Karada Vishwa

Article · November 5, 2026

ಮಮತೆಯ ಬಂಧ

By ದಿವ್ಯಾ ಶಿರಂತಡ್ಕ

ದಿವ್ಯಾ ಬಿ ಶಿರಂತಡ್ಕ

' ದೊಡ್ಡಪ್ಪನಿಗೆ ಸ್ವಲ್ಪ ಸೀರಿಯಸ್ ' ಎಂದು ಅಮ್ಮ ಅವೇಳೆಯಲ್ಲಿ ಫೋನ್ ಮಾಡಿದಾಗ ಸುನಿಲನಿಗೆ ಪರಿಸ್ಥಿತಿಯ ತೀವ್ರತೆ ತಕ್ಷಣ ಅರಿವಾಯಿತು. ಹೆಂಡತಿ ಮಕ್ಕಳಿಗೆ ಧೈರ್ಯ ತುಂಬಿ, ಕೈಗೆ ಸಿಕ್ಕಿದ ಎರಡು ಬಟ್ಟೆ ಚೀಲಕ್ಕೆ ತುಂಬಿಸಿ ಸೀದಾ ಬೆಂಗಳೂರಿನಿಂದ ಮಂಗಳೂರಿಗೆ ಪಯಣಿಸಿದ್ದನು ಸುನಿಲ್. ಅದಾಗಲೇ ಅಪ್ಪ ಅಮ್ಮ ಸಹಿತ ಸಮೀಪದ ಬಂಧುಗಳು ಆಸ್ಪತ್ರೆಯಲ್ಲಿ ನೆರೆದಿದ್ದರು. ದೊಡ್ಡಪ್ಪನ ಮಕ್ಕಳು ತೀರಾ ಕಂಗಾಲಾಗಿದ್ದರು. 'ಅಣ್ಣ ಐಸಿಯಲ್ಲಿ ಇದ್ದಾರೆ , ಸ್ವಲ್ಪ ಹೊತ್ತಿನಲ್ಲಿ ಒಳಗೆ ಬಿಟ್ಟಾಗ ನೀನೊಮ್ಮೆ ಹೋಗಿ ಬಾ' ಎಂದರು ಅಪ್ಪ ಸುನಿಲನ ಮುಖ ನೋಡಿ. ಕ್ಯಾನ್ಸರ್ ಎನ್ನುವ ಮಹಾಮಾರಿ ದೊಡ್ಡಪ್ಪನಿಗೆ ಯಾವಾಗ ಸುತ್ತಿಕೊಂಡಿತ್ತೋ ಗೊತ್ತಿಲ್ಲ. ಆದರೆ ಅರಿವಿಗೆ ಬಂದು ಈಗ ಎರಡು ತಿಂಗಳಾಗಿತ್ತು ಅಷ್ಟೇ. ಬಹುಶಃ ಕೊನೆಯ ಹಂತಕ್ಕೆ ತಲುಪಿದಾಗಲೇ ಗಮನಕ್ಕೆ ಬಂದು ಈಗ ಅಂತಿಮಾವಸ್ಥೆ ತಲುಪಿತ್ತು.

ಸುನಿಲನಿಗೆ ಯಾಕೋ ಕೈಕಾಲು ನಡುಗುತ್ತಿತ್ತು. ಸದಾ ಚಟುವಟಿಕೆಯಿಂದ ಇದ್ದ ದೊಡ್ಡಪ್ಪ , ಜೀವನಪೂರ್ತಿ ತನ್ನ ಮಕ್ಕಳಷ್ಟೇ ಅಥವಾ ಒಂದು ತೂಕ ಜಾಸ್ತಿಯೇ ಪ್ರೀತಿ ಕೊಟ್ಟ ದೊಡ್ಡಪ್ಪ, ಊರಿಗೆಲ್ಲ ಆಪತ್ಬಾಂಧವನೇ ಆಗಿದ್ದ ದೊಡ್ಡಪ್ಪ.. ಹೇಗೆ ಅವರನ್ನು ಈ ಸ್ಥಿತಿಯಲ್ಲಿ ಹೇಗೆ ನೋಡಲಿ ಎಂದು ಸುನಿಲ್ ಪರಿತಪಿಸುತ್ತಿದ್ದ.‌ ಆಗ ಅಪ್ಪ...
' ಈಗ ಒಳಗೆ ಹೋಗಲು ಬಿಡುತ್ತಾರೆ ಒಮ್ಮೆ ಹೋಗಿ ಬಾ ' ಎಂದಾಗ ಎದೆ ಜೋರಾಗಿ ಹೊಡೆಯಲಾರಂಭಿಸಿತ್ತು.‌ ಸೀದಾ ಒಳ ಹೋದವನೇ ಇನ್ನಿಲ್ಲದ ಧೈರ್ಯವನ್ನು ಆವಾಹಿಸಿಕೊಂಡು ದೊಡ್ಡಪ್ಪನ ಕೈಹಿಡಿದು... 'ಖಂಡಿತ ನೀವು ಹುಷಾರಾಗುತ್ತೀರಿ, ಒಂದು ನಾಲ್ಕು ದಿನ ಅಷ್ಟೇ; ಏನೂ ಚಿಂತೆ ಮಾಡಬೇಡಿ' ಎಂದ ತನ್ನ ಸುಳ್ಳಿಗೆ ತಾನೇ ಬೆರಗಾಗಿದ್ದ. ದೊಡ್ಡಪ್ಪ ಮುಖ ನೋಡಿದರಷ್ಟೇ... ಮಾತನಾಡುವಷ್ಟೂ ತ್ರಾಣ ಇರಲಿಲ್ಲ. ಏನೋ ಕಣ್ಣಿನಲ್ಲೇ ಸನ್ನೆ ಮಾಡಿದಂತೆ ಕಾಣುತ್ತಿತ್ತು. ಅವರಿಗೆ ಧೈರ್ಯ ಹೇಳಿ ಹೊರಡಲನುವಾದಾಗ ಏನೋ ಸಂತೃಪ್ತಿಯ ನಿರ್ಲಿಪ್ತ ನಗುವಿನೊಂದಿಗೆ ಬಿಳ್ಕೊಟ್ಟರು 'ನಾ ಹೊರಟೆ' ಎನ್ನುವಂತಿತ್ತು ಆ ನೋಟ. ಹೊರಗೆ ಬಂದ ಸುನಿಲನಿಗೆ ಅಳು ತಡೆಯಲಾಗಲಿಲ್ಲ. ಅಲ್ಲೇ ಇದ್ದ ಬೆಂಚಿನ ಮೇಲೆ ಕುಳಿತು ಪುಟ್ಟ ಮಕ್ಕಳಂತೆ ಎರಡು ಕೈಗಳನ್ನೂ ಕಣ್ಣಿಗೆ ಒತ್ತಿ ಹಿಡಿದು ಬಿಕ್ಕಿ ಬಿಕ್ಕಿ ಅತ್ತ. ಅಪ್ಪ ಅಮ್ಮ ಬೆನ್ನು ನೀವುತಿದ್ದರು. ನೆನಪಿನ ದೋಣಿ ಮೂರು ದಶಕಗಳ ಹಿಂದಿನ ದಿನಗಳಿಗೆ ಪ್ರಯಾಣ ಬೆಳೆಸಿತು.

ಕೂಡು ಕುಟುಂಬದಲ್ಲಿ ಬೆಳೆದ ಸುನಿಲ ತನ್ನ ಅಪ್ಪ ಅಮ್ಮನಿಗೆ ಏಕೈಕ ಪುತ್ರನಾಗಿದ್ದರೂ, ಬೆಳೆದದ್ದೆಲ್ಲ ತನ್ನ ದೊಡ್ಡಪ್ಪನ ವಿಶಾಲ ನೆರಳಿನಲ್ಲಿ. ದೊಡ್ಡಮ್ಮನ ಅಕ್ಕರೆ, ದೊಡ್ಡಪ್ಪನ ವಿಶಾಲ ಹೃದಯ, ಅಣ್ಣಂದಿರಾದ ದೊಡ್ಡಪ್ಪನ ಮಕ್ಕಳ ಜೊತೆಗಿನ ಆಟ, ಪಾಠ, ಸಹಬಾಳ್ವೆ ಸುನಿಲನಿಗೆ ಇನ್ನಿಲ್ಲದಷ್ಟು ಸಂತೃಪ್ತಿಯನ್ನು ಕೊಟ್ಟಿತ್ತು. ಅಪ್ಪ ಅಮ್ಮ ಇಬ್ಬರೂ ಉದ್ಯೋಗಸ್ಥರಾಗಿದ್ದರಿಂದ ಅವನ ಒಡನಾಟ ಇದ್ದುದು ದೊಡ್ಡಪ್ಪನ ಜೊತೆ. ಅವರ 'ಬಾಲ' ಎಂದು ಎಲ್ಲರೂ ಹಾಸ್ಯ ಮಾಡುತ್ತಿದ್ದರು. ಸುನಿಲ್ ಐದನೇ ತರಗತಿಯಲ್ಲಿ ಕಲಿಯುತ್ತಿರುವಾಗ ಅವನಪ್ಪ ಅಮ್ಮ ಪೇಟೆಯಲ್ಲಿ ಒಂದು ಹೊಸ ಜಾಗ ಹಾಗೂ ಅದಕ್ಕೆ ಹೊಂದಿಕೊಂಡಿರುವಂತೆ ಸುಂದರವಾದ ಮನೆಯೊಂದನ್ನು ಕೊಂಡು ಅಲ್ಲಿ ಹೋಗಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಹೊಸ ನಿವಾಸದಿಂದ ತಮ್ಮ ಉದ್ಯೋಗಕ್ಕೆ ಹೋಗುವ ಅನುಕೂಲತೆಗಳ ವಿಷಯವನ್ನು ಮನೆಯಲ್ಲಿ ನಾಜುಕಾಗಿ ಪ್ರಸ್ತಾಪಿಸಿದ್ದರು. ಸುನಿಲನನ್ನು ಒಪ್ಪಿಸುವುದು ಹೇಗೆ ಎನ್ನುವ ಚಿಂತೆಯಿಂದಲೇ ಅವನಲ್ಲೂ ಅಲ್ಪ ಸ್ವಲ್ಪ ಹೋಗುವ ಬಗ್ಗೆ ಹೇಳಿದ್ದರು. ಒಂದು ಮಧ್ಯಾಹ್ನ ಊಟವಾದ ನಂತರ ಸುನಿಲನನ್ನು ತನ್ನ ಕೋಣೆಗೆ ಕರೆದ ದೊಡ್ಡಪ್ಪ ಕೋಣೆ ಬಾಗಿಲನ್ನು ಮೆತ್ತಗೆ ಅಡ್ಡ ಮಾಡಿ ತಮ್ಮ ಮಂಚದಲ್ಲಿ ಪ್ರೀತಿಯಿಂದ ಕುಳಿತುಕೊಳ್ಳುವಂತೆ ಹೇಳಿ ಬೊಗಸೆ ತುಂಬಾ ಅವನಿಗೆ ಇಷ್ಟವಾದ ಚಾಕಲೇಟುಗಳನ್ನು ಹಿಡಿದು ಅವನ ಪುಟ್ಟ ಕೈಗಳಲ್ಲಿ ಸುರಿದು ಎರಡು ಕೈ ಮುಚ್ಚಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ದೊಡ್ಡಪ್ಪ ಅಳುವುದನ್ನು ಎಂದೂ ನೋಡದ ಸುನಿಲನಿಗೆ ಯಾಕಾಗಿ ಅವರು ಹೀಗೆ ಅಳುತ್ತಿದ್ದಾರೆ ಎನ್ನುವ ಅಚ್ಚರಿ. ಕೊನೆಗೆ ಒಲ್ಲದ ಮನಸ್ಸಿನಿಂದಲೇ ತನ್ನ ಹೆತ್ತವರ ಜೊತೆಗೆ ತಮ್ಮ ಸ್ವಂತ ಮನೆಯಲ್ಲಿ ಬೆಳೆದ ಸುನಿಲ ರಜೆ ಸಿಕ್ಕಾಗಲೆಲ್ಲ ದೊಡ್ಡಪ್ಪನ ಮನೆಯಲ್ಲಿ ಹಾಜರಾಗುತ್ತಿದ್ದ. ಮನೆಯ ಎಲ್ಲರೂ ಹಿಂದಿನ ಅದೇ ಪ್ರೀತಿಯಿಂದ ಕಾಣುತ್ತಿದ್ದರು. ಇವೆಲ್ಲ ನೆನಪುಗಳು ಮತ್ತೆ ಮತ್ತೆ ಕಾಡಿ ಸುನಿಲನಿಗೆ ಯಾಕೋ ಮನಸ್ಸು ಅಸ್ವಸ್ಥವಾಗಿತ್ತು. ಅಂದು ಮನೆಯಿಂದ ಹೋಗುವ ತನ್ನ ತಮ್ಮನ ಸಂಸಾರಕ್ಕಾಗಿ ಅಷ್ಟು ಬಿಕ್ಕಿ ಬಿಕ್ಕಿ ಅತ್ತ ದೊಡ್ಡಪ್ಪ ಇಂದು ಈ ಸಂಸಾರ ಬಂಧನದಿಂದ ಹೊರಡುವೆನೆಂದು ಗೊತ್ತಿದ್ದೂ ಸಂತೃಪ್ತಿಯ ನಗು ನಕ್ಕರಲ್ಲ!
'ಪ್ರೀತಿ, ಮೋಹ ಇಹ ಲೋಕದಲ್ಲೇ ಇರಲಿ; ಪರಲೋಕದಲ್ಲಿರಲಿ ಸಂತೃಪ್ತಿ' ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಸುನಿಲ ಎರಡು ಕೈಗಳಿಂದ ಕಣ್ಣು ಒರೆಸಿಕೊಳ್ಳುತ್ತಲೇ ಮುಂದಕ್ಕೆ ಹೆಜ್ಜೆ ಇಟ್ಟ...




Creative Writings