Karada Vishwa

News · June 18, 2026

ಡಾ. ಸಂಜನಾ ಎಸ್. ರಾವ್ ಅವರಿಗೆ ಎರಡು ಚಿನ್ನದ ಪದಕ

ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು.....

ಕರಾಡ ಸಮಾಜದ ಪ್ರತಿಭಾವಂತ ಯುವ ವೈದ್ಯೆ ಡಾ. ಸಂಜನಾ ಎಸ್. ರಾವ್ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಅಂತಿಮ ಬಿ.ಎ.ಎಂ.ಎಸ್. ಪದವಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಎರಡು ಚಿನ್ನದ ಪದಕಗಳ ಗೌರವಕ್ಕೆ ಭಾಜನರಾಗಿದ್ದಾರೆ.

ಹೊಸನಗರ ತಾಲ್ಲೂಕಿನ ಕೋಡೂರಿನ ಜವಳಿ ವ್ಯಾಪಾರಿಗಳಾದ ಶ್ರೀಮತಿ ದೀಪ ಹಾಗೂ ಶ್ರೀ ಶಶಿಧರ್ ಎಸ್. ರಾವ್ ದಂಪತಿಯವರ ಪುತ್ರಿಯಾಗಿರುವ ಡಾ. ಸಂಜನಾ ಅವರು, ಕೊಪ್ಪದ ಎ.ಎಲ್.ಎನ್. ರಾವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಈ ಅಪೂರ್ವ ಸಾಧನೆ ಮಾಡಿದ್ದಾರೆ.

ಬೆಂಗಳೂರುದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಡಾ. ಸಂಜನಾ ಅವರಿಗೆ ಎರಡು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ನಗದು ಬಹುಮಾನ ಹಾಗೂ ಪದವಿ ಪ್ರಮಾಣಪತ್ರವನ್ನು ವಿತರಿಸಿದರು.

ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್ ಹಾಗೂ ಆಯುರ್ವೇದ ವಿಭಾಗದ ಡೀನ್ ಡಾ. ಸಂಜಯ ಕೆ.ಎಸ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಡಾ. ಸಂಜನಾ ಎಸ್. ರಾವ್ ಅವರ ಈ ಅತ್ಯುನ್ನತ ಸಾಧನೆ ಕರಾಡ ಸಮಾಜಕ್ಕೆ ಹೆಮ್ಮೆ ತಂದಿದ್ದು, ಅವರ ಮುಂದಿನ ವೈದ್ಯಕೀಯ ಸೇವಾ ಪಯಣ ಇನ್ನಷ್ಟು ಯಶಸ್ವಿಯಾಗಲಿ ಎಂದು ಕರಾಡ ವಿಶ್ವ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

AchieversEducationWomen