
Article · July 12, 2026
ಬದುಕೆಂಬ ಮಾಯೆಯೊಳಗೆ
- ಜಯಶ್ರೀ ಕೆ.ಆರ್.ಭಟ್ ಪಳ್ಳತಡ್ಕ
ಒಲವುಂಟು, ಬಲವುಂಟು ಛಲ ಉಂಟು ಗೆಲುವುಂಟು
ಜೀವನದ ಮಾಯೆಯೊಳಗೆ |
ನೋವುಂಟು, ನಲಿವುಂಟು ಜೀವನವೆ ಕಗ್ಗಂಟು
ಮಾಯೆಯಾ ಛಾಯೆಯೊಳಗೆ II
ಚಂದನದ ಘಮ ಉಂಟು, ಬಂಧನದ ಬಿಸುಪುಂಟು
ಸಂಸಾರ ಬಂಧದೊಳಗೆ |
ಮಾಯಾವಿ ರಕ್ಕಸರ ಮಾಯದಾಟವು ಉಂಟು
ಬದುಕೆಂಬ ಮಾಯೆಯೊಳಗೆ||
ನಾನುಂಟು ನೀನುಂಟು, ಒಲವು ಇಬ್ಬರಲುಂಟು
ಬೆಳೆದು ಬಾಂಧವ್ಯ ನಂಟು I
ಕೈಗೆ ಕೈಯನು ಬೆಸೆದು ಸಾಗುತಲೆ ಇರಬೇಕು
ಹಿರಿಯರಿದೊ ಬೆಸೆದ ಗಂಟು||
Creative Writings
