Karada Vishwa

Article · November 15, 2026

ನನ್ನೊಳು ಮಿಂದ ಕಾವ್ಯ - ಅವಳು ನನ್ನೊಳಗಿನ ಆಕೆ

ಶ್ರಾವ್ಯಾ ಭಟ್ , ಕೆದಂಬಾಯಿಮೂಲೆ

ನನ್ನೊಳಗಿನ ಮನಸಿನ ಆ ಒಂದು ಪ್ರಶ್ನೆಗೆ ಮನಸೋತು ಹೋದೆ. ಅವಳಾರು ಎಂಬ ಗೊಂದಲದಲಿರುವ ನನ್ನ ಮನಸಿನ ಆಳದ ಪ್ರಶ್ನೆಗೆ ಉತ್ತರವೆಂಬಂತೆ ಆಕೆ ನನ್ನ ಕಣ್ಣಿಗೆ ಕಾಣಿಸಿಯೇ ಬಿಟ್ಟಳು. ಆಕೆ ಮೃದು ಸ್ವಭಾವದ ಮುಗ್ಧ ಮಗು. ಗುಣವಂತೆ, ಸಂಸ್ಕಾರವಂತೆ, ಚೆಲುವೆ, ಅಂದದ ಶೃಂಗಾರದೊಳು ಮುಳುಗಿದ ಮಿಂದ ಕಾವ್ಯ.

ನಗುವ ಗುಲಾಬಿ ಹೂವು ಮುಡಿಗೇರಿದಾಗ ಆಗುವ ಖುಷಿ ಅವಳ ಮಂದಹಾಸದಲ್ಲರಳಿತ್ತು. ನಕ್ಕಾಗ ಆಗುವ ಸಿಡಿಲ್ಮಿಂಚಿನ ಸ್ಪರ್ಷ ಆಕೆಯ ಕಣ್ಣುಗಳಲ್ಲರಳಿತ್ತು. ಪ್ರೀತಿಯ ಹೆಸರಿನ ನಡುವೆ ಕಳೆದುಹೋದ ನಾಯಕಿಯಾಗಿ, ಸ್ವಾತಿಮುತ್ತಿನ ತೇರ ಮನ್ಮಥೆಯಂತಿದ್ದವಳು ಆ ಸೌಂದರ್ಯವತಿ. ಕಣ್ಣ ರೆಪ್ಪೆಯಲ್ಲೇ ಕೊಲ್ಲುವ ರೂಪವಂತೆ, ಕೆಂಚು ಬಣ್ಣದ ಕಣ್ಣಿನ ಕಿನಾರೆ, ಆಕೆಯ ಚೆಲುವನ್ನು ಕಂಡಾಗ ಮನಸೋಲದವರುಂಟೇ... ನಾನೇ ಒಂದು ನಿಮಿಷ ಆಕೆಯ ಕಂಡು ಕರಗಿಹೋದೆ...

ನಗುವ ತುಟಿಗಳಂಚಿನ ಸಿಹಿಯಾದ ಜೇನ ಸ್ಪರ್ಷದೊಳು ನಯನದ ಮಧುರ ಮೌನದೊಳು, ಮಿಡಿವ ಹೃದಯವ ಕದಿಯುವ ಕಳ್ಳಿ ಇವಳು. ಕಣ್ಣಲ್ಲೇ ಯಾಮಾರಿಸಿ ಸತಾಯಿಸುವ ಪ್ರೇಮದ ಕುವರಿ, ಕದ್ದು ಕದ್ದು ನೋಡುವ ಬಂಗಾರದ ಅರಗಿಣಿ. ಒಲವ ಅಮೃತಧಾರೆಯೊಳು ಜಿನುಗೋ ಮಳೆಯಾಗಿ, ಮಿನುಗೋ ತುಟಿಗೆ ನಗುವ ಬೀರಿದವಳು.

ಅಳಿವಿನಂಚಿನ ಕಿಟಕಿಯ ನಡುವೆ ಕಣ್ಣೆತ್ತಿ ನೋಡುವ ಆ ಕಣ್ಣು, ಶ್ವೇತ ವರ್ಣದ ಹೊಳಪಾದ ಆ ಹಲ್ಲು, ಗುಲಾಬಿ ಬಣ್ಣದ ಆ ತುಟಿ, ಮುದ್ದಾಡಬೇಕೆನಿಸುವ ಆ ಕೆನ್ನೆ, ಆಕರ್ಷಿಸುವ ಆ ಅವಳ ಕಿರುನಗೆ ಇದೆಲ್ಲದರಿಂದ ಅವಳೊಂದು ಅದ್ಭುತ. ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯ ಸೌಂದರ್ಯವ ಮೀರುಸುವ ಸುಂದರಿ ಅವಳು.

ಆಕೆಯ ಕಾಲ್ಗೆಜ್ಜೆಯ ನಾದ, ಕೈಬಳೆಯ ಸದ್ದು ಚುರುಕು ನೋಟ ಇವೆಲ್ಲದರಿಂದ ಆಕೆ ಶಿಲಾಬಾಲಿಕೆ. ಆಕೆಯ ನಗು, ಕೋಪ, ಸಿಟ್ಟು, ಮಗುವಿನ ತರಹದ ಹಠ, ಪ್ರೀತಿ, ಕಾಳಜಿ, ವಾತ್ಸಲ್ಯ ಇವೆಲ್ಲದರಿಂದ ಆಕೆಯನ್ನು ಮುದ್ದಾಡಿ ಪೀಡಿಸುವುದರಲ್ಲಡಗಿದೆ ಒಂದು ಖುಷಿ. ನಕ್ಕರೆ ಅಪ್ಸರೆ, ಅತ್ತರೆ ಕಡಲ ಕಿನಾರೆ, ಕೋಪಗೊಂಡರೆ ಭದ್ರಕಾಳಿಯನ್ನೇ ಮೀರಿಸುವವಳು. ಅಪರೂಪಕ್ಕೊಮ್ಮೆ ಬೇಜಾರುಗಳನ್ನೆಲ್ಲ ಸಹಿಸಿ ತನ್ನೊಳಗೆ ಕೊರಗಿ ಸುಮ್ಮನಾಗುವವಳು. ಸಣ್ಣ ಪುಟ್ಟ ವಿಷಯಗಳನ್ನು ಇಷ್ಟವಿದ್ದವರ ಜೊತೆ ಹಂಚಿಕೊಳ್ಳುವ ವಿಶಾಲ ಹೃದಯದವಳು. ಮನಸ್ಸಿನಾಳದಲ್ಲಿರುವ, ಪ್ರೀತಿಸುವ ಹೃದಯಗಳ ಜೊತೆ ಮಾತನಾಡಲು, ಕಾಲ ಕಳೆಯಲು ಹಂಬಲಿಸುವ ಜೀವಂತ ಕಾವ್ಯ ಅವಳು...

ಅವಳಾರೆಂಬ ಕುತೂಹಲದಲ್ಲಿರುವವರ ನಿಮ್ಮ ಮನಸ್ಸಿನ ಪ್ರಶ್ನೆಗೆ ಉತ್ತರ ಹೇಳುವ ಕಾಯಕ ನನ್ನದಾಗಿರುವುದರಿಂದ, ಹಿಂಜರಿಯದೆ ಹೇಳುವೆ ಆಕೆ ಸದಾ ನನ್ನ ಜೊತೆ ಇರುವ ನನ್ನ ಮನಸ್ಸು , ನನ್ನ ಆತ್ಮ ಅವಳೇ ನನ್ನ ಮನಸ್ಸಿನಾಳದ ಹುಡುಗಿ.... ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತು ಅಂತ ಅಂದುಕೊಳ್ಳುತ್ತೇನೆ. ನಿಮ್ಮನ್ನು ನೀವು ಮನಸಾರೆ ಪ್ರೀತಿಸಿ, ಗೌರವಿಸಿ, ನಿಮ್ಮ ಆತ್ಮವನ್ನು ಅಷ್ಟೇ ಪ್ರೀತಿಸಿ, ಮನಸ್ಸಿಗೆ ನೋವು ಕೊಟ್ಟು ಕುಗ್ಗದಿರಿ, ಕೊರಗದಿರಿ, ಕೊರಗಿ ನಿರಾಶರಾಗದಿರಿ......

Creative Writings