಂತರ ಮೊಬೈಲಿನಲ್ಲಿ ದೊರಕುವುದೂ ನಮ್ಮ ಕೃಷಿಕರಿಗೆ ವರವಾಗಿ ಪರಿಣಮಿಸಿದೆ.
ಸಮುದಾಯದ ವಿವಿಧ ಮಾಹಿತಿ, ಶುಭ ಕಾರ್ಯಗಳ ವಿವರಗಳು, ಸಮಾರಂಭ/ಕಾರ್ಯಕ್ರಮಗಳ ವಿವರಗಳನ್ನು ಪ್ರಪಂಚದ ಯಾವುದೇ ಮೂಲೆಯಲ್ಲಿ ಇರುವ ಕರಾಡ ಬಂಧುಗಳಿಗೆ ಕ್ಷಣಾರ್ಧದಲ್ಲಿ ತಲುಪಿಸುವ ವ್ಯವಸ್ಥೆಯನ್ನೂ ಈ ತಂತ್ರಜ್ಞಾನ ತುಂಬಾ ಸುಲಭವಾಗಿಸಿದೆ. ಮೊದಲಿನ ಕಾಲದಲ್ಲಿ ಬಂಧು-ಬಳಗಕ್ಕೆಲ್ಲಾ ಆಮಂತ್ರಣ ಕೊಡುವುದೇ ದೊಡ್ಡ, ಸವಾಲಿನ, ಸಮಯ ಬೇಡುವ ಕೆಲಸವಾಗಿತ್ತು. ಈಗ ಅದು ಸುಲಭ-ಸರಳ. ಜನರ ಬಹುಪಾಲು ಶ್ರಮ, ಸಮಯ ಮತ್ತು ಹಣ ಉಳಿತಾಯವಾಗುತ್ತಿದೆ. ಎಲ್ಲವೂ ತಾಂತ್ರಿಕವಾಗಿ ನಡೆಯುವ ಇಂದಿನ ಕಾಲದಲ್ಲಿ, ಈ ಪ್ರಕ್ರಿಯೆಯಿಂದ 'ವೈಯಕ್ತಿಕ ಅನುಭೂತಿ' ಮತ್ತು 'ಜನರ ಮುಖಾಮುಖಿ-ಮಾತು, ಸಲ್ಲಾಪ' ಒಂದಷ್ಟು ನೇಪಥ್ಯಕ್ಕೆ ಸರಿಯುತ್ತಿರುವುದೂ ಸುಳ್ಳಲ್ಲ.
ನಮ್ಮ ಹತ್ತಿರದವರ ಸಮಾರಂಭ (ಮದುವೆ, ಉಪನಯನ ಇತ್ಯಾದಿ), ಸಮುದಾಯದ ಸಮಾರಂಭ/ಕಾರ್ಯಕ್ರಮ, ನಮ್ಮ ಊರಿನ ದೇವಸ್ಥಾನದ ಉತ್ಸವ ಇತ್ಯಾದಿಗಳನ್ನು ದೂರದ ಊರಿನಲ್ಲಿ ಕುಳಿತಲ್ಲಿಂದಲೇ 'ಲೈವ್ ಸ್ಟ್ರೀಮಿಂಗ್' ಮುಖಾಂತರ ಕೇಳುವುದು, ನೋಡುವುದು ಮತ್ತು ಕಣ್ತುಂಬಿಕೊಳ್ಳುವುದು ತಂತ್ರಜ್ಞಾನದ ಮತ್ತೊಂದು ದೊಡ್ಡ ಕೊಡುಗೆ! ಉದಾಹರಣೆಗೆ ಸಮುದಾಯದ ನಾಲ್ಕೂ ದೇವಸ್ಥಾನಗಳ ವರ್ಷಾವಧಿ ಉತ್ಸವವನ್ನು ಬೆಂಗಳೂರಿನ ಮನೆಯಲ್ಲಿ ಕುಳಿತು ಕಣ್ತುಂಬಿ, ನಮಸ್ಕರಿಸಿ, ಕೃತಾರ್ಥರಾಗುವ ಘಳಿಗೆ ಆ ಕಾರ್ಯಕ್ರಮಕ್ಕೆ ಹೋಗಲಾಗದವನ ಮನಸಿಗೆ ಮುದ ನೀಡುವುದು ಸತ್ಯ! ನಮ್ಮವರೇ ತಯಾರಿಸಿ ಲೋಕಾರ್ಪಣೆಯಾಗಿ ನಿರಂತರ ಉನ್ನತಿ ಹೊಂದುತ್ತಿರುವ 'ಕರಾಡ ವಿಶ್ವ' ಆಪ್ ತಂತ್ರಜ್ಞಾನದ ತಳಹದಿಯಲ್ಲಿ ಇಡೀ ಸಮುದಾಯವನ್ನು, ನಮ್ಮವರ ಎಲ್ಲಾ ಮಾಹಿತಿಗಳನ್ನು ಒಂದೇ ಸೂರಿನಡಿ ತಂದು ಇಡೀ ಕರಾಡ ಪ್ರಪಂಚವನ್ನು ಅಂಗೈಯೊಳಗೆ ತಂದಿಟ್ಟಿದೆ!
ಆವಿಷ್ಕಾರ, ತಂತ್ರಜ್ಞಾನ ನಮಗೆಲ್ಲ ಒಳಿತನ್ನು ಮಾಡಿರುವುದು ನಿಸ್ಸಂಶಯ. ಜೊತೆಗೆ ಒಂದಷ್ಟು ತೊಂದರೆಗಳನ್ನು, ಜನರ ನಡುವೆ ಒಂದಷ್ಟು ಕಂದಕಗಳನ್ನು ಸೃಷ್ಟಿಸಿದ ಉದಾಹರಣೆಗಳೂ ನಮ್ಮ ಕಣ್ಣಮುಂದಿವೆ. ಈಗಿನ ಸಾಮಾಜಿಕ ಮಾಧ್ಯಮಗಳನ್ನು ಸಮಾಜದ ಉದ್ಧಾರ ಮತ್ತು ಉನ್ನತಿಗಾಗಿ ಬಳಸಿದರೆ ಅದು ನಮ್ಮ ಸಮಾಜದ ನಿಜವಾದ ಆಸ್ತಿಯಾಗುವುದು ದಿಟ. ಇದರ ಬದಲಾಗಿ ವೈಯಕ್ತಿಕ ನಿಂದನೆ, ಯಾರದೋ ವಿರುದ್ಧ ಇನ್ಯಾರನ್ನೋ ಎತ್ತಿಕಟ್ಟಲು ಉಪಯೋಗವಾದರೆ ಅದು ವ್ಯಕ್ತಿಯ, ಗುಂಪಿನ ಮತ್ತು ಸಮುದಾಯದ ಅವನತಿಗೆ ಕಾರಣವಾದೀತು. ಅಷ್ಟೇ! ಹಾಗಾಗದಿರಲಿ ಮತ್ತು ಹಾಗಾಗ ಕೂಡದು. ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮವನ್ನು ಕೇವಲ ಒಳಿತಿಗಾಗಿ ಬಳಸುವ ಪಣ ತೊಡೋಣ.
ಜಾಗತೀಕರಣ ಮತ್ತು ತಂತ್ರಜ್ಞಾನ ಇತರರಂತೆ ನಮ್ಮ ಸಮುದಾಯದ ಎಲ್ಲರಿಗೂ ಅನುಕೂಲ ಮಾಡಿಕೊಟ್ಟಿದೆ. ಇಡೀ ಜಗತ್ತನ್ನು ನಮ್ಮೆದುರು ತೆರೆದಿಟ್ಟು ನಮ್ಮ ಯುವ ಜನಾಂಗಕ್ಕೆ ಹಲವಾರು ಅವಕಾಶಗಳನ್ನು, ಔದ್ಯೋಗಿಕ ನೆರವು, ಅನೇಕ ಸಾಧ್ಯಾಸಾಧ್ಯತೆಗಳನ್ನು ಈ ತಂತ್ರಜ್ಞಾನ ಯುಗ ನೀಡಿದೆ ಮತ್ತು ನಮ್ಮ ಬಹುಪಾಲು ಯುವ ಜನಾಂಗ ಇದರ ಸದುಪಯೋಗ ಪಡೆದುಕೊಂಡು ಸಶಕ್ತವಾಗುತ್ತಿದೆ. ಇದರ ಜೊತೆಗೆ ವಿಳಂಬ ವಿವಾಹ, ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನಗಳು, ಮಗು ಬೇಡ/ಒಂದೇ ಸಾಕು, ಊರಿನ ಕೃಷಿ ಮನೆಯಿಂದ ವಿಮುಖರಾಗುವುದು, ಕ್ಷೀಣಿಸುತ್ತಿರುವ ಸಂಬಂಧಗಳು, ಪೋಷಕರ ನಿಷ್ಕ್ರಿಯತೆ, ಅಂತರ್ಜಾತಿ ವಿವಾಹ ಸಂಬಂಧಗಳು... ಹೀಗೆ ಇವೆಲ್ಲವೂ ಈ ತಂತ್ರಜ್ಞಾನದ, 'ಮಾಡರ್ನ್ ಥಿಂಕಿಂಗ್' ಹೆಸರಿನ ಅನಪೇಕ್ಷಿತ, ಅಯಾಚಿತ ಕೊಡುಗೆಗಳು! ಇವೆಲ್ಲವನ್ನೂ ನಿಭಾಯಿಸಿ, ಮೀರಿಸಿ ಉತ್ತಮ ಕುಟುಂಬ, ಮತ್ತಷ್ಟು ಉತ್ಕೃಷ್ಟ ಕರಾಡ ಸಮಾಜ ನಿರ್ಮಾಣದ ಗುರುತರ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ. ಮದುವೆ-ಮಕ್ಕಳು ಎರಡೂ ಆಗುವ ಕಾಲಕ್ಕೆ/ಸಕಾಲಕ್ಕೆ/ಸರಿಯಾದ ವಯಸ್ಸಿಗೆ ಆದರಷ್ಟೇ ಅದು ಚೆಂದ. ಕರಾಡ ಆಚಾರ, ವಿಚಾರ, ಸಂಸ್ಕೃತಿ, ನಮ್ಮತನ, ನಮ್ಮ ಹಿರಿಮೆ-ಗರಿಮೆ, ಭಾಷೆ, ಅಡುಗೆ, ವೇದಿಕೆ ವರ್ಚಸ್ಸು... ಹೀಗೆ ಎಲ್ಲವನ್ನೂ ಅನೂಚಾನವಾಗಿ ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ-ಸಮರ್ಥವಾಗಿ ದಾಟಿಸಲು ನಮ್ಮೆದುರು ಲಭ್ಯವಿರುವ ಈ ತಂತ್ರಜ್ಞಾನವನ್ನು ಸೂಕ್ತವಾಗಿ-ಸಮಯೋಚಿತವಾಗಿ ಉಪಯೋಗಿಸೋಣ. ಸ್ವಸ್ಥ, ವಿಕಸಿತ, ಪರಸ್ಪರ ಸಹಯೋಗದ ಸಶಕ್ತ-ಶ್ರೇಷ್ಠ ಕರಾಡ ಸಮಾಜ ಕಟ್ಟೋಣ. ಈ ಸಂಕಲ್ಪವನ್ನು ನಾವೆಲ್ಲರೂ ಹೃದಯದಿಂದ-ಸನ್ಮನಸ್ಸಿನಿಂದ ನಿಭಾಯಿಸಿದರೆ 'ಭರವಸೆಯ ನಾಳೆಗಳು ನಮದೆನಿಸಲಿವೆ'.
ನಿನ್ನೆ ಮೊನ್ನೆಯಲಿತ್ತು ನಾಳೆಯದೊಂದು ಕಣ...
ನಾಳೆಗಳಲೂ ಇರಲಿ ನಿನ್ನೆಯದೊಂದು ಕ್ಷಣ...!
ಸರ್ವೇ ಸಂತು ನಿರಾಮಯಾಃ.
ರವೀ ಸಜಂಗದ್ದೆ
(ಲೇಖಕರು ಬೆಂಗಳೂರು ನಿವಾಸಿ, ಬಹುರಾಷ್ಟ್ರೀಯ ಕಂಪೆನಿಯೊಂದರ ಉದ್ಯೋಗಿ, ಹವ್ಯಾಸಿ ಬರಹಗಾರರು)
PublishedCommunity
