
Article · November 9, 2026
ದೀಪಾವಳಿ ಹಬ್ಬದ ಮಹತ್ವ.
By ಶ್ರೀದೇವಿ ಕಜಮಲೆ.
ಶ್ರೀದೇವಿ ಭಟ್
ದೀಪಾವಳಿ ಹಬ್ಬದ ಪ್ರಾಮುಖ್ಯತೆಯ ಬಗ್ಗೆ ಬೆಳಕು ಚೆಲ್ಲುವ ಲೇಖನ
ನಮ್ಮ ಸನಾತನ ಸಂಸ್ಕೃತಿಯ ಇತಿಹಾಸದಲ್ಲಿ ಭಾರತದೇಶದಲ್ಲಿ ಹಬ್ಬಗಳಿಗೆ ವಿಶಿಷ್ಟ ಸ್ಥಾನವಿದೆ.ಈ ಹಬ್ಬಗಳ ಆಚರಣೆಯು ಆಧ್ಯಾತ್ಮಿಕತೆಯ ದೃಷ್ಟಿಕೋನದಿಂದ ಮನುಷ್ಯನ ಅಂತರಂಗವನ್ನ ದೈವತ್ವದ ಕಡೆಗೆ ತಂದು ನಿಲ್ಲಿಸುವ, ಮುಖ್ಯವಾಗಿ ನಮ್ಮ ಸಂಸ್ಕೃತಿಯನ್ನ ಬೆಳಗಿಸುವ ಹಿಂದೂ ಹಬ್ಬಗಳಾಗಿವೆ. ಈ ಹಬ್ಬಗಳಲ್ಲಿ ಬೆಳಕು ಚೆಲ್ಲುವ ಹಬ್ಬವೇ ದೀಪಾವಳಿ ಹಬ್ಬ. ಈ ಹಬ್ಬವು ಹಣತೆಯಾಗಿ, ಜಗತ್ತಿನ ಅಂಧಕಾರವನ್ನ ಕಳೆದು ಬೆಳಕು ನೀಡುವ ಜ್ಯೋತಿಯಾಗಿ, ಕತ್ತಲೆಯನ್ನ ದೂರಮಾಡುವ ಸಾಧನ. ಇದರ ಜತೆಯಲ್ಲಿ ಮಾನವನ ಅಂತರಂಗದಲ್ಲಿ , ಕಾಮಕ್ರೋಧಗಳೆಂಬ ಅಜ್ಞಾನದ ಅಂಧಕಾರವನ್ನ ಸರಿಸಿ, ಜ್ಞಾನದ ಬೆಳಕನ್ನ ನೀಡಿ ದೈವತ್ವದ ಭಾವನೆಗಳನ್ನ ಬೆಳೆಸುವ ಹಬ್ಬವಾಗಿದೆ. ಇದಕ್ಕೆ ಪ್ರಮುಖವಾಗಿ ಭಾರತೀಯ ವೇದ ಗ್ರಂಥಗಳು , ಪುರಾಣಗಳು ಹಾಗೂ ಉಪನಿಷತ್ತುಗಳು, ನಿದರ್ಶನವಾಗಿವೆ.ಯಾವುದೇ ಆಯಾಮದಲ್ಲಿ ನೋಡಿದರೂ, ಐತಿಹಾಸಿಕವಾಗಿಯೂ, ಬೌದ್ಧಿಕವಾಗಿಯೂ, ಸಾಂಸ್ಕೃತಿಕವಾಗಿಯೂ, ಹಾಗೂ ವೈಜ್ಞಾನಿಕವಾಗಿಯೂ ನಮ್ಮ ಸನಾತನ ಧರ್ಮದ ಆಚರಣೆಗಳನ್ನ ಪರಂಪರಾನುಗತವಾಗಿ ಆಚರಿಸುವ ಹಬ್ಬಗಳು. ಇದೆಲ್ಲವೂ ಆಯಾ ಕಾಲಕ್ಕನುಗುಣವಾಗಿ ನಡೆದುಬಂದ ಪಧ್ಧತಿಗಳು.ಈ ಆಚರಣೆಯ ಹಿಂದೆ ಭಾರತೀಯ ಸಂಸ್ಕೃತಿಯು ಅದರದೇ ಆದ ಮಹತ್ವವನ್ನ ಪಡೆದುಕೊಂಡಿದೆ . ಇಲ್ಲಿ ಆಯಾ ಹಬ್ಬಗಳ ಹಿಂದೆಯೂ ಒಂದೊಂದು ಕಾರಣವಿದೆ .ಇದರಂತೆ ಭಗವಾನ್ ಕೃಷ್ಣನು ಲೋಕಕಂಟಕನಾದ ನರಕಾಸುರನ ವಧೆ ಮಾಡಿದ ಕಾರಣಕ್ಕಾಗಿ ದೀಪಾವಳಿಯನ್ನ ಆಚರಿಸಲಾಗುತ್ತದೆ ಇದರಿಂದ ಅಂಧಕಾರವು ತೊಲಗಿ ಲೋಕದಲ್ಲಿ ಸುಖಶಾಂತಿ ನೆಲೆಸಲಿ ಎನ್ನುವ ಕಾರಣಕ್ಕಾಗಿಯೂ ದೀಪಾವಳಿಯನ್ನ ಆಚರಿಸಲಾಗುತ್ತದೆ. ಅಶ್ವಯುಜ ಕೃಷ್ಣ ಚತುರ್ದಶಿಯಂದೇ ಕೃಷ್ಣನು ಲೋಕಕಂಟಕನಾದ ನರಕಾಸುರನ ವಧೆ ಮಾಡಿದ ದಿನವಾದ ಅಂದೇ ನರಕ ಚತುರ್ದಶಿ.ಅದರ ಮರುದಿನವೇ ಅಮಾವಾಸ್ಯೆ.ಇದುವೇ ದೀಪಾವಳಿ ಅಮಾವಾಸ್ಯೆ.ಈ ದಿನ ಕತ್ತಲೆಯನ್ನ ಕಳೆದು ಬೆಳಕಿನೆಡೆಗೆ ಹೆಜ್ಜೆ ಇಡುವಂತಾಗಲಿ ಎಂದು ಭಾರತದಾದ್ಯಂತ ಈ ಬೆಳಕಿನ ಹಬ್ಬಕ್ಕೆ ಪ್ರಾಮುಖ್ಯತೆಯನ್ನ ಕೊಡಲಾಗಿದೆ. ದೀಪಾವಳಿ ಎಂದರೆ,ಹೊಸ ಉಡುಪು ತೊಟ್ಟು,ಪಟಾಕಿ ಸಿಡಿಸಿ,ತಿಂಡಿತಿನಿಸು ಮಾಡಿ ಸಂಭ್ರಮಿಸುವುದಲ್ಲ. ಬದಲಾಗಿ ಅಂತರಂಗದಲ್ಲಿ ಜ್ಞಾನದ ಕಿಡಿಯನ್ನ ಬೆಳಗಿಸುವುದರ ಜತೆಗೆ, ಆಧ್ಯಾತ್ಮಿಕವಾದ ವಿಚಾರಧಾರೆಗಳನ್ನ ಬೆಳೆಸಿ, ಅಂತರಂಗ ಹಾಗೂ ಬಹಿರಂಗ ಶುಧ್ಧಿಯಾಗಿ ಮನದ ಕಲ್ಮಶಗಳು ಹಾಗೂ ಹೊರಗಿನ ಕಲ್ಮಶಗಳು ನಾಶವಾಗಿ ವ್ಯಕ್ತಿಯನ್ನ ದೈವತ್ವದತ್ತ ಕೊಂಡೊಯ್ಯುವ ಹಬ್ಬವಾಗಿದೆ. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ನೆಮ್ಮದಿ ಸಂತಸಗಳು ದೊರೆತು ಜೀವನವು ಪರಿಪೂರ್ಣವಾಗುವುದೆನ್ನುವ ನಂಬಿಕೆಯಿದೆ. ಇದರಂತೆ, ಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ ಮಹಾಭಾರತದಿಂದ ಆಯ್ದ 18 ಅಧ್ಯಾಯಗಳ ಭಗವದ್ಗೀತೆಯು ಮಾನವನಿಗೆ , ಜೀವನದ ಹಾದಿಯಲ್ಲಿ ಬೆಳಕು ಚೆಲ್ಲುವ ಗ್ರಂಥವಾಗಿ ಭಾರತೀಯರ ಜೀವನಾಡಿಯಾಗಿದೆ.
